ಅಂದಿನ ನೆನಪು

ಅಂದಿನ ನೆನಪು

೧೯೭೭ ನೇ ವರ್ಷ ಇರಬಹುದು.ಅಣ್ಣ ಕೆಲಸಕ್ಕಾಗಿ ಅಪ್ಲೆ ಅಪ್ಲೆ ನೋ ರಿಪ್ಲೆ ಎಂಬಂತೆ ನಿತ್ಯವೂ ಒಂದಿಲ್ಲೊಂದು ಕೆಲಸಕ್ಕಾಗಿ ಅರ್ಜಿ ಹಾಕುತ್ತಲೇ ಇದ್ದ. ದೂರವಾಣಿ ಕಾರ್ಖಾನೆಯಲ್ಲಿ ನನ್ನ ತರಬೇತಿ ಮುಗಿದು ಹೊರಗಟ್ಟಿ ಯಾಗಿತ್ತು.ನನಗೂ ಕೆಲಸ ಇಲ್ಲ. ಅಣ್ಣನಿಗೂ ಇಲ್ಲ.ಮನೆಯಲ್ಲಾದರೋ ಕಿತ್ತು ತಿನ್ನುವ ಬಡತನ. ಇಂತಹಾ ಸಂದರ್ಭದಲ್ಲಿ ಅಣ್ಣನಿಗೆ ರೇಶ್ಮೆ ಇಲಾಖೆಯಲ್ಲಿ ಇಂಟರ್ ವ್ಯೂ ಬಂತು. ಬೆಂಗಳೂರಿನಲ್ಲಿ  ವಿಧಾನ ಸೌಧದ ಹತ್ತಿರವಿರುವ ಬಹುಮಹಡಿ ಕಟ್ಟಡದಲ್ಲಿ ಇಂಟರ್ ವ್ಯೂ ನಡೆದಿತ್ತು. ಅಣ್ಣ ಪೆಚ್ಚು ಮೋರೆ ಹಾಕಿಹೊಂಡು ಇಂಟರ್ವ್ಯೂ ಹಾಲಿನಿಂದ ಹೊರಬಂದ. ಮುಖವೇ ಪಲಿತಾಂಷ ಹೇಳುತ್ತಿತ್ತು. ಅವತ್ತಿನ ಸ್ಥಿತಿ ಹೇಗಿತ್ತೆಂದರೆ ಕೆಲಸ ವಿಲ್ಲದೆ ಮನೆಗೆ ಹಿಂದಿರುಗುವಂತಿಲ್ಲ. ಮನೆಯ ಕಷ್ಟ ಕಣ್ಮುಂದೆ ಬಂದು ತಲೆ ತಿರುಗಿದಂತಾಯ್ತು. ತಂಗಿ ಮತ್ತು ತಮ್ಮ ಹೈಸ್ಕೂಲಿನಲ್ಲಿ ಓದುತ್ತಿದ್ದಾರೆ. ಮೊದಲೇ ಬಡತನ. ಅದರ ಜೊತೆಗೆ ಮನೆತುಂಬಾ ಜನ. ನಮ್ಮ ಅಪ್ಪ-ಅಮ್ಮ, ತಮ್ಮ ತಂಗಿ, ಇಬ್ಬರೂ ಅಕ್ಕಂದಿರಿಗೂ ಮದುವೆಯಾಗಿತ್ತು ಅಂತಾ ಕಾಣುತ್ತೆ. ಜೊತೆಗೆ ತಂದೆಯವರ ತಾಯಿ[ನಮ್ಮಜ್ಜಿ] ನಮ್ಮ ಸೋದರತ್ತೆ [ನಮ್ಮ ತಂದೆಯವರ ಅಕ್ಕ, ಅವರು ನಮ್ಮ ಮನೆಯಲ್ಲೇ ಇದ್ದರು] ನಮ್ಮ ದೊಡ್ದಮ್ಮ[ನಮ್ಮ ತಂದೆಯವರ ಅಣ್ಣನ ಪತ್ನಿ ,ಚಿಕ್ಕ ವಯಸ್ಸಲ್ಲೇ ಪತಿಯನ್ನುಕಳೆದುಕೊಂಡು ನಮ್ಮ ಮನೆಯಲ್ಲೇ ಇದ್ದರು] ಅಷ್ಟೇ ಅಲ್ಲ. ಅಮ್ಮ ತಾಯಿಯ ತಾಯಿ[ ಅಜ್ಜಿ].ಜೊತೆಗೆ ತೌರುಮನೆ ಎಂದು ಬರುವ ನಮ್ಮ ಸೋದರತ್ತೆಯರು ಮತ್ತು ಅವರ ಮಕ್ಕಳು. ನಮ್ಮ ಅಪ್ಪ-ಅಮ್ಮ ಅಂತೂ ದಿನಗಳನ್ನು ದೂಡಲಾರದೆ ಕಂಗಾಲಾಗಿದ್ದರು.ಎಷ್ಟೋ ದಿನ ನಮ್ಮ ಅಮ್ಮ ನಮಗೆ ಕಾಣದಂತೆ ಹಾಕುತ್ತಿದ್ದ ಕಣ್ಣೀರು ಅವರ ಕಣ್ ತಪ್ಪಿಸಿ ನನ್ನ ಕಣ್ಣಿಗೆ ಬೀಳುತ್ತಿತ್ತು. ಎಲ್ಲಾ ದೃಷ್ಯಗಳೂ ಕಣ್ಮುಂದೆ ಬಂದವು. ಕೆಲಸ ವಿಲ್ಲದೆ ಮನೆಗೆ ಹೋಗುವುದಾದರೂ ಹೇಗೆ? ....

ಬಹುಮಹಡಿಯ ದೊಡ್ದ ದೊಡ್ದ ಕಿಟಕಿಗಳು ಕಂಡವು. ಹತ್ತಿರ ಹೋದೆ. ಇದೇ ಸರಿಯಾದ ತೀರ್ಮಾನ. ಇದರಿಂದ ಕೆಳಗೆ ಬಿದ್ದರೆ ಪ್ರಾಣ ಹೋಗುವುದಂತೂ ಗ್ಯಾರಂಟಿ!

ಆದರೆ...ಆದರೆ...

ಜನರ ಓಡಾಟ ತಪ್ಪೇ ಇಲ್ಲ. ನನ್ನ ಅಕ್ಕ ಪಕ್ಕದಲ್ಲಿ ಜನ....ಜನ...ಜನ...ಜನ...

ತಲೆತಿರುಗಿದಂತಾಯ್ತು. ಪಕ್ಕದಲ್ಲಿ ಯಾರೋ ನನ್ನನು ಹಿಡಿದು ಮಲಗಿಸಿದ್ದರು. ನನ್ನ ಅಣ್ಣ ಅಲ್ಲೇ ಯಾರನ್ನೋ ಕಂಡು ಏನಾದರೂ ಪ್ರಯತ್ನ ಮಾಡೋಣ ಅಂತಾ ಹೋಗಿದ್ದವನು ವಾಪಸ್ ಬರುವ ಹೊತ್ತಿಗೆ ನನಗೆ ಎಚ್ಛರ ಬಂದಿತ್ತು. ಇದೆಲ್ಲಾ ಒಂದರ್ಧ ಗಂಟೆಯಲ್ಲಿ ನಡೆದುಹೋಗಿತ್ತು. ನಮ್ಮ ಬಂದಾಗ  ಯಾಕೋ ತಲೆ ತಿರುಗಿದಂತಾಯ್ತು ಅಂತಾ ಸಬೂಬು ಹೇಳಿಬಿಟ್ಟೆ. ಅಂತೂ ಅನಾಹುತ ಒಂದು ತಪ್ಪಿತ್ತು.

Rating
No votes yet

Comments