ಅವನತಿಗೊಳ್ಳುತ್ತಿರುವ ನಮ್ಮ ಸಾಮಾಜಿಕ ಚಳುವಳಿಗಳು
ಅವನತಿಗೊಳ್ಳುತ್ತಿರುವ ನಮ್ಮ ಸಾಮಾಜಿಕ ಚಳುವಳಿಗಳು
ಕಂಬಾಲಪಲ್ಲಿ ದೌರ್ಜನ್ಯದ ಮೊಕದ್ದಮೆಯಲ್ಲಿ ಆಪಾದಿತರೆಲ್ಲರೂ ಬಿಡುಗಡೆಗೊಂಡ ಸುದ್ದಿ ಕಳೆದೊಂದು ತಿಂಗಳಿಂದ ವಿವಿಧ ರೂಪಗಳ ಸುದ್ದಿಯಾಗಿ ಹಾರಾಡುತ್ತಿದೆ. ದಲಿತ ಸಂಘರ್ಷ ಸಮಿತಿಯ ವಿವಿಧ ಗುಂಪುಗಳ ವಕ್ತಾರರಿಂದ ಪತ್ರಿಕಾ ಹೇಳಿಕೆಗಳು, ಪ್ರತಿಭಟನೆಗಳು, ಧರಣಿ ಇತ್ಯಾದಿಗಳು ವೃತ್ತಪತ್ರಿಕೆಗಳಲ್ಲಿ ಸುದ್ದಿ ಮಾಡುತ್ತಿವೆ. ಈ ದೌರ್ಜನ್ಯವನ್ನು ರಾಷ್ಟ್ರೀಯ ಸುದ್ದಿಯಾಗಿ ಪ್ರತಿಬಿಂಬಿಸಿ, ರಾಷ್ಟ್ರೀಯ ಕರ್ತವ್ಯವೊಂದನ್ನು ಮಾಡಿದಂತೆ ಬೀಗಿದ ರಾಷ್ಟ್ರೀಯ ವಾರ್ತಾ ವಾಹಿನಿಗಳೂ, ಈಗ ತಮಗೂ ಇದಕ್ಕೂ ಸಂಬಂಧವಿಲ್ಲದಂತೆ ತೆಪ್ಪಗಿವೆ. ಇದರಲ್ಲಿ ಕೊಲೆಯಾದವರು, ಜೆಸ್ಸಿಕಾ ಲಾಲ್ರಂತಹ ಥಳಕು-ಬಳುಕು ಲೋಕದ ಕನ್ಯೆಯರಲ್ಲವಲ್ಲ-ಈ ಬಗ್ಗೆ ಅವು ತಮ್ಮ ಮಾಧ್ಯಮಗಳಲ್ಲಿ ಪ್ರಚಾರ ನಡೆಸಿ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು! ಸರ್ಕಾರ ಕೂಡಾ, ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವ ಇಂಗಿತ ವ್ಯಕ್ತಪಡಿಸಿದ್ದರೂ, ಈ ದಿಸೆಯಲ್ಲಿ ತ್ವರಿತವಾಗಿ ಕ್ರಮ ಕೈಗೊಳ್ಳುವ ತುರ್ತೇನೂ ಕಾಣಬರುತ್ತಿಲ್ಲ. ಮೇಲ್ಮನವಿ ಸಲ್ಲಿಸಿದರೂ, ಹಂಗರಹಳ್ಳಿ ಜೀತ ಪ್ರಕರಣದಂತೆಯೇ ಈ ಪ್ರಕರಣವೂ ಅಂತಿಮವಾಗಿ 'ಏನೂ ಮಾಡಲಾಗದ ಪರಿಸ್ಥಿತಿ'ಯಿಂದಾಗಿ 'ಖುಲಾಸೆ'ಯಾದರೆ ಆಶ್ಚರ್ಯವಿಲ್ಲ.
ದೌರ್ಜನ್ಯಕ್ಕೆ ಒಳಗಾದವರೇ ಪ್ರತಿಕೂಲ ಸಾಕ್ಷ್ಯ ಅಥವಾ ಹೇಳಿಕೆ ನೀಡುವ ಅಸಹಾಯಕ ಸಂದರ್ಭ ಸೃಷ್ಟಿಯಾದರೆ, ನ್ಯಾಯಾಲಯಗಳಾದರೂ ಏನು ಮಾಡಿಯಾವು? ಆದರೆ ಈಚೆಗೆ ಇಂತಹ ಸಂದರ್ಭಗಳಲ್ಲಿ ನ್ಯಾಯಾಲಯ-ನ್ಯಾಯಾಧೀಶರನ್ನೇ ಟೀಕಿಸುವ ಸಾಮಾಜಿಕ ನ್ಯಾಯವಾದಿಗಳಿಗೇನೂ ನಮ್ಮಲ್ಲಿ ಕೊರತೆಯಿಲ್ಲ. ಉದಾಹರಣೆಗೆ, ಇತ್ತೀಚೆಗೆ ಸರ್ವೋನ್ನತ ನ್ಯಾಯಾಲಯವು ಹಿಂದುಳಿದ ವರ್ಗಗಳಿಗೆ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಶೇ.27ರಷ್ಟು ಮೀಸಲಾತಿ ನೀಡುವ ಕೇಂದ್ರ ಸರ್ಕಾರದ ಕ್ರಮಕ್ಕೆ ತಡೆಯಾಜ್ಞೆ ನೀಡಿದ್ದಕ್ಕೆ, ಈ ತೀರ್ಪು ನೀಡಿದ ನ್ಯಾಯಾಧೀಶರುಗಳ ಜಾತಿ ಹಿನ್ನೆಲೆಯೇ ಕಾರಣವೆಂದು ಉದಿತ್ ರಾಜ್ ಎಂಬ ಸಾಮಾಜಿಕ ನ್ಯಾಯವಾದಿಯೊಬ್ಬರು ಮೊನ್ನೆ ಟಿ.ವಿ.ಚರ್ಚೆಯೊಂದರಲ್ಲಿ ನೇರವಾಗಿ ಆಪಾದಿಸಿ, ಎಲ್ಲರನ್ನೂ ದಂಗುಬಡಿಸಿದರು. ಅಲ್ಲದೆ, ಚರ್ಚೆಯಲ್ಲಿ ಭಾಗವಹಿಸಿದ್ದ ಇತರರಿಗೆ ಮಾತನಾಡಲೂ ಅವಕಾಶ ಕೊಡದಷ್ಟು ಉದ್ವಿಗ್ನರಾಗಿ ಒಂದೇ ಸಮನೆ ಕಿರುಚಾಡಿ ಹಾಸ್ಯಾಸ್ಪದರೆನಿಸಿದರು. ಇದು ಸಾಮಾಜಿಕ ನ್ಯಾಯದ ಪರಿಕಲ್ಪನೆ ಮತ್ತು ಚಳುವಳಿ ಮುಟ್ಟಿರುವ ಅಧೋರೂಪ. ತನ್ನ ಜಾತಿಯವರ ಹೊರತಾಗಿ ಉಳಿದವರಿಂದ ನ್ಯಾಯ ಸಿಗದು ಎಂಬ ನಂಬಿಕೆಯನ್ನು ಬಿತ್ತ ಬಯಸುವ ಚಳುವಳಿ ಎಂತಹ ಸಮಾಜವನ್ನು ನಿರ್ಮಿಸಹೊರಟಿದೆ ಎಂದು ಊಹಿಸಿದರೇ ಭಯವಾಗುತ್ತದೆ.
ಇದಕ್ಕೆ ಮುಖ್ಯ ಕಾರಣ, ಸಮಾಜವಾದಿ ಚಳುವಳಿಯ ಅಂಗವಾಗಿ ರೂಪು ತಳೆದ ಈ ಸಾಮಾಜಿಕ ನ್ಯಾಯ ಚಳುವಳಿ, ತನ್ನ ಆರಂಭಿಕ ಯಶಸ್ಸಿನ ಮತ್ತಿನಲ್ಲ್ಲಿ ಸಮಾಜವಾದವನ್ನೇ ಕೈಬಿಟ್ಟು ಹಿಡಿದು ಹೊರಟ ಅಡ್ಡದಾರಿಯೇ ಕಾರಣವಾಗಿದೆ. ಸಮಾಜವಾದ ಮುನ್ನೋಡಿದ್ದ ಜಾತಿರಹಿತ ಸಮಾಜ, ಜಾತ್ಯತೀತತೆ, ಸರಳ-ಸಭ್ಯ ಜೀವನ ಶೈಲಿ ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ, ಮಿತಿಗಳುಳ್ಳ ಬದುಕಿನ ಕಲ್ಪನೆ-ಇವೆಲ್ಲವನ್ನೂ ಕೈಬಿಟ್ಟು, ತಮಗೆ ಅನ್ಯಾಯ ಮಾಡಿದುವೆಂದು ಹೇಳಲಾದ ಜಾತಿಗಳ ಸ್ಥಾನ-ಮಾನಗಳನ್ನು ಪಡೆಯುವುದನ್ನೇ ಸಾಮಾಜಿಕ ನ್ಯಾಯವೆಂದು ಪ್ರತಿಪಾದಿಸುವ ಜನಪ್ರಿಯ ರಾಜಕೀಯ ವರಸೆಗೆ ಬಲಿಯಾದ ಈ ಚಳುವಳಿ, ಸಹಜವಾಗಿಯೇ ಕರ್ನಾಟಕದಲ್ಲಿನ ಇತರ ಸಾಮಾಜಿಕ ಚಳುವಳಿಗಳಾದ ದಲಿತ ಹಾಗೂ ರೈತ ಚಳುವಳಿಗಳನ್ನೂ ದಾರಿ ತಪ್ಪಿಸುವಲ್ಲಿ ಯಶಸ್ವಿಯಾಯಿತು. ಇವೆರಡೂ ಸಮಾಜವಾದಿ ಆದರ್ಶಗಳೊಂದಿಗೆ ಆರಂಭವಾಗಿದ್ದರೂ, ಅವುಗಳ ನಾಯಕರ ಕೈಮೀರಿ ಅಂತಿಮವಾಗಿ ಜಾತಿ ಹಿತಾಸಕ್ತಿಗಳನ್ನು ಸಂರಕ್ಷಿಸಿಕೊಳ್ಳುವ ಸಾಮಾಜಿಕ ವಿಭಜನಾ ಶಕ್ತಿಗಳಾಗಿ ಕೊನೆಗೊಂಡಿದ್ದನ್ನು ವಿಷಾದದಿಂದ ಗಮನಿಸಿದ್ದೇವೆ. ಇದರಿಂದ ಬುದ್ಧಿ ಕಲಿಯದ ನಾವು, ಶೇ.27ರ ಮೀಸಲಾತಿ ಬಗ್ಗೆ ಕೆಲವು ಸ್ಪಷ್ಟೀಕರಣಗಳನ್ನು ಕೇಳಿ ತಾತ್ಕಾಲಿಕ ತಡೆಯಾಜ್ಞೆಯನ್ನಷ್ಟೇ ನೀಡಿರುವ ನ್ಯಾಯಾಂಗದ ವಿರುದ್ಧ ಬಂದ್, ಧರಣಿ, ಪ್ರದರ್ಶನ, ಗೊತ್ತುವಳಿ ಅಂಗೀಕಾರ, ಟೀಕೆ-ಟಿಪ್ಪಣಿ ಇತ್ಯಾದಿಗಳಿಗೆ ಕೈ ಹಾಕುವ ಮೂಲಕ ಸಾಮಾಜಿಕ ನ್ಯಾಯ ಚಳುವಳಿಯ ಎಂತಹ ಹಿನ್ನಡೆಗೆ ಕಾರಣರಾಗುತ್ತಿದ್ದೇವೆ ಎಂಬುದನ್ನೇ ಅರಿಯದವರಾಗಿದ್ದೇವೆ. ನ್ಯಾಯಾಲಯ ಶೇ.27ರ ಮೀಸಲಾತಿಯನ್ನು ಈಗಾಗಲೇ ತಾತ್ವಿಕವಾಗಿ ಒಪ್ಪಿಕೊಂಡಿದೆ ಹಾಗೂ ಅದರ ಅನುಷ್ಠಾನಕ್ಕೆ ಅಗತ್ಯವಾದ ಮಾಹಿತಿಯನ್ನಷ್ಟೇ ಅದು ಕೇಳುತ್ತಿದೆ ಎಂಬುದನ್ನು ಮರೆತು, ನ್ಯಾಯಾಂಗದ ಮೇಲೇ ಜಾತೀಯತೆಯ ಆರೋಪ ಹೊರಿಸುವುದು ನಮ್ಮ ಜಾತೀಯತೆಯ ಪ್ರದರ್ಶನ ಮಾತ್ರವಾಗುತ್ತದೆ ಎಂಬ ಪ್ರಜ್ಞೆ ನಮಗಿದ್ದರೆ ಒಳಿತು.
ಈ ಮೀಸಲಾತಿಯನ್ನು ವಿರೋಧಿಸುತ್ತಿರುವ ವಿದ್ಯಾರ್ಥಿ ಸಮೂಹವನ್ನು ನಾವು ಶತ್ರುವಂತೆ ನೋಡುವಂತಾಗಿದ್ದರೆ, ನಮ್ಮ ಸಾಮಾಜಿಕ ನ್ಯಾಯ ಚಳುವಳಿಯ ಚಿಂತನೆಯ ಮಟ್ಟ, ಆ ವಿದ್ಯಾರ್ಥಿಗಳ ಕನಿಕರ-ಸಹಾನುಭೂತಿಗಳಿಗಷ್ಟೇ ಅರ್ಹವಾದ ಚಿಂತನೆಯ ಮಟ್ಟಕ್ಕಿಂತ ಮೇಲೇರಿಲ್ಲವೆಂದೇ ಅರ್ಥ. ಒಂದು ಚಳುವಳಿ ಸಾಮಾಜಿಕ ಚಳುವಳಿ ಅನ್ನಿಸಿಕೊಳ್ಳಬೇಕಾದರೆ, ಅದು ಜಾತಿ-ವರ್ಗಗಳನ್ನು ಮೀರಿ ಇಡೀ ಸಮಾಜವನ್ನು ದೃಷ್ಟಿಯಲ್ಲಿರಿಸಿಕೊಂಡು ತನ್ನ ತಾತ್ವಿಕತೆಯನ್ನು ರೂಪಿಸಿಕೊಳ್ಳಬೇಕಾಗುತ್ತದೆ ಹಾಗೂ ಅದರ ಆಧಾರದ ಮೇಲೆ ತನ್ನ ಹೋರಾಟವನ್ನು ಕಟ್ಟಿಕೊಳ್ಳಬೇಕಾಗುತ್ತದೆ. ಸಾಮಾಜಿಕ ನ್ಯಾಯ ಚಳುವಳಿ ಸಮಾಜವಾದಿ ಚಳುವಳಿಯ ಅಂಗವಾಗಿ ಆ ರೀತಿಯಲ್ಲೇ ಹುಟ್ಟಿತಾದರೂ, ಹಾಗೇ ಬೆಳೆಯಲಿಲ್ಲವಾದ್ದರಿಂದಲೇ ಅದು ಇತ್ತೀಚೆಗೆ ಒಂದು ವರ್ಗದ ಪ್ರಬಲ ವಿರೋಧವನ್ನು ಸತತವಾಗಿ ಎದುರಿಸುವಂತಾಗಿದೆ. ಅಂದರೆ, ನಮ್ಮ ಸಾಮಾಜಿಕ ನ್ಯಾಯ ಚಳುವಳಿ ತನ್ನ ಜವಾಬ್ದಾರಿಗಳನ್ನು ಸರಿಯಾಗಿ ನಿರ್ವಹಿಸಿಲ್ಲವೆಂದೇ ನಾವು ತಿಳಿಯಬೇಕಿದೆ. ಇಂದು ನ್ಯಾಯಾಲಯ ಈ ಚಳುವಳಿಯ ಮುಂದೆ ಹಲವು ಪ್ರಶ್ನೆಗಳನ್ನಿಟ್ಟಿದ್ದರೆ, ಅದು ಈ ಚಳುವಳಿ ನಿರ್ವಹಿಸದೇ ಹೋದ ಈ ಜವಾಬ್ದಾರಿಗಳನ್ನು ತಾನು ನಿರ್ವಹಿಸ ಹೊರಟಿದೆ ಎಂದೇ ಅರ್ಥ. ಶೇ.27ರ ಪ್ರಮಾಣ ನಿಗದಿಗೆ ಅನುಸರಿಸಿದ ಮಾನದಂಡವೇನು ಹಾಗೂ ಮೀಸಲಾತಿಯ ಹೊರತಾಗಿ ಸಾಮಾಜಿಕ ನ್ಯಾಯ ಸಾಧನೆಗೆ ಬೇರೆ ಮಾರ್ಗಗಳಿಲ್ಲವೇ ಎಂಬ ಪ್ರಶ್ನೆಗಳನ್ನು ನ್ಯಾಯಾಲಯ ಕೇಳಿದ್ದರೆ, ಸಾಮಾಜಿಕ ನ್ಯಾಯ ಚಳುವಳಿಕಾರರು ಇದು ತಮ್ಮ ಚಳುವಳಿಯ ಗುರಿಗಳ ವಿಷದೀಕರಣ ಹಾಗೂ ಸಮರ್ಥನೆಗಾಗಿಯೇ ಎಂದು ತಿಳಿಯುವಷ್ಟು ವಿನಯವನ್ನು ಮೈಗೂಡಿಸಿಕೊಳ್ಳಬೇಕಿದೆ.
ಆದರೆ, ನಮ್ಮ ಸಾಮಾಜಿಕ ಚಳುವಳಿಯ ನಾಯಕರು ಇದನ್ನು ತಿಳಿಯಲಾಗದಷ್ಟು ಮೀಸಲಾತಿ ಮೌಢ್ಯಕ್ಕೆ ಒಳಗಾಗಿರುವುದು ಎದ್ದುಕಾಣುತ್ತಿದೆ. ಸಾಮಾಜಿಕ ನ್ಯಾಯ ಕಲ್ಪನೆಯನ್ನು ಉದ್ಯೋಗ ಮೀಸಲಾತಿಗಷ್ಟೇ ಸೀಮಿತಗೊಳಿಸಿರುವುದರಿಂದಾಗಿ ಸೃಷ್ಟಿಯಾಗಿರುವ ಇಂತಹ ಮೌಢ್ಯದಿಂದಾಗಿಯೇ, ಜನಗಣತಿಯಲ್ಲಿ ಜಾತಿಯ ಕಾಲಂಗಾಗಿ ಒತ್ತಾಯಿಸುವ ಕಾರ್ಯಕ್ರಮದ ಅಥವಾ ಚಳುವಳಿಯ ಅಗತ್ಯವೇ ಅದಕ್ಕೆ ಈವರೆಗೆ ಹೊಳೆದಿಲ್ಲ. ಹಾಗೇ ಮೀಸಲಾತಿ ವ್ಯವಸ್ಥೆಯು, ಮೀಸಲಾತಿಯನ್ನು ಅಗತ್ಯಗೊಳಿಸಿದ ಜಾತಿವ್ಯವಸ್ಥೆಗೆ ಹೊಸ ಪಾವಿತ್ರ್ಯ ಹಾಗೂ ಮಾನ್ಯತೆಗಳನ್ನೊದಗಿಸುವ ದಾರಿ ಹಿಡಿದಿರುವ ಬಗೆಗೆ ಅದಕ್ಕೆ ಚಿಂತೆಯೂ ಇಲ್ಲದಾಗಿದೆ! ಆದುದರಿಂದ ಸಾಮಾಜಿಕ ಚಳುವಳಿಗೇನಾದರೂ ಸಾಮಾಜಿಕ ಮರ್ಯಾದೆಯ ಪರಿವೆ ಇದ್ದಲ್ಲಿ, ಅದು ನ್ಯಾಯಾಲಯವನ್ನು ಕುರುಡಾಗಿ ಟೀಕಿಸದೆ, ನ್ಯಾಯಾಲಯ ಕೇಳಿರುವ ಮಾಹಿತಿಯನ್ನು ಪೂರೈಸುವ ದಿಸೆಯಲ್ಲಿ ತುರ್ತು ಕ್ರಮ ಕೈಗೊಳ್ಳುವಂತೆ ಹಾಗೂ ಅಲ್ಲಿಯವರೆಗೆ ಮೀಸಲಾತಿಗೆ ತಾತ್ಕಾಲಿಕ ಅನುಮತಿ ನೀಡುವಂತೆ ನ್ಯಾಯಾಲಯಕ್ಕೆ ಕೋರಿಕೆ ಸಲ್ಲಿಸಲು ಸರ್ಕಾರವನ್ನು ಒತ್ತಾಯಿಸಬೇಕಿದೆ.
ಕಂಬಾಲಪಲ್ಲಿ ಮೊಕದ್ದಮೆಯ ವೈಫಲ್ಯವೂ ಸಾಮಾಜಿಕ ನ್ಯಾಯ ಚಳುವಳಿಯ ಇಂತಹುದೇ ವಿಕ್ಷಿಪ್ತತೆಯ ಪರಿಣಾಮವೇ ಆಗಿದೆ. ದಲಿತರ ಆತ್ಮಗೌರವದ ಚಳುವಳಿಯಾಗಿ ಆರಂಭವಾದ ದಲಿತ ಚಳುವಳಿ, 25 ವರ್ಷಗಳ ಹಿಂದೆ ಶೇಷಗಿರಿಯಪ್ಪನ ಕೊಲೆ ಪ್ರಕರಣವನ್ನು ಹೇಗೆ ಯಶಸ್ವಿಯಾಗಿ ನಿರ್ವಹಿಸಿತೆಂಬುದನ್ನು ನೆನಪಿಸಿಕೊಂಡರೆ, ಕಂಬಾಲಪಲ್ಲಿ ಮೊಕದ್ದಮೆಯ ವೈಫಲ್ಯದ ಕಾರಣಗಳು ಹೊಳೆಯುತ್ತವೆ. ಶೇಷಗಿರಿಯಪ್ಪನ ಕೊಲೆ ಪ್ರಕರಣದ ವಿಷಯದಲ್ಲಿ ದಲಿತ ಚಳುವಳಿಗೆ ಇಡೀ ಸಮಾಜದ ಸಹಾನುಭೂತಿ ದೊರಕಿತ್ತು. ಆದರೆ, ಕಂಬಾಲಪಲ್ಲಿ ದೌರ್ಜನ್ಯದ ಹೊತ್ತಿಗೆ ದಲಿತ ಚಳುವಳಿ ಎಡ, ಬಲಗಳೆಂದು ಮಾತ್ರವಲ್ಲದೆ ವ್ಯಕ್ತಿನಿಷ್ಠ ಗುಂಪುಗಳಾಗಿ ಕೂಡ ಹಲವು ದಿಕ್ಕುಗಳಲ್ಲಿ ಒಡೆದು ಹೋಗಿ, ರಾಜಕೀಯ ಪುಢಾರಿಗಿರಿಯ ಹಾಳು ಮಂಟಪದಂತಾಗಿ ಸಾರ್ವಜನಿಕರ ಸಹಾನುಭೂತಿ ಕಳೆದುಕೊಂಡಿತ್ತು. ಇಂತಹ ವಾತಾವರಣದಲ್ಲಿ ಈ ಸಂಬಂಧದ ಮೊಕದ್ದಮೆಯು ಕೇವಲ ಒಂದು ಸರ್ಕಾರಿ ಮೊಕದ್ದಮೆಯಾಗಿ ಪರಿವರ್ತಿತವಾಗಿ, ತಾನು ಕಾಣಬೇಕಾದ ಗತಿಯನ್ನೇ ಕಂಡಿದೆ. ಅನ್ಯಾಯಕ್ಕೊಳಗಾದವರಿಗೆ ಅಗತ್ಯ ಅಭಯ ಹಾಗೂ ರಕ್ಷಣೆ ಸಿಗದೆ, ಅವರು ಸಿಕ್ಕಿರುವ ಪರಿಹಾರದಲ್ಲಿ ಹೇಗೋ ಬದುಕಿಕೊಂಡರೆ ಸಾಕಪ್ಪಾ ಎಂಬ ಅಸಹಾಯಕತೆಗೆ ಶರಣಾಗಿ ಮೊಕದ್ದಮೆ ಬುಡಮೇಲುಗೊಂಡಿದೆ.
ಇದಕ್ಕೆ ಸರ್ಕಾರದ ಬೇಜವಾಬ್ದಾರಿತನ ಎಷ್ಟು ಕಾರಣವೋ, ದಲಿತ ಚಳುವಳಿಯ ಬೇಜವಾಬ್ದಾರಿತನವೂ ಅಷ್ಟೇ ಕಾರಣವಾಗಿದೆ. ದೌರ್ಜನ್ಯವಾದಾಗ ಹುಯಿಲೆಬ್ಬಿಸಿದ ದಲಿತ ನಾಯಕರು ಈಗ ಮತ್ತೆ ಸುದ್ದಿಯಲ್ಲಿರುವುದು ಮೊಕದ್ದಮೆ ವಿಫಲವಾದಾಗ ಹುಯಿಲೆಬ್ಬಿಸುವ ಮೂಲಕವೇ. ವರ್ಷ ಪೂರ್ತಿ ಅಂಬೇಡ್ಕರ್ ಜಯಂತಿ ಆಚರಿಸುತ್ತಾ ಸ್ವಯಂ ಮರುಕ ಹಾಗೂ ಅನ್ಯಾಕ್ರಮಣಗಳ ಸಂಭ್ರಮದಲ್ಲೇ ಮುಳುಗಿ ಹೋಗುತ್ತಿರುವ ಇಂದಿನ ದಲಿತ ಚಳುವಳಿಗೆ ಅಂಬೇಡ್ಕರ್ ಜಯಂತಿ ಆಚರಣೆಗಿಂತ ಮುಖ್ಯ ಕೆಲಸ ಕಂಬಾಲಪಲ್ಲಿ ಮೊಕದ್ದಮೆಯಲ್ಲಿ ನ್ಯಾಯ ಪಡೆಯುವುದು ಎಂಬುದು ಅರ್ಥವಾದಾಗ ಮಾತ್ರ ಅದು ಮತ್ತೆ ಆತ್ಮಗೌರವದ ಚಳುವಳಿಯಾಗಬಲ್ಲುದು ಹಾಗೂ ಈಚಿನ ದಿನಗಳಲ್ಲಿ ಹೆಚ್ಚುತ್ತಿರುವ ದಲಿತ-ಸವರ್ಣೀಯ ಘರ್ಷಣೆಗಳಿಗೆ ಕಡಿವಾಣ ಹಾಕಬಹುದು. ಆದರೆ ನಮ್ಮ ಎಲ್ಲ ಸಾಮಾಜಿಕ ಚಳುವಳಿಗಳು ತಮ್ಮ ಅಂತಿಮ ಗುರಿಗಳ ಕಲ್ಪನೆಯನ್ನೇ ಕಳೆದುಕೊಂಡು ಅಲ್ಪಾವಧಿ ಲಾಭಗಳಿಗಷ್ಟೇ ಎಚ್ಚೆತ್ತುಕೊಳ್ಳುವ ಹುಯಿಲುಗಳಾಗಿ ಅವನತಿಗೊಂಡಿರುವಾಗ ಯಾರೇನು ಮಾಡಬಲ್ಲರು?
ಅಂದಹಾಗೆ: "ಹಾವು ತಿಂದವರ ನುಡಿಸಬಹುದು; ಸಿರಿಗರ ಹೊಡೆದವರ ನುಡಿಸಬಾರದು ನೋಡಯ್ಯ!" ಎಂಬ ಬಸವ ವಚನಕ್ಕೆ ಸಾಕ್ಷಿ ಒದಗಿಸುವಂತೆ ವರ್ತಿಸುತ್ತಿರುವ ಇನ್ಫೋಸಿಸ್ನ ನಾರಾಯಣಮೂರ್ತಿಯವರ ಬೆಂಬಲಕ್ಕೆ ನಮ್ಮ ಹಿಂದೂ ಧರ್ಮ ದುರಂಧರ ಶ್ರೀಮಾನ್ ಎಸ್. ಎಲ್. ಭೈರಪ್ಪನವರು ನಿಂತಿರುವುದರ ಮರ್ಮವಾದರೂ ಏನಿರಬಹುದು ಎಂದು ಜನ ಆಶ್ಚರ್ಯ ಪಡುತ್ತಿದ್ದಾರೆ. ಅವರು, ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಜನರ ಮುಖ ನೋಡದೆ, ಮನೆ ಬಾಗಿಲು ಹಾಕಿಕೊಂಡು ಸಾಬರ ಕ್ರೌರ್ಯ ಹಾಗೂ ಕಿರಿಸ್ತಾನರ ಮೋಸಗಳಿಗೆ ಚಾರಿತ್ರಿಕ ಸಾಕ್ಷ್ಯ ಹುಡುಕುವ ರಾಷ್ಟ್ರೀಯ ಕರ್ತವ್ಯದಲ್ಲಿ ನಿರತರಾಗಿರಾಗಿರುತ್ತಾರೆಯೇ ಹೊರತು, ಎಂದೂ ತಾನಾಗಿ ಸಾರ್ವಜನಿಕ ಚರ್ಚೆಯಲ್ಲಿ ಪಾಲ್ಗೊಂಡು ಸಮಯ ವ್ಯರ್ಥ ಮಾಡಿಕೊಳ್ಳುವವರಲ್ಲ. ಆದರೆ ಈಗ ಹೀಗೇಕೆ ಇದ್ದಕ್ಕಿದ್ದಂತೆ, ಮೈಮೇಲೆ ಹಾವು ಹರಿದಾಡಿದ ಗಾಬರಿಯಲ್ಲಿ ನಾರಾಯಣಮೂರ್ತಿಯವರ ವಿದೇಶಿಯರ ಓಲೈಕೆಯನ್ನು ಸಮರ್ಥಿಸಲು ಧಾವಿಸಿದ್ದಾರೆ? ಆ ಮೂಲಕ ತಮ್ಮ ಭಯಂಕರ ರಾಷ್ಟ್ರಭಕ್ತಿ ಪರಿಕಲ್ಪನೆಗೇ ಭಂಗ ತಂದುಕೊಂಡು ಸಂಘ ಪರಿವಾರದ ಅಣ್ಣ ತಮ್ಮಂದಿರ ಕಸಿವಿಸಿಗೆ ಕಾರಣರಾಗಿದ್ದಾರೆ?
ನಾರಾಯಣಮೂರ್ತಿ, ಹುಟ್ಟು ಪ್ರತಿಭೆ ಮತ್ತು ಹುಟ್ಟು ದಕ್ಷತೆ ಹಾಗೂ ಅವುಗಳನ್ನಾಧರಿಸಿದ ಮುಕ್ತ ಸ್ಪರ್ಧೆಯ ಯಶಸ್ವಿ ಪ್ರತಿಪಾದಕರಾಗಿ, ಹಿಂದೂ ಸಂಸ್ಕೃತಿ ಎಂದು ತಪ್ಪಾಗಿ ಕರೆಯಲ್ಪಡುವ ಬ್ರಾಹ್ಮಣ ಸಂಸ್ಕೃತಿಯನ್ನು ನಮ್ಮ ಹಸಿದ ಮಧ್ಯಮ ವರ್ಗಗಳ ಭಾರಿ ಕರತಾಡನದ ನಡುವೆ ಎಗ್ಗಿಲ್ಲದ ವೀರಯೋಧನಂತೆ ಎತ್ತಿ ಹಿಡಿಯುತ್ತಿದ್ದಾರೆ. ಅವರು ಮುಂದೆ ರಾಷ್ಟ್ರಪತಿಯಾಗಿ ತನ್ನ ಈ ಆದರ್ಶ ಸಂಸ್ಕೃತಿಯನ್ನು ರಾಷ್ಟ್ರ ಸಂಸ್ಕೃತಿಯಾಗಿ ಅಧಿಕೃತವಾಗಿ ನೆಲೆಗೊಳಿಸುವ 'ಒಳ ಗುತ್ತಿಗೆ'ಯ ಒಪ್ಪಂದದ ಕರಡು ಸಿದ್ಧವಾಗುತ್ತಿದ್ದ ಸಂಭ್ರಮದ ಹೊತ್ತಿನಲ್ಲೇ ಈ ಎಡವಟ್ಟು ಮಾಡಿಕೊಂಡಿದ್ದಾರೆ. ಆದುದರಿಂದ, ಆಧುನಿಕ ವಶಿಷ್ಠರಾದ ಭೈರಪ್ಪನವರು ಸಹಜವಾಗಿಯೇ ಆತಂಕಿತರಾಗಿ, ಮೈಮೇಲೆ ನೆದರು ಕಳೆದುಕೊಂಡು ಅವರ ನೆರವಿಗೆ ಧಾವಿಸಿದ್ದಾರೆ.
ನಮ್ಮ 'ಜಾತಿ ಬ್ರಾಹ್ಮಣ'ರಿಗೆ ಯಾವಾಗಲೂ ಮೊದಲು ತಮ್ಮ ಹಾಗೂ ತಮ್ಮವರ `ಭೋಜನ' ವ್ಯವಸ್ಥೆಯ ಚಿಂತೆ ತಾನೇ? ನಂತರವಷ್ಟೇ ಭಾಷೆ, ಜನ, ರಾಜ್ಯ, ರಾಷ್ಟ್ರ ಇತ್ಯಾದಿಗಳು. ಸಂಘ ಪರಿವಾರದವರ ಕಚೇರಿಗಳ ಮೇಲೆ ರಾಷ್ಟ್ರಧ್ವಜ ಹಾರಿಸದೆ, ಭಗವಾಧ್ವಜ ಹಾರಿಸಿಕೊಳ್ಳುವುದರ ಅರ್ಥವಾದರೂ ಏನು?
Comments
ಉ: ಅವನತಿಗೊಳ್ಳುತ್ತಿರುವ ನಮ್ಮ ಸಾಮಾಜಿಕ ಚಳುವಳಿಗಳು
In reply to ಉ: ಅವನತಿಗೊಳ್ಳುತ್ತಿರುವ ನಮ್ಮ ಸಾಮಾಜಿಕ ಚಳುವಳಿಗಳು by aithalsandy
ಉ: ಅವನತಿಗೊಳ್ಳುತ್ತಿರುವ ನಮ್ಮ ಸಾಮಾಜಿಕ ಚಳುವಳಿಗಳು
ಉ: ಅವನತಿಗೊಳ್ಳುತ್ತಿರುವ ನಮ್ಮ ಸಾಮಾಜಿಕ ಚಳುವಳಿಗಳು