ಕಥೆ ಬರೆದದ್ದು ಹೀಗಿತ್ತು

ಕಥೆ ಬರೆದದ್ದು ಹೀಗಿತ್ತು

(ಸುಮ್ಮನೆ ಒಂದು ಪ್ರಯೋಗ. Disclaimer: ಇಲ್ಲಿ ಬರೆದದ್ದೆಲ್ಲ ನಿಜವಿರಬೇಕಿಲ್ಲ)

ದಿನ: ಭಾನುವಾರ.

ಆಗಲೇ ಬೆಳಿಗ್ಗೆ! ಬೇಗ ಏಳೋಣೆಂದುಕೊಂಡದ್ದು. ಕರೆಂಟು ಹೋಗಿದೆಯಲ್ಲ! ಮತ್ತೆ ಮಲಗಿರುವೆ. "ರಾತ್ರಿಯಿಡೀ ಕಂಪ್ಯೂಟರ್ ಮುಂದೆ ಕುಳಿತಿರುತ್ತೀಯ, ಸ್ವಲ್ಪ ಹೊತ್ತು ಇನ್ನೂ ಮಲಕ್ಕೋ ಹೋಗು. ಕರೆಂಟು ಬೇರೆ ಹೋಗಿದೆ!" ಎಂದರು ಅಮ್ಮ. ಅಥವ ಕನಸು ಕಾಣುತ್ತಿದ್ದೇನೆಯೆ?

ಅಪ್ಪ ಹಾಕಿಸಿರುವ ತಾರಸಿಯ ಬಣ್ಣ ಕಣ್ಣಿಗೆ ಕಾಣುತ್ತಿದೆ. ಕಣ್ಣು ತೆರೆದಿರುವೆ. ಆದರೆ ಅದನ್ನು ನೋಡಿಯೂ ನಾನು ನೋಡುತ್ತಿಲ್ಲ.
ಯಾವ ದಿನ ಇವತ್ತು? ಏನೇನು ಮಾಡಬೇಕು ಅಂದುಕೊಂಡಿದ್ದೆ?
ಫ್ಯಾನು ತಿರುಗುತ್ತಿಲ್ಲ. ಕರೆಂಟು ಹೋಗಿದೆ.

~.~

ಏನೋ ಡಿಫರೆಂಟು ಈ ದಿನ, ಇವತ್ತು ತಿಂಡಿ ತಿಂದು ಬಂದು ತಕ್ಷಣ ಪುಸ್ತಕ ಹಿಡಿದು ಕುಳಿತಿರುವೆ. ಕಣ್ಣ ಮುಂದೆ ಟೈಪಿಸಿದಂತೆ ಪಟಪಟನೆ ಗೋಚರವಾಗುವ, ಮರೆಯಾಗುವ, ಬದಲಾಗುವ ಅಕ್ಷರಗಳ ಕಂಪ್ಯೂಟರ್ ಸ್ಕ್ರೀನ್ ಇಲ್ಲ. ಬದಲಿಗೆ ಅಕ್ಷರಗಳು ನಿಂತಲ್ಲೇ ಗಟ್ಟಿಯಾಗಿ ನಿಂತಿವೆ. ಪುಸ್ತಕದ ವಾಸನೆ ಪುಸ್ತಕ ಓದುತ್ತಿರುವೆನೆಂಬುದನ್ನು ನೆನಪಿಸಿದೆ. ಸಣ್ಣಗೆ ಕಣ್ಣೆಳೆದುಕೊಂಡು ಹೋಗುತ್ತಿದೆ. ಆದರೂ ಕಥೆಯ ಹಂದರ ಆಗಾಗ ಎಚ್ಚರಿಸುತ್ತಿದೆ.

ಹೊರಗಡೆ ಸ್ವಲ್ಪ ದೈತ್ಯಾಕಾರದವರು ಒಬ್ಬರು ಇನ್ನೂ ವಾಕಿಂಗ್ ಮಾಡುತ್ತಿದ್ದಾರೆ. ಅವರ ನಾಯಿ ಅವರಿಗೆ ದಾರಿ ತೋರಿಸುತ್ತಿರುವಂತಿದೆ. ಅತ್ತ ಮೈನಾ ಹಕ್ಕಿ ಇನ್ನೂ ಬೆಳಗಾಗುತ್ತಿದೆ ಎಂಬಂತೆಯೇ ಕೂಗುತ್ತಿದೆ. ಎಲ್ಲೋ ಕೋಗಿಲೆಯೂ ಕೂಗಿದೆ. ಬೀಸುತ್ತಿರುವ ಗಾಳಿಗೆ ಎದುರಿಗಿರುವ ಹೊಂಗೆ ಮರದ ಎಲೆಗಳು ಪಟಪಟನೆ ಹೊಡೆದುಕೊಳ್ಳುತ್ತಿರುವುದನ್ನು ನೋಡಿ ಖುಷಿಯಾಗುತ್ತಿದೆ. ಗಮನ ಮತ್ತೆ ಕಥೆಯೆಡೆಗೆ.

~.~

ಹೊರಗೆ ಬಿಸಿಲೇರಿದ್ದು ನಾನು ಕುಳಿತಿರುವಲ್ಲಿಗೆ ಕಿಟಕಿಯಿಂದ ಬಂದ ಕಿರಣಗಳು ಧೂಳಿಲ್ಲದ ಧೂಳನ್ನು ತನ್ನೊಳಗೆ ಮಾತ್ರ ಹಿಡಿದಿಟ್ಟು ತೋರಿ ಕೆಲಸಮಯ ನಾನೋದುತ್ತಿದ್ದ ಕಥೆಯನ್ನು ಮರೆಸಿ ನನ್ನ ಮನಸ್ಸನ್ನು ಹಿಡಿದಿಟ್ಟು ಆದದ್ದು ಕಸಿವಿಸಿಯೆ? ವಿಸ್ಮಯವೆ? ತಿಳಿಯಲಿಲ್ಲ. ಕಥೆ ಮುಂದುವರೆದಿದೆ. ಇದು ಬಹಳ ಚೆನ್ನಾಗಿದೆ. ಓ ಎಷ್ಟು ಚೆನ್ನಾಗಿ ಬರೆದಿದ್ದಾರೆ. ಈ ಕಥೆ ಹೀಗಾಗುತ್ತೆ ಅಂತ ಖಂಡಿತ guess ಮಾಡಿರಲಿಲ್ಲ.

~.~

ಅಲ್ಲೆಲ್ಲೋ ಲೈಟ್ ಹತ್ತಿತು. ಕರೆಂಟು ಬಂದಿದೆ. ಕಂಪ್ಯೂಟರ್ ಆನ್ ಮಾಡಬೇಕು. ಪುಸ್ತಕ ಬದಿಗಿಡೋಣ, ಬೂಟ್ ಆಗಿತ್ತಿದೆ. ಎಷ್ಟು ಇ-ಮೇಯ್ಲ್ ಬಂದಿದೆಯೋ, ಯಾರು ಯಾರು ಮೆಸೇಜ್ ಹಾಕಿದಾರೋ, ಇವತ್ತು ಏನು ಚರ್ಚೆ ಮಾಡ್ತಿದಾರೆ? ಸುದ್ದಿ ಬೇರೆ ಓದಲಿಲ್ಲ!
ಇವತ್ತು ಅದೆಲ್ಲ ಬೇಡ, ಆಮೇಲೆ ನೋಡಿಕೊಂಡರಾಯಿತು. ಇವತ್ತು ಒಂದು ಕಥೆ ಬರೆಯೋಣ. ಬೆಳಗ್ಗಿನಿಂದ ಓದಿದ್ದ ಕಥೆಯ ಗುಂಗು ಹೋದಂತಿಲ್ಲ, ಅದಕ್ಕೇ. ಅಥವ ಹೋಗಿರಬೇಕು. ಕಥೆ ಬರೆಯೋಣಂತೆ, ಅದಕ್ಕೇನು?
'ಕ್ರಿಕೆಟ್ ಮ್ಯಾಚ್ ಇದೆಯಲ್ಲ ಇವತ್ತು'. ಹೋ, ಏನಾಯ್ತು ನೋಡಬೇಕು!
ನ್ಯೂಸ್ ಪೇಪರ್ ಆಮೇಲೆ ಕೆಳಗೆ ಹೋಗಿ ತರಬೇಕು. ಗೂಗಲ್ ನ್ಯೂಸ್! cricinfo!
ಅರೆ, ಇದೇನಿದು ಸುದ್ದಿ? ಓಹೋ! ನೋಡಬೇಕು ಎಷ್ಟು ನಿಜ ಹೇಳ್ತಾ ಇದಾರೆ ಅಂತ. hmm...
ಅರೆ ನಾಲ್ಕೂವರೆ ಆಗಿಹೋಯ್ತು ಆಗಲೇ!

ಏನ್ ಮಾಡೋಕ್ ಹೊರಟಿದ್ದೆ?

ಕಥೆ ಬರೆಯೋಣಾಂತ ಹೊರಟಿದ್ದೆನಲ್ವ? ಯಾವ ಎಡಿಟರ್ ಬಳಸೋದು? ಓಹ್ Celtx. ಇದು screenplay ಬರೆಯೋ software ಅಲ್ವ? ಇದರಲ್ಲಿ ಕನ್ನಡ ಸರಿಯಾಗಿ ಬರುತ್ತಿಲ್ಲ ಅಂದಿದ್ರು ಸುದರ್ಶನ್. ನೋಡೋಣ ಒಂದ್ನಿಮಿಷ.
ಹೌದಲ್ವ, ಸರಿಯಾಗಿ ಬರ್ತಾ ಇಲ್ಲ. ನಾನು ಬರೆದಿಟ್ಟಿದ್ದ screenplay ಎಲ್ಲಿ?
ಓಹ್ ಇಲ್ಲಿದೆ. ಕಥೆ ಚೆನ್ನಾಗಿಲ್ಲ. ನಿಜವಾಗ್ಲೂ ಚೆನ್ನಾಗಿಲ್ಲ. ಇಲ್ಲ, ಚೆಂದ ಮಾಡಬಹುದು ಅನ್ಸತ್ತೆ. ಛೆ, ಸುಮಾರು ಹೊತ್ತಾಯ್ತು, ಈಗ ಬೇಡ.

ಏನ್ ಮಾಡೋಕ್ ಹೊರಟಿದ್ದೆ?

ಕ್ರಿಕೆಟ್ ಸ್ಕೋರು!
ಓಹ್ ಭಾರತದವರು ಸೋಲ್ತಿರೋ ಹಾಗಿದೆ! ಸಂಪದದಲ್ಲಿ ಏನು ನಡೀತಿದೆ? ಓಹ್, ಫೆಡರರ್ ಬಗ್ಗೆ ಶಿವು ಬರೆದಿದ್ದಾನೆ. ಸೋತನಾ ಫೆಡರರ್? ಇಲ್ಲ, ಸೋಲೋ ತರಾ ಇದಾನೆ. ಏನೆಲ್ಲ ಹೈಪ್ ಮಾಡಿದ್ರು! ಸೋಬರಾಜ್ ಗೆ ಮತ್ತೊಂದು ಮದುವೆಯಂತೆ. ಹೆ ಹೆ. ಪರ್ವಾಗಿಲ್ಲ ಇವ!
ಇದ್ಯಾವುದೋ ಬಾಲಿವುಡ್ ಸಿನಿಮಾ ಅಂತೆ! ಓಹ್, ಇದು ಗೊತ್ತು. ಇದರ ಹಾಡು ಕೇಳಿದ್ದೆ, ಚೆನ್ನಾಗಿದ್ವು. ಆದರೆ ಇಷ್ಟೆಲ್ಲಾ ಇದರ ಬಗ್ಗೆ ಇವರು ಬರೆಯೋದ್ಯಾಕೆ?
ಏನು, ಸಲ್ಮಾನ್ ಪಪ್ಪು ಅಲ್ವ? ಕಟ್ಕೊಂಡ್ ನನಗೇನು! ಯಡ್ಯೂರಪ್ಪ ಮತ್ತಷ್ಟು ಜನಾನ ಸೇರಿಸಿಕೊಳ್ತಿದಾರಂತೆ ಮಿನಿಷ್ಟ್ರೀಲಿ. ಸರಿಹೋಯ್ತು.

ಏನ್ ಮಾಡೋಕ್ ಹೊರಟಿದ್ದೆ ನಾನು?

ಅರೆ, ಕಥೆ ಬರೆಯೋಣಾಂತ ಹೊರಟಿದ್ದಲ್ವಾ? ಬಿಡು ಲೇಟಾಗಿದೆ. ಮತ್ತೊಂದ್ ಸಾರಿ ಬರೆಯೋಣಂತೆ!

Rating
No votes yet

Comments