(ಅ)ಪ್ರಿಯದರ್ಶಿನಿ - ಇಂದಿರಾ

(ಅ)ಪ್ರಿಯದರ್ಶಿನಿ - ಇಂದಿರಾ

ಅಪ್ರಿಯದರ್ಶಿನಿ - ಇಂದಿರಾ
----------------------------

ಇಂದು ಇಂದಿರಾ ಗಾಂಧಿಯವರ ಪುಣ್ಯತಿಥಿ. ಹಂತಕರ ಗುಂಡೇಟುಗಳಿಗೆ ಅವರು ಬಲಿಯಾಗಿ 24 ವರ್ಷಗಳಾದವು. ಅವರ ಕೆಟ್ಟ ರಾಜಕೀಯ, ಒಡೆದಾಳುವ ರಾಜಕೀಯನೀತಿ ಅವರನ್ನೇ ಆಹುತಿ ತೆಗೆದುಕೊಂಡಿತು. ನಾನು ದೆಹಲಿಗೆ ಹೋದಾಗಲೆಲ್ಲಾ ರಾಜಘಾಟ್ ನೋಡುವಂತೆಯೇ, ಇಂದಿರಾ ಗಾಂಧಿಯವರ ಸಮಾಧಿ "ಶಕ್ತಿಸ್ಥಳ"ವನ್ನೂ , ಸ್ಮಾರಕವಾಗಿರುವ ಅವರ ನಿವಾಸವನ್ನೂ ನೋಡುತ್ತೇನೆ. ಅಪಾರ ಜನಪ್ರಿಯತೆ, ಖ್ಯಾತಿ ಪಡೆದ ಅವರಿಗೆ ಈ ದೇಶಕ್ಕೆ ಏನಾದರೂ ಮಾಡಬೇಕು ಎಂದು ಅನ್ನಿಸಲಿಲ್ಲವೇಕೆ, ಎಂಬುದು ತುಂಬಾ ಕಾಡುತ್ತದೆ. ಕೋಟಿ ಕೋಟಿ ಮತಹಾಕಿ ಬೆಂಬಲಿಸಿದ ಜನರ ವಿಶ್ವಾಸ - ಪ್ರೀತಿಗಳ ಋಣವನ್ನು ತೀರಿಸಬೇಕಿತ್ತು ಎಂದು ಅವರಿಗೆ ಏಕೆ ಅನ್ನಿಸಲಿಲ್ಲ ಎಂದು ವ್ಯಥೆಯಾಗುತ್ತದೆ.

ಕೆಲವು ಉಪಚುನಾವಣೆಗಳು ಅಪೂರ್ವ ಮಹತ್ವ ಪಡೆಯುತ್ತವೆ. 1978ರ ಚಿಕ್ಕಮಗಳೂರು ಲೋಕಸಭಾ ಉಪಚುನಾವಣೆಯು ದೇಶಾದ್ಯಂತ ರಾಜಕೀಯ ಪಲ್ಲಟವನ್ನೇ ಮಾಡಿದಂತಹ ಅಂತಹ ಮಹತ್ವದ ಚುನಾವಣೆ. ಉತ್ತರಪ್ರದೇಶದ ತಮ್ಮ ಪರಂಪರಾಗತ ಲೋಕಸಭಾ ಕ್ಷೇತ್ರ ರಾಯಬರೇಲಿಯಲ್ಲಿ ಇಂದಿರಾ ಸೋತುಹೋಗಿದ್ದರು. ಅಷ್ಟೇಕೆ, ದೇಶವೇ ಅವರಿಗೆ ತಿರುಗಿಬಿದ್ದಿತ್ತು. ಅವರು ಸೋತುದು ಒಬ್ಬ ತಲೆತಿರುಕ, ವಿದೂಷಕ ಎನ್ನಬಹುದಾದ ರಾಜನಾರಾಯಣ್ ಎದುರು. ಅದು ರಾಜನಾರಾಯಣ್ ಪರವಾದ ಮತದಾರರ ತೀರ್ಪು ಎನ್ನುವುದಕ್ಕಿಂತ, ಇಂದಿರಾ ವಿರುದ್ಧವಾದ ಪ್ರತಿಭಟನೆಯ, ಸಿಟ್ಟಿನ ಸಂಕೇತವಾಗಿತ್ತು. ಆದರೇನು ? ತುರ್ತಾಗಿ ಲೋಕಸಭೆಗೆ ಹೇಗಾದರೂ ಮಾಡಿ ಅವರು ಪ್ರವೇಶಿಸಬೇಕಾಗಿತ್ತು. ಅಧಿಕಾರವಿಲ್ಲದೆ, ಎಂ.ಪಿ. ಸಹ ಅಲ್ಲ ಎನ್ನುವಂತಹ ದುಸ್ಥಿತಿಯಲ್ಲಿದ್ದ ಇಂದಿರಾ ಚಡಪಡಿಸುತ್ತಿದ್ದರು. 1977ರ ಮಹಾಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವು ಹಿಂದೀ ಹೃದಯಭೂಮಿಯಲ್ಲಿ ನಿರ್ನಾಮವಾಗಿದ್ದರೂ, ಕರ್ನಾಟಕ - ಆಂಧ್ರಗಳಲ್ಲಿ ಜಯಭೇರಿ ಬಾರಿಸಿತ್ತು. ಇರುವ ಒಬ್ಬ ಎಂ.ಪಿ. ಕೈಯಲ್ಲೇ ರಾಜೀನಾಮೆ ಕೊಡಿಸಿ ಆ ಕ್ಷೇತ್ರದ ಉಪಚುನಾವಣೆಯಲ್ಲಿ ಇಂದಿರಾರನ್ನು ಲೋಕಸಭೆಗೆ ಹೇಗಾದರೂ ಕಳುಹಿಸುವ ಹುನ್ನಾರ ನಡೆದಿತ್ತು.

ಆಗ ದಿಢೀರ್ ಪ್ರಚಾರಕ್ಕೆ ಬಂದಿದ್ದು ನಮ್ಮ ಚಿಕ್ಕಮಗಳೂರು ಕ್ಷೇತ್ರ. 1952ರ ಕಾಲದಿಂದಲೂ ಕಾಂಗ್ರೆಸ್ ಅಭ್ಯರ್ಥಿ ಆಗಿ ನಿಂತ "ಎಂತಹವರನ್ನೂ" ಬೆಂಬಲಿಸಿದ "ಖ್ಯಾತಿ" ಈ ಕ್ಷೇತ್ರದ್ದು. ಚಿಕ್ಕಮಗಳೂರು ಸಂಸದ ಡಿ.ಬಿ.ಚಂದ್ರೇಗೌಡರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಇಂದಿರಾರಿಗೆ ರತ್ನಗಂಬಳಿ ಹಾಸಿದರು. ಅಂದಿನಿಂದಲೇ ಪ್ರಾರಂಭವಾಯಿತು ನೋಡಿ ; ಚಿಕ್ಕಮಗಳೂರು ಕ್ಷೇತ್ರಕ್ಕೆ ಭೇಟಿ ನೀಡದ ಪತ್ರಕರ್ತರಿಲ್ಲ, ನಾಯಕರಿಲ್ಲ. ರಾಷ್ಟ್ರೀಯ - ಅಂತರರಾಷ್ಟ್ರೀಯ ಮಹತ್ವ ಬಂದುಬಿಟ್ಟಿತು, ಈ ಕ್ಷೇತ್ರಕ್ಕೆ ಇದ್ದಕ್ಕಿದ್ದಂತೆ. ಆಗ ದೇವರಾಜ ಅರಸು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು. ಬೇರೆಲ್ಲೆಡೆ ಸೋತ ಕಾಂಗ್ರೆಸ್, ಕರ್ನಾಟಕದಲ್ಲಿ ಜಯಭೇರಿ ಬಾರಿಸಿದ್ದು ತಮ್ಮಿಂದಲೇ ಎಂದುಕೊಂಡುಬಿಟ್ಟರು ಅರಸು. ಅವರು ಪೊಗರು - ಹೆಮ್ಮೆಗಳು, ದುರಹಂಕಾರ - ಅಟ್ಟಹಾಸಗಳಾಗಿ ಮಾರ್ಪಟ್ಟವು. ಆವರೇ, ಆ ಉಪಚುನಾವಣೆಯ ಹೊಣೆ ಹೊತ್ತುಕೊಂಡಿದ್ದರು. ಎದುರಾಳಿ ವೀರೇಂದ್ರ ಪಾಟೀಲರು ಜನತಾ ಪಕ್ಷದ ಅಭ್ಯರ್ಥಿ. ಆತ ಸಂಭಾವಿತ ರಾಜಕಾರಣಿ ಮತ್ತು ಮುಖ್ಯಮಂತ್ರಿ ಆಗಿ ಉತ್ತಮ ಆಡಳಿತ ನೀಡಿ ಮೆಚ್ಚುಗೆ ಗಳಿಸಿದ್ದರು. ಸಮಾಜವಾದಿಯಾಗಿ, ಕಾರ್ಮಿಕರ - ಬಡವರ ಪರವಾದ ಹೋರಾಟ ನಡೆಸುತ್ತಿದ್ದ ಜಾರ್ಜ್ ಫರ್ನಾಂಡಿಸ್, ಜನತಾ ಪಕ್ಷದ ಪರವಾಗಿ ಈ ಉಪಚುನಾವಣೆಯ ಹೊಣೆ ಹೊತ್ತಿದ್ದರು. ಜಾರ್ಜ್ ಅವರ ಪರಿಶ್ರಮ - ಓಡಾಟ- ಕಳಕಳಿ ನೋಡಿ ನಮ್ಮಂತಹವರಿಗೆ ಕುತೂಹಲ, ಸಂಭ್ರಮ - ಮೆಚ್ಚುಗೆ.

ಒಂದು ದಿನ ನಾನು ಬ್ಯಾಂಕಿನ ಕೆಲಸದ ಭರಾಟೆಯ ನಡುವೆ, ಒತ್ತಡದ ಶ್ರಮಲೋಕದಲ್ಲಿ ಮುಳುಗಿದ್ದಾಗ, ನಮ್ಮ ಅಟೆಂಡರ್ ಕೂಗಿದ. "ಸಾರ್, ಸಾರ್, ಇಂದ್ರಾಗಾಂಧಿ ಬತ್ತಾ ಅವ್ಳೆ..... ಬನ್ನಿ, ಬನ್ನಿ...." . ಸರಿ, ನಾವೆಲ್ಲಾ ಎದ್ದೆವೋ ಬಿದ್ದೆವೋ ಎನ್ನುತ್ತಾ ಬ್ಯಾಂಕಿನ ಹೊರಬಾಗಿಲ ಬಳಿ ಧಾವಿಸಿದೆವು. ಎದುರಿಗಿದ್ದ ದೃಶ್ಯ ನೋಡಿ, ನಾವೆಲ್ಲ ಅಕ್ಷರಶಃ ಮಾತಿಲ್ಲದಂತೆ ಮೂಕರಾಗಿಹೋದೆವು. ಚುನಾವಣಾ ಪ್ರಚಾರದ ಒಂದು ಕಾರು, ಅಲ್ಲಿ ಇಂದಿರಾ ಗಾಂಧಿಯವರು ನಿಂತು ಎಲ್ಲರ ಕಡೆ, ಕೈಮುಗಿಯುತ್ತಿದ್ದರು, ಕೈ ಬೀಸುತ್ತಿದ್ದರು. ಇಪ್ಪತ್ತು - ಇಪ್ಪತ್ತೈದು ಜನ ಮಕ್ಕಳು ಹೋ ಎಂದು ಅಸಂಬದ್ಧವಾಗಿ ಕೇಕೆ ಹಾಕುತ್ತಿದ್ದವು. ತುಂಬ ಚಿಕ್ಕ ಊರಾದ ನಮ್ಮ ಅಜ್ಜಂಪುರದ "ಮಹಾನ್" ನಾಯಕರೂ ಸಹ ಇಂದಿರಾ ಅವರ ಜೊತೆಗಿರಲಿಲ್ಲ. ಮೆರವಣಿಗೆಯಲ್ಲಿ ಮುಖ್ಯಮಂತ್ರಿ ದೇವರಾಜ ಅರಸರೂ ಕಾಣಲಿಲ್ಲ. ಹಿರಿಯರು, ನಾಯಕರು, ಮಹಿಳೆಯರು, ಯಾರೂ ಜೊತೆಗಿರಲಿಲ್ಲ. ಅಕ್ಷರಶಃ ಇಂದಿರಾ ಪಾತಾಳಕ್ಕೆ ಇಳಿದುಬಿಟ್ಟಿದ್ದರು, ಏಕಾಂಗಿಯಾಗಿಬಿಟ್ಟಿದ್ದರು.

ನನ್ನ ಕಣ್ಮುಂದೆ ಕ್ಷಣಾರ್ಧದಲ್ಲಿ ಚರಿತ್ರೆಯ ಪುಟಗಳು ಪಟಪಟನೆ ಹಾರಾಡಿದವು. ಇಂದಿರಾರ ತಾತ ಮೋತೀಲಾಲ್ ನೆಹರೂ ಭಾರೀ ಶ್ರೀಮಂತ. ಆಂತಹ ಶ್ರೀಮಂತಿಕೆಯನ್ನು ನಮ್ಮಂತಹವರು ಪುಸ್ತಕದಲ್ಲಿ ಓದಿ, ಸಿನೆಮಾದಲ್ಲಿ ನೋಡಿ ಕಲ್ಪಿಸಿಕೊಳ್ಳಬಹುದು ಅಷ್ಟೇ ! ಅಲಹಾಬಾದ್‌ನಲ್ಲಿರುವ ಆನಂದಭವನದ ವಿಶಾಲ ಆವರಣದಲ್ಲಿ ನೇಕಾರರು, ಬಣ್ಣಹಾಕುವವರು, ವಿನ್ಯಾಸ ಸಿದ್ಧಪಡಿಸುವವರು, ದರ್ಜಿಗಳು ತಿಂಗಳುಗಟ್ಟಲೆ ಇದ್ದುಕೊಂಡು ಮನೆಮಂದಿಯ ಆಸಕ್ತಿ - ಆಯ್ಕೆಗಳಿಗೆ ಅನುಗುಣವಾಗಿ ಬಟ್ಟೆಬರೆ - ವೇಷಭೂಷಣ, ಸಿದ್ಧಪಡಿಸುತ್ತಿದ್ದರಂತೆ. ನೆಹರೂ ಮನೆಯವರು ಬಟ್ಟೆ ಖರೀದಿಗೆ ಅಂಗಡಿಗಳಿಗೆ ಎಂದೂ ಹೋದವರಲ್ಲ. ಕಮಲಾ ನೆಹರೂ - ಇಂದಿರಾ ಮುಂತಾದ ಹೆಣ್ಣುಮಕ್ಕಳು ಯಾರೂ ರಸ್ತೆಗಳಲ್ಲಿಯೇ ನಡೆದವರಲ್ಲ. ಅವರಿಗಾಗಿ ಸದಾ ಮೇನೆಗಳು ಸಿದ್ಧವಾಗಿರುತ್ತಿದ್ದವು. ಬೇಸಿಗೆಯಲ್ಲಿ ಅವರ ಕುಟುಂಬ ನೈನಿತಾಲ್ - ಶಿಮ್ಲಾಗಳಂತಹ ಗಿರಿಧಾಮಗಳಲ್ಲಿ ತಿಂಗಳುಗಟ್ಟಲೆ ಇರುತ್ತಿತ್ತು. ಇಂದಿರಾ ಅವರ ಅಜ್ಜಿ ಸ್ವರೂಪರಾಣಿಯವರು "ಪ್ರತಿವರ್ಷ ಹೋಗುವ ಈ ಗಿರಿಧಾಮಗಳಲ್ಲೆಲ್ಲಾ ಒಂದೊಂದು ಬಂಗಲೆಯನ್ನೇ ಕಟ್ಟಿಸಿಬಿಟ್ಟರೆ ಅನುಕೂಲವಾಗುತ್ತದೆ, ಬಾಡಿಗೆ ಮನೆಗಳಲ್ಲಿ - ಹೋಟೇಲುಗಳಲ್ಲಿ ಅಷ್ಟೊಂದು ಅನುಕೂಲವಿರುವುದಿಲ್ಲ", ಎಂದು ಆಕ್ಷೇಪಿಸುತ್ತಿದ್ದರಂತೆ, ಪತಿ ಮೋತೀಲಾಲರನ್ನು. ಅವರೆಲ್ಲಾ ಇದ್ದುದೇ ಹಾಗೆ. ರಾಜಮಹಾರಾಜರ ವಿಲಾಸ, ಶ್ರೀಮಂತಿಕೆ. ಗಾಂಧೀಜಿ ಜೊತೆ ಸೇರಿ "ಸೇಫ್, ಸೆಕ್ಯೂರ್ಡ್" ಎನ್ನುವಂತಹ ಅಹಿಂಸಾತ್ಮಕ ಹೋರಾಟ ನಡೆಸಿ ಜೈಲಿಗೆ ಹೋದ ತಂದೆ - ಮಗ, ಮೋತೀಲಾಲ್ - ಜವಾಹರಲಾಲರು ಸೆರೆಮನೆಯಲ್ಲೂ ರಾಜರಂತೆಯೇ ಇದ್ದರು. ಶ್ರೀಮಂತರನ್ನು ಅಧಿಕಾರ, ಪ್ರಸಿದ್ಧಿಗಳು ಹುಡುಕಿಕೊಂಡೇ ಬರುತ್ತವೆಯೇನೋ. ಜವಾಹರಲಾಲರು "ಮಗಳಿಗೆ ಬರೆದ ಪತ್ರಗಳೂ" ಪ್ರಸಿದ್ಧಿ ಪಡೆದವು. ಜವಾಹರಲಾಲರ ಅಘೋಷಿತ ಉತ್ತರಾಧಿಕಾರಿಯಾಗಿ ಇಂದಿರಾ ತಮ್ಮ ನಲವತ್ತನೇ ವಯಸ್ಸಿಗೇ, ಅಂದಿನ ಅವಿಭಜಿತ ಕಾಂಗ್ರೆಸ್ ಪಕ್ಷದ ಅಧ್ಯಕ್ಷತೆ ವಹಿಸಿಕೊಂಡಿದ್ದರು. ತಮ್ಮ ಸರ್ವಾಧಿಕಾರಿ ಧೋರಣೆ, ಕಪಿಮುಷ್ಠಿಗಳಂತೆಯೇ ತಮ್ಮ ಸೌಂದರ್ಯ - ಗತ್ತು -ಗಾಂಭೀರ್ಯ -ವಿಶಿಷ್ಟಶೈಲಿಗಳಿಂದಲೂ ಇಂದಿರಾ ಹೆಸರು ಮಾಡಿದ್ದರು.

1971ರ ಬಾಂಗ್ಲಾ ವಿಜಯದ ನಂತರ ಪ್ರಧಾನಿ ಇಂದಿರಾ ಪ್ರಸಿದ್ಧಿಯ ಪರಾಕಾಷ್ಠೆ ತಲುಪಿದ್ದರು. ಆದರೆ ಭ್ರಷ್ಟಾಚಾರ - ನಿರುದ್ಯೋಗ - ಬೆಲೆಯುಬ್ಬರಗಳನ್ನು ನಿಯಂತ್ರಿಸಲು ವಿಫಲರಾಗಿದ್ದರು. 1975ರಲ್ಲಿ, ತುರ್ತುಪರಿಸ್ಥಿತಿ ಹೇರಿ ಎಲ್ಲ ಬಗೆಯ ಸ್ವಾತಂತ್ರ್ಯಗಳನ್ನು ಹತ್ತಿಕ್ಕಿದರು. 20ಅಂಶಗಳ ಕಾರ್ಯಕ್ರಮ - ಸಂಜಯಗಾಂಧಿಯವರ 5 ಅಂಶಗಳ ಕಾರ್ಯಕ್ರಮಗಳನ್ನು ಹೇರಿ, ಆಡಳಿತ ವ್ಯವಸ್ಥೆಯನ್ನು ತೊತ್ತಿಗಿಂತ ಕಡೆ ಎನ್ನುವಂತೆ ಮಾಡಿಬಿಟ್ಟಿದ್ದರು. ಕಾರ್ಮಿಕರ ಹಕ್ಕುಗಳು ಮಣ್ಣು ಪಾಲಾಗಿದ್ದವು. ಮಹಾತ್ಮಾ ಗಾಂಧಿಯವರ ಹೆಸರು ಹೇಳಿಕೊಂಡು ಅಧಿಕಾರ ಕಬಳಿಸಿದ ಕಾಂಗ್ರೆಸ್ ಪಕ್ಷವು, ಭಟ್ಟಂಗಿಗಳ - ಗುಲಾಮರ ಸಂತೆಯಾಗಿಹೋಗಿತ್ತು. ದೇವಕಾಂತ ಬರುವಾ ಎಂಬ ಓರ್ವ ಕಾಂಗ್ರೆಸ್ ಅಧ್ಯಕ್ಷನಂತೂ "ಇಂದಿರಾ ಈಸ್ ಇಂಡಿಯಾ, ಇಂಡಿಯಾ ಈಸ್ ಇಂದಿರಾ" ಎಂದು ಹೇಳಿ ಭಟ್ಟಂಗಿತನದ ಪರಾಕಾಷ್ಠೆ ಎಂದರೆ ಏನು ಎನ್ನುವುದನ್ನು ತೋರಿಸಿದ್ದ. ಕೇಂದ್ರದ ಮಂತ್ರಿ - ಸಂಸದರನ್ನು ಇಂದಿರಾ ಬರಿಯ ಬೆರಳ ಸನ್ನೆಯಿಂದ ನಿರ್ದೇಶಿಸುತ್ತಿದ್ದರು - ನಿಯಂತ್ರಿಸುತ್ತಿದ್ದರು.

ತುರ್ತುಪರಿಸ್ಥಿತಿಯ ಅಕೃತ್ಯಗಳು - ದುಷ್ಕೃತ್ಯಗಳು ಮಿತಿ ಮೀರಿ, 1977ರ ಮಹಾಚುನಾವಣೆಗಳಲ್ಲಿ ಇಂದಿರಾ ನೆಲ ಕಚ್ಚಿದ್ದರು. ಒಮ್ಮೆ ಬೆಂಗಳೂರಿನಿಂದ ದೆಹಲಿಗೆ ಅವರು ಪಯಣಿಸಿದಾಗ ಅಲ್ಲಿ ದೆಹಲಿಯ ವಿಮಾನನಿಲ್ದಾಣದಲ್ಲಿ, ಸ್ವಾಗತಕ್ಕೆ ಯಾರೂ ಇರಲಿಲ್ಲ. ಕಾರಿರಲಿ, DTC [ಸಿಟಿ] ಬಸ್ಸಿನವನೂ ನಿಲ್ಲಿಸದೆ ಹಾಗೇಹೋಗಿದ್ದ. ಬಸ್ ನಿಲ್ದಾಣದಲ್ಲಿ ಇಂದಿರಾ ವಾಸ್ತವವಾಗಿ ಒಬ್ಬರೇ ನಿಂತಿದ್ದರೆಂದು, " ಹಿಂದು" ಪತ್ರಿಕೆಯಲ್ಲಿ ಓದಿ ನಾವೆಲ್ಲಾ ಚಕಿತರಾಗಿಹೋಗಿದ್ದೆವು. ಅದೇ ಇಂದಿರಾ ನಮ್ಮೂರಿನಲ್ಲಿ ನನ್ನ ಕಣ್ಣೆದುರು ಅದೇ ಸ್ಥಿತಿಯಲ್ಲಿ ಕಾಣಿಸಿದರು. ಹಿಂಬಾಲಕರಿಲ್ಲ, ಗುಲಾಮರಿಲ್ಲ, ಭಟ್ಟಂಗಿಗಳಿಲ್ಲ. ಸುತ್ತ ನೋಡಿ ಅವರು ಕೈಬೀಸುತ್ತಿದ್ದಾಗ ಪ್ರತಿಯಾಗಿ ಕೈಬೀಸುವವರೂ ಇರಲಿಲ್ಲ. ಬರೀ ಚಿಳ್ಳೆ ಪಿಳ್ಳೆ ಹುಡುಗರ ಧಾಂಧಲೆ ಮಾತ್ರ. ಇಂದಿರಾ ಅವರ ಆಡಳಿತವನ್ನು, ತೀರ್ಮಾನಗಳನ್ನು, ಕಾರ್ಯನೀತಿಗಳನ್ನು ತಾತ್ತ್ವಿಕವಾಗಿ ವಿರೋಧಿಸುತ್ತಿದ್ದ ನನ್ನಂತಹವರಿಗೂ ಕಸಿವಿಸಿ ಆಗುವಂತಹ ದುರ್ಧರ ಸನ್ನಿವೇಶ ಅಲ್ಲಿ ಕಂಡಿತು. ಬಡವರ ಪರವಾಗಿ ಹಿಂದುಳಿದವರ ಪರವಾಗಿ ಮಹಿಳೆಯರ ಪರವಾಗಿ, ನೈಜ ಕಳಕಳಿಗಿಂತ ಗಿಮಿಕ್ಸ್ - ಸ್ಟಂಟ್ಸ್ ಮಾಡುತ್ತಿದ್ದ ಇಂದಿರಾ ಇದೀಗ ಪ್ರತಿಫಲ ಪಡೆದಂತೆ ಕಾಣುತ್ತಿತ್ತು.

ಇಂದಿರಾ ಅವರ ಪೂರ್ಣ ಹೆಸರು "ಇಂದಿರಾ ಪ್ರಿಯದರ್ಶಿನಿ" ಎಂದು, ಅವರ ಇತಿಹಾಸ, ಅವರ ಜೀವನದ ಚಿತ್ರಗಳ ವಿಶ್ಲೇಷಣೆ ಮಾಡಿದಾಗ ಅವರು "ಅಪ್ರಿಯದರ್ಶಿನಿ"ಯಾಗಿಯೇ ಕಾಣುತ್ತಾರೆ.

Rating
No votes yet

Comments