ಒಂದು ಕಥೆ, ಒಂದುವ್ಯಥೆ

ಒಂದು ಕಥೆ, ಒಂದುವ್ಯಥೆ

ಒಂದು ಕಥೆ ಒಂದು ವ್ಯಥೆ
[ ನಾನು ಈ ಕಥೆಯನ್ನು internetನಲ್ಲಿ ಓದಿದ್ದೆ]
ಚಿಕ್ಕ ವಯಸ್ಸಿನಲ್ಲಿ ಕೇಳುತ್ತಿದ್ದ ಕಥೆಯೊಂದನ್ನು ನೆನಪಿಸಿಕೊಳ್ಳಿ.
ಒಂದೂರಲ್ಲಿ ಒಬ್ಬ ಅಗಸ. ಅವನ ಬಳಿ ಒಂದು ನಾಯಿ ಹಾಗೂ ಒಂದು ಕತ್ತೆ ಇದ್ದವು. ಒಂದು ರಾತ್ರಿ ಇಡೀ ಪ್ರಪಂಚವೇ ಸುಖ ನಿದ್ರೆಯಲ್ಲಿ ಮುಳುಗಿದ್ದ ವೇಳೆ, ಕಳ್ಳನೊಬ್ಬ ನುಗ್ಗಿದ ಅಗಸನ ಮನೆಗೆ. ಆಗ ಅಗಸ ಮಲಗಿದ್ದರೂ ನಾಯಿ ಮತ್ತು ಕತ್ತೆ ಎಚ್ಚರವಾಗಿಯೇ ಇದ್ದವು. ನಾಯಿಗೆ ಅಗಸ ತನ್ನನ್ನು ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲವೆಂಬ ಅಭಿಪ್ರಾಯವಿದ್ದ ಕಾರಣ ಅದಕ್ಕೆ ಅಗಸನ ಮೇಲೆ ಕೋಪವಿತ್ತು.ಆ ಕಾರಣ ಈದಿನ ಕಳ್ಳ ಎಲ್ಲಾ ದೋಚಿಕೊಂಡು ಹೋದರೆ ಹೋಗಲಿ, ಅಗಸನ ಮೇಲೆ ತನ್ನ ಸೇಡು ತೀರಿಸಿಕೊಳ್ಳಲು ಇದುವೇ ಸರಿಯಾದ ಸಮಯವೆಂದು ಪರಿಗಣಿಸಿ ಕಳ್ಳನನ್ನು ನೋಡಿದರೂ ಬೊಗಳದೇ ಸುಮ್ಮನಾಯಿತು. ಆದರೆ ಕತ್ತೆಗೆ ನಾಯಿ ತನ್ನ ಕರ್ತವ್ಯವನ್ನು ನಿರ್ವಹಿಸುತ್ತಿಲ್ಲ ಎಂಬ ಆತಂಕವಾಯಿತು. ನಾಯಿಗೆ “ನೀನು ಈಗ ಬೊಗಳಲೇಬೇಕು. ಇದು ನಿನ್ನ ಕರ್ತವ್ಯ” ಎಂದು ಸೂಚಿಸಿತು. ಆದರೂ ನಾಯಿ ಕತ್ತೆಯ ಮಾತಿಗೆ ಕಿವಿ ಕೊಡಲಿಲ್ಲ. ಕೊನೆಗೆ ಕತ್ತೆಯು ತಾನೇ ಆ ಕಲಸವನ್ನು ಮಾಡಬೇಕೆಂದು ನಿರ್ಧರಿಸಿ ತಾನೆ ಅರಚಿಕೊಂಡಿತು. ಕತ್ತೆಯ ಅರಚಾಟ ಕೇಳಿ ಕಳ್ಳ ಓಡಿ ಹೋದ. ಎಚ್ಚರಗೊಂಡ ಅಗಸ ಎದ್ದುಬಂದು ನೋಡುತ್ತಾನೆ. ಅವನಿಗೆ ಏನೂ ಕಾಣುವುದಿಲ್ಲ. ಯಾವ ಕಾರಣವೂ ಇಲ್ಲದೇ ನಡುರಾತ್ರಿಯಲ್ಲಿ ಅರಚುತ್ತಿರುವ ಕತ್ತೆಯ ಮೇಲೆ ಕೋಪಗೊಂಡು ಅದನ್ನು ಹೊಡೆದು ಹಣ್ಣುಗಾಯಿ ನೀರುಗಾಯಿ ಮಾಡುತ್ತಾನೆ.
ಕಥೆಯನೀತಿ :- ತನ್ನ ಕೆಲಸದ ಹೊರತಾಗಿ ಇನ್ನೊಬ್ಬರ ಕರ್ತವ್ಯವನ್ನು ನಿನ್ನ ತಲೆಯ ಮೇಲೆ ಹೊತ್ತುಕೊಳ್ಳಬೇಡ.
ಈಗ ಈ ಕಥೆಯನ್ನು ಹೊಸ ಕೋನದಿಂದ ನೋಡೋಣ.
ಈ ಅಗಸ ವಿದ್ಯಾವಂತ. ಒಂದು ಕಂಪೆನಿಯ M.D. ಯಾವ ಚಟುವಟಿಕೆಯನ್ನೇ ಆಗಲಿ, ವಿಶ್ಲೇಷಣಾತ್ಮಕವಾಗಿ ನೋಡಬಲ್ಲವನಾಗಿ ಇದ್ದ. ಸರಿ, ಇವನ ಮನೆಗೆ ಕಳ್ಳ ನುಗ್ಗಿದ. ಮಾಮೂಲಿನಂತೆ ನಾಯಿ ಬೊಗಳಲಿಲ್ಲ, ಕತ್ತೆ ಅರಚಿತು. ಕಳ್ಳ ಓಡಿ ಹೋದ. ಎಚ್ಚರಗೊಂಡು ಹೊರಗೆ ಬಂದ ಅಗಸ ಕತ್ತೆಯನ್ನು ನೋಡಿದ. ಅದು ಒಂದೇ ದಿಕ್ಕನ್ನು ನೋಡಿ ಅರಚುತ್ತಿರುವುದನ್ನು ಕಂಡ. ಅವನೂ ಆ ದಿಕ್ಕಿನತ್ತ ತಿರುಗಿ ನೋಡಿದ. ಅಲ್ಲಿ ಯಾರೂ ಕಾಣಲಿಲ್ಲ. ಆದರೂ ಅವನು ಪರೀಕ್ಷಿಸುತ್ತಾ ಹೋದಾಗ ಅಲ್ಲಲ್ಲಿ ಕಳ್ಳನ ಹೆಜ್ಜೆಗುರುತು ಕಣ್ಣಿಗೆ ಬಿತ್ತು. ಇದರರ್ಥವನ್ನು ಅವನು ಊಹಿಸಿದ. ಕತ್ತೆಯನ್ನು ಪ್ರೀತಿಯಿಂದ ನೋಡಿ ಅದರ ಬೆನ್ನು ಸವರಿ ಅದಕ್ಕೆ ಬಹುಮಾನವೆಂಬಂತೆ ಒಂದಷ್ಟು ಹುಲ್ಲು ಹೊರೆ ಜಾಸ್ತಿ ಹಾಕಿದ. ಹೀಗಾಗಿ ಅಂದಿನಿಂದ ಕತ್ತೆಗೆ ತನ್ನ ಕೆಲಸಗಳೊಂದಿಗೆ ನಾಯಿಯ ಕೆಲಸದ ಹೊರೆಯನ್ನೂ ಹೊರುವಂತಾಯಿತು. ಆದರೆ ಇದಕ್ಕಾಗಿ ನಾಯಿಯನ್ನು ಅಗಸ ಹೊರಗೇನೂ ಹಾಕಲಿಲ್ಲ. ನಾಯಿಯ ಪರಿಸ್ಥಿತಿ ಮೇಲೇರಲೂ ಇಲ್ಲ, ಕೆಳಗಿಳಿಯಲೂ ಇಲ್ಲ. ಹೇಗೂ ಕೆಲಸದ ಹೊರೆ ಕಡಿಮೆಯಾದ ಸಂತೋಷದಿಂದ ನೆಮ್ಮದಿಯಾಗಿ ಜೀವನ ನಡೆಸುತ್ತಿತ್ತು. ಆದರೆ ಕತ್ತೆಗೆ ‘Star Performer” ಎಂಬ ಬಿರುದಿನೊಂದಿಗೆ ಕೆಲಸದ ಹೊರೆಯೂ ಹೆಚ್ಚಾಗಿ ಒತ್ತಡವೂ ಹೆಚ್ಚಾಯಿತು. ಅದು ತನ್ನ ಜೀವನವಿಡೀ ಒತ್ತಡದಿಂದಲೇ ಕಳೆಯುವಂತಾಯಿತು. ಈಗ ಕತ್ತೆ ತನ್ನ ಒತ್ತಡ ಕಡಿಮೆ ಮಾಡಿಕೊಳ್ಳಲು ಹೆಣಗಾಡುತ್ತಿದೆಯಂತೆ. ಒತ್ತಡ ಕಡಿಮೆ ಇರುವ ಬೇರೆ ಕೆಲಸ ಕತ್ತೆಗೆ ಎಲ್ಲಾದರೂ ಸಿಗುವುದೇ?
ಕಥೆಯ ನೀತಿ:- ಮೇಲಿನದೇ ನೀತಿ, ಏನೂ ವ್ಯತ್ಯಾಸವಿಲ್ಲ.
ಒಂದು ಅರಿಕೆ:- ಈ ಕಥೆಯಲ್ಲಿ ಬರುವ ಎಲ್ಲಾ ಪಾತ್ರಗಳು ವಾಸ್ತವಿಕ, ಕಾಲ್ಪನಿಕವಲ್ಲ. ಯಾವುದಾದರೂ ವ್ಯಕ್ತಿಯ ಜೀವನಕ್ಕೆ ಹೋಲಿಕೆಯಾಗಿದ್ದಲ್ಲಿ ಅದು ಉದ್ದೇಶಪೂರ್ವಕವೆಂದು ನಂಬಲಾಗಿದೆ.

Rating
No votes yet

Comments