ಕನ್ನಡಕ್ಕಳಿವಿಲ್ಲ, ಬೆಂಗಳೂರಲ್ಲಿ ಜತನದಿಂದಿದೆ!!!

ಕನ್ನಡಕ್ಕಳಿವಿಲ್ಲ, ಬೆಂಗಳೂರಲ್ಲಿ ಜತನದಿಂದಿದೆ!!!

(ಬೊಗಳೂರು ಕನ್ನಡಹೋರಾಟ ಬ್ಯುರೋದಿಂದ)
ಬೊಗಳೂರು, ನ.1- ಇಂದು ಕನ್ನಡ ರಾಜ್ಯೋತ್ಸವ. ಅದರಲ್ಲೂ ಸುವರ್ಣ ವರ್ಷದ ಸಂಭ್ರಮದ ಉತ್ಸವ. ಹಾಗಂತ "ಕನ್ನಡ ಅಳಿಯುತ್ತಿದೆ, ಅದನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯ" ಎಂಬ ರಾಜಕಾರಣಿಗಳ ಬಾಯಲ್ಲಿ ಸವೆದುಹೋದ ಸಲಹೆಯನ್ನು ನಮ್ಮ ಬ್ಯುರೋ ಸರ್ವಥಾ ನೀಡುತ್ತಿಲ್ಲ.

ಯಾಕೆಂದರೆ, ಯಾರು ಕೂಡ ಕನ್ನಡ ರಕ್ಷಣೆಗೆ, ಉಳಿಸುವಿಕೆಗೆ ಗಮನ ಕೊಡುತ್ತಿಲ್ಲ ಎಂಬ ನಮ್ಮ ಸಾಹಿತಿಗಳು, ಹೋರಾಟಗಾರರು, ಮತ್ತಿತರ ಕನ್ನಡದ ಕಟ್ಟಾಳುಗಳ ವಾದ ಸರಿಯಲ್ಲ ಎಂಬುದನ್ನು ಬೊಗಳೆ ರಗಳೆ ಬ್ಯುರೋ ಅಸತ್ಯದ ಮೇಲೆ ಪ್ರಮಾಣ ಮಾಡಿ ಕಂಡುಕೊಂಡಿದೆ.

ಇದಕ್ಕೆ ಕಾರಣವಿದೆ. ಅಳಿಯುತ್ತಿರುವ ಕನ್ನಡವನ್ನು ಉಳಿಸಿ ಎಂದು ಯಾರು ಕೂಡ ಹೋರಾಟ ನಡೆಸಬೇಕಾಗಿಲ್ಲ. ಅದು ಉಳಿಯುತ್ತಿದೆ. ಸುಭದ್ರವಾಗಿ ಉಳಿಯುತ್ತಿದೆ. ನಮ್ಮ ನಿಮ್ಮೆಲ್ಲರ ಮನೆ-ಮನಗಳಲ್ಲಿ ಸುರಕ್ಷಿತವಾಗಿದೆ. ವಿಶೇಷವಾಗಿ ಬೆಂಗಳೂರಿನ ಮೂಲೆ ಮೂಲೆಯಲ್ಲಿ ಅದು ಭದ್ರವಾಗಿದೆ. ಅದನ್ನು ಕಾಪಾಡಲಾಗುತ್ತಿದೆ.

ಇದಕ್ಕೊಂದು ಪುಟ್ಟ ಉದಾಹರಣೆ ಇಲ್ಲಿದೆ:

ಬೊಗಳೆ ರಗಳೆ ಬ್ಯುರೋಗೆ ತ್ವರಿತವಾಗಿ ಕರ್ನಾಟಕದಿಂದ ಒಂದು ಮಾಹಿತಿ ಬೇಕಾಗಿತ್ತು. ಹಾಗಾಗಿ ನಮ್ಮೂರು, ಕನ್ನಡದ ಊರು ಎಂಬ ಕಾರಣಕ್ಕಾಗಿ ಬೆಂಗಳೂರಿನ ಕಂಪನಿಯೊಂದಕ್ಕೆ ದೂರವಾಣಿ ಹಚ್ಚಲಾಯಿತು. ಅಭಿಮಾನದಿಂದ ಕನ್ನಡದಲ್ಲೇ ಮಾತಿಗಾರಂಭಿಸಿ ನಮಸ್ಕಾರ ಎಂದಾಗ, ಗುಡ್ ಮಾರ್ನಿಂಗು ಎಂಬ ಪ್ರತಿ-ದಾಳಿ ನಡೆಯಿತು. "ಈ.... ವಿಷಯದ ಬಗ್ಗೆ ಒಂದಿಷ್ಟು ಮಾಹಿತಿ ಬೇಕಿತ್ತಲ್ಲಾ..." ಎಂದು ಪ್ರಶ್ನಿಸಿದಾಗ.... ತಳಮಳಗೊಂಡಂತೆ ಕಂಡು ಬಂದ ಆ ಹೆಣ್ಣು ಧ್ವನಿ, ಎನ್ನ ಎನ್ನ? ಎಂದು ತಡಬಡಾಯಿಸಿತು. ಬಹುಶಃ ಕನ್ನಡ ತಿಳಿದಿರಲಾರದು ಎಂದು ಗೊತ್ತಿದ್ದಷ್ಟು ಇಂಗ್ಲಿಷಿನಲ್ಲಿ ಕೇಳಲಾಯಿತು... ಊ ಹೂಂ... ಜಗ್ಗುವುದೇ ಇಲ್ಲ...ತಡಬಡಾಯಿಸುವಿಕೆಯೇ ಉತ್ತರವಾಯಿತು.

ಕೊನೆಗೆ, ಅನಿವಾರ್ಯವಾಗಿ ಕಲಿತಿರುವ ಅರೆಬರೆ ತಮಿಳಿನಲ್ಲಿ ಕೇಳಿದಾಗ... ಬದುಕಿದೆಯಾ ಬಡ ಜೀವವೇ ಎಂದು ಕೊಂಡ ಆ ಹೆಣ್ಣು ಧ್ವನಿ ಪಟಪಟನೆ ತಮಿಳಿನಲ್ಲಿ ಸಂಪೂರ್ಣ ಮಾಹಿತಿ ಕೊಟ್ಟಿತು. ಬ್ಯುರೋ ಸಿಬ್ಬಂದಿಗೆಷ್ಟು ಅರ್ಥವಾಯಿತೋ, ಏನನ್ನು ನಮ್ಮವರು ಬರೆದುಕೊಂಡರೋ... ಅದರಲ್ಲಿ ಎಷ್ಟು ಸರಿಯೋ ತಿಳಿಯಲೊಲ್ಲದು.

ಹಾಗಾಗಿ ಕರ್ನಾಟಕದಲ್ಲಿ, ವಿಶೇಷವಾಗಿ ರಾಜಧಾನಿ ಬೆಂಗಳೂರಿನಲ್ಲಿ ಅನ್ಯ ಭಾಷಿಗರು ತುಂಬಿ ಹೋಗುತ್ತಾ ಕನ್ನಡದ ಬಳಕೆ ಕಡಿಮೆಯಾಗುತ್ತಿದೆ. ಕನ್ನಡ ಹೆಚ್ಚು ಬಳಸಿದರೆ ಸವೆಯುತ್ತದೆ, ಹಾಗಾಗಿ ಅಲ್ಪಸ್ವಲ್ಪವೇ ಬಳಸಲಾಗುತ್ತದೆ. ಮತ್ತೆ ಅಳಿದುಳಿದ ಕನ್ನಡವನ್ನು ಹೆಚ್ಚು ಉಪಯೋಗಿಸದಂತೆ ಯಾವುದೋ ಸೇಫ್ ಲಾಕರಿನಲ್ಲಿ ಭದ್ರವಾಗಿ ಇರಿಸಲಾಗಿದೆ. ಕನ್ನಡವನ್ನು ಯಾರೂ ಬಳಸದಿದ್ದರೆ ಅದು ಸವೆಯುವುದಾದರೂ ಹೇಗೆ, ಅದು ಅಳಿಯುವುದು ಸಾಧ್ಯವೇ? ಮಿತ ಬಳಕೆಯೇ ಕನ್ನಡದ ರಕ್ಷಣೆಗಿರುವ ಏಕೈಕ ಮಾರ್ಗ ಎಂದು ಕಂಡುಕೊಂಡವರಿಗೊಂದು ದೊಡ್ಡ ನಮಸ್ಕಾರ.

ಇನ್ನೂ ಒಂದು ವಿಷಯವೆಂದರೆ, ಕನ್ನಡಿಗರು ಕೂಡ ಅಲ್ಪಸಂಖ್ಯಾತರಾದಲ್ಲಿ ಅಲ್ಪಸಂಖ್ಯಾತ ಕೋಟಾದಲ್ಲಿ ಹೆಚ್ಚು ಹೆಚ್ಚು ಸೌಲಭ್ಯ ಪಡೆಯಬಹುದು ಎಂಬ ದೂರಾಲೋಚನೆಯೂ ಕೆಲವರಲ್ಲಿ ಸೇರಿಕೊಂಡುಬಿಟ್ಟಿದೆ.

ಆದುದರಿಂದ "ಎನ್ನಡ ಕನ್ನಡ" ಎಂದರೆ "ಎನ್ನಯ ಕನ್ನಡ" ಎಂದೇ ತಿಳಿದುಕೊಳ್ಳುವವರಿಗೆ ಏನು ಹೇಳಬೇಕೋ ಗೊತ್ತಿಲ್ಲ.

ಬೊಗಳೆ ರಗಳೆ ಬ್ಯುರೋದಿಂದ ಸುವರ್ಣ ಕರ್ನಾಟಕದ ಕೊಡುಗೆ ಇಲ್ಲಿದೆ: bogaleragale.blogspot.com

Rating
No votes yet