ಎಲ್ಲಿಯವರೆಗೆ?
ಎಲ್ಲಿಯವರೆಗೆ ಶಾಂಪೂ ಮತ್ತು ಸೋಪುಗಳ ಕಂಪೆನಿಗಳು 'ಇದರಲ್ಲಿ ಪ್ರೊಟೀನ್ ಇದೆ, ನಿಮ್ಮ ಕೂದಲನ್ನು ಬಲಗೊಳಿಸಿ ಚರ್ಮಕ್ಕೆ ಕಾಂತಿ ನೀಡುತ್ತದೆ' ಎಂದು ಆಶ್ವಾಸನೆ ನೀಡುತ್ತಾ ಮಾರಾಟ ಮಾಡ್ತವೆ?
- ಹೊರಗಡೆಯಿಂದ ಪ್ರೊಟೀನ್ ಹಚ್ಚಿದರೆ ಹೀರಿಕೊಂಡು ಬೆಳೆಯುವ, ಮಾರ್ಪಡುವ ಗುಣವನ್ನು ಕೂದಲು ಮತ್ತು ಚರ್ಮ ಯಾವಾಗಿಂದ ಬೆಳೆಸಿಕೊಂಡವು, ಸ್ವಲ್ಪ ಹೇಳ್ತೀರಾ? ಹೆಂಗೆ ಕಾಣ್ತೀವಿ ನಾವು? ನೀವು ಹೇಳಿದ್ದೆಲ್ಲ ನಂಬೋ ಪೆದ್ದುಗಳ ಥರ ಕಾಣ್ತೀವಾ? ಅಂತ ಪ್ರಶ್ನಿಸುವವರು ಬರುವವರೆಗೆ.
ಎಲ್ಲಿಯವರೆಗೆ ಟೂತ್ ಪೇಸ್ಟ್ ಜಾಹೀರಾತುಗಳು ನಮ್ಮದು ಫ್ಲೋರೈಡ್ ಯುಕ್ತ ಟೂತ್ ಪೇಸ್ಟ್, ಹಲ್ಲುಗಳನ್ನು ಗಟ್ಟಿಮಾಡ್ತದೆ ಅಂತ ಬೊಂಬ್ದಿ ಹೊಡೀತವೆ?
- ಡಾಕ್ಟರ್ ಪ್ರೂಫ್ ಇದೆಯಾ ನಿಮ್ಮಾತಿಗೆ? ಫ್ಲೋರೈಡ್ ಇರೋ ನೀರು ಕುಡಿದ್ರೆ ರೋಗ ಬರತ್ತೆ ಅಂತಾರೆ, ಫ್ಲೋರೈಡ್ ನಲ್ಲಿ ಹಲ್ಲುಜ್ಜಿದ್ರೆ ಹಲ್ಲು ಸವೆಯೋದಿಲ್ವಾ? ಫ್ಲೋರೈಡ್ ಆಹಾರದಲ್ಲಿ ಅಲ್ಪಸ್ವಲ್ಪ ಇದ್ದಾಗ ಹಲ್ಲು ಗಟ್ಟಿಯಾಗತ್ತೆ ಅಂದ್ರೆ ಒಪ್ಪೋ ಮಾತು, ನಿಮ್ ಟೂತ್ ಪೇಸ್ಟ್ ತಿನ್ನಕ್ಕೆ ಇರೋದಾ ಹೇಗೆ? ಅಂತ ದಬಾಯಿಸೋರು ಬರೋವರೆಗೆ.
ಎಲ್ಲಿಯವರೆಗೆ ಲಾಟರಿ ಮಾರುವಾತ ಲಾಟರಿ ನಿಷೇಧದಿಂದಾಗಿ ತನ್ನ ಬದುಕೆಲ್ಲ ಕತ್ತಲಾಯ್ತು, ಜೀವನ ನಡೆಸಲು ಉಪಾಯವಿಲ್ಲದಾಯ್ತು ಅಂತ ಹಲುಬುತ್ತಾನೆ?
- ಲಾಟರಿಯಿಂದಾಗಿ ಅದೆಷ್ಟು ಮನೆ ಮುರಿಯಿತು, ಅದೆಷ್ಟು ಮನುಷ್ಯರು ತಪ್ಪು ದಾರಿ ಹಿಡಿದರು ಅನ್ನುವುದನ್ನು ಯೋಚನೆ ಮಾಡಿ, ಬದುಕಲು ಬೇರೆಯ ಉತ್ತಮ ಮಾರ್ಗಗಳನ್ನು ಆತ ಕಂಡುಕೊಳ್ಳುವವರೆಗೆ.
ಎಲ್ಲಿಯವರೆಗೆ ನಿಮ್ಮ ಅಡಿಗೆ ಮನೆಯಲ್ಲಿ ಭರಣಿಯಲ್ಲಿ ಜೋಪಾನವಾಗಿಟ್ಟ ಉಪ್ಪಿನಕಾಯಿ ಹಳಸುವುದಿಲ್ಲ?
- ನೀವು ಬೇಕೆಂತಲೇ ನೀರು ಹಾಕಿ ಕೆಡಿಸುವವರೆಗೆ.
ಎಲ್ಲಿಯವರೆಗೆ ಮೋಸಕ್ಕೊಳಗಾಗುತ್ತೇವೆ? ನೋವು ಅನುಭವಿಸುತ್ತೇವೆ?
- ಮೋಸಕ್ಕೊಳಗಾಗಲು ನಮಗೆ ಇಷ್ಟವಿರುವವರೆಗೆ. ನೋವು ಅನುಭವಿಸಿದ್ದು ಸಾಕು ಎಂದು ನಾವು ಅಂದುಕೊಳ್ಳುವ ವರೆಗೆ.
ಎಲ್ಲಿಯವರೆಗೆ ಒಂದು ಅನುಭವವನ್ನು ಅತ್ಯಂಅತ ಸಂತೋಷದಾಯಕ ಅಥವಾ ದು:ಖಕರ ಎಂದುಕೊಳ್ಳುತ್ತೇವೆ?
- ಅದನ್ನು ಮೀರಿಸುವ ಇನ್ನೊಂದು ಅನುಭವಕ್ಕೆ ಒಳಗಾಗುವ ವರೆಗೆ.
ಎಲ್ಲಿಯವರೆಗೆ ಬದುಕಿನಲ್ಲಿ ನಾವು-ನೀವು ಉದ್ಧಾರವಾಗುವುದಿಲ್ಲ?
- ಉದ್ಧಾರವಾಗಬೇಕೆಂಬ ತುಡಿತ ನಮ್ಮ-ನಿಮ್ಮ ಕಾರ್ಯಗಳನ್ನು ನಿರ್ದೇಶಿಸಲು ನಾವು-ನೀವು ಬಿಡುವವರೆಗೆ..
ಎಲ್ಲಿಯವರೆಗೆ ಜಗತ್ತು ಬೇಟೆಗಾರನ ಚರಿತ್ರೆಯನ್ನು ಕೊಂಡಾಡುತ್ತದೆ?
- ಸಿಂಹದ ಕಥೆ ಬರೆಯುವವರು ಬರುವ ವರೆಗೆ...
ಎಲ್ಲಿಯವರೆಗೆ ಸಂಪದದಲ್ಲಿ ಮಹಿಳೆಯರು/ ಹೆಂಗಸರು/ ವನಿತೆಯರು/ ಹುಡುಗಿಯರು ಹೆಚ್ಚು ಸಂಖ್ಯೆಯಲ್ಲಿ ಬರೆಯುವುದಿಲ್ಲ?
- ಇದಕ್ಕೆ ಮಾತ್ರ ಉತ್ತರ ಗೊತ್ತಿಲ್ಲ ಸ್ವಾಮಿ. ಸಂಪದದಂತಹ ವಿಶಾಲ ಮನಸ್ಕರ ವೇದಿಕೆಯಲ್ಲೇ 33% ಇಲ್ಲದ್ದು ಪಾರ್ಲಿಮೆಂಟಲ್ಲಿ ಹೇಗಿರಲು ಸಾಧ್ಯ ಅಂತ ಯೋಚನೆಯಾಗಿದೆ... :-(