ಈ ಮಣ್ಣ ಸತ್ಯ

ಈ ಮಣ್ಣ ಸತ್ಯ

ಈ ಮಣ್ಣ ಸತ್ಯ

ಕಾಲ ಸಮಾಧಿಯ ಮೇಲೆ ಕುಳಿತು
ಬಗೆ ಬಗೆಯುತ್ತಿದೆ, ಬಗೆಬಗೆಯುತ್ತಿದ್ದೆ, ಅತ್ತ್
ಹರಿವ ಹೊಳೆ-ಹೊಳೆಯುತ್ತಿತ್ತು
ಹೊಳೆಹೊಳೆಯುತ್ತಿತ್ತು.

ಹತ್ತೂ ಬೆರೆಳುಗಳ ಸೆಟೆಸಿ, ಹಸ್ತಗಳನ್ನೊಂದು ಮಾಡಿ
ನರನಾಡಿಗಳನದರ ಗುಡಿಮಾದಿ, ಪಾದಗಳನೂರಿ
ಊರುಗಳ ವೀರಮುದ್ರೆಗೆಗೀಡುಮಾಡಿ
ಅಸ್ತಿತ್ವದೊಡತೆ ಮನಕೆ ನಮಿಸಿ,
ಪರಿವ್ರಾಜಕನ ದಟ್ಟ ಲಕ್ಷ್ಯದ ದಿಟ್ಟ ಭ್ರೂಮಧ್ಯದ ಬೊಟ್ಟ ಹಿಡಿ
ಬಂಗಾರದ ಹುಡಿಮಣ್ಣ
ಬಗೆಬಗೆಯುತ್ತಿದೆ.

ಕಪ್ಪೆಗೂಡಿನ ಕುಹಕವಿಹಕಗಳೆಲ್ಲಕ್ಕೂ ಹನುಮಲಂಘನ
ಬೆರೆಗಿಟ್ಟ ಪದರಗಳ ಒಳಗೆಲ್ಲೋ ಕರಂಡಗಳು ಬಿಚ್ಚಿಕೊಳ್ಳುತ್ತಾ
ಅವ್ವೆಯರ ಅಪ್ಪಂದಿರ ಅಜ್ಜ ಅಜ್ಜಿಗಳ ಎಲಬು ಧೂಳುಗಳ
ಪ್ರವರ-ವಿವರ ವಿಸ್ತಾರದೊಳು ಕಾಣದ ಪರಕೀಯರಿಲ್ಲದಿವರೆಲ್ಲರೂ
ಮಣ್ಣಾದ ಈ ಮಣ್ಣ
ಬಗೆ ಬಗೆಯುತ್ತಿದ್ದೆ, ಬಗೆಬಗೆಯುತ್ತಲೇ ಇದ್ದೆ.

ದಟ್ಟ ಮಣ್ಣ ವಾಸನೆಯ ಗುರುತ್ವಕ್ಕೆ ಮೂಗಹೊಳ್ಳೆಯನ್ನರಳಿಸಿ
ಅಘ್ರಾಣಿಸುತ್ತಿದ್ದಂತೆ, ತಟ್ಟನೆ;
ಹಸಿಮಾಂಸದ ಬಿಸಿ ರಕ್ತದ ಹೊಳೆ ಹೂಂಕರಿಸಿ ನಡುವೆ
ಕೈಗೆ ಹತ್ತಿದ ಕಿಡಿ, ಬಂಗಾರದ ಹುಡಿ
ಕಿರೀಟ ಛತ್ರಿ ಚಾಮರಗಳು, ಪುಳಕಿಸುವ ಬಿರುದು-ಬಾವಲಿಗಳು
ಪಠಿ-ಪಠಿಸುತ್ತಿರುವ ವೀರ ಘೋಷಗಳು.
ಒಳಗೆಲ್ಲೋ, ಪತಿರುಂಡಗಳ ಮಡಿಲಲ್ಲಿಕ್ಕಿದ ಸತಿಉಅರ ಆರ್ತನಾದ
ಕಣ್ಣೀರು ಹೊರಹೊಮ್ಮಿಮ್ ಜಾರಿ-ಹರಿದು
ಹಸಿಯಾದ ಹಸನಾದ ಈ ಮಣ್ಣ
ಬಗೆ ಬಗೆಯುತ್ತಿದ್ದೆ. ಬಗೆಬಗೆಯುತ್ತಲೇ ಇದ್ದೆ.

ಆಲಯಗಳ, ದೇವಾಲಯಗಳ, ನೆಲಕ್ಕೊರಗಿದ ಪ್ರಾಕಾರಗಳ
ಮುಕ್ಕಾದ ಆಕಾರಗಳ
ಮನಗಳೊಡೆದ ಆಂಗ್ಲರ, ಹಿಂದೆ ಮನೆಗಳೊಡೆದ ಯವನರ
ಘಝನೀ, ಘೋರಿಗಳ ಹೂಣ ಹೊಣೆಗೇಡಿ ಆಕ್ರಮಣಕಾರರ
ಛಳಪು ಕತ್ತಿಯ ಮೊನೆಗೆ ಎದೆಕೊಟ್ಟು ಮಲಗಿದ
ಆ ಇತಿಹಾಸದಮೇಲೆ ಹುಟ್ಟಿಬೆಳೆದ ಮರಗಳು ಸತ್ತು
ಮಣ್ಣಾದ ಆ ಮಣ್ಣ ಬಗೆಬಗೆಯುತ್ತಿದ್ದೆ,
ಬಗೆಬಗೆಯುತ್ತಲೇ ಇದ್ದೆ.

ಶಿಖೆ ಚಾಣಕ್ಯನೊಳು, ಗೂಢ-ಗೊಲ್ಲನ
ನಂದ-ಗೊಂದಲದೊಳು ಭ್ರಷ್ಥ ಕೌರವರ
ಚಂದ್ರಗುಪ್ತ ಪರಿವಾರದೊಳು ಪಾಂಡವರ
ಶುದ್ಧ ಬೇರುಗಳ ಅನಿಷ್ಥ ಕಾಷ್ಥಗಳ
ಬುಧ್ಧ-ಮಹಾವೀರ ಶಂಕರ ಮಧ್ವ ರಾಮಾನುಜರ ಸಂದೇಶ ಉಧ್ಭವಗಳ
ನದೀತಟ ಸಂಸ್ಕೃತಿಗಳ ಸಮಷ್ಥಿ ಜೀವನಗಳ
ವೇದ ಶಾಸ್ಥ್ರ ತತ್ವ ಸಿಧ್ಧಾಂತಗಳಿಂದ ಸಮೃದ್ಧವಾದ
ಹಸಿಹಸಿಮಣ್ಣ ಬಗೆ ಬಗೆಯುತ್ತಲೇ ಇದ್ದೆ.

ಘನವೆಲ್ಲ ದ್ರವವಾಗಿ. ಕೃತಿ-ಸ್ಮೃತಿ ಸಂಸ್ಕೃತಿಗಳು ಅಂತರ್ಗಾಮಿಗಳಾಗಿ
ಪುರಾಣಗಳಾಗಿ ಬಗೆವ ಸ್ಥಿತಿ ತಟಸ್ಥವಾಗಿ
ಸೆಟೆದ ಹತ್ತೂ ಬೆರಳುಗಳೂ ಐದರೆರಡು ಮುಷ್ಥಿಗಳಾಗಿ
ಪಿಸುನುಡಿಗಳು ಪ್ರತಿಧ್ವನಿಗಳಾಗಿ
ಕಾಲವಾಮನನ ಪಾದಗಳಡಿಯಲ್ಲಿ ಬಗೆಬಗೆಯ ಮಣ್ಣಾಗಿ
ಎಲ್ಲವೂ ಮಣ್ಣು ಎಂಬ ಸತ್ಯದೊಳೊಂದಾಗಿದ್ದೆ.

ಎಸ್.ಶಾಮಸುಂದರ

Rating
No votes yet