ಅಪ್ಪನ ದುಡ್ಡು...ಅಮ್ಮನ ಸೀರೆ.....(೨)
ಅಪ್ಪನ ದುಡ್ಡು...ಅಮ್ಮನ ಸೀರೆ.....(೨)
ಎಷ್ಟು ವಿಶಾಲ ಒಗಟು. ಅಮ್ಮನ ಸೀರೆ ಮಡಿಚಲಾಗದು....ಅಪ್ಪನ ದುಡ್ಡು ಎಣಿಸಲಾಗದು....ಹೌದು...ಅಮ್ಮನ ಸೀರೆ ಆಕಾಶ...ಅಪ್ಪನ ದುಡ್ಡು ...ಆಕಾಶದಲ್ಲಿನ ನಕ್ಷತ್ರ.... ಅದೇ ರೀತಿ...ಅಮ್ಮನ ಪ್ರೀತಿ ವಿಶಾಲ..... ಅಪ್ಪನೂ ಜೀವನದಲ್ಲಿ ಕೊಡುವ ಆಸರೆ, ಧೈರ್ಯ ಅದು ನಮ್ಮ ಜೀವನದ ಸ್ಟಾರ್ಗಳು. ಇದನ್ನು ನನ್ನ ಲೇಖನದ ಮೊದಲ ಭಾಗದಲ್ಲೇ ಹೇಳಿದ್ದೇನೆ. ಆದರೂ ಕಲಿಯುಗ ನೋಡಿ...ಇವತ್ತು ಹೇಳಿದ್ದು , ಇನ್ನೊಂದು ಗಳಿಗೆಯಲ್ಲಿ ಮರೆತು ಹೋಗಿರುತ್ತದೆ. ಅದಕ್ಕಾಗಿ ಮತ್ತೆ ಪ್ರಾರಂಭದಲ್ಲಿ ಒಗಟಿನ ಅರ್ಥ ಹಾಗೂ ನನ್ನ ದೃಷ್ಟಿ ಕೋನದಿಂದ ಆ ಒಗಟಿನ ಇನ್ನೊಂದು ಅರ್ಥ ತಿಳಿಸಿ ಮುಂದುವರೆಯುತ್ತಾ ಇದ್ದೇನೆ.
ಪ್ರಯತ್ನ ನಿನ್ನದು ಫಲ ದೇವರದ್ದು ... ಇದು ಅಪ್ಪ ಹೇಳಿಕೊಟ್ಟ ಮಂತ್ರ್. ದೇವರು ಎನ್ನುವುದನ್ನು ಸರಳ ಸುಲಭ ರೀತಿಯಲ್ಲಿ ಹೇಳಿಕೊಟ್ಟದ್ದು ಅವರೇ. ಜೀವನದಲ್ಲಿ ಒಂದೊಂದು ಹೆಜ್ಜೆ ಇಡುತ್ತಾ ಸಾಗಿದಾಗ, ಪ್ರತಿ ಹೆಜ್ಜೆಯಲ್ಲೂ ಗಾಢವಾಗಿ ನೆಲೆಯೂರಿನಿಂತ ಕೆಲವೇ ಕೆಲವು ಹೆಜ್ಜೆಗಳಲ್ಲಿ ಅಪ್ಪ ಅಮ್ಮನ ಹೆಜ್ಜೆಗಳು, ಬರಿಯ ಹೆಜ್ಜೆ ಮಾತ್ರವಲ್ಲ ಗೆಜ್ಜೆಗಳ ದನಿಯಾಗಿ, ಹಾಡಾಗಿ ಹೊರಹೊಮ್ಮುತ್ತವೆ. ಆಗಿನ್ನೂ ನಾನು ಶಾಲೆಗೆ ಸೇರಿದ ಹೊಸತು. ಒಬ್ಬಳೇ ಶಾಲೆಗೆ ಹೋಗಿ ಅಭ್ಯಾಸ ಇಲ್ಲ. ಶಾಲೆಯು ದೂರ ಇರಲಿಲ್ಲ. ಆದ್ರೆ ನನ್ನ ಗೆಳತಿಯರೆಲ್ಲ ಒಬ್ಬೊಬ್ಬರಾಗಿ , ದಿನ ಒಬ್ಬರ ಮನೆಯಲ್ಲಿ ಸೇರಿ ನಂತರ ಶಾಲೆಗೆ ಹೋಗುವುದು ಅಭ್ಯಾಸ. ಎಲ್ಲರಂತೆ ನಾನು ಕೂಡ ಶಾಲೆಗೆ ಹೊರಟು, ನನ್ನ ಗೆಳತಿಯೊಬ್ಬಳ ಮನೆಗೆ ಹೋದೆ. ಅವರಮ್ಮ ಅವಳನ್ನು ಆಗ ತಾನೇ ಎಬ್ಬಿಸುತ್ತಾ ಇದ್ದರು. ನನಗೆ ಕುಳಿತುಕೊಳ್ಳಲು ಹೇಳಿದರು. ನಾನು ಕಾಯುತ್ತಾ ಕೂತೆ. ಅವಳು ಶಾಲೆಗೆ ಹೊರಟು ಬರುವಾಗ ತುಂಬಾ ತಡ ಆಯ್ತು. ಕೊನೆಗೆ ಇಬ್ಬರೂ ಸೇರಿ ಶಾಲೆಗೆ ಹೊರಟೆವು. ಅವತ್ತು ನನ್ನ ಗ್ರಹಚಾರವೋ, ಅಥವಾ ಒಳ್ಳೆ ದಿನವೋ, ದಾರಿಯಲ್ಲಿ ಅಪ್ಪ ಸಿಕ್ಕಿಯೇ ಬಿಟ್ಟರು. ಹತ್ತಿರ ಕರೆದು ಕೇಳಿದರು. "ಆಗಲೇ ಮನೆಯಿಂದ ಹೊರಟಿದ್ದಿ..... ಯಾಕೆ ತಡವಾಯ್ತು...? " ಹೆದರಿ ಬಿಟ್ಟೆ. ಮೊದಲೇ ಶಾಲೆಗೆ ತಡ ಆಗಿದೆ. ಇನ್ನೂ ಅಪ್ಪ ಬೇರೆ ಎದುರು ಸಿಕ್ಕಿದಾರೆ. ಎಂತ ಹೇಳೋದು. "ಗೆಳತಿ ಮನೆಗೆ ಹೋಗಿದ್ದೆ. ಅವಳು ಹೊರಡುವಾಗ ತಡ ಆಯ್ತು."ಅಂತ ಹೇಳಿದೆ. ಮುಂದೆ ಏನು ಮಾತಾಡಲಿಲ್ಲ ಅಪ್ಪ. "ಸರಿ ಶಾಲೆಗೆ ಹೋಗು" ಅಂತ ಹೇಳಿ ಹೋದರು.
ಆದರೆ ಅವತ್ತು ಸಂಜೆ ಮನೆಯಲ್ಲಿ, ಮತ್ತೆ ಪಕ್ಕದಲ್ಲಿ ಕೂರಿಸಿ ಅಪ್ಪ ಹೇಳಿದ್ದು ಒಂದೇ ಮಾತು. "ಜೀವನದಲ್ಲಿ ಒಬ್ಬರಿಗೆ ಕಾಯ್ತಾ ಕೂತ್ರೆ, ಜೀವನ ಇಡೀ ಕಾಯ್ತಾ ಕೂತುಕೊಳ್ಳಬೇಕಾಗ್ತದೆ. ಕಾಯ್ತಾ ಕೂತಾಗ ನಮ್ಮ ಕೆಲಸವೂ ಏನು ಆಗೋದಿಲ್ಲ. ಯಾರು ಜೊತೆಗೆ ಇರಲಿ ಬಿಡಲಿ, ನಿನ್ನ ಜೊತೆ ಯಾರು ಬರಲಿ ಬಿಡಲಿ, ನೀನು ಮಾತ್ರ ಯಾರಿಗೂ ಕಾಯಬೇಡ..... ನಿನ್ನ ಜೀವನದಲ್ಲಿ ನೀನು ಮುಂದೆ ಹೋಗ್ತಾ ಇರು......" ಅಂತ ಹೇಳಿದರು. ಇನ್ನೂ ಒಂದನೇ ತರಗತಿಗೆ ಆಗಷ್ಟೇ ಸೇರಿದ ನನಗೆ ಜೀವನದ ಬಗ್ಗೆ ಜಾಸ್ತಿ ಗೊತ್ತಿರಲಿಲ್ಲ. ಆದ್ರೆ ಅಪ್ಪ ಹೇಳಿದ್ರಲ್ಲಿ ಅರ್ಥ ಆಗಿದ್ದು ಇಷ್ಟು. ಎಂದಿಗೂ ಯಾರಿಗೂ ನೀನು ಕಾಯಬೇಡ..... ನಿನ್ನಷ್ಟಕ್ಕೆ ನಿನ್ನ ದಾರಿಯಲ್ಲಿ ನೀನು ಹೋಗ್ತಾ ಇರು...... ಅನ್ನೋದು ಮಾತ್ರ. ಮುಂದೆ ಎಲ್ಲೆ ಆಗಲಿ ಯಾವುದಕ್ಕೆ ಆಗಲಿ ಕಾಯೋ ಪರಿಸ್ತಿತಿ ಬಂದಾಗೆಲ್ಲ ಅಪ್ಪ ಹೇಳಿದ ಈ ಮಾತು ನೆನಪಿಗೆ ಬರ್ತಾ ಇತ್ತು. ಯಾರಿಗೂ ಯಾವುದಕ್ಕೂ ಕಾಯ್ತಾ ಕುರ್ಬೇಕು ಅನ್ನಿಸಲಿಲ್ಲ. ಅದು ವ್ಯಕ್ತಿಗಳಿರಬಹುದು, ಬಯಸಿದ ಕೆಲಸ ಇರಬಹುದು, ಅಥವಾ ಸಿಗಲಿಕ್ಕಿದ್ದ ಪ್ರಮೋಶನ್ ಇರಬಹುದು...... ಯಾವುದು ಬರಲಿ ಬಿಡಲಿ ನಾನು ನಾನಾಗಿ ಮುಂದೆ ಸಾಗಬೇಕು ಅಂತ ಎಷ್ಟು ಚಿಕ್ಕದ್ರಲ್ಲೇ ಅಪ್ಪ ಹೇಳಿ ಕೊಟ್ಟಿದ್ರಲ್ಲ ಅನ್ನಿಸಿ ಖುಷಿ ಅನ್ನಿಸುತ್ತದೆ.
ಅವರ ಆ ಮಾತಿಗೆ ನನ್ನದು ಇನ್ನಷ್ಟು ಮಾತುಗಳನ್ನು ಸೇರಿಸಲು ನನ್ನ ಜೀವನ ಅನುವು ಮಾಡಿ ಕೊಟ್ಟಿತು. ಮುಂದೆ ಒಂದು ದಿನ ಒಳ್ಳೆ ದಿನ ಬರ್ತದೆ ಅಂತ ಕಾಯೋದಕ್ಕಿಂತ, ಇವತ್ತಿನ ದಿನವನ್ನು ಎಷ್ಟು ಸಂತೋಷವಾಗಿ ಕಳೆಯುತ್ತೇನೆ ಅನ್ನೋದು ಮುಖ್ಯ ಅನ್ನಿಸಿತು. ಖಾಲಿ ಇರೋ ಬಸ್ ಮುಂದೆ ಬರಬಹುದು ಅಂತ ಕಾಯೋದಕ್ಕಿಂತ ಬಂದಿರೋ ಬಸ್ ಹತ್ತಿ ರಶ್ ಇದ್ರು ಬೇಗ ಮನೆ ಸೇರೋದು ಮುಖ್ಯ ಅನ್ನಿಸ್ತು. ಎಲ್ಲರೂ ಮೆಚ್ಚಲಿ ಅಂತ ಕೆಲಸ ಮಾಡೋದಕ್ಕಿಂತ ನನ್ನ ಕೆಲಸವನ್ನು ನಾನು ಮೆಚ್ಚಿ ಮುಂದೆ ಹೋಗೋದು ಒಳ್ಳೆದು ಅನ್ನಿಸ್ತು. ಮತ್ತೆಂದೂ ಕಾಯ್ತಾ ಕೂರಲಿಲ್ಲ. ಆ ಒಂದು ಮಾತು ಇವತ್ತಿಗೂ ನನ್ನೊಳಗಿನ ನನ್ನನ್ನು ಹುಡುಕಲು ದಾರಿ ದೀಪವಾಯ್ತು. ಕೃಷ್ಣ ಹೇಳಿದ್ದು ಅದನ್ನೇ. ನಿನ್ನ ಕೆಲಸ ನೀನು ಮಾಡು. ಫಲದ ಬಗ್ಗೆ ಚಿಂತೆ ಯಾಕೆ ಅಂತ. ಎಲ್ಲರಿಗೂ ತಂದೆ ಆದ ಅವನ ಮಾತು ಕೂಡ ಸರಿ. ನಿನ್ನ ಕೈ ಹಿಡಿದು ಮುನ್ನಡೆಸಲು ನಾನಿರುವಾಗ, ಕಳೆದು ಹೋಗುವ ಭಯವೇಕೆ? ಪಡೆಯಲಿಲ್ಲ ಎನ್ನುವ ಚಿಂತೆ ಯಾಕೆ? ಬದುಕು ಸರಳ. ಆದರೆ ಭಾವನೆಗಳು ಕಠೋರ. ಮನಸ್ಸಿನ ಭಾವನೆಗಳೇ ಬದುಕಿಗೆ ಬಣ್ಣ ಬಳಿಯುವುದು. ಎಲ್ಲ ಸಂಬಂಧಗಳ ಸಂಕೋಲೆ ಇರುವುದೇ ಭಾವನೆಗಳಲ್ಲಿ. ನನ್ನದು ಎಂದುಕೊಂಡರೆ ನನ್ನದು. ನನ್ನದಲ್ಲ ಎಂದುಕೊಂಡರೆ ನನ್ನದಲ್ಲ.
ಜನನಕೆ ಕಾಯಲಿಲ್ಲ, ಮರಣ ಎನ್ನ ಕೈಯೊಳಿಲ್ಲ,
ಸೂರ್ಯ ತನ್ನೆಡೆ ಬರಲೆಂದು ನಾ ಕಾದರು,
ಭೂಮಿ ಸೂರ್ಯನ ಸುತ್ತ ತಿರುಗುವುದನು ,
ತಾ ನಿಲ್ಲಿಸುವುದಿಲ್ಲ....
ಹಗಲು ರಾತ್ರಿಗಳು ನನಗಾಗಿ ಕಾಯುವುದಿಲ್ಲ,
ಋತುಗಳ ಆಗಮನ ನನ್ನ ಅವಲಂಬಿತವಲ್ಲ,
ನಮ್ಮೊಳಗಿನ ಭಾವನೆಗಳು ಮೋಡ ಮುಸುಕಿ ,
ಕಾಯಿಸುತ್ತವೆ, ಒಲವಿನ ಮಳೆಗಾಗಿ,
ನನ್ನದಲ್ಲದ ಆಟಿಕೆಗಳಿಗಾಗಿ,
ಭಾವನೆಗಳ ಮೀರಿ ನಿಂತು ನೋಡಿದಾಗ,
ಕಂಡದ್ದು ಇಷ್ಟೇ......
ನಾನು ಎನ್ನುವುದು ಕಳಕೊಂಡದ್ದು ಏನು ಇಲ್ಲ....
ಯಾಕೆಂದರೆ ನನ್ನದು ಎಂದು ನಾನು ಪಡಕೊಂಡು ತಂದದ್ದು
ಯಾವುದು ಇಲ್ಲಿ ಇಲ್ಲ.......
ಕೂತು ಕಾಯುವ ಬದಲು , ನಿಂತು ನಡೆದರೆ,....
ಗಮ್ಯ ಸೇರುವುದಂತೂ ನಿಜ,
ಒಂದಲ್ಲ ಒಂದು ದಿನ .........
-ಗೀತಾ ಪ್ರದೀಪ್
Comments
ಉ: ಅಪ್ಪನ ದುಡ್ಡು...ಅಮ್ಮನ ಸೀರೆ.....(೨)
ನಮಸ್ಕಾರ ಗೀತಾ ಪ್ರದೀಪ್ ರವರೆ. ಬರಹ, ಕವನ ಎರಡೂ ಚೆನ್ನಾಗಿವೆ (ಎರಡು ಭಾಗಗಳು ಸಹ). ನಿಮ್ಮ ಗಾದೆ ಮಾತಿನ ತಲೆ ಬರಹದ ಸ್ಪೂರ್ತಿಯಿಂದ ಅದೇ ಥೀಮಿನಲ್ಲಿ ನಾನೂ ಒಂದು ಕವನ ಬರೆಯಲು ಪ್ರೇರೇಪಣೆ ನೀಡಿಬಿಟ್ಟಿತ್ತು ನಿಮ್ಮೀ ಬರಹ. ಧನ್ಯವಾದಗಳು :-)
ಉ: ಅಪ್ಪನ ದುಡ್ಡು...ಅಮ್ಮನ ಸೀರೆ.....(೨)
>>>...ಆದರೂ ಕಲಿಯುಗ ನೋಡಿ...ಇವತ್ತು ಹೇಳಿದ್ದು , ಇನ್ನೊಂದು ಗಳಿಗೆಯಲ್ಲಿ ಮರೆತು ಹೋಗಿರುತ್ತದೆ. ಅದಕ್ಕಾಗಿ ಮತ್ತೆ ...:) :)
ಗೀತಾಪ್ರದೀಪ್ ಅವರೆ,
ಅಪ್ಪನ ದುಡ್ಡು....ಅಮ್ಮನ ಸೀರೆ (1,೨) ಚೆನ್ನಾಗಿದೆ.