ಏಕಾಂಗಿ ಮನಸು ಮತ್ತು ಅವಳ ಕನಸು
ಚಿತ್ರ
“ಗಾಳಿ ಯಾಕೆ ಶಬ್ದ ಮಾಡುತ್ತೆ ಗೊತ್ತಾ ನಿಂಗೆ?”. ಕುತೂಹಲಕ್ಕೆ ಕೇಳಿದ್ಲಾ? ಚೇಷ್ಟೆಗೆ ಕೇಳಿದ್ಲಾ? ಅರ್ಥವಾಗಲಿಲ್ಲ. ಹೌದು ಗಾಳಿ ಯಾಕೆ ಸದ್ದು ಮಾಡತ್ತೆ? ನಾನೂ ಚಿಂತೆ ಎನ್ನುವ ಚಿತೆಗೆ ಜಾರಿದಂತಾಯ್ತು. ಎಲ್ಲೋ ಪೇಟೆಯ ಮಧ್ಯವೋ, ಬಸ್ಸಿನಲ್ಲಿ, ಬೈಕಿನಲ್ಲಿ ಹೋಗುವಾಗಲೋ, ಇಲ್ಲ ಯಾವುದೊ ಪಾರ್ಕು,ಹೋಟೆಲ್,ಮನೆ,ದೇವಸ್ಥಾನ,ಚರ್ಚ್ ಎಲ್ಲೇ ಈ ಪ್ರಶ್ನೆ ಕೇಳಿದ್ದರೂ, ಉತ್ತರ ಕೊಡುವ ಪ್ರಯತ್ನ ಮಾಡಬಹುದಿತ್ತು. ನ್ಯೂಟ್ರಾನ್,ಪ್ರೋಟಾನ್,ಎಲೆಕ್ಟ್ರಾನುಗಳ ಜೊತೆ ಗಾಡ್ ಪಾರ್ಟಿಕಲನ್ನೂ ಬಳಸಿ, ನ್ಯೂಟನ್ ನಿಯಮಗಳನ್ನು ದ್ವೈತಾದ್ವೈತಗಳ ಜೊತೆ ಮಿಶ್ರಮಾಡಿ ಹೇಳಲು ಪ್ರಯತ್ನಿಸಿ ಹಾದಿ ತಪ್ಪಿಸುವ ಪ್ರಯತ್ನವನ್ನಾದರೂ ಮಾಡಬಹುದಿತ್ತು. ಬೀಸುವ ಗಾಳಿಗೆ ಅಡೆತಡೆ ಉಂಟಾಗಿ, ವೇಗದಲ್ಲಿ ವ್ಯತ್ಯಾಸವಾಗಿ…, ಈ ಬೋಳುಗುಡ್ಡದ ಮೇಲೆ ಇವಳಿಗೆ ಎಂಥ: ‘ವೇವ್ ಥಿಯರಿ’. ನನ್ನಷ್ಟಕ್ಕೆ ನಕ್ಕು ಸುಮ್ಮನಾದೆ.
ನನಗೇನೂ ಇಂಥ: ಪ್ರಶ್ನೆಗಳು ಹೊಸದಲ್ಲ. ಅದೆಷ್ಟೋ ಪ್ರಶ್ನೆಗಳಿಗೆ ಮಹಾಜ್ಞಾನಿಯಂತೆ, ವೇದಾಂತಿಯಂತೆ ವಿವಿಧ ಆಯಾಮಗಳಲ್ಲಿ ಉತ್ತರಿಸುವ ಪ್ರಯತ್ನ ಮಾಡಿದ್ದೇನೆ. ಗೊತ್ತಿಲ್ಲದ್ದನ್ನು ಗೊತ್ತಿದೆ ಎನ್ನುವಂತೆ ಹೇಳಲು ಹೊರಟು ‘ಪೆದ್ದ’ ಎನ್ನುವ ವಿಶೇಷಣವನ್ನೂ ಪಡೆದಾಗಿದೆ. ಇವಲ್ಲವುದರ ನಡುವೆಯೇ, ಆಕೆಯ ಮುಗ್ದ ನಗುವಿಗೆ, ಸಹಜ ಸಂತಸಕ್ಕೆ ಕಾರಣನಾದೆ ಎನ್ನುವ ಸಂತೃಪ್ತಿಯ ಭಾವ, ಮನಸ್ಸಿಗೆ ಸಿಗುವ ನೆಮ್ಮದಿ, ಖುಷಿ ಎಲ್ಲವನ್ನೂ ಅನುಭವಿಸಿದ್ದೇನೆ.
ಬಿರುಗಾಳಿ, ಸುಳಿಗಾಳಿಗಳಷ್ಟೇ ಅಲ್ಲ, ನಿನ್ನ ಉಸಿರಿನ ಬಿಸಿಗಾಳಿಯೂ ಶಬ್ದ ಮಾಡುತ್ತದೆ. ‘ಅದೊಂದು ರೀತಿಯ ಅಮಲೂ ಸಹ ‘ ಎಂದು ಹೇಳುವ ಪ್ರಯತ್ನ ಮಾಡಿ, ಹೇಳಲಾರದೆ ಸೋತಿದ್ದೇನೆ. ಕಣ್ಣಲ್ಲಿ ಕಣ್ಣಿಟ್ಟು ನೋಡುವ ಪ್ರಯತ್ನ ಮಾಡಿ, ದೃಷ್ಟಿ ಯುದ್ದದಲ್ಲಿ ಸೋತು ಸುಣ್ಣವಾಗಿದ್ದೇನೆ. ಪಕ್ಕದಲ್ಲಿ ಕುಳಿತವಳ ಮುಂಗುರುಳು ತಂಗಾಳಿಯ ಜೊತೆ ಚೆಲ್ಲಾಡುವುದನ್ನು ನೋಡಿ, ಸರಿಪಡಿಸಲು ಹೋದ ಕೈ, ಅವಳ ಗದರುವ ನೋಟಕ್ಕೆ ಬೆದರಿ, ನನಗರಿವಿಲ್ಲದೆಯೇ ಹಿಂದೆಗೆದಿದೆ. ಈ ರೀತಿ ವಿಷಯಗಳು ಬಂದಾಗ, ಪ್ರೀತಿ ಪ್ರೇಮಗಳ ಜಗತ್ತಲ್ಲಿ ಹುಡುಗರಿಗಿಂತ ಹುಡುಗಿಯರಿಗೆ ಧೈರ್ಯ ಜಾಸ್ತಿಯಂತೆ ಹೌದಾ? ನನ್ನ ಪ್ರಶ್ನೆಗೆ ನಗುವೊಂದೇ ಉತ್ತರವಾ? ಅರ್ಥವಾದಳು ಎಂದುಕೊಂಡರೆ ನನ್ನಾಳ ನೀನೇನು ಬಲ್ಲೆ ಎನ್ನುವಂತಹ ನೋಟ?.. ಮತ್ತದೇ ಪ್ರಶ್ನೆ.
“ಹುಡುಗರ ಬಾಳಿನ ಸುಂದರ ಸಂಜೆಗಳನ್ನು ಹಾಳು ಮಾಡಲೆಂದೇ ಈ ಹುಡುಗಿಯರು ಹುಟ್ಟಿರುವುದು”, ಭಗ್ನ ಪ್ರೇಮಿ ಮಿತ್ರನೊಬ್ಬನ ಗೊಣಗಾಟ ಕಿವಿಯಲ್ಲಿ ರಿಂಗಣಿಸಿತು. ಹೌದು ಹೌದು, ನನ್ನದೂ ಸಹಮತವಿದೆ ಎಂಬಂತೆ ತಲೆ ಅಲ್ಲಾಡತೊಡಗಿತು. ಛೆ, ಸುಖಾ ಸುಮ್ಮನೆ ಅಪವಾದ ಹೊರಿಸಬಾರದು. ಅದೆಷ್ಟು ಸಂಜೆಗಳನ್ನು ನಾನು ಇವಳೊಡನೆ ಕಳೆದಿಲ್ಲ? ಈ ಸಂಜೆಗಳಿಗಾಗಿಯೆ ಅದೆಷ್ಟು ಹಗಲು ರಾತ್ರಿಗಳನ್ನು ಕಷ್ಟಪಟ್ಟು ಸವೆಸಿದ್ದೇನೆ. ಲೆಕ್ಕ ಇಟ್ಟವರಾರು? “ನೀನಿಲ್ಲದ ಬದುಕು ಮರುಭೂಮಿ ಕಣೇ” ಎಂದು ಹೇಳಲು ಪ್ರಯತ್ನಿಸಿ ಸೋತಿದ್ದು ಎಷ್ಟು ಬಾರಿಯೋ?. ‘ಮಿಸ್ ಯು……’ ತುಸು ಜೋರಾಗೆ ಹೇಳಿ ಬಿಟ್ಟೆನಾ?. ಈ ಹಾಳಾದ ಕಣ್ಣೀರು, ದುಃಖದಲ್ಲೂ, ಆನಂದದಲ್ಲೂ ಧಾರಾಳವಾಗಿ ಸುರಿಯುತ್ತದೆ. ಇದು ಆನಂದ ಭಾಷ್ಪವಾ?, ದುಃಖಕ್ಕೆ ಬಂದಿದ್ದಾ?. ಇವಳು ಗುರುತಿಸುವ ಮೊದಲೇ ಒರೆಸಿಕೊಂಡು ಬಿಡೋಣ ಎಂದು ಮುಖದತ್ತ ಕರವಸ್ತ್ರ ಒಯ್ದಾಗಲೇ, ತಾನೂ ತೊಟ್ಟಿಕ್ಕುವ ಕಣ್ಣೀರಿನೊಡನೆಯೇ ಹೇಳಿದಳಲ್ಲ, “ಇರಲಿ ಬಿಡು ಗಾಳಿಗೆ ಆರುತ್ತೆ”.
ಯಾಕೆ ಹೀಗೆ ಇವಳು? ನಾನೇ ಹೇಳಲಿ ಎಂದು ಕಾಯುತ್ತಿದ್ದಾಳ? ಇಲ್ಲ ಸುಮ್ಮನೆ ಸತಾಯಿಸುತ್ತಿದ್ದಾಳ? ತುಂಬಾ ಮಾತನಾಡಬೇಕು ಬಾ, ಎಂದು ಕರೆಯುವುದು. ಬಂದಾಗಲೆಲ್ಲ ಇಂಥ: ಪ್ರಶ್ನೆಗಳು, ಇಲ್ಲವಾದರೆ ಮುಗುಳ್ನಗೆ, ಮೌನ, ಮತ್ತೆರಡು ಹನಿ ಅಶ್ರುಧಾರೆ. ‘ಮೂಕ ಪ್ರಾಣಿಗಳೇ ನಮಗಿಂತ ಎಷ್ಟೋ ವಾಸಿ’ ಎಷ್ಟೋ ಬಾರಿ ಅನಿಸಿದ್ದಿದೆ..!. ಸಮುದ್ರ ತೀರ, ನದಿ ದಡ, ಪಾರ್ಕು, ಬಸ್ಸು, ಕಾಲುದಾರಿ, ಈ ಬೋಳುಗುಡ್ಡ, ಯಾವುದನ್ನ ಬಿಟ್ಟಿದ್ದೇವೆ? ಇನ್ನು ಇವಳು ಕರೆದರೆ ಬರಲೇ ಬಾರದು ಎನ್ನುವ ಅದೆಷ್ಟೋ ತೀರ್ಮಾನಗಳನ್ನೂ ಒಂದೇ ಒಂದು ಮೆಸೇಜ್ ಅಳಿಸಿ ಬಿಡುತ್ತದಲ್ಲ!.
“ಏಯ್, ಗಾಳಿ ಏಕೆ ಸದ್ದು ಮಾಡತ್ತೆ ಹೇಳೋ..”. ಕುಳಿತಿರುವ ಒಂದು ಗಂಟೆಯಲ್ಲಿ ಅದೆಷ್ಟನೆ ಬಾರಿ ಕೇಳುತ್ತಿದ್ದಾಳೆ? ಇವತ್ತು ‘ತಬ್ಬಿ ಹಿಡಿದು,ಮೊದಲ ಮುತ್ತಿಟ್ಟು’ ಪ್ರಶ್ನೆಗೆ ಉತ್ತರ ಹೇಳಲೇ ಬೇಕು. ‘ಗಾಳಿ ಯಾಕೆ ಶಬ್ದ ಮಾಡುತ್ತೆ ಗೊತ್ತಾ?’,….
‘ಮುತ್ತಿಡುವ ಶಬ್ದ ಆಚೆ ಈಚೆ ಕೇಳದಿರಲಿ ಅಂತ..!’.
ಬಲಗಡೆ, ಅವಳು ಕುಳಿತಿರುತ್ತಿದ್ದ ಬಂಡೆ. ಆದರೆ ..,
ಪ್ರಶ್ನೆ ಕೇಳುತ್ತಿರುವುದು ಅವಳಲ್ಲ, ‘ಗಾಳಿಯೇ’.. ಅರಿವಿಲ್ಲದೆಯೇ ತೊಟ್ಟಿಕ್ಕಿದ ಕಣ್ಣೀರು. ಹೌದು, ನನಗೆ ನಾನೇ ಹೇಳಿಕೊಂಡೆ, ‘ಹಾಗೆ ಇರಲಿ ಬಿಡು, ಆರುತ್ತೆ’…..
Rating
Comments
"‘ಮುತ್ತಿಡುವ ಶಬ್ದ ಆಚೆ ಈಚೆ
"‘ಮುತ್ತಿಡುವ ಶಬ್ದ ಆಚೆ ಈಚೆ ಕೇಳದಿರಲಿ ಅಂತ..!’."
;())))
ಛೀ ಕಳ್ಳ....!!
ನಿಜ ಅನ್ಸುತ್ತೆ...!
ಗಾಳಿ ಯಾಕೆ ಬೀಸುತ್ತೆ ಅಂತ ನನಗೆ ಎರಡು ಸಾರಿ ಅನ್ನಿಸಿದೆ...!!
೧. ಸಾವನ ದುರ್ಗದ ಬೆಟ್ಟ ಹತ್ತುವಾಗ-ಆ ಗಾಳಿಗೆ ಎಲ್ಲಿ ಕೆಳಗೆ ಬೀಳುವೇನೋ ಎಂದು..
೨. ಹುಡುಗಿ ನೋಡಲು ಉಡುಪಿಗೆ ಹೋಗಿ ಮಲ್ಪೆ ಬೀಚಲ್ಲಿ ಕೂತು ಗಾಳಿಗೆ ಉಪ್ಪು ವಾಸನೆ(ಸಮುದ್ರ)ಮತ್ತು ಬಿಸಿ ಮುಖಕ್ಕೆ ತಾಗಿದಾಗ..
ಮೊದಲಿಗೆ ಶೇರ್ಶಿಎಕ್ ಓದಿ ಬಹುಶ ಕವನ ಎಂದುಕೊಂಡೆ-ಆಮೇಲೆ ಚಿಕಕ್ ಚೊಕ್ಕ ಕಥಾನಕ ಎಂದು ಗೊತ್ತಾಯ್ತು...
ಮುದ್ದಾಗಿದೆ-ಚೆನ್ನಾಗಿದೆ-ವಿಶೇಷವಾಗಿದೆ...!
ಶುಭವಾಗಲಿ..
\।
In reply to "‘ಮುತ್ತಿಡುವ ಶಬ್ದ ಆಚೆ ಈಚೆ by venkatb83
venkatb83, ಪ್ರತಿಕ್ರಿಯೆಗೆ
venkatb83, ಪ್ರತಿಕ್ರಿಯೆಗೆ ಧನ್ಯವಾದಗಳು. ತಮ್ಮ ಪ್ರೀತಿಪೂರ್ವಕ ಪ್ರತಿಕ್ರಿಯೆಗಳು ಬರೆಯಲು ಇನ್ನಷ್ಟು ಹುಮ್ಮಸ್ಸು ಕೊಡುತ್ತವೆ !! ವಂದನೆಗಳೊಂದಿಗೆ -ರವಿಕಿರಣ್ :)
ರವಿಕಿರಣ್ ವ್ರೆ ,ನಿಮ್ಮ ವರ್ಣನೆ
ರವಿಕಿರಣ್ ವ್ರೆ ,ನಿಮ್ಮ ವರ್ಣನೆ , ಪರಿಕಲ್ಪನೆ ಗೆ ಸಾಷ್ಟಾಂಗ ನಮಸ್ಕಾರ ಎಲ್ಲೋ ಕರೆದೊಯ್ದಾಗೆ ಇತ್ತು ,ಚೆನ್ನಾಗಿದೆ .
In reply to ರವಿಕಿರಣ್ ವ್ರೆ ,ನಿಮ್ಮ ವರ್ಣನೆ by Vinutha B K
ವಿನುತಾರವರೆ ,
ವಿನುತಾರವರೆ ,
ಮೆಚ್ಚಿ ಪ್ರತಿಕ್ರಿಯಿಸಿದ್ದಕೆ ಧನ್ಯವಾದಗಳು.. :)
ವಂದನೆಗಳೊಂದಿಗೆ,
--ರವಿಕಿರಣ್
In reply to ರವಿಕಿರಣ್ ವ್ರೆ ,ನಿಮ್ಮ ವರ್ಣನೆ by Vinutha B K
ವಿನುತಾರವರೆ ,
ವಿನುತಾರವರೆ ,
ಮೆಚ್ಚಿ ಪ್ರತಿಕ್ರಿಯಿಸಿದ್ದಕೆ ಧನ್ಯವಾದಗಳು.. :)
ವಂದನೆಗಳೊಂದಿಗೆ,
--ರವಿಕಿರಣ್