ಒಂದು ಪ್ರವಾಸದ ಕತೆ....

ಒಂದು ಪ್ರವಾಸದ ಕತೆ....

        ಬಹಳ ದಿನ ಆಗಿತ್ತು ಒಂದು ದೊಡ್ಡ ಜಾತ್ರೇಲಿ ಪಡ್ದೆಗಳ ತರಹ ಅಲೆದಾಡಿ. ಸಾಗರದ ಮಾರಿ ಜಾತ್ರೆನೂ  ನನ್ನ  ಅಣ್ಣ("ಕಜಿನ್") ಮದುವೆ ಇಂದ ತಪ್ಪಿಸ್ಕೋಬೇಕಾಯ್ತು. ಅದಕ್ಕೆ ನಾನು, ನನ್ನ್ ತಮ್ಮ (ಇನ್ನೊಬ್ಬ "ಕಜಿನ್") ಈ ಬಾರಿ ಶಿರಸಿ ಮಾರಿಕಾಂಬ ಜಾತ್ರೆಗೆ ಹೋಗೋದು.. ಹಾಗೆ ಅವಕಾಶ ಆದ್ರೆ  ಒಂದೆರಡು ಅಬ್ಬಿಗಳನ್ನ ನೋಡ್ಕೊಂಡು ಬರೋದು ಅಂದುಕೊಂಡು ಹೊರಟ್ವಿ.. ಅದು ಯಾವ ಗಳಿಗೇಲಿ ಹೊರಡಬೇಕು ಅಂದುಕೊಂದ್ವೋ... ಎಲ್ಲಾ ಕಡೆ ಜಡಿ ಮಳೆ... ಆದ್ರೂ ಶುಕ್ರವಾರ ರಾತ್ರಿ ಹೊರಟ್ವಿ.
          ಶಿವಮೊಗ್ಗದ ಚಿಕ್ಕಮ್ಮನ ಮನೇಲಿ ಸ್ನಾನ, ತಿಂಡಿ ಮುಗಿಸಿ ಶಿರಸಿಗೆ ಹೋದಾಗ ಬೆಳಗ್ಗೆ ೧೧.೩೦. ಜಾತ್ರೆ ನಾಳೆ ನೋಡೋನಂತ ಸೀದಾ ಯಲ್ಲಾಪುರದ ಹತ್ರ ಯಾವ್ದಾದ್ರೂ ಅಬ್ಬಿ ನೋಡ್ಕೊಂಡು ಸಂಜೆ ಹಿಂತಿರುಗಿ ಬಂದು ಕೋಣೆ ಹುಡುಕೋಣ ಅಂತ ಹೊರಟ್ವಿ. ಆ ಹಾದೀಲಿ ಬಸ್ ಕುಂಟುತ್ತ ಯಲ್ಲಾಪುರ ತಲುಪ್ದಾಗ ೧ ಗಂಟೆ. ಅಲ್ಲ್ಹೋಗಿ ಬಸ್ ನಿಲ್ದಾಣದ ಅಂಗಡಿಲಿ ಕೇಳಿದ್ರೆ ಸ್ವಂತ ವಾಹನ ಇಲ್ಲದೆ ನೀವು ಬಂದಿರೋದೆ ವೇಸ್ಟು; ವಾಪಸ್ ಹೋಗ್ಬಿಡಿ ಅನ್ನೋದೇ..!? ಕೊನೆಗೆ ಬಸ್ ನಿಲ್ದಾಣದ ಸಿಬ್ಬಂದಿನ ವಿಚಾರಿಸಿದಾಗ ೧.೪೫ ಕ್ಕೆ  ಸಾತೊಡ್ಡಿ ಫಾಲ್ಸ್  ಕಡೆಗೆ, ೨ ಕ್ಕೆ ಮಾಗೋಡ್ ಕಡೆಗೆ ಬಸ್ ಇದೆ. ಸಾತೊಡ್ಡಿಗಾದ್ರೆ ೫-೬ ಕಿ.ಮೀ., ಮಾಗೋಡ್ಗಾದ್ರೆ ೩ ಕಿ.ಮೀ. ನಡೀಬೇಕಾಗುತ್ತೆ ಅಂದ್ರು. ಮಾಗೋಡಿಂದ ವಾಪಸ್  ಬರೋಕೆ ೨-೩ ಬಸ್  ಇದಾವೆ; ಆದ್ರೆ ಸಾತೊಡ್ಡಿ ಇಂದ ೬ ಗಂಟೆಗೆ ಒಂದೇ ಬಸ್ಸಿರೋದು. ಸಾತೊಡ್ಡಿಗೆ ಜಾಸ್ತಿ ಜನ ಹೋಗ್ತಾರೆ   ಅಂತನೂ ಸೇರ್ಸಿದ್ರು. ಸರಿ ರಿಸ್ಕ್ ಯಾಕೆ, ಮಾಗೊಡಿಗೆ ಹೋಗೋಣ ಅಂತ ಇದ್ವಿ. ಅಲ್ಲಿವರೆಗೂ ಎಲ್ಲ ಸರಿಯಾಗೇ ಇತ್ತು. ಮೊದಲು ಸಾತೊಡ್ಡಿಗೆ ಹೋಗೋ ಬಸ್ ಬಂತು. ಅದ್ರಲ್ಲಿ ಇನ್ನೊಂದ್ ಹುಡುಗರ  ಗುಂಪು ಹತ್ತೋದು ನೋಡಿ, ನಾವೂ ಅಲ್ಲಿಗೇ ಹೋಗ್ಬರಬಹುದು ಅನ್ನೋ ಹುಳ ತಲೆಗೆ ಬಂತು. ಯಾಕ್ ಬಂತೋ ಗೊತ್ತಿಲ್ಲ. ಬಹಳ ಅನುಭವಿಸಬೇಕಾಯ್ತು ಅದರಿಂದ. ಸಣ್ಣ ಪುಟ್ಟ ಚಾರಣದ ಅನುಭವಾನು ಇತ್ತು. ಅನುಭವನೂ ಅಪಾಯಕಾರಿ ಅನ್ನೋದು ಗೊತ್ತಗೋ ಹಾಗಾಯ್ತು.
      ಸರಿ.. ಬಸ್ ಹತ್ತಿ ಹೊರಟೆ ಬಿಟ್ವಿ. ಕಂಡಕ್ಟರ್ ಸಾರು ೬ ಗಂಟೆ ಒಳಗೆ  ನಿಲ್ದಾನದಲ್ಲಿರಿ ಅಂತಷ್ಟೇ ಹೇಳಿ ಕೈ ತೊಳ್ಕೊಂಡ್ ಬಿಟ್ರು. ಕಟ್ಟಿಗೆ/ಗಣೇಶ ಗುಡಿ ತಲ್ಪೋ ಹೊತ್ತಿಗೆ ೨.೪೫... ಹಸುರಿನ ಬನಸಿರಿಗೆ  ಒಲಿದ ಸೌಂದರ್ಯ ಸರ್ಸತಿನ ನೆನೆಸ್ಕೊತಾ ಹೋಗ್ತಿದ್ದ ನಮ್ಗೆ  ಬಸ್ ಇಳಿತಾ ಇದ್ದ ಹಾಗೆ ಒಂದು ಶಾಕ್ ಕಾದಿತ್ತು. ಸಾತೊದ್ದಿಗೆ ೯ ಕಿ.ಮೀ. ಅಂತ ಬೋರ್ಡ್ ಇತ್ತು. ನಮ್ಮಹತ್ರ ಇದ್ದಿದ್ದು ಅಬ್ಬಬ್ಬ ಅಂದ್ರೆ ಮೂರೂವರೆ ಗಂಟೆ. ಅಷ್ಟರಲ್ಲಿ ೧೮ ಕಿ.ಮೀ. ನಡೆಯೋ ಬಲ/ಸಾಧ್ಯತೆ ಅಂತೂ ಇಲ್ಲ. ಮಾಗೊಡ್ಗೆ ಹೋಗೋದ ಬಿಟ್ಟು ಇಲ್ಲಿಗೆ ಹೊರಟ ನಮ್ಮ ಮರುಳತನದ ಬಗ್ಗೆ ನಗಬೇಕೋ ಅಳಬೇಕೋ ಗೊತ್ತಾಗ್ಲಿಲ್ಲ. ಬಂದ ಬಸ್ ಅಲ್ಲೇ ವಾಪಸ್ ಹೊಗೊದ್ರಲ್ಲಿ ಅರಿತ, ನಲಿವು ಕಾಣಲಿಲ್ಲ. ವಾಪಸ್ ಬರೋದ್ ಹೇಗೆ ಅನ್ನೋ ಯೋಚ್ನೇನೂ ಇಲ್ಲದೆ ಹೊರಟೆ ಬಿಟ್ವಿ. ೪.೧೫ರ ವರೆಗೆ ಸಾಧ್ಯವಾದಷ್ಟು ದೂರ ಹೋಗೋದು. ೯ ಕಿ.ಮೀ.  ಅನ್ನೋ ಮಾಹಿತಿ ಸುಳ್ಳಾಗಿರಲಪ್ಪ ನಡೆಯೋಕ್ ಶುರು ಮಾಡಿದ್ವಿ. ನಡೀತಾ, ನಡೀತಾ ಹೊಳೆಯ ಹಿನ್ನೀರಿನ ನೋಟ ಕಣ್ಣಿಗೆ  ಬಿತ್ತು. ಮೊದಲ ಸಲ ವಾಹ್ ಮನೋಹರ ನೋಟ ಅನ್ನಿಸ್ತು. ಇನ್ನು ೨-೩ ಕಿ.ಮೀ. ಹೋದ್ವಿ. ಮತ್ತೆ ಹಿನ್ನೀರಿನ ದೃಶ್ಯ. ಬೇರೆ ಕೋನ. ಜೋಶ್ ಇನ್ನು ಇತ್ತು. ಪ್ರಕೃತಿಯ ಅದ್ಭುತ ಸೃಷ್ಟಿ ಅಂದುಕೊಂಡೆ. ೬-೭ ಕಿ.ಮೀ.  ನಡೆದ್ವಿ. ಮತ್ತದೇ ಹಿನ್ನೀರು. ಮಗದೊಂದು ಕೋನ. ವೇಗವಾಗಿ ನಡೆದು ಕಾಲು ನೋಯೋಕೆ ಶುರುವಾಗಿತ್ತು. ಇನ್ನು ಅದೆಷ್ಟು ಸುತ್ಥಕ್ಬೇಕಪ್ಪ ಈ ಹಿನ್ನೆರಿಗೆ? ಅಬ್ಬಿ ಯಾವಾಗ್ ಬರುತ್ತೋ? ಬರುತ್ತೋ ಇಲ್ಲವೋ? ಅಂತ  ಚಿಂತೆ ಶುರುವಾಗಿತ್ತು. ಅಷ್ಟು ಹೊತ್ತಿಗೆ ಗಡಿಯಾರ ೪.೦೫  ತೋರಿಸ್ತಿತ್ತು.
       ಬೈಕಿನಲ್ಲಿ ಹೋದವರೊಬ್ಬರು ಇನ್ನೂ ಸುಮಾರು ದೂರ ಇದೆ ಅಂದ್ರು. ೧೦ ನಿಮಿಷ ಕೂತು, ವಾಪಸ್ ಹೊರಟ್ವಿ. ಅರ್ಧ ಕಿ.ಮೀ. ವಾಪಸ್ ಹೋಗಿದ್ವಿ. ಅಷ್ಟು ಹೊತ್ತಿಗೆ ಯಲ್ಲಪುರದಲ್ಲಿ ಬಸ್ ಹತ್ತಿದ್ದ ತಂಡ ಸಿಕ್ತು. ಅವ್ರುನ್ನ ಕೇಳ್ದಾಗ, ಅವ್ರು ತಾವೂ ಮೊದಲ ಸಲ ಬರ್ತ ಇರೋದಗ್ಯೂ, ೯ ಕಿ.ಮೀ. ಇರೋದರ ಬಗ್ಗೆ ಗೊತ್ತಿರ್ಲಿಲ್ಲ ಅಂತನೂ ಹೇಳಿದ್ರು. ಆದ್ರೆ ಅವರಲ್ಲಿ ಇನ್ನೂ ಹುರುಪಿತ್ತು. ಅದೇ ಹೊತ್ತಿಗೆ ಇನ್ನೊಂದ್ ಬೈಕ್ ಬಂತು. ಅವ್ರು ಬರಿ ಒಂದು - ಒಂದುವರೆ ಕಿ. ಮೀ.  ಅಷ್ಟೆ  ಇದೆ ಅಂದ್ರು. ಆವಾಗಲೇ ಆವತ್ತಿನ ಎರಡನೆ ತಪ್ಪು ನಿರ್ಧಾರ ತಗೊಂಡಿದ್ದು. ಆ ಹುದುಗ್ರಿಗಿದ್ದ ಹುರುಪು ನೋಡಿ, ನಾವೂ ಫಾಲ್ಸ್ ಕಡೆಗೆ ಹೊರಟು ನಿಂತ್ವಿ. ೪.೩೦ರ ವರೆಗೆ ನಡೆದ್ವಿ. ಜಲಪಾತದ ಸಪ್ಪಳನೆ ಇಲ್ಲ. ಆಗ ಅಂಜಿಕೆ ಶುರುವಾಯ್ತು. ಅತ್ಲಾಗೆ ಜಲಪಾತನು ಸಿಕ್ಲಿಲ್ಲ. ಇನ್ನೊಂದುವರೆ ಗಂಟೆಲಿ ೭-೮ ಕಿ.ಮೀ. ನಡೀಬೇಕು. ಕಾಲು ಬೇರೆ ಸಿಕ್ಕಾಪಟ್ಟೆ ನೋವಗ್ತಾ ಇತ್ತು.
          ಆ ಹುಡುಗ್ರು, ೬ ಗಂಟೆ ಒಳಗೆ ಹಿಂದಿರುಗೋಕೆ ಹೇಗಿದ್ರೂ ಆಗೋಲ್ಲ ನಾವು ಫಾಲ್ಸ್ ಗೆ  ಹೋಗ್ತೀವನ್ದ್ರು. ನಮ್ಗೆ ಕತ್ತಲಾಗೊದ್ರೊಳಗೆ ಬಸ್ ಸ್ಟಾಪ್ ಆದರು ಸೇರಿಕೊಂಡರೆ, ಅಲ್ಲಿ ಯಾರಾದ್ರೂ ಊರವರು ಸಹಾಯ ಮಾಡಬಹುದು ಅಂತ ವಾಪಸ್ ಹೊರಟ್ವಿ. ಮತ್ತದೇ ಹಿನ್ನೀರು; ನೋಡಿದಷ್ಟೂ ದೂರ. ನೀರು, ಮೊದ, ಮಳೆ, ಆಗಸ, ಹಸಿರು ಯಾವದೂ ಬೇಡವಾಗಿ ಬಸ್ ಸ್ಟಾಪಿಗೆ ಹೋದ್ರೆ ಸಾಕಪ್ಪಾ ಅನಿಸ್ತಾ ಇತ್ತು. ೨-೩ ಕಿ.ಮೀ. ನಡೆಯೋದ್ರೊಳಗೆ ಕಾಲು ಸೋತ್ಹೊಯ್ತು. ತನ್ನ ಬಗ್ಗೆ ಯೋಚನೆ ಮಾಡದೆ ನಿರ್ಧಾರ ತಗೊಂಡ ಮನಸನ್ನ ಶಪಿಸ್ತ, ಹಾಗೂಹೀಗೂ ದೇಹನ ಎಳೀತ ಇತ್ತು. ೫.೩೦ ಆಯ್ತು. ಅರ್ಧ ಗಂಟೆಲಿ  ಇನ್ನೂ ಹತ್ತಹತ್ತರ ೫ ಕಿ.ಮೀ. ನಡೀಬೇಕು. ಬಸ್ ಸಿಗೋ ಚಾನ್ಸ್ ಇರ್ಲಿಲ್ಲ. ಕತ್ತಲಾಗೊದರ ಒಳಗೆ ಊರದ್ರು ಸೇರ್ಕೊಬೇಕು. ಕಾಡಲ್ಲಿ ಪ್ರನಿಗಲಿದ್ರೆ ಅನ್ನೋ ಭಯ ಬೇರೆ. ನಡೀಬೇಕಾದ್ರೆ ತಲೇಲಿ, ಬಸ್ ಸ್ಟಾಪ್ ಹತ್ರ ಯಾರೂ ಸಿಗ್ದಿದ್ರೆ ಏನು ಮಾಡೋದು ಅಂತ ಯೋಚನೆ. ದೇವಸ್ತಾನದ ಕಟ್ಟೆ ಮೇಲೆ ಇಡೀ ರಾತ್ರಿ ಜಾಗರಣೆ ಮಾಡೋ ಯೋಚನೆ ಬಂತು. ಮನೇಲಿ ಹೀಗಾಯ್ತು ಅಂತ ಹೇಳಿದ್ರೆ, ಇನ್ನು ಮೇಲೆ ಹೋಗಬೇಡ ಅಂತಾರಲ್ಲ ಅಂತನೂ ಯೋಚನೆ. ಅಷ್ಟರಲ್ಲಿ ೩-೪ ಕಾರ್/ಕ್ಯಾಬ್ ಗಳು ಹೋದವು. ಡ್ರಾಪ್  ಕೇಳೋ ಹಾಗೆ ಕೈ ಅಡ್ಡ ಹಾಕಿದ್ವಿ. ಅವರೆಲ್ಲರೂ ನಾವ್ ದುಡ್ಡು ಕೊಟ್ಟು ತಂದಿರೋ ಗಾಡಿ, ನಾವ್ಯಾಕ್ ಹೊಂದಿಕೊಂಡು ಇವರನ್ನ ಬಿಟ್ಟಿ  ಕರ್ಕೊಂಡು ಹೋಗ್ಬೇಕು ಅನ್ನೋ ಭಾವನೋ, ಅಥವಾ ಇವ್ರು ಯಾರಾದ್ರು ಕಳ್ಳರ ಅನ್ನೋ ಅನುಮನನೋ ಗೊತ್ತಿಲ್ಲ.. ಯಾರು ನಿಲ್ಲಿಸಲಿಲ್ಲ(ಹೆಚ್ಚಿನವು ಭರ್ತಿ ಕೂಡ ಆಗಿದ್ವು).
      ಇನ್ನೇನು ದೇವಸ್ತಾನದ ಕಟ್ಟೆನೆ ಗತಿ ಅಂತ ಕಾಲು ಎಳೆದು ಎಳೆದು ಹಾಕ್ತಾ ಇದ್ವಿ. ಆಗ ನಮ್ಮ ಸಹಾಯಕ್ಕೆ ಮೈಸೂರು ಮೆಡಿಕಲ್ ಕಾಲೇಜಿನ ಹುಡುಗರ ಗಾಡಿ ಒಂದು ಬಂತು. ಅವ್ರು ಪುಣ್ಯಕ್ಕೆ ಗಾಡಿ ನಿಲ್ಸಿದ್ರು. ಅವ್ರ ಹತ್ರ ನಮ್ಮ ಪರಿಚಯ, ಪರಿಸ್ಥಿತಿ ಹೇಳ್ಕೊಂಡು, ಬಸ್ ಸ್ಟಾಪ್ ವರೆಗೆ ಡ್ರಾಪ್ ಕೇಳಿದ್ವಿ. ಒಪ್ಪಿಕೊಂಡರು. ನಂಗಂತೂ ಜೀವ ಬಂದ ಹಾಗಾಯ್ತು. ಆ ಗಾಡಿನೂ ತುಂಬಿದ್ದರೂ, ಸ್ವಲ್ಪ ಜರುಗಿ ಕೂತು,  ನಮ್ಮಣ್ಣ ಯಲ್ಲಾಪುರದವರೆಗೂ ಬಿಟ್ಟರು. ಅವ್ರಿಗೆ ಅಲ್ಲಿ ಬಾಯಿ ಮಾತಲ್ಲಿ ಧನ್ಯವಾದ ಹೇಳಿದ್ರೂ ನನಗೆ ಸಮಾಧಾನ ಆಗ್ಲಿಲ್ಲ. ಅದಕ್ಕೆ ಇಲ್ಲಿ ಈ ಬರಹ. 

ಅಲ್ಲಿಂದ ಮುಂದೆ ಮಳೆಲಿ ತುಂಬ ಒದ್ದಡಿದೆವು. ಹಾಗೆ ಮರುದಿನ ಉಂಚಳ್ಳಿ ಅಬ್ಬಿನ ನೋಡಿದಾಗ ಮೊದಲ ದಿನದ ನೋವೆಲ್ಲ ಮರೆತೆವು. ಆದ್ರೆ ಅದೆಲ್ಲ ಇಲ್ಲಿ, ಈಗ ಬೇಡ ಬಿಡಿ.

 

Rating
No votes yet