ಆಧುನಿಕ ಗೀತಾಚಾರ್ಯನ ನೆನಪು

ಆಧುನಿಕ ಗೀತಾಚಾರ್ಯನ ನೆನಪು

ಮಾರ್ಚ್ ೧೭ನೇ ತಾರೀಖು ಆಧುನಿಕ ಗೀತಾಚಾರ್ಯರೆನ್ನಿಸಿಕೊಂಡ ಶ್ರೀ ಡಿ.ವಿ.ಗುಂಡಪ್ಪನವರ ೧೨೪ ನೇ ಹುಟ್ಟುಹಬ್ಬದ ಸಂಭ್ರಮ. ಕೆಲವಂ ಬಲ್ಲವರಿಂದ ಕಲ್ತು, ಕೆಲವಂ ಶಾಸ್ತ್ರಂಗಳೋದಿ, ಕೆಲವಂ ಸಜ್ಜನ ಸಂಗದಿದಲರಿಯಲ್ ಸರ್ವಜ್ಞನಪ್ಪ ನರಂ ಎನ್ನುವಂತೆ, ಎಷ್ಟೋ ಮಹಾತ್ಮರು ತಮ್ಮ ಸಾಧನೆಯ ಮೂಸೆಯಲ್ಲಿ ಪಕ್ವವಾಗಿ ನುಡಿದ ನುಡಿಮುತ್ತುಗಳಿಂದ ನಮ್ಮ ಜೀವನದ ಅನೇಕ ಸಮಸ್ಯೆಗಳಿಗೆ ಆಯಾ ಕಾಲಕ್ಕನುಗುಣವಾಗಿ ಸಮಾಧಾನವನ್ನು ಕೊಡುತ್ತಾ ಬಂದಿವೆ. ನನ್ನ ಜೀವನದ ಅನೇಕ ಸಮಸ್ಯೆಗಳಿಗೆ ಆಧುನಿಕ ಗೀತಾಚಾರ್ಯರೆನಿಸಿಕೊಂಡ ಡಿ.ವಿ.ಜಿ ಯವರ ಕಗ್ಗದಿಂದ ಸಮಾಧಾನ ಸಿಕ್ಕಿದೆ. ಅದನ್ನು ನಿಮ್ಮೊಡನೆ ಹಂಚಿಕೊಳ್ಳಲು ಇಷ್ಟಪಡುತ್ತೇನೆ.

ಹೊಸಚಿಗುರು ಹಳೆಬೇರು ಕೂಡಿರಲು ಮರಸೊಗಸು,

ಹೊಸಯುಕ್ತಿ ಹಳೆತತ್ವದೊಡಗೂಡಿ ಧರ್ಮ,

ಋಷಿವಾಕ್ಯದೊಡನೇ ವಿಜ್ಞಾನಕಲೆ ಮೇಳವಿಸೆ,

ಜಸವು ಜೀವನಕೆ ||ಮಂಕುತಿಮ್ಮ||

 

ಆಹಾ! ಎಂಥಾ ಅರ್ಥಪೂರ್ಣವಾದ ಮಾತು. ಹಳೆಯದೆಂದು ಎಲ್ಲವನ್ನೂ ಸಾರಾಸಗಟಾಗಿ ತಳ್ಳೀಹಾಕದೇ, ಇಂದಿನ ಕಾಲಕ್ಕೆ ಅನುಗುಣವಾಗಿ, ದಾಸರು ಹೇಳುವಂತೆ, "ಮರ್ಮವನರಿತು ಮಾಡಲು ಬೇಕು ತಂತ್ರ" ಎನ್ನುವುದನ್ನು ಬಾಳನ್ನು ಸಾರ್ಥಕಗೊಳಿಸಿಕೊಂಡವನೇ ನಿಜವಾದ ವಿವೇಕಿ. ಅಜ್ಜ ಹಾಕಿದ ಆಲದ ಮರಕ್ಕೆ ನೇಣುಹಾಕಿಕೊಳ್ಳದೇ ಅದರ ವಿಶಾಲವಾದ ನೆರಳಿನಡಿ ನೆಮ್ಮದಿಯ ಜೀವನ ಸಾಗಿಸುವವನೇ ನಿಜವಾದ ಸಾಧಕ.

ಎಷ್ಟು ನೀನುಂಡರೇಂ ಪುಷ್ಟಮೈಗಾಗುವುದು,

ಹೊಟ್ಟೆ ಜೀರ್ಣಿಸಿದಷ್ಟೇ ತಾನೆ ಮಿಕ್ಕುವುದೆಲ್ಲವೂ ಕಸ,

ಎಷ್ಟು ನೀಂ ಗಳಿಸಿದೊಡೇಂ ನಿನಗೆ ದಕ್ಕುವುದು,

ಮುಷ್ಟಿಪಿಷ್ಟವು ತಾನೇ ||ಮಂಕುತಿಮ್ಮ||

 

ಜೀವನದಲ್ಲಿ ತೃಪ್ತಿಯನ್ನು ಕಂಡುಕೊಂಡವನೇ ನಿಜವಾದ ಸುಖಿ. ಹಾಸಿಗೆ ಇದ್ದಷ್ಟು ಕಾಲು ಚಾಚಿ ಇದ್ದುದರಲ್ಲಿ ಹಂಚಿಕೊಂಡು ಉಂಡು ಸಂತೋಷಪಡುವವನೇ ಪರಮಸುಖಿ. ಮರೀಚಿಕೆ ಬೆನ್ನು ಹತ್ತಿ ನೀರಿಗಾಗಿ ಬಯಸುವವನಿಗೆ ಬಾಳೊಂದು ಭ್ರಮೆಯೇ ಸರಿ.

 

ಇಳೆಯಿಂದ ಸಸಿಮೊಗೆವಂದು ತಮಟೆಗಳಿಲ್ಲಾ,

ಫಲಮಾಗುವುವಂದು ತುತ್ತೂರಿ ದನಿಯಿಲ್ಲಾ,

ಬೆಳಕಿನ ಸೂರ್ಯಚಂದ್ರರದೊಂದು ಸದ್ದಿಲ್ಲಾ,

ಹೊಲಿ ನಿನ್ನ ತುಟಿಗಳ ||ಮಂಕುತಿಮ್ಮ||

 

ನಮ್ಮ ತಾಯಿ ಮರೆಯಲಿ ನಿಂತೇ ಸೂತ್ರಧಾರಳಾಗಿ ನಮ್ಮ ಜೀವನವನ್ನು ರೂಪಿಸಿದ್ದನ್ನು ನಾನೆಂದೂ ಮರೆಯಲಾರೆ.

ನಾನು ಚಿಕ್ಕವಳಿದ್ದಾಗ ನಮ್ಮ ತಾಯಿ ಜನಸೇವೆಯೇ ಜನಾರ್ದನ ಸೇವೆ ಎನ್ನುವುದಕ್ಕೆ ಬಹಳ ಪ್ರಾಮುಖ್ಯತೆ ಕೊಡುತ್ತಿದ್ದರು. ಆದರೆ ಅತ್ತೆಮನೆಯಲ್ಲಿ ಪೂಜೆ ಪುನಸ್ಕಾರ, ಮಡಿಮೈಲಿಗೆ, ಆಚಾರವಿಚಾರಗಳನ್ನು ಚಾಚೂ ತಪ್ಪದೆ ನಡೆಸಿಕೊಂಡು ಬರುತ್ತಿದ್ದರು. ನಾನು ಎರಡೂ ಪದ್ಧತಿಗಳ ನಡುವಿನ ಒಂದು ಹಾದಿಯನ್ನು ಕಂಡುಕೊಂಡೆ. ಹಬ್ಬದಲ್ಲಿ ಮರದ ಬಾಗಿನಕ್ಕೆ ಬದಲಾಗಿ ಯಾರಿಗೆ ಯಾವುದರ ಅವಶ್ಯಕತೆಯಿದೆಯೋ ಅದನ್ನು ಕೊಡುವ ಸಂಪ್ರದಾಯವನ್ನು ಅನುಸರಿಸುತ್ತಾ ಬಂದೆ. ನಾನು ಚಿಕ್ಕವಳಿರುವಾಗ ನಮ್ಮ ತಾಯಿ ದೇಹಿ ಎಂದು ಬಂದವರಿಗೆ ಎಂದೂ ಬರಿಗೈಯಲ್ಲಿ ಕಳಿಸುತ್ತಿರಲಿಲ್ಲ. ನಾವು ಉಣ್ಣುವುದರಲ್ಲಿ ಒಂದು ತುತ್ತನ್ನು ಹಸಿದವರಿಗೆ ಕೊಟ್ಟರೆ ಅದು ಎಂದಿದ್ದರೂ ನಮ್ಮನ್ನು ಕಾಪಾಡುತ್ತದೆ ಹಾಗೆ ಮಾಡದೇ ಎಲ್ಲವನ್ನೂ ನಾವೇ ಉಂಡರೆ ಹೆಚ್ಚಿನದ್ದು ಕಸವಾಗುತ್ತದೆ. ಆಗ ನನ್ಗೆ ಈ ಮಾತಿನಲ್ಲಿ ಅಷ್ಟು ನಂಬಿಕೆಯಿರಲಿಲ್ಲ. ಆದರೆ ಜೀವನ ಪಕ್ವವಾದ ಹಾಗೆ ನನಗೆ ನನ್ನ ಆಪತ್ತಿನ ಕ್ಷಣಗಳಲ್ಲಿ ಎಲ್ಲಿಂದಲೋ ಸಹಾಯ ಸಮಯಕ್ಕೆ ಸರಿಯಾಗಿ ಒದಗಿಬರುತ್ತಿತ್ತು.

 

ನಾವು ಮಾಡುವ ಪ್ರತಿಯೊಂದು ಕಾರ್ಯವನ್ನು ಪ್ರತಿಫಲಾಕ್ಷೆಯಿಲ್ಲದೇ ಸಮಾಜಕ್ಕೆ ನಮ್ಮಿಂದಾಗುವ ಒಳಿತನ್ನು ಮಾಡಿದಾಗ ನರಜನ್ಮ ಬಂದುದು ಸಾರ್ಥಕತೆಯನ್ನು ಪಡೆಯುತ್ತದೆ.

ಪ್ರಕೃತಿ ಸದ್ದಿಲ್ಲದೇ ಕಾಲಕಾಲಕ್ಕೆ ಸರಿಯಾಗಿ ತನ್ನ ಕೆಲಸವನ್ನು ಯಾರ ಹೊಗಳಿಕೆಗಾಗಿಯೂ ಕಾಯದೇ ಮಾಡುವಂತೆ ನಮ್ಮ ಬಲಗೈ ಮಾಡಿದ ದಾನವನ್ನು ಎಡಗೈ ತಿಳಿಯದ ಹಾಗೆ ಮಾಡಬೇಕಂತೆ. ಹಾಗೆ ಮಾಡುವವನೇ ನಿಜವಾದ ಕರ್ಮಯೋಗಿ.

 

ತಿದ್ದಿಕೊಳೋ ನಿನ್ನ ನೀಂ, ಜಗವ ತಿದ್ದುವುದಿರಲಿ,

ತಿದ್ದಿಕೆಗೊಂದು ಮಿತಿಯುಂಟು ಮರೆಯದಿರು,

ಉದ್ದ ನೀಂ ಬೆಳದೀಯ ಬೆರಳನಿನಿತು ಸಾಮಂದೆ

ಸ್ಪರ್ಧಿಯೇ ತ್ರಿವಿಕ್ರಮಗೆ ||ಮಂಕುತಿಮ್ಮ||

 

ಬೇರೆಯವರ ಕಡೆ ಬೆರಳು ತೋರಿಸುವಾಗ ಮಿಕ್ಕ ನಾಲ್ಕು ಬೆರಳುಗಳು ನಮ್ಮ ಕಡೆ ತೋರುತ್ತಿರುತ್ತವೆ ಎಂಬುದನ್ನು ಮರೆಯಬಾರದು. ಬೇರೆಯವರಿಗೆ ಬೋಧನೆ ಮಾಡುವವನು

ಮೊದಲು ತಾನು ನುಡಿದಂತೆ ನಡೆದು ತೋರಿಸಬೇಕು. "ಬದನೇ ಕಾಯಿ ತಿನ್ನೋಕೆ, ಅಚಾರ ಹೇಳೋಕೆ" ಎನ್ನುವಂತಾಗಬಾರದು. ಆಗ ಅವನಾಡಿದ ಮಾತಿಗೆ ಕಾಸಿನ ಬೆಲೆಯೂ ಇರುವುದಿಲ್ಲಾ.

 

ನಗುವು ಸಹಜದ ಧರ್ಮ, ನಗಿಸುವುದು ಪರಧರ್ಮ,

ನಗುವ ಕೇಳುತ ನಗುವುದತಿಶಯದ ಧರ್ಮ,

ನಗುತ, ನಗಿಸುತ, ನಗುವ ಕೇಳುತ ನಗುವ ವರವ,

ಮಿಗೆ ಬೇಡಿಕೊಳೆಲೆಲೋ ||ಮಂಕುತಿಮ್ಮ||

 

ನಾವು ನಕ್ಕರೆ ಜಗವೇ ನಗುವುದು. ಬೇರೆಯವರನ್ನು ಒಂದೇ ಒಂದು ಕೆಟ್ಟನುಡಿಯಿಂದ ಅಳಿಸಬಹುದು. ಆದರೆ , ಅಳುವವನನ್ನು ನಗುವಂತೆ ಮಾಡುವುದು ತುಂಬಾ ಕಷ್ಟ.

ನಮ್ಮ ಕೈಲಾದರೆ ನಾಲ್ಕು ಒಳ್ಳೇ ಮಾತನಾಡಬಹುದು. ಅದಾಗದಿದ್ದರೆ ಸುಮ್ಮನಿದ್ದರೆ ಸಾಕು.

 

||ಧರ್ಮೋ ರಕ್ಷತಿ ರಕ್ಷಿತಃ||

 

******************************************************************

 

 

Rating
No votes yet

Comments