71. ಕುದುರೆಗಾಡಿ ಕೆಸರಿನಲ್ಲಿ ಸಿಲುಕಿದಾಗ …
ಜನಾರ್ಧನ ಹಳ್ಳಿರಸ್ತೆಯಲ್ಲಿ ಕುದುರೆಗಾಡಿಯಲ್ಲಿ ಸಾಗುತ್ತಿದ್ದ. ಮುಂಚಿನ ದಿನ ಮಳೆ ಬಂದು ರಸ್ತೆಯೆಲ್ಲ ಕೆಸರಾಗಿತ್ತು. ಕೆಲವು ಕಡೆ ದೊಡ್ಡದೊಡ್ಡ ಹೊಂಡಗಳಿದ್ದವು. ಒಂದು ಕಡೆ ಅವನ ಕುದುರೆಗಾಡಿಯ ಚಕ್ರಗಳು ದೊಡ್ಡ ಹೊಂಡದಲ್ಲಿ ಸಿಲುಕಿಕೊಂಡವು. ಅವನು ಕುದುರೆಗೆ ಎಷ್ಟು ಹೊಡೆದರೂ ಗಾಡಿ ಮುಂದಕ್ಕೆ ಹೋಗಲಿಲ್ಲ; ಚಕ್ರಗಳು ಹೊಂಡದಿಂದ ಮೇಲಕ್ಕೆ ಬರಲಿಲ್ಲ.
ಆಗ ಅವನು ಕುದುರೆಗಾಡಿಯಿಂದ ಕೆಳಕ್ಕೆ ಇಳಿದು ಸಹಾಯಕ್ಕೆ ಯಾರಾದರೂ ಸಿಗಬಹುದೇ ಎಂದು ಸುತ್ತಲೂ ನೋಡಿದ. ಯಾರೂ ಕಾಣಿಸಲಿಲ್ಲ. ಅನಂತರ, ಮೇಲಕ್ಕೆ ನೋಡುತ್ತಾ ಅವನು ದೇವರಿಗೆ ಮೊರೆ ಇಡಲು ಶುರುವಿಟ್ಟ, “ಓ ದೇವರೇ, ನನಗೆ ಇದ್ಯಾಕೆ ಇಷ್ಟು ಕಷ್ಟ ಕೊಡುತ್ತಾ ಇದ್ದೀರಿ? ನೀವೇ ಕೆಳಕ್ಕೆ ಇಳಿದು ಬಂದು ಈ ಗಾಡಿಯ ಚಕ್ರ ಮೇಲೆತ್ತಲು ಸಹಾಯ ಮಾಡಿ."
ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವೃದ್ಧೆಯೊಬ್ಬಳು ಇವನ ಮಾತುಗಳನ್ನು ಕೇಳಿಸಿಕೊಂಡಳು. ಅವಳು ಅವನಿಗೆ ಬುದ್ಧಿವಾದ ಹೇಳಿದಳು, “ಏನಪ್ಪಾ ಇದು? ನೀನು ಗಾಡಿಯನ್ನು ನೋಡುತ್ತಾ ನಿಂತುಕೊಂಡು ಕಿರಿಚಿದರೆ ಅದು ಮುಂದಕ್ಕೆ ಹೋಗುತ್ತದೇನು? ಯಾರು ತಮಗೆ ತಾವೇ ಸಹಾಯ ಮಾಡಿಕೊಳ್ಳುತ್ತಾರೆಯೋ ಅವರಿಗೆ ದೇವರೂ ಸಹಾಯ ಮಾಡುತ್ತಾರೆ. ಹೊಂಡದಲ್ಲಿ ಸಿಲುಕಿರುವ ಚಕ್ರವನ್ನು ಈಗ ನೀನೇ ಮೇಲೆತ್ತಬೇಕು.”
ಇದನ್ನು ಕೇಳಿ ಜನಾರ್ಧನನಿಗೆ ನಾಚಿಕೆಯಾಯಿತು. ಅವನು ಗಾಡಿಯ ಪಕ್ಕಕ್ಕೆ ಹೆಗಲು ಕೊಟ್ಟು, ಬಲವಾಗಿ ಎತ್ತಿದಾಗ ಹೊಂಡದಲ್ಲಿ ಸಿಲುಕಿದ್ದ ಚಕ್ರ ಹೊರಗೆ ಬಂತು; ಕುದುರೆಯೂ ಗಾಡಿಯನ್ನು ಮುಂದಕ್ಕೆ ಎಳೆಯಿತು.