ಒಲವಿನ ಓಲೆ

ಒಲವಿನ ಓಲೆ

ಚಿತ್ರ

ಪದ್ಯಪಾನದಲ್ಲಿ ಈಚೆಗೆ ಕೇಳಿದ್ದ ಒಂದು ಪ್ರಶ್ನೆ - ಚಿತ್ರಕ್ಕೆ ಪದ್ಯ. ರಾಜಾ ರವಿವರ್ಮನ ಪ್ರಸಿದ್ಧವಾದ ದಮಯಂತಿಯ ಚಿತ್ರಕ್ಕೆ ನಾನು ಬರೆದ ಎರಡು ಪದ್ಯಗಳು ಇಲ್ಲಿವೆ.

ಭಾಮಿನಿ ಷಟ್ಪದಿಯಲ್ಲಿ:

ಮಂಚದಿಂದೇಳುತಲಿ ತಾ ಜರಿ
ಯಂಚು ರೇಸಿಮೆ ಸೀರೆಯುಟ್ಟಳು
ಅಂಚೆನಡಿಗೆಯ ರಾಜಕುವರಿಯು ಚೆಲುವೆ ದಮಯಂತಿ
ಹೊಂಚಿನಲಿ ಮನದಳವ ತಿಳುಹಲು
ಮುಂಚೆಯೋಲೆಯ ಬರೆವೆ ನಳನಿಗೆ
ಅಂಚೆವಕ್ಕಿಯಕೂಡೆ ಕಳುಹುವೆನೆಂಬ ಮುಡಿವಿನಲಿ

ಮಲ್ಲಿಕಾ ಮಾಲೆ ಮಾತ್ರಾವೃತ್ತದಲ್ಲಿ:

ಓಲೆ ಬರೆಯುವೆ ನಲ್ಲಗೀಗಲೆಯೆಂದು ಚೆಲುವೆಯು ವೇಗದೊಳ್
ತಾಲಪತ್ರವ ತಂದಿಹಳ್ ದಮಯಂತಿಯಿನಿಯನ ನೆನೆದಿಹಳ್
ಹಾಲಬಣ್ಣದ ಅಂಚೆವಕ್ಕಿಯ ಮೊಗದೊಳೇ ನಳ ಕಂಡಿರಲ್
ಮಾಲೆ ಮಾಡುತ ಕಣ್ಣ ನೋಟಗಳಲ್ಲೆ* ಕೊರಳಿಗೆ ತೊಡಿಸಿದಳ್

*ನಳನನ್ನೇ ನೆನೆವ ದಮಯಂತಿಗೆ ಹಂಸ ಪಕ್ಷಿಯ ಬದಲು ನಳನೇ ಕಂಡಂತಾಗಿ, ಕಣ್ಣ ನೋಟದಲ್ಲೇ, ಆ ಹಂಸದ ಕೊರಳಿಗೆ ಮಾಲೆ ತೊಡಿಸಿದಳೆಂಬ ಭಾವದಲ್ಲಿ

-ಹಂಸಾನಂದಿ

Rating
No votes yet

Comments