ಎಲ್ಲಾ ಭಾರತೀಯರು ಒಟ್ಟಾಗಿ ಉಚ್ಛೆ ಹೊಯ್ದಿದ್ದರೆ...?!

ಎಲ್ಲಾ ಭಾರತೀಯರು ಒಟ್ಟಾಗಿ ಉಚ್ಛೆ ಹೊಯ್ದಿದ್ದರೆ...?!

ಎಲ್ಲಾ ಭಾರತೀಯರು ಒಂದೇ ಭಾರಿ ಉಚ್ಛೆ ಹೊಯ್ದಿದ್ದರೆ ಇಡೀ ಇಂಗ್ಲೆಂಡ್ ಕೊಚ್ಚಿಕೊಂಡು ಹೋಗುತಿತ್ತು” ಆವತ್ತು ಇಂಗ್ಲೆಂಡ್ ಅನ್ನೋದು ಭಾರತದ ಒಂದು ಜಿಲ್ಲೆಗೆ ಸಮನಾಗಿತ್ತು. ಆದ್ರೂ ಕೂಡಾ ಭಾರತೀಯರು ಆಂಗ್ಲರ ಗುಲಾಮರಾದರು. ಅದಕ್ಕೆ ಕಾರಣ ಭಾರತದ ಮಣ್ಣು. ಈ ದೇಶದ ಮಣ್ಣೆ ಅಂತಹದ್ದು. ಈ ಮಣ್ಣಿನಲ್ಲಿ ಮಹಾವೀರ,ಬುದ್ದ, ಪತಂಜಲಿಗಳು ಜನಿಸುತ್ತಾರೆಯೇ ಹೊರತು, ಕೋಟಿಕೋಟಿ ಜನ ಇಲ್ಲಿ ಹುಟ್ಟಿದರೂ ಒಬ್ಬ ಹಿಟ್ಲರ್, ಒಬ್ಬ ಮುಸಲೋನಿಯನ್ನು ಈ ನಾಡು ಜಗತ್ತಿಗೆ ನೀಡಲಾರದು. ಇದು ಐದು ಸಾವಿರ ವರ್ಷದ ಇತಿಹಾಸದಿಂದ ಸಾಬೀತಾದ ಮಾತು.ಇಂತಹದ್ದೊಂದು ಸುಂದರ ಸಾಲುಗಳು ಓದಲು ಸಿಕ್ಕಿದ್ದು ಓಶೋ ರಜನೀಶರ ನನ್ನ ಪ್ರೀತಿಯ ಭಾರತ ಅನ್ನೋ ಪುಸ್ತಕದಲ್ಲಿ.
ಆ ಪುಸ್ತಕವನ್ನೊಮ್ಮೆ ಓದಬೇಕು ಅನ್ನುವ ನನ್ನ ಹಂಬಲ ನಿನ್ನೆಗೆ ತೀರಿತು. ಇಲ್ಲಿನ ರಸ್ತೆಗಳು ಸರಿಯಿಲ್ಲ, ರಾಜಕಾರಣ ಸರಿಯಿಲ್ಲ. ಮೂಲಭೂತ ವ್ಯವಸ್ಥೆಗಳು ಸರಿಯಿಲ್ಲ. ಒಟ್ಟಲ್ಲಿ ದೇಶವೇ ಸರಿಯಿಲ್ಲ. ಅಮೇರಿಕಾ, ಇಂಗ್ಲೆಂಡ್‌ಗಳು ಸ್ವರ್ಗ! ಎಲ್ಲ ವೈಭವಗಳೂ ಅಲ್ಲಿವೆ. ಅಂತಾ ವಾದಿಸುವವರ ಗ್ಯಾಂಗ್‌ನಲ್ಲಿ ಈ ವರೆಗೆ ನಾನು ಒಬ್ಬನಾಗಿದ್ದೆ. ಆದರೆ ಅದೆಲ್ಲಕ್ಕಿಂತ ಭಿನ್ನವಾದ ನಮಗೆ ಗೊತ್ತಿರದ ಗೊತ್ತಿದ್ದರೂ ಅರ್ಥೈಸಿಕೊಳ್ಳಲಾಗಿರದ ದಿವ್ಯ ಭವ್ಯ ಭಾರತದ ವಾಕ್ಚಿತ್ರದಂತಿರುವ ಓಶೋರ ಪುಸ್ತಕ ನನ್ನ ನಿಲುವುಗಳನ್ನೇ ಬದಲಿಸಿದೆ ಅಂದರೂ ತಪ್ಪಾಗಲಾರದು.
ಶಂಕರಾಚಾರ್ಯರು ಮಂಡನ ಮಿಶ್ರರೊಂದಿಗೆ ಚರ್ಚೆಗಿಳಿಯುತ್ತಾರೆ. ಮಿಶ್ರರ ಹೆಂಡತಿಯೇ ಆ ಚರ್ಚೆಗೆ ಜಡ್ಜು! ವಾದದಲ್ಲಿ ಶಂಕರರು ಗೆಲ್ಲುತ್ತಾರೆ. ಆದರೆ ಅದು ಅರ್ದ ಗೆಲುವು! ಹಾಗಂತ ಜಡ್ಜ ಆಗಿದ್ದ ಮಿಶ್ರರ ಹೆಂಡತಿ ಭಾರತಿ ಹೇಳೋದು. ಕೊನೆಗೆ ಆಕೆ ವಾದಕ್ಕಿಳಿಯುವುದು ಆಕೆಯಿಂದ ಶಂಕರರು ಜಯ ಸಾಧಿಸಲಾಗದೇ ಮರಳುವುದು ತುಂಬಾ ಸುಂದರ ಕಥೆಯದು. ಶಂಕರರಿಗೆ ಗೆಲುವು ಸಾಧ್ಯವಾಗಲಿಲ್ಲ ಅನ್ನೋದಕ್ಕಿಂತ ಗೆಲುವಿನ ಬೆನ್ನತ್ತಿ ಹೋಗಲು ಮನಸಾಗಲಿಲ್ಲವಂತೆ. ಅದಕ್ಕೆ ಓಶೋ ಕೊಡುವ ಸಮರ್ಥನೆ ನಿಜಕ್ಕೂ ಅದ್ಬುತ. ಭಾರತ ಜಗತ್ತಿಗೆ ತನ್ನನ್ನು ತಾನು ಗೆಲ್ಲುವುದನ್ನು ಭೋಧಿಸಿದ ರಾಷ್ಟ್ರ ಅಂತಾರೆ ಓಶೋ. ಅಲೆಗ್ಸಾಂಡರ್, ಹಿಟ್ಲರ್ ಎಲ್ಲಾ ಜಗತ್ತನ್ನೇ ಗೆಲ್ಲ ಹೊರಟರು. ಅವರು ಶ್ರೇಷ್ಠರಲ್ಲ ಯಾಕೆಂದರೆ ಅವರಿಂದ ಅವರನ್ನೇ ಜಯಿಸಲು ಆಗಲಿಲ್ಲ. ಹಾಗೇ ಜಯಿಸಲು ಸಾಧ್ಯವಾಗಿದ್ದಿದ್ದರೆ ಅವರಿಗೆ ಜಗತ್ತನ್ನು ಗೆಲ್ಲಬೇಕು ಅನ್ನಿಸುತ್ತಿರಲಿಲ್ಲ. ಪ್ರಪಂಚದಲ್ಲಿ ರಕ್ತದ ಹೊಳೆ ಹರಿಯುತ್ತಿರಲಿಲ್ಲ. ಮಹಾವೀರ, ಬುದ್ದರು ತಮ್ಮನ್ನು ತಾವು ಗೆದ್ದರು ಆ ಮುಖೇನ ವಿಶ್ವವನ್ನೇ ಅವರಿಗೆ ಗೊತ್ತಿಲ್ಲದಂತೆ ಗೆದ್ದುಬಿಟ್ಟರು. ಅದು ಭಾರತದ ಶ್ರ್‍ಏಷ್ಠತೆ ಅನ್ನುತ್ತಾ ಅವುಗಳನ್ನು ಓಶೋ ಸಾಬೀತುಪಡಿಸಿದ ರೀತಿ ಇದೆಯಲ್ವಾ? ಅಬ್ಬಾ ರೋಮಾಂಚನವದು.
ಯಾಜ್ಞವಲ್ಕ್ಯರಿಂದ ಗೆದ್ದ ಮೊದಲ ಮಹಿಳೆ ಗಾರ್ಗಿ ಅನ್ನೋ ಆ ಕಥೆಯ ನಿರೂಪಣೆ, ಬುದ್ದ, ಚೈತನ್ಯ, ಮೀರಾಳ ಕಥೆಗಳು, ಕುರುಡನಾಗಿಯೂ ಘಜ್ನಿಯನ್ನು ಕೊಂದ ಪೃಥ್ವಿರಾಜನ ಕಥೆ…..ಹೀಗೆ ಒಂದರ ಮೇಲೊಂದು ಕಥೆಗಳು. ಎಲ್ಲವೂ ರೋಮಾಂಚನಗೊಳಿಸುವಂತಹವೇ. ಭಾರತ ಯಾಕೆ ವಿಶ್ವದ ಇತರರಿಗಿಂತ ಬಿನ್ನ, ಭಾರತದಲ್ಲಿನ ಆಧ್ಯಾತ್ಮಿಕತೆಯ, ಧ್ಯಾನದ ಮಹಿಮೆ ಏನು? ಇಡೀ ವಿಶ್ವವನ್ನೇ ತನ್ನೆಡೆಗೆ ಸೆಳೆದುಕೊಳ್ಳುತ್ತಿರುವ ಭಾರತಕ್ಕಿರುವ ಅಗಾದ ಶಕ್ತಿಯಾದರೂ ಏನೂ? ಹೀಗೆ ಹಲವು ವೈಚಾರಿಕ ಸಂಗತಿಗಳ ಭಂಡಾರ ಈ ಪುಸ್ತಕ.
ಭಾರತ ಎಂದಿಗೂ ಹೇಡಿಯಲ್ಲ, ಶಾಂತಿಪ್ರಿಯವಷ್ಟೆ. ಹಿಂಸೆಯ ವಿರೋಧಿಯಷ್ಟೆ. ಭಾರತೀಯರೆಲ್ಲರೂ ಒಂದೇ ಭಾರಿ ಉಚ್ಛೆ ಹೊಯ್ದಿದ್ದರೆ ಇಡೀ ಇಂಗ್ಲೆಂಡ್ ತೊಳೆದು ಹೋಗುತಿತ್ತು. ಇಂಗ್ಲೆಂಡ್ ನಾಶಮಾಡಲು ನಮಗೆ ಅಣುಬಾಂಬ್ ಬೇಕಿರಲಿಲ್ಲ, ಉಚ್ಛೆಯೇ ಸಾಕಿತ್ತು ಅನ್ನೊ ಈ ಮಾತನ್ನು ಪೃಥ್ವಿರಾಜನ, ಅಲೆಗ್ಸಾಂಡರ್ ವಿರುದ್ದ ಹೋರಾಡಿದ ಪೋರಸ್‌ನ ಉದಾಹರಣೆ ಕೊಟ್ಟು ವಿವರಿಸುವುದಿದೆಯಲ್ವಾ? ….ಊಹುಂ ಅದನ್ನು ನನಗಂತೂ ಮಾತುಗಳಿಂದ ವಿವರಿಸಲಾಗುತ್ತಿಲ್ಲ.
ಹಾಗಂತ ವಿಶ್ವದ ಇತರರೊಂದಿಗೆ ನಮ್ಮನ್ನು ಹೋಲಿಸಿಕೊಂಡು ನಾವೇ ಶ್ರೇಷ್ಠ ಅಂತಾ ನಿರೂಪಿಸಿಕೊಳ್ಳಲು ಹೊರಟ ಪುಸ್ತಕ ಇದಲ್ಲ. ಎಲ್ಲೂ ಭಾರತದ ವೈಭವವಿಲ್ಲ. ಭಾರತ ಶ್ರೇಷ್ಠ ಅನ್ನೋ ದಾಟಿಯ ಮಾತಿಲ್ಲ. ಸಕಾರಾತ್ಮಕ ಭಾರತದ ಚಿತ್ರಣವಿದೆ. ಗತಿಸಿಹೋದ ಇತಿಹಾಸದ ಕಥೆಗಳಿದೆ ಅಷ್ಟೆ. ಯೋಗಿಗಳ ಸಾದುಗಳ ಕಥೆಯಿದೆ. ಆಧ್ಯಾತ್ಮಿಕಥೆಯ ಮಂಥನವಿದೆ. ಇಡೀ ಪುಸ್ತಕದ ತಿರುಳೇ ಆಧ್ಯಾತ್ಮ ಅಂದರೂ ತಪ್ಪಾಗಲಾರದು.
ಓಶೋ ಇಷ್ಟವಾಗೋದು ಅದಕ್ಕೆ. ಯಾವುದೇ ಇಸಂ, ಧರ್ಮ, ಮತಗಳಿಗೆ ಅವಲಂಬಿತವಾಗದೇ ವೈಭವೀಕರಿಸದೇ ಶುದ್ದ ಆಧ್ಯಾತ್ಮವನ್ನು ಸರಳವಾಗಿ ಹೇಳುತ್ತಾ ಹೋಗುತ್ತಾರೆ. ಅದು ಕುಡಾ ಯಾವುದೇ ಮುಚ್ಚುಮರೆ, ಕಟ್ಟಲೆಗಳ ಕೊಂಡಿಗೆ ಸಿಲುಕಿಕೊಳ್ಳದೆ!ವಿದ್ಯಾನಂದ ಶೆಣೈ, ಚಕ್ರವರ್ಥಿ ಸೂಲಿಬೆಲೆಯಂತಹ ಬಲಪಂಥೀಯವಾದಿಗಳು ಭಾರತದ ಕುರಿತಾಗಿ ಹೇಳಿದರೆ, ಬೈರಪ್ಪನವರು ಭಾರತದ ಮಹಿಮೆ ವಿವರಿಸಿದರೆ ನಮಗೆ ಅದೆಲ್ಲಾ ಕಥೆ ಅನ್ನಿಸತ್ತೆ. ಕೆಲವೊಮ್ಮೆ ಕೋಮು ಕುಮ್ಮಕ್ಕೂ ಅಂತಾನೂ ಅನ್ನಿಸತ್ತೆ! ಆದ್ರೆ ಯಾವುದನ್ನು ಸುಲಭಕ್ಕೆ ಒಪ್ಪಿಕೊಳ್ಳದಂತಹ ಓಶೋವೇ ಭಾರತದ ಕುರಿತಾಗಿ ಹೇಳಿದರೆ? ಓಶೋ ಹೇಳಿದರೇನೂ ಅದನ್ನು ಭಾಷಾಂತರಿಸಿದವರು ಭಟ್ಟರು ಅಂದಾರು ಎಡಬಂಡಗಿ ಎಡಪಂಥೀಯರು! ಎಷ್ಟಂದ್ರೂ ಬುದ್ದಿಜೀವಿಗಳವರು ಎಲ್ಲಿ ಯಾವ ತರಹದ ಬುದ್ದಿ ಉಪಯೋಗಿಸಬೇಕೆಂದು ಚೆನ್ನಾಗಿ ಬಲ್ಲವರು! ನಮಗ್ಯಾಕೆ ಅವರ ಸಹವಾಸ.
ಓಶೋ ಅರ್ಥೈಸಿಕೊಂಡು ಭಾಷಾಂತರಿಸುವುದು ಅಷ್ಟು ಸುಲಭದ ಮಾತಲ್ಲ. ಭಾಷೆ ಮೇಲೆ ಅಗಾದ ಪಾಂಡಿತ್ಯವುಳ್ಳ ವಿಶ್ವೇಶ್ವರ ಭಟ್ಟರಂತಹ ಬೆರೆಳೆಣಿಕೆ ಮಂದಿ ಮಾತ್ರ ಕನ್ನಡದಲ್ಲಿ ಆ ಕಾರ್ಯ ಮಾಡುವವರು. ಆದ್ರೂ ಈ ಪುಸ್ತಕದಲ್ಲಿ ಓಶೋ ಮೂಲ ಭಾಷೆಯ ದಾಟಿ ಬರಲಿಲ್ಲ ಅನ್ನಿಸಿತು( ಓಶೋರ ಭಜಗೋವಿಂದಂ ಮೂಡಮತೆ ಕೃತಿಗೆ ಹೋಲಿಸಿ ನೋಡಿದಾಗ)ಮತ್ತೆ ಅಕ್ಷರ ದೋಷಗಳು ತುಂಬಾನೇ ತುಂಬಿವೆ. ಇನ್ನೂ ಲೇಯೌಟ್ ಜೊತೆ ಆಟ ಆಡಲು ಹೋಗದಿದ್ದರೆ ಪುಸ್ತಕವನ್ನು ಓದುಗನ ಕೈಗೆ ಇನ್ನೂ ಕಮ್ಮಿ ಬೆಲೆಗೆ ಕೊಡಬಹುದಿತ್ತೇನೋ ಅನ್ನಿಸಿತ್ತು. ಹಾಗೇನೇ ಓಶೋನತ್ತ ಬರಹಗಾರನ ಪುಸ್ತಕಕ್ಕೆ ಲೇಯೌಟ್ ಮುಖ್ಯವೇ ಅಲ್ಲ ಅನ್ನೋದು ನನ್ನ ಅಭಿಪ್ರಾಯ. ೨೦೦ಪುಟಕ್ಕೆ ೨೦೦ರೂ ಅಂದ್ರೆ ಕನ್ನಡದ ಮಟ್ಟಿಗೆ ಕಾಸ್ಟ್ಲಿ ಆಯಿತು. ಇಷ್ಟೆಲ್ಲದರ ನಡುವೆಯೂ ಅದೊಂದು ಅದ್ಬುತ ಪುಸ್ತಕ. ಅಂತಹದೊಂದು ಪುಸ್ತಕವನ್ನು ಕನ್ನಡಿಗರ ಕೈಗಿಟ್ಟ ಭಟ್ಟರಿಗೆ ನೂರು ಪ್ರಣಾಮಗಳು. ಇಡೀ ಪುಸ್ತಕ ಓದಿದ ಮೇಲೆ ಒಂದ್ಸಾರಿ ಗಟ್ಟಿಯಾಗಿ ಬೋಲೋ ಭಾರತ ಮಾತಕೀ ಜೈ ಅನ್ನಬೇಕು ಅನ್ನಿಸಿತು.

Rating
No votes yet

Comments