ಕನ್ನಡ ನಾಡಿನಲ್ಲಿ ಜಾಹಿರಾತುಗಳು ಹಿಂದಿಯಲ್ಲಿ ಏಕೆ ಇರಬೇಕು? ಗ್ರಾಹಕರಾಗಿ ನಾವು ಕೇಳಬೇಕಾದ ಪ್ರಶ್ನೆ

ಕನ್ನಡ ನಾಡಿನಲ್ಲಿ ಜಾಹಿರಾತುಗಳು ಹಿಂದಿಯಲ್ಲಿ ಏಕೆ ಇರಬೇಕು? ಗ್ರಾಹಕರಾಗಿ ನಾವು ಕೇಳಬೇಕಾದ ಪ್ರಶ್ನೆ

ಬೆಂಗಳೂರಿನಲ್ಲಿ ನೆಲೆಸಿರುವ ಪ್ರತಿಯೊಬ್ಬ ಕನ್ನಡಿಗನೂ ಅನುಭವಿಸಿರುವಂತಹ ದುರಾದೃಷ್ಟಕರ ವಿಷಯ ಇದು. ಹೆಚ್ಚಿನ ಉದ್ಯಮಗಳು ಗ್ರಾಹಕ ಸೇವೆಯನ್ನು ಕನ್ನಡದಲ್ಲಿ ನೀಡುವುದಿಲ್ಲ. ಇನ್ನು ಕೆಲವರು, "ಕನ್ನಡ ಗ್ರಾಹಕರು ನಮಗೆ ಬೇಡ" ಅನ್ನುವಂತ ನಿಲುವು ತಳೆದಿರುವುದು ಕಾಣಿಸುತ್ತದೆ.
ಕನ್ನಡಿಗರು ಕೆಲವರು ಇದರ ಬಗ್ಗೆ ಯೋಚಿಸುವುದೇ ಬಿಟ್ಟಿದ್ದಾರೆ. ಇನ್ನು ಕೆಲವರು, ಯೋಚಿಸಿದರೂ, "ಅವರು ಕೊಡಲ್ಲ ಅಂದ್ರೆ ನಾವೇನ್ ಮಾಡಕ್ಕಾಗುತ್ತೆ?" ಅಂತ ಸುಮ್ಮನಾಗಿದ್ದಾರೆ. ಇಂತಹ ನಿಲುವಿನಿಂದ, ವ್ಯವಸ್ಥೆ ಹದಗೆಡುತ್ತೆ ಹೊರತು, ಉತ್ತಮವಾಗಲ್ಲ.

ಇ೦ತಹ ಒ೦ದು ವ್ಯವಸ್ಥೆಯನ್ನು ಸರಿಪಡಿಸಲು ಕಾಳಜಿಯುಳ್ಳ ಕನ್ನಡಿಗ ಗ್ರಾಹಕರಾಗಿ ನಾವೇನು ಮಾಡಬಹುದು? ಇತ್ತೀಚಿಗೆ ನಡೆದ ಒಂದು ಚಿಕ್ಕ ಘಟನೆ ಹೇಳ್ತೀನಿ ನೋಡಿ.

ಫ್ಯೂಚರ್ ಜನರಾಲಿ ಇನ್ಸೂರನ್ಸ್ ಕಂಪನಿ ಭಾರತಕ್ಕೆ ಕಾಲಿಟ್ಟ ಹೊಚ್ಚ ಹೊಸ ಉದ್ಯಮ. ಎಲ್ಲಾ ಉದ್ಯಮಗಳಂತೆ ಅವರಿಗೂ ಬೆಂಗಳೂರು ಬಹಳ ಮುಖ್ಯ ಮಾರುಕಟ್ಟೆಯಾದ್ದರಿ೦ದ ಬೆ೦ಗಳೂರಿನ ಅನೇಕ ವಾಹಿನಿಗಳಲ್ಲಿ, ಎಫ್ ಎಂ ರೇಡಿಯೋ, ಟಿ ವಿ, ಮತ್ತು ಹೋರ್ಡಿಂಗ್ಗಳಲ್ಲಿ ಜಾಹಿರಾತುಗಳನ್ನು ಪ್ರಸಾರಮಾಡಿದರು, ಆದರೆ ಅವೆಲ್ಲವೂ ಹಿಂದಿ ಮತ್ತು ಇ೦ಗ್ಲೀಷ್ ನಲ್ಲಿ ಇತ್ತು. ಈ ಕಂಪನಿಯವರಿಗೆ ಇಲ್ಲಿನ ಮಾರುಕಟ್ಟೆ ಬಗ್ಗೆ ಹೆಚ್ಚಿನ ಮಾಹಿತಿ ಇದ್ದಂತಿಲ್ಲ. ಹಾಗಾಗಿ, ಜಾಹೀರಾತು ಕನ್ನಡದಲ್ಲಿ ಇರಬೇಕೆ೦ಬುದು ಅವರ ತಲೆಗೆ ಹೊಕ್ಕಲಿಲ್ಲ. ಕನ್ನಡದ ಹಾಡುಗಳನ್ನೇ ಪ್ರಸಾರ ಮಾಡುವಂತಹ ಎಫ್ ಎಂ ಗಳಲ್ಲಿ ಕೂಡ, ಹಿಂದಿ ಮತ್ತು ಇ೦ಗ್ಲೀಷ್ ಜಾಹಿರಾತುಗಳು ಮೂಡಿ ಬಂದವು. "ಏಕ್ ಶಗುನ್ ಜಿನ್ದಗಿ ಕೆ ನಾಮ್" ಎನ್ನುವ ಒಂದು ಹಿಂದಿ "ಪಂಚ್ ಲೈನ್" ಇಟ್ಟುಕೊಂಡು, ಇದನ್ನು ಪ್ರತಿಯೊಬ್ಬ ಕನ್ನಡಿಗನೂ ಅರ್ಥ ಮಾಡಿಕೊಳ್ಳುತ್ತಾನೆ ಎಂಬಂತೆ ಪೋಸು ಕೊಟ್ಟರು.

ಬೇರೆ ಭಾಷೆಗಳ ಜಾಹಿರಾತಿನಿಂದ, ಉದ್ಯಮಗಳಿಗೂ ನಿರೀಕ್ಷಿತ ಫಲ ದೊರೆಯುವುದಿಲ್ಲ. ಗ್ರಾಹಕರಿಗೂ ಉತ್ತಮ ಮಾಹಿತಿ ದೊರಕುವುದಿಲ್ಲ. ಈ ವ್ಯವಸ್ಥೆಯಿಂದ ಯಾರನ್ನು ಮೆಚ್ಚಿಸಲು ಹೊರಟಿದ್ದಾರೆ ಎ೦ಬುದು ಆ ದೇವರಿಗೇ ಗೊತ್ತು!

ಇದನ್ನು ಕಂಡ ನಾವು (ನಾನು ಮತ್ತು ನನ್ನ ಕೆಲವು ಸ್ನೇಹಿತರು), ಫ್ಯೂಚರ್ ಜನರಾಲಿ ವೆಬ್ಸೈಟ್ ಹುಡುಕಿ ಅವರ ಕಸ್ಟಮರ್ ಕೇರ್ ಈ-ಮೇಲ್ ವಿಳಾಸ ತಿಳಿದುಕೊಂಡು ಅವರಿಗೆ ಒಂದು ಚಿಕ್ಕ ಈ-ಮೇಲ್ ಕಳುಹಿಸಿದೆವು. ಆ ಪತ್ರದಲ್ಲಿ ನಾವು ಹೇಳಿದ್ದು ಇಷ್ಟೇ, "ಬೆಂಗಳೂರಲ್ಲಿ ಕನ್ನಡ ವ್ಯಾಪಕವಾಗಿ ಬೆಳೆದಿರುವ ಭಾಷೆ. ನಿಮಗೆ ಇಲ್ಲಿನ ಗ್ರಾಹಕರು ಬೇಕೆಂದರೆ, ಇಲ್ಲಿಯ ಭಾಷೆ ಮಾತನಾಡಿ. ನಿಮಗೆ ಶುಭವಾಗಲಿ". ಈ ಪತ್ರಗಳು ಅವರನ್ನು ತಲುಪಿದ ತಕ್ಷಣ ಅವರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಹಾಗು, ೨ ದಿನಗಳಲ್ಲಿ ಕನ್ನಡದಲ್ಲಿ ಜಾಹಿರಾತುಗಳು ಹೊರಬಂದವು.

ಕೇವಲ ೪ ಈ-ಮೇಲ್ಗಳು ಇಷ್ಟು ಬೇಗ ಬದಲಾವಣೆ ತರಬಹುದಾದರೆ, ಇನ್ನು ಸಾವಿರ ಕನ್ನಡಿಗರ ಈ-ಮೇಲ್ಗಳು ಯಾವ ರೀತಿಯ ಬದಲಾವಣೆ ತರಬಹುದು? ಯೋಚಿಸುವ೦ತಹ ವಿಷಯ.

ಇಷ್ಟನ್ನು ಸಾಧಿಸಲು ನಮಗೆ ಎಳ್ಳಷ್ಟೂ ಕಷ್ಟವಾಗಲಿಲ್ಲ. ನಮ್ಮ ಕಛೇರಿಯ ಎ.ಸಿ ಸೀಟ್ ನಲ್ಲಿ ಕುಳಿತು ಇದನ್ನು ಸಾಧಿಸಿದೆವು. ಇನ್ನು ಸ್ವಲ್ಪ ದಿನಗಳಲ್ಲಿ, ಈ ಫ್ಯೂಚರ್ ಜನರಾಲಿ ಕಂಪನಿ ನೋಡಿ, ಬೇರೆ ಕಂಪನಿಗಳೂ ಕನ್ನಡ ಮಾತನಾಡಲು ಶುರು ಮಾಡಿದರೂ ಅಚ್ಚರಿಯಿಲ್ಲ. ಇದೇ ರೀತಿ ಎಲ್ಲ ಕನ್ನಡಿಗ ಗ್ರಾಹಕರು ಮುಂದುವರಿಸುತ್ತಾ ಹೋದಲ್ಲಿ ಕರ್ನಾಟಕದ FMಗಳಲ್ಲಿ ಎಲ್ಲೆಡೆ ಜಾಹಿರಾತುಗಳ ಭಾಷೆಯೂ ಕನ್ನಡವೇ ಆಗುವುದು ಖಚಿತ.

Rating
No votes yet

Comments