ಈಸ್ಟ್ ಹ್ಯಾಮ್ ನಲ್ಲಿ ಮಸಾಲೆದೋಸೆ
ಕಳೆದ ವಾರ ನಾನು ಸಪೋಸೆಡ್ಲಿ ಯುರೋಪ್ ನ ಅತ್ಯಂತ ರಸ್ತೆ ಶಿಸ್ತು ಪಾಲಿಸುವ ದೇಶವಾದ ಇಂಗ್ಲೆಂಡಿನಲ್ಲಿ ಸಾಕಷ್ಟು ಡ್ರೈವ್ ಮಾಡಿದೆ (ಮೊದಲ ಬಾರಿಗೆ). ಗೆಳೆಯರೊಂದಿಗೆ ಇಪ್ ಸ್ವಿಚ್, ಕೇಂಬ್ರಿಜ್ ಮತ್ತು ಲಂಡನ್ ಸುತ್ತಾಡಿ ಬಂದೆ. ನಮ್ಮ ಕೊನೆಯ ಆಕರ್ಷಣೆ ಲಂಡನ್ ನ ಈಸ್ಟ್ ಹ್ಯಾಮ್ ಆಗಿತ್ತು.
ಈಸ್ಟ್ ಹ್ಯಾಮ್ ಯಾವುದೇ ಯುರೋಪೀಯನಿಗಾದರೂ ಆಘಾತವಾಗುವಷ್ಟು ಭಾರತೀಯರ ನಿಬಿಡತೆಯಿರುವ ಪ್ರದೇಶ. ಬೀದಿಯಲ್ಲಿ ಕಾರು ನಿಲ್ಲಿಸಿ - (ರಸ್ತೆಗಳು ಇಕ್ಕಟ್ಟಾಗಿ ವಾಹನಗಳಿಂದ ತುಂಬಿ ನಮ್ಮ ಬಂಟ್ವಾಳದ ಗಲ್ಲಿಗಳಂತೆ ಇವೆ) - 'ಚೆನ್ನೈ ದೋಸಾ' ವನ್ನು ಹುಡುಕಿಕೊಂಡು ಬರುತ್ತಿದ್ದಂತೆ ಇಬ್ಬರು ವಾದ್ಯಗಾರರು (ಬಹುಶ: ತಮಿಳರು - ಕಡು ಕಪ್ಪು ಬಣ್ಣದಿಂದ ಹೇಳುವುದಾದರೆ) ಹೆಗಲಿಗೆ ಚಂಡೆಯಂತಹ ವಾದ್ಯವನ್ನೇರಿಸಿ, ಬಿಳಿಪಂಚೆಯ ಚುಂಗನ್ನು ಹಿಡಿದುಕೊಂಡು ನಡೆಯುತ್ತಾ ಹಾದು ಹೋದರು. ನಾನು ಒಂದು ದೊಡ್ಡ '!' ನ್ನು ಅವರ ಮೇಲೆ ಬಿಸಾಡಿ ಮುಂದುವರೆದೆ.
'ಚೆನ್ನೈ ದೋಸಾ' ವನ್ನು ಹೊಕ್ಕದ್ದಾಯಿತು. ನಿಂತು ತಿನ್ನುವ ವ್ಯವಸ್ತೆ ಇಲ್ಲ ಎನ್ನುವುದನ್ನು ಬಿಟ್ಟರೆ, ಅದು ಬೆಂಗಳೂರಿನ ದರ್ಶಿನಿ ಹೋಟೆಲ್ ಗಳಿಗಿಂತ ಭಿನ್ನವಾಗೇನೂ ಇಲ್ಲ. 3 ಮಸಾಲೆ ದೋಸೆಗಳಿಗೆ ಆರ್ಡರ್ ಕೊಟ್ಟು ಕಾಯುತ್ತಾ ಕುಳಿತೆವು.
ಅದೇ ಬೀದಿಯಲ್ಲಿ ದೇವಸ್ಥಾನವೊಂದು ಇದೆ. ಶುದ್ಧ ಅನುಕೂಲಸಿಂಧು ಆಸ್ತಿಕರಾದ ನಾವು 'ಮಸಾಲೆ ದೋಸೆ' ಯಲ್ಲೇ ದೇವರನ್ನು ಕಾಣುವ ನಿರ್ಧಾರ ಮಾಡಿದ್ದರಿಂದ ದೇವಸ್ಥಾನಕ್ಕೆ ಹೋಗುವ ಆಲೋಚನೆಯನ್ನು ಕೈಬಿಟ್ಟು ಮುಂದುವರೆದು ಬಂದಿದ್ದೆವು. ದೋಸೆಗೆ ಕಾಯುತ್ತಿದ್ದಂತೆ ಆದಿತ್ಯವಾರವಾಗಿದ್ದರಿಂದ ಒಂದೊಂದಾಗಿ ದೇವಸ್ಥಾನಕ್ಕೆ ಹೋಗಿ ಬಂದ ಸಂಸಾರಗಳು, ಹೋಟೆಲನ್ನು ಹೊಕ್ಕವು.
ಅವುಗಳಲ್ಲಿ ಕೆಲವರು ಮುದ್ದಾದ, ಸ್ವಲ್ಪ ಸ್ಥೂಲಕಾಯದವರೇ ಎನ್ನಬಹುದಾದ ಅಮ್ಮಂದಿರು, ಹಣೆಯ ಮೇಲೆ ದೇವಸ್ಥಾನದ ಕುಂಕುಮವನ್ನೂ ಧರಿಸಿ, ಸೀರೆಯ ಮೇಲೆ ಸ್ವೆಟರ್ ತೊಟ್ಟುಕೊಂಡು, ಅಲ್ಲಿನ ಇಡಿಯ 'ಸೆಟಪ್' ನ ಬಗ್ಗೆ ಮುಖ, ಕಣ್ಣುಗಳಲ್ಲಿ ಒಂದು ಅಪರಿಚಿತತೆಯನ್ನು ತುಂಬಿಕೊಂಡು ಒಳ ಹೊಕ್ಕರು. ನನಗೆ ಅಮ್ಮನ ನೆನಪು...
ಅಮ್ಮ ಕ್ರಿಕೆಟ್ ನೋಡುತ್ತಾ ಹೂಕಟ್ಟುತ್ತಿರುವಾಗ ಬೆಕ್ಕಿನಂತೆ ಕುರ್ರ್, ಕುರ್ರ್ ಎಂದು ಶಬ್ದ ಮಾಡುತ್ತಾ ಅಮ್ಮನಿಗೆ ಅಂಟಿ ಮಲಗಿಕೊಂಡಂತೆ... ಅದನ್ನು ಒಳಗೊಳಗೆ ಎಂಜಾಯ್ ಮಾಡುತ್ತಾ, ನಿರ್ಲಕ್ಷ್ಯವನ್ನು ಪ್ರದರ್ಶಿಸುತ್ತಾ 'ಏಯ್, ನೀನೆಂತ ಸಣ್ಣ ಮಾಣಿಯ ತಮ್ಮ?' ಎಂದು ನನ್ನನ್ನು ಅಮ್ಮ ಗದರಿದಂತೆ ಕನಸು.
ಮನೆಯಿಂದ ಸಾವಿರಾರು ಮೈಲಿ ದೂರ ಬಂದಿದ್ದು ಉದ್ಯೋಗಾರ್ಥ ನೆಲೆಸಿರುವುದರಿಂದ ಪಡೆಯುವುದೇನು, ಕಳೆದುಕೊಳ್ಳುವುದೇನು ಎನ್ನುವುದು ಸದಾ ಅಂತರಂಗದಲ್ಲಿ ತಿರುಗುತ್ತಿರುವ ಪ್ರಶ್ನೆ. 'ಯಾವಗ ಬತ್ತೆ?', 'ನೀನು ಬಂದರೆ ಪುನ ಹೋಪಲಿದ್ದ? (ನೀನು ಬಂದರೆ ಪುನ: ಹೋಗಲಿಕ್ಕಿದೆಯ?)' ಎಂದು ಆತಂಕದಿಂದ ಪ್ರಶ್ನಿಸುವ ಅಪ್ಪ, ಅಮ್ಮ; ಆನ್ ಸೈಟು, ಪ್ರಾಜೆಕ್ಟು, ಬಯಿಂಗ್ ಪವರ್, ಕಳೆದುಕೊಳ್ಳುತ್ತಿರುವ ಬೆಂಗಳೂರಿನ ವಯಲಿನ್ ಕ್ಲಾಸ್ ಗಳು, ಸಂಬಂಧ ಬೆಸೆಯುವ ಗೂಗಲ್ ಟಾಕುಗಳೆಲ್ಲ ಜೊತೆ ಸೇರಿ ಕಲಸು ಮೇಲೋಗರವಾಗಿ, ಒಂದನ್ನು ಇನ್ನೊಂದರಿಂದ ಪ್ರತ್ಯೇಕಿಸಲಾಗದೆ, ಯಾವುದನ್ನೂ prioritize ಮಾಡಲಾಗದೆ, ಯಾವುದನ್ನೂ ಬಿಡಲಾಗದೆ ಇರುವ ಒಂದು infinite ಲೂಪಿನ ಯೋಚನೆಗೆ ಸಿಕ್ಕಿ ಹಾಕಿಕೊಂಡೆ.
'ಬಟರ್ ಮಸಾಲೆ' ಹೇಳಿದ್ದು ಯಾರು? ಎಂಬ ಪ್ರಶ್ನೆ, ಯೋಚನೆಗಳಿಗೆಲ್ಲ ಬ್ರೇಕ್ ಹಾಕಿದಂತಾಗಿ, ಮತ್ತೆ ಚೆನ್ನೈ ದೋಸಾಕ್ಕೆ ಹಿಂದಿರುಗಿದೆ. ಗರಿಗರಿಯಾದ ದೋಸೆ, ಜೊತೆಗೆ ಬಿಳಿ ಚಟ್ನಿ, ಕೆಂಪು ಚಟ್ನಿ ಮತ್ತು ಸಾಂಭಾರ್. ಮೂರೂ ಜನ ಹೊಟ್ಟೆ ತುಂಬ ತಿಂದರೂ ಬಿಲ್ಲು 9 ಪವುಂಡು. 'ಚೆನ್ನೈ ದೋಸ'ಕ್ಕೆ ವಂದನೆಗಳನ್ನು ಹೇಳಿ ಹೊರಟೆವು..
ವಸಂತ್ ಕಜೆ
Comments
ಉ: ಈಸ್ಟ್ ಹ್ಯಾಮ್ ನಲ್ಲಿ ಮಸಾಲೆದೋಸೆ
ಉ: ಈಸ್ಟ್ ಹ್ಯಾಮ್ ನಲ್ಲಿ ಮಸಾಲೆದೋಸೆ
ಉ: ಈಸ್ಟ್ ಹ್ಯಾಮ್ ನಲ್ಲಿ ಮಸಾಲೆದೋಸೆ
In reply to ಉ: ಈಸ್ಟ್ ಹ್ಯಾಮ್ ನಲ್ಲಿ ಮಸಾಲೆದೋಸೆ by anivaasi
ಉ: ಈಸ್ಟ್ ಹ್ಯಾಮ್ ನಲ್ಲಿ ಮಸಾಲೆದೋಸೆ
In reply to ಉ: ಈಸ್ಟ್ ಹ್ಯಾಮ್ ನಲ್ಲಿ ಮಸಾಲೆದೋಸೆ by ASHOKKUMAR
ಉ: ಈಸ್ಟ್ ಹ್ಯಾಮ್ ನಲ್ಲಿ ಮಸಾಲೆದೋಸೆ
In reply to ಉ: ಈಸ್ಟ್ ಹ್ಯಾಮ್ ನಲ್ಲಿ ಮಸಾಲೆದೋಸೆ by ASHOKKUMAR
ಉ: ಈಸ್ಟ್ ಹ್ಯಾಮ್ ನಲ್ಲಿ ಮಸಾಲೆದೋಸೆ
In reply to ಉ: ಈಸ್ಟ್ ಹ್ಯಾಮ್ ನಲ್ಲಿ ಮಸಾಲೆದೋಸೆ by anivaasi
ಉ: ಈಸ್ಟ್ ಹ್ಯಾಮ್ ನಲ್ಲಿ ಮಸಾಲೆದೋಸೆ
In reply to ಉ: ಈಸ್ಟ್ ಹ್ಯಾಮ್ ನಲ್ಲಿ ಮಸಾಲೆದೋಸೆ by Vasanth Kaje
ಉ: ಈಸ್ಟ್ ಹ್ಯಾಮ್ ನಲ್ಲಿ ಮಸಾಲೆದೋಸೆ
ಉ: