ಒಂದು ಅರ್ಜಿ

ಒಂದು ಅರ್ಜಿ

ಯಾವುದೂ ಪ್ರತೀಕವಾಗಲು ಒಪ್ಪುತ್ತಿಲ್ಲ. ಮುಂದೆ ತೆರೆದುಕೊಳ್ಳುತ್ತಿರುವ ಹಾದಿ. ಹಿಂದೆ ಮುಚ್ಚಿಕೊಳ್ಳುತ್ತಿರುವ ಹೆಜ್ಜೆ ಗುರುತು. ರಸ್ತೆ ಪಕ್ಕದ ಮರದ ಹಳದಿ ಎಲೆಗಳು. ದೂರದ ಬೆಟ್ಟದ ಮೈಯೆಲ್ಲಾ ತುಂಬಿಕೊಂಡಿರುವ ಕುರಚಲು ಗಿಡಗಳು. ಯಾವುದೂ ಪ್ರತೀಕವಾಗಲು ಒಪ್ಪುತ್ತಿಲ್ಲ. ಒಪ್ಪಲೇ ಬೇಕೆಂದು ಒತ್ತಾಯ ಮಾಡಲಾರೆ. ಆದರೂ, ಪ್ರತೀಕವಾದರೆ ಎಲ್ಲಕ್ಕೂ ಹೆಚ್ಚು ಅರ್ಥಬರುತ್ತದೆ ಎಂದು ನನ್ನ ಮನಸ್ಸಿನಾಳದ ಆಸೆ.
ಪಕ್ಕದಲ್ಲೇ ಡೊಂಕು ಬಾಲ ಆಡಿಸುತ್ತಿದ್ದ ನಾಯಿ ನನ್ನ ಆಸೆ ಗೊತ್ತಾಗಿ ಹಂಗಿಸುವಂತೆ ಅಂಡು ತಿರುಗಿಸಿ ಹೊರಟು ಹೋಯಿತು. ಅದು ಎಚ್ಚರಿಕೆಯಿಂದ ತುಳಿಯದೇ ಇಟ್ಟ ಕಾಲ ನಡುವೆ ಹೊರಟ ಇರುವೆ ಸಾಲು. ಅದರ ಅಡಿಯ ಗಾರೆಯ ಮೇಲೆ ಇನ್ನೂ ಹಸಿಯಿದ್ದಾಗ ತುಂಟಾಟದಲ್ಲಿ ಮಾಡಿದ ಯಾರದೋ ಅಂಗೈ ಗುರುತು. ಎಲ್ಲಕ್ಕೂ ನನ್ನ ಆಸೆ ಗೊತ್ತಾಗಿ ಪಕಪಕ ನಗುತ್ತಿರುವುದು ನನಗೆ ಖಾತ್ರಿಯಾಯಿತು.
ಸರಿ, ಹಾಳಾಗಿ ಹೋಗಲಿ ಅಂದು ಕೊಂಡು ನನ್ನ ಕೈಯಲ್ಲಿ ವಕ್ರವಾಗಿ ಬೆಳೆದಿದ್ದ ಉಗುರನ್ನು ನೋಡಿಕೊಂಡೆ. ಅದರ ನೆರಳು ಇದ್ದಕ್ಕಿದ್ದ ಹಾಗೆ ನೆಲದ ಮೇಲೆ ಬಿದ್ದ ಕಡೆ ಹಳ್ಳವಾಯಿತು ಎಂಬ ಅನುಮಾನ ಬಂತು. ಬಗ್ಗಿ ನೋಡಿದೆ. ನೆರಳು ಬಿದ್ದದ್ದು ಎಲ್ಲಿ ಎಂದು ಗೊಂದಲವಾಗಿ ಸಣ್ಣಗೆ ಸಿಟ್ಟೂ ಬಂತು. ಯಾಕೆ ಯಾವುದರ ಮೇಲೆ ಅನ್ನುವುದಕ್ಕಿಂತ, ಎಷ್ಟು ಹೊತ್ತು ಎಷ್ಟು ಜೋರಾಗಿ ಎಂದು ಕೇಳುವುದು ಸೂಕ್ತ ಎಂದು ಹಲ್ಲು ಕಡಿದೆ.
ಹೆಚ್ಚು ಅರ್ಥ ಬರುವುದಿರಲಿ ಈ ಪ್ರತೀಕದ ಗಲಾಟೆಯಲ್ಲಿ ಇರುವ ಅರ್ಥವೂ ಕಳೆದುಕೊಳ್ಳುವ ಅಪಾಯ ನಿಜವಾಗ ತೊಡಗಿತು. ಕಣ್ಣು ಮುಚ್ಚಿದಾಗ ಆಗುವ ಅನುಭವ ಕತ್ತಲೆಯೇ? ಇದಕ್ಕೆ ಉತ್ತರ ಕಂಡು ಕೊಂಡರೆ ಸಾಕು, ಪ್ರತೀಕಗಳ ಗೋಜಿಗೇ ಹೋಗಬಾರದು. ಬೇಕಾದರೆ ಅವೇ ಬರಲಿ ಎಂದು ಮೊಂಡು ಹಿಡಿದು ಕೂತೆ.

Rating
No votes yet