ಉತ್ತರಕರ್ನಾಟಕದಲ್ಲಿ ಕನ್ನಡದ ಕಥೆ -೨
(ಮುಂದುವರಿದುದು)
"ಮುಂಬೈ ಪಟ್ಟಣದೊಳಗೆ ಕ್ರಿ.ಶ. ೧೮೨೩ರಲ್ಲಿ ವಿದ್ಯಾಖಾತೆಯು ಆರಂಭವಾಯಿತು . ೧೮೫೬ರಲ್ಲಿ ಕರ್ನಾಟಕದ ಜಿಲ್ಲೆಗಳೊಳಗೆ ಶಾಲೆಗಳು ಸ್ಥಾಪಿತವಾದವು. ಆಗ ಶಾಲೆಗಳಲ್ಲಿ ಮಹಾರಾಷ್ಟ್ರ ಭಾಷೆಯನ್ನೇ ಕಲಿಸುತ್ತಿದ್ದರು. ಸರಕಾರಿ ಕಾಗದಪತ್ರಗಳು ಸಹಿತ ಅದೇ ಭಾಷೆಯಲ್ಲಿ ಬರೆಯಲಾಗುತ್ತಿದ್ದವು. ಆದರೆ ೧೮೬೫ರಲ್ಲಿ ವಿದ್ಯಾಖಾತೆಯವರಿಗೆ ಕರ್ನಾಟಕದ ಭಾಷೆಯು ಕನ್ನಡವೆಂದು ತಿಳಿದುಬಂದಿತಂತೆ ! ಅಂದರೆ ಕರ್ಣಾಟಕದ ಭಾಷೆ ಕನ್ನಡವೆಂದು ತಿಳಿಯಲಿಕ್ಕೆ ಆಗಿನ ಸರಕಾರಕ್ಕೆ ಒಂಬತ್ತು ವರ್ಷಗಳೇ ಹಿಡಿದವು! ೧೮೬೫ರಲ್ಲಿ ವಿದ್ಯಾಧಿಕಾರಿಗಳಾಗಿದ ರಸೆಲ್ಲರವರು ಆ ವರ್ಷದ ತಮ್ಮ ವರದಿಯಲ್ಲಿ ಹೀಗೆ ಬರೆದಿದ್ದಾರೆ ;
"The Deputy Inspectors and English Masters in this division are none from the kanarese and there are very few Kanarese men even among thee vernacular school masters in the districts . The Kanarese language has never been taught or cultivated in this school as the Gujarati or Marathi in theirs ..... The indifference of the Kanarese people in general to schools in which the books and teachers are mostly can hardly be wondered at "
ಅಷ್ಟೇ ಅಲ್ಲ ಅಂದಿನ ಕನ್ನಡ ಶಾಲೆಗಳಲ್ಲಿ ಕಲಿಸುವವರೂ ಸಹ ಹೆಚ್ಚಾಗಿ ಈ ಕನ್ನಡ ಬಾರದ ಕಾಳೇ , ಭೋಳೇ , ಗೋರೆಗಳೇ .
"ಇದ್ದ ಕನ್ನಡ ಪುಸ್ತಕಗಳು ಹರಕು-ಮುರುಕ ಕನ್ನಡದಲ್ಲಿದ್ದವು . ಹೊಸದಾಗಿ ಕನ್ನಡದಲ್ಲಿ ಪುಸ್ತಕಗಳು ಭಾಷಾಂತರವಾಗಬೇಕೆಂದು ಕನ್ನಡ ತಿಳಿಯದ ಮನುಷ್ಯನನ್ನೇ ನೇಮಿಸಲಾಯಿತು. ಆದರೂ ರಸೆಲ್ಲರ ಪ್ರಯತ್ನದಿಂದ ಕನ್ನಡ ಜನರೂ ಸಿಕ್ಕರು. ಕನ್ನಡದಲ್ಲಿ ಪುಸ್ತಕಗಳನ್ನು ಬರೆಸಿದುದು ಆಯಿತು . ಆದರೆ ಅವುಗಳನ್ನು ಮುದ್ರಿಸುವದು ಹೇಗೆ? 'ಸನ್ಯಾಸಿಯ ಮದುವೆಗೆ ಜುಟ್ಟು ಜನಿವಾರದಿಂದ ಸಿದ್ಧತೆ ಆಗಬೇಕು ' ಎಂಬಂತೆ ಕನ್ನಡದ ಗತಿಯಾಗಿತ್ತು. ಆ ಕಾಲಕ್ಕೆ ರಸೆಲ್ಲರ ಭಗೀರಥ ಪ್ರಯತ್ನದಿಂದ ೧೮೬೯ರಲ್ಲಿ ಕನ್ನಡ ಮುದ್ರಣಾಲಯವೊಂದು ಸ್ಥಾಪಿತವಾಯಿತು. ಈ ಮುದ್ರಣಾಲಯದ ಸ್ಥಾಪನೆಯಲ್ಲಿ ವೆಂಕಟರಂಗೋಕಟ್ಟಿಯವರು ತುಂಬಾ ಶ್ರಮ ವಹಿಸಬೇಕಾಯಿತು. ಅವರೇ ಅಕ್ಷರದ ಅಚ್ಚುಗಳನ್ನು ಸಿದ್ಧಪಡಿಸಿದವರು.
(ಮುಂದುವರೆಯುವದು)