ಕನ್ನಡ ನಾಡು ನುಡಿಯ ಹೊಸ ಸವಾಲುಗಳು..

ಕನ್ನಡ ನಾಡು ನುಡಿಯ ಹೊಸ ಸವಾಲುಗಳು..

ಕಾಲ, ದೇಶದ ಪ್ರಜ್ಞೆ ಇಲ್ಲ, ಯುಕ್ತಾಯುಕ್ತ ವಿವೇಚನೆಯೂ ಇಲ್ಲ. ಸಾಮಾನ್ಯರ ಭಾವುಕತೆಯನ್ನು ಬಂಡವಾಳ ಮಾಡಿಕೊಂಡು ಬದುಕುವ ಒಂದು ದುಷ್ಟ ವರ್ಗ ತಲೆಯೆತ್ತುತ್ತಿದೆ. ಭಾವುಕ ಮಂದಿ ಉಘೇ ಉಘೇ ಎನ್ನುತ್ತಿದೆ. ಇದು ಇವತ್ತಿನ ನಮ್ಮ ಸ್ಥಿತಿ.

ಬಹುಷಃ ಇವತ್ತು ಕನ್ನಡ ನಾಡು - ನುಡಿ ಹಿಂದೆಂದೂ ಇಲ್ಲದಂತೆ ವಿಭಿನ್ನ ವಿದ್ಯಮಾನಗಳನ್ನು, ಸಂಘರ್ಷಗಳನ್ನು ಎದುರಿಸುತ್ತಿದೆ. ಧರ್ಮ, ಜಾತಿ ಅಥವಾ ಕೋಮು ಸಂಬಂಧಿ ವಿವಾದಗಳು ಒಂದು ಕಡೆ, ಭಾಷೆ, ಗಡಿ ಮತ್ತು ನೀರಿನ ವಿಚಾರಗಳು ಇನ್ನೊಂದೆಡೆ, ಈ ರಾಜ್ಯದ ರಾಜಕೀಯ ಮತ್ತು ಆಡಳಿತಾತ್ಮಕ ವಿಸಂಗತಿಗಳು, ಜಾಗತೀಕರಣ ಮತ್ತು ಅದು ತಂದ ವಿಲಕ್ಷಣ ಆಧುನಿಕತೆ ಬಹಿರಂಗದಲ್ಲೂ ಅಂತರಂಗದಲ್ಲೂ ಉಂಟುಮಾಡುತ್ತಿರುವ ಬದಲಾವಣೆಗಳು, ನಕ್ಸಲ್ ಮತ್ತು ಧಾರ್ಮಿಕ/ರಾಜಕೀಯ ಭಯೋತ್ಪಾದಕ ಶಕ್ತಿಗಳು ಹುಟ್ಟಿಸುತ್ತಿರುವ ಕೆಲವು ತಲ್ಲಣಗಳೂ ಅಲ್ಲದೆ ಸಾಮಾನ್ಯ ಮನುಷ್ಯನೊಬ್ಬ ದಿನನಿತ್ಯದ ತನ್ನ ಬದುಕಿನಲ್ಲಿ, ಮಾರುಕಟ್ಟೆಯಲ್ಲೋ, ಉದ್ಯೋಗ ರಂಗದಲ್ಲೋ, ತನ್ನ ಅತಿನಿಕಟ ಸಮಾಜದಲ್ಲೋ ಎದುರಿಸುತ್ತಿರುವ, ಕ್ಷುಲ್ಲಕ - ಕ್ಷುದ್ರ ದೈನಂದಿನಗಳು ಎದುರಿಡುವ ಸಮಸ್ಯೆಗಳು ಎಂದೆಲ್ಲ ಇವನ್ನು ಗುರುತಿಸಬಹುದು. ವಿಚಿತ್ರವೆಂದರೆ ಇವು ಒಂದು ಇನ್ನೊಂದರ ಜೊತೆ ತಳುಕು ಹಾಕಿಕೊಂಡೇ ಇರುವಂತವು. ಯಾವುದನ್ನೂ ಪ್ರತ್ಯೇಕಿಸಿ ಪ್ರತಿಸ್ಪಂದಿಸುವುದು ಇವತ್ತು ನಮಗೆ ಸಾಧ್ಯವಿಲ್ಲ.

ಹಿಂದೂ ಮುಸ್ಲಿಂ ಸಮಸ್ಯೆಗೆ ದೊಡ್ಡ ಇತಿಹಾಸವೇ ಇದೆ ಎನ್ನಬಹುದು. ಅಷ್ಟೇ ಹಿಂದಿನ ಇತಿಹಾಸವಿದ್ದರೂ ಹೇಳಿಕೊಳ್ಳುವಂಥ ಗಲಭೆಯನ್ನೇನೂ ಇದುವರೆಗೆ ಎಬ್ಬಿಸದಿದ್ದ ಕ್ರಿಶ್ಚಿಯನ್ ಧರ್ಮದ ಮತಾಂತರದ ಪ್ರಶ್ನೆ ಕೊನೆಗೂ ಧರ್ಮವನ್ನು ಇವತ್ತು ಪ್ರಮುಖ ರಾಜಕೀಯ ಮತ್ತು ಸಾಮಾಜಿಕ ಇಶ್ಯೂವಾಗಿ ಜೀವಂತ ಇರಿಸುವಲ್ಲಿ ಸಹಕರಿಸಿದಂತಿದೆ. ಆದರೆ ದಲಿತ ಮತ್ತು ಸವರ್ಣೀಯರ ನಡುವಿನ ಸಮಸ್ಯೆಗಳು ಎದ್ದು ಬಂದಾಗಲೆಲ್ಲ ನಮ್ಮ ಹಿಂದೂ ಮುಸ್ಲಿಂ ಅಥವಾ ಹಿಂದೂ ಕ್ರಿಶ್ಚಿಯನ್ ನಡುವಿನ ಗೊಂದಲಗಳು ಬೇರೆಯೇ ಬಣ್ಣ, ಮುಖ ಪಡೆಯುವುದು ಕುತೂಹಲಕರ. ಅದು ಮೀಸಲಾತಿ ಪ್ರಶ್ನೆ ಇರಬಹುದು, ಎಲ್ಲೋ ಅಂಬೇಡ್ಕರ್ ಪ್ರತಿಮೆಗಾದ ಅವಮಾನದ ಪ್ರಶ್ನೆ ಇರಬಹುದು, ಕನಕಪೀಠ ಮತ್ತು ಉಡುಪಿಯ ಕೃಷ್ಣಮಠದ ಪ್ರಶ್ನೆ ಇರಬಹುದು, ಬೆಂಡಿಗೇರಿಯೋ ಕಂಬಾಲಪಲ್ಲಿಯೋ ಇರಬಹುದು. ಅದೇ ಸಾವರ್ಕರ್ ಮತ್ತು ಟಿಪ್ಪೂ, ಗಾಂಧಿ ಮತ್ತು ಭಗತ್‌ಸಿಂಗ್, ನೆಹರೂ ಮತ್ತು ಜಿನ್ನಾ ಪ್ರಶ್ನೆಗಳು ಬಂದಾಗ ಧರ್ಮದ, ಜಾತಿಯ ಮತ್ತು ಕೋಮುವಾದಿ ನೆಲೆಗಟ್ಟಿನ ನಿಲುವುಗಳು ಬದಲಾಗುತ್ತವೆಯೆ?

ಭಾಷೆ, ಗಡಿ ಮತ್ತು ನೀರಿನ ಪ್ರಶ್ನೆಗೆ ಬಂದಾಗಲೂ ಇಂಥ ಅಂತರ್ಗಾಮಿ ದ್ವಂದ್ವಗಳು ಇವೆ ಅನಿಸುತ್ತದೆ. ಕನ್ನಡ ಇಂಗ್ಲೀಷ್ ಪ್ರಶ್ನೆಗೆ ಬಂದಾಗ ನವೆಂಬರ್‌ನಲ್ಲಿ ತಳೆಯುವ ನಿಲುವು ಮಕ್ಕಳ ಸ್ಕೂಲ್ ಎಡ್ಮಿಶನ್ ಸಮಯದಲ್ಲಿ ಸ್ವಲ್ಪ ಸಡಿಲಾಗುತ್ತದೆ. ಜಾಗತೀಕರಣದ ಸವಾಲುಗಳು ಕನ್ನಡಾಭಿಮಾನವನ್ನು ಅದುಮುತ್ತವೆ. ಅದೇ ಬೆಳಗಾವಿಯ ಮಹಾನಗರಪಾಲಿಕೆಯ ಸದಸ್ಯ, ಅಧ್ಯಕ್ಷರ ನಿರ್ಣಯದ ಪ್ರಶ್ನೆ ಬಂದಾಗ ಅಥವಾ ಅವರು ಬೆಂಗಳೂರಿಗೆ ಬಂದಿದ್ದಾಗ ಅವರನ್ನು ಹಿಗ್ಗಾಮುಗ್ಗಾ ಜಗ್ಗಾಡಿ, ಶರಟು ಹರಿದು, ಮುಖಕ್ಕೆ ಟಾರ್ ಬಳಿದು ಕನ್ನಡ ಪ್ರೇಮ ಮೆರೆಯುವಾಗ, ಅದನ್ನು ಯಾರೋ ಸರಿಯಲ್ಲ ಅಂದಾಗ ನಮ್ಮ ನಿಲುವು ಭಿನ್ನವಾಗುತ್ತದೆ. ಇದೇ ಕನ್ನಡ ಚಿತ್ರರಂಗ ಪರಭಾಷಾ ಚಿತ್ರಗಳನ್ನು ನಿಷೇಧಿಸಿ ಎಂದಾಗ, ತಮ್ಮ ರಾಜ್ಯದಲ್ಲಿ ಬಿಡುಗಡೆಯಾದ ಮೂರು ತಿಂಗಳ ನಂತರ ಕರ್ನಾಟಕದಲ್ಲಿ ಬಿಡುಗಡೆ ಮಾಡಿ ಎಂದಾಗ ಅದು ನಮಗೆ ಸರಿಯಲ್ಲ ಅನಿಸುತ್ತದೆ. ಆಯಾ ರಾಜ್ಯದಲ್ಲಿ ತಯಾರಾಗುವ ಚಿತ್ರಗಳ ಸಂಖ್ಯೆ, ಆಯಾ ರಾಜ್ಯಕ್ಕೆ ಬರುವ ಇತರ ಭಾಷೆಯ ಚಿತ್ರಗಳ ಸಂಖ್ಯೆ, ಆಯಾ ರಾಜ್ಯದಲ್ಲಿ ಲಭ್ಯವಿರುವ ಚಿತ್ರಮಂದಿರಗಳ ಸಂಖ್ಯೆಯೊಂದಿಗೆ ನಮ್ಮ ರಾಜ್ಯದ ಸಂಖ್ಯಾವಾರು ಅನುಪಾತಗಳನ್ನು ಅರಿತುಕೊಳ್ಳದೆ, ಯಾವ ಆಗ್ರಹದ ಹಿಂದೆ ಏನು ಉದ್ದೇಶವಿದೆ ಎಂದು ತಿಳಿದುಕೊಳ್ಳುವ ಅಗತ್ಯವೂ ಇಲ್ಲದೆ ಅದನ್ನು ನಮ್ಮಲ್ಲಿ ಅನೇಕರು ಟೀಕಿಸಿದರು. ಇದೇ ಚಿತ್ರರಂಗ ಮೊನ್ನೆ ಕಾರ್ಮಿಕ ಸಮಸ್ಯೆಯನ್ನು ಮುಂದಿಟ್ಟುಕೊಂಡು ಕೆಲಸ ನಿಲ್ಲಿಸಿದಾಗ ನಮಗೇನನಿಸಿತು?

ಭೂ ಹಗರಣ, ಗಣಿ ಹಗರಣ, ಸ್ಟಾಂಪ್ ಪೇಪರ್ ಹಗರಣ, ಕಾರಿಡಾರ್ ರ್ಯೋಜನೆಯ ಹಗರಣ, ತದಡಿ, ನಂದಿಕೂರು ಯೋಜನೆಗಳು, ಬೆಂಗಳೂರು ಮೆಟ್ರೋ ರೈಲು, ಬೆಂಗಳೂರು ಮಂಗಳೂರು ಬ್ರಾಡ್‌ಗೇಜ್ ಪರಿವರ್ತನೆ ಎಂದೆಲ್ಲ ನಮ್ಮ ಆಡಳಿತಾತ್ಮಕ ವಿದ್ಯಮಾನಗಳು ಎತ್ತೆತ್ತಲೋ ಸುತ್ತುತ್ತಿವೆ. ಕಾಗದ ಪತ್ರಗಳಲ್ಲಿ ಅನುದಾನ, ಬಜೆಟ್ಟು, ಅಭಿವೃದ್ಧಿ ದಾಖಲಾಗುತ್ತದೆ. ಭ್ರಷ್ಟಾಚಾರ, ತಾತ್ವಿಕ ನೆಲೆಗಟ್ಟಿಲ್ಲದ ನಮ್ಮ ರಾಜಕೀಯ ಪಕ್ಷಗಳು, ಮತದಾನದ ಹಕ್ಕು ಮತ್ತು ಪ್ರಜಾಪ್ರಭುತ್ವವನ್ನೇ ನಗೆಪಾಟಲಾಗಿಸುವ ಚಾಮುಂಡೇಶ್ವರಿ ಕ್ಷೇತ್ರದಂಥ ಚುನಾವಣೆಗಳು...

ನಮ್ಮ ಮುಖಾಮುಖಿ ಹೇಗೆ ಇವುಗಳೊಂದಿಗೆ? ಅಂಬೇಡ್ಕರ್ ಎಲ್ಲಿಯೋ ಧರ್ಮದ ಪ್ರಶ್ನೆಯಾಗಿಯೂ ಇನ್ನೆಲ್ಲೋ ಮೀಸಲಾತಿಯ ಸಾಮಾಜಿಕ ನ್ಯಾಯದ ಪ್ರಶ್ನೆಯಾಗಿಯೂ ಮತ್ತೆಲ್ಲೋ ರಾಜಕೀಯ ಮಾನ್ಯತೆಯ ಪ್ರಶ್ನೆಯಾಗಿಯೂ ಕಾಡುತ್ತಾರಲ್ಲ? ಅನಂತಮೂರ್ತಿ ರಾಜ್ಯಸಭೆಗೆ ನಿಲ್ಲುವುದು ಭಾಷೆ, ಗಡಿಯ ಪ್ರಶ್ನೆಯಾಗಿಯೂ, ಪಕ್ಷ ಬಲಾಬಲದ ರಾಜಕೀಯ ಪ್ರಶ್ನೆಯಾಗಿಯೂ ಕಾಡುತ್ತದಲ್ಲ? ಟಿಪ್ಪೂ ಧರ್ಮವಾಗಿಯೂ, ಭಾಷೆಯಾಗಿಯೂ ಪ್ರಶ್ನೆಯಾಗುತ್ತಾನಲ್ಲ? ಇಂಗ್ಲೀಷ್ ಅಮೆರಿಕವಾಗಿಯೂ ಕನ್ನಡ ತಾಯಿ ಭುವನೇಶ್ವರಿಯಾಗಿಯೂ ಎದುರಾಗುವ ಬಗೆ ಮಾತ್ರ ಅನಂತಮೂರ್ತಿ ಮತ್ತು ಚಂಪಾ ಆಗುತ್ತಿದೆಯಲ್ಲ!

ಕೆಲವರು ಕೇವಲ ಸಾಕ್ಷೀ ಪ್ರಜ್ಞೆಯಿಂದ, ಎಲ್ಲವನ್ನೂ ಅವಲೋಕಿಸುತ್ತ ನೋಡೋಣ ಏನಾಗುತ್ತಂತ ಎನ್ನುತ್ತಲೇ ತೆಪ್ಪಗಿದ್ದೇವೆ. ಕಾಫಿ ಕುಡಿಯುತ್ತಲೋ, ಸಂಜೆ ಹರಟೆ ಸಮಯದಲ್ಲೋ ಎದುರಿನವರೊಂದಿಗೆ ತೀರ ಜಗಳ ನಿಷ್ಠುರವಾಗದ ಹಾಗೆ ನಮ್ಮದು ಸ್ವಲ್ಪ ಹೇಳುತ್ತ ಅವರದ್ದು ಸ್ವಲ್ಪ ಕೇಳುತ್ತ ದಿನಗಳೆಯುತ್ತದೆ.

ಇನ್ನು ನಮ್ಮ ಗೌರಿಲಂಕೇಶ್, ರಾಮ ದಿವಾಣ, ಜಿ ರಾಜಶೇಖರ್, ಫಣಿರಾಜ್ ನೇರ ಬೀದಿಗಿಳಿದು ನಿಷ್ಠುರವಾಗಿ ಹೋರಾಟಕ್ಕಿಳಿದು ಪ್ರತಿಸ್ಪಂದಿಸುತ್ತಾರೆ. ಎಷ್ಟೋ ಕಡೆ ಇವರು ವಿರೋಧಿಸುತ್ತಾರೆಂದೇ ಅವರಿಗೆ ಹುಮ್ಮಸ್ಸು ಬಂದಂತೆ ಕಂಡರೂ ಅಚ್ಚರಿಯಿಲ್ಲ. ಅವರು ಮೆರವಣಿಗೆ ಮಾಡಿದರೆ ಇವರೂ ಒಂದು ಮೆರವಣಿಗೆ ತೆಗೆಯುತ್ತಾರೆ. ಅವರು ಪ್ರತಿಭಟಿಸಿದರೆ ಇವರೂ ಪ್ರತಿಭಟಿಸುತ್ತಾರೆ. ಈಚೆಗೆ ಉಡುಪಿಯಲ್ಲಿ ಪ್ರತಿಭಟನೆ ಮತ್ತು ಪ್ರತಿಭಟನೆಗೆ ಪ್ರತಿಭಟನೆ ಮತ್ತು ಅದರ ಪ್ರತಿಭಟನೆ ಎಂದೆಲ್ಲ ನಡೆದದ್ದು ನೆನಪಿಗೆ ಬರುತ್ತದೆ. ಪ್ರತಿಭಟನೆಯ ಉದ್ದೇಶ ವಿರೋಧವನ್ನು ದಾಖಲಿಸುವುದೇ ಅಥವಾ ಸಮಾಜದ ಮೇಲೆ ಪೂರ್ವ ಪಕ್ಷದಿಂದಾದ ಪರಿಣಾಮವನ್ನು ಉಪಶಮನಗೊಳಿಸುವುದೆ? ಅದು ಸಾಧ್ಯವಾಯಿತೆ ಕೊನೆಗೂ? ಜನ ಜಾಗೃತಿ ಎಂಬುದು ಒಂದು ಹುಂಬತನ ಎನಿಸುತ್ತದೆ. ಜನ ಜಾಗೃತರಾಗಿಯೇ ಇದ್ದಾರೆ, ಖಂಡಿತ. ಆದರೆ ಹಾಗೆ ತೋರಿಸಿಕೊಳ್ಳುವ ಇಚ್ಛೆ ಇಲ್ಲ ಅವರಿಗೆ!

ಪೊಲಿಟಿಕಲಿ ಕರೆಕ್ಟ್ ಆದ ಒಂದು ನಿಲುವು ತೆಗೆದುಕೊಳ್ಳುವುದು ಸುಲಭ ಎನಿಸುತ್ತದೆ ಕೆಲವರಿಗೆ. ಇದರಿಂದ ವ್ಯವಹಾರಕ್ಕೆ ಖಂಡಿತಾ ನಷ್ಟವಿಲ್ಲ. ನಮ್ಮ ಹೆಚ್ಚಿನ ದಿನಪತ್ರಿಕೆಗಳು ಇದನ್ನೇ ಸರ್ವೆ ಮಾಡಿದಂತೆ ಅನುಸರಿಸುತ್ತಿರುವುದು ಸುಳ್ಳಲ್ಲ. ಜಾಹೀರಾತು, ಪ್ರಸಾರಕ್ಕೆ ತಕ್ಕಂತೆ ಸತ್ಯ ಬದಲಾಗುವುದನ್ನು ಇಲ್ಲಿ ಕಾಣಬಹುದಾಗಿದೆ. ಇದೂ ಪ್ರಚಲಿತ ವಿದ್ಯಮಾನಕ್ಕೆ ಸ್ಪಂದಿಸುವ ಒಂದಾನೊಂದು ಬಗೆಯೇ.

ನಿರ್ಲಿಪ್ತಿ ಅಥವಾ ಪೊಲಿಟಿಕಲಿ ಕರೆಕ್ಟ್ ಆಗಿ ಇರಬಯಸುವ ಒಂದು ಸಮಾಜ ಯಾವತ್ತೂ ರಾಜಕೀಯ ನಮಗೇಕೆ ಎಂದು ತಮ್ಮ ನಿಲುವು, ನಡೆಯನ್ನು ಸಮರ್ಥಿಸಿಕೊಳ್ಳುತ್ತ ಬಂದಿದೆ. ಗಲಾಟೆ, ಆಪತ್ತುಗಳಿಗೆ ಹೆದರುವ ಇವರು ಅವುಗಳಿಂದ ಸದಾ ನುಣುಚಿಕೊಂಡು ತಮ್ಮ ಸಂಪಾದನೆ, ಮನೆ, ಸಂಸಾರ, ಮಕ್ಕಳು ಎಂಬ ಜಗತ್ತಿನ ಸಂತೃಪ್ತ ಬದುಕಿನ ಹುಡುಕಾಟದಲ್ಲೇ ಮಗ್ನರು. ಸದ್ಯ ಅಷ್ಟರಮಟ್ಟಿಗೆ ಇವರಿಂದ ಇತರರಿಗೆ ತೊಂದರೆಯಿಲ್ಲ. ಆದರೆ ಇವರು ಕೆಲವೊಮ್ಮೆ ಬೇರೆಯವರನ್ನು ಎತ್ತಿಕಟ್ಟುವ ಅವಕಾಶ ಸಿಕ್ಕಿದರೆ ಅದನ್ನು ಬಿಟ್ಟಿ ಬಿಡುವುದಿಲ್ಲ. ಪ್ರಸ್ತುತ ವ್ಯಕ್ತಿ ಅಥವಾ ವಸ್ತುಸ್ಥಿತಿಯ ಬಗ್ಗೆ ಅಗತ್ಯವಾದ ಯಾವುದೇ ಮೂಲ ಮಾಹಿತಿ, ಅರಿವು, ತರ್ಕ, ಕೊನೆಗೆ ಸ್ವಂತಬುದ್ಧಿ ಕೂಡಾ ಇಲ್ಲದೆ ಯಾರೋ ತಮ್ಮ ಅಭಿಮಾನದ ಮೂರ್ತಿ ಹೇಳಿದ್ದನ್ನೇ ಅಂತಿಮವೆಂದು ಪ್ರಾಮಾಣಿಕವಾಗಿ ನಂಬಿ ವಾದ ಹೂಡುವ, ತಮ್ಮ ವಾದವನ್ನು ವ್ಯವಸ್ಥಿತವಾಗಿ ಹರಡುವ ಇವರು ಕೆಲವೊಮ್ಮೆ ಅಪಾಯಕಾರಿ ಕೂಡ.

ಭಯ ನಿರ್ಮಿತ ಪ್ರತಿಭಟನೆಯನ್ನೂ ದಾಖಲಿಸಲು ಸಾಧ್ಯ. ಮಂಗಳೂರಿನಲ್ಲಿ ಮಾಜಿ ಮೇಯರ್ ಒಬ್ಬರನ್ನು ಕೊಂದ ಕೊಲೆ ಆರೋಪಿಯ ಕೊಲೆಯಾದಾಗ ಮಂಗಳೂರು "ಸ್ವಯಂಪ್ರೇರಿತ" ಬಂದ್ ಆಚರಿಸಿದ್ದನ್ನು ದಿನಪತ್ರಿಕೆಯಲ್ಲಿ ಓದಿ ತಿಳಿದ ನಾವು ಈ ಬಗೆಯ ಒಂದು ಪ್ರತಿಭಟನೆ ಕೂಡ ವಿದ್ಯಾವಂತರ ಜಿಲ್ಲೆಯಲ್ಲಿ ಸಾಧ್ಯವಿದೆ ಎನ್ನುವುದನ್ನು ಅರಿಯುವಂತಾಯಿತು.

ನಮ್ಮ ತಲೆಮಾರಿನ ಈ ಹೊಸ ಸವಾಲುಗಳನ್ನು ಈ ಯಾವುದೇ ರೀತಿಯಲ್ಲಲ್ಲದೆ ಹೊಸ ಬಗೆಯಲ್ಲಿ ಎದುರಿಸಲಾರೆವೆ?

ಬಹುಮತದ ವಿರುದ್ಧ ಬರುವ ಮಾತುಗಳೆಲ್ಲ ಕಂದಕವನ್ನು ಮುಚ್ಚುವ ಕೆಲಸ ಮಾಡುವ ಧಾಟಿಯಲ್ಲಿಲ್ಲ. ಕಂದಕ ಮುಚ್ಚಿದ್ದೇ ಆದರೆ ತಮಗೂ ಅಜೆಂಡಾ ಇರುವುದಿಲ್ಲ ಎಂಬ ಭೀತಿಯೇ? ಪ್ರಚಾರದ ಆಸೆಯೇ? ಅಹಂಮಿಕೆಯ ಮಾತುಗಳು, ಯುದ್ಧಕ್ಕೆ ತಯಾರಾದವರಂತೆ ಕಾಣುತ್ತಿರುವವರ ಮಾತುಗಳಿಂದ ಸಮಾಜಕ್ಕೆ, ಸಮಾಜದ ದೀರ್ಘಕಾಲೀನ ಸ್ವಾಸ್ಥ್ಯಕ್ಕೆ ಏನೂ ಉಪಯೋಗವಿಲ್ಲ. ವಾದಕ್ಕೆ ವಾದ, ಹೋರಾಟಕ್ಕೆ ಪ್ರತಿಹೋರಾಟ, ತಂತ್ರಕ್ಕೆ ಪ್ರತಿ ತಂತ್ರ. ಯಾರು ಯಾರ ವಿರುದ್ಧ ನಡೆಸುತ್ತಿರುವ ಹೋರಾಟವಿದು? ಮುಂದಿನ ಜನಾಂಗಕ್ಕೆ ಏನು ನಮ್ಮ ಉತ್ತರ?

ಒಂದೇ ದೇಶ, ಜಗತ್ತಿನಲ್ಲಿ ಬದುಕುತ್ತ ಹೆಚ್ಚೆಂದರೆ ಐವತ್ತೋ ಎಪ್ಪತ್ತೋ ವರ್ಷ ಬದುಕ ಬಹುದಾದ ನಾವು ಮುಂದಿನ ನಮ್ಮ ಮುದ್ದು ಕಂದಮ್ಮಗಳಿಗೆ ಏನನ್ನು ಉಳಿಸಿ ಹೋಗುತ್ತಿದ್ದೇವೆ?

ಯಾವುದನ್ನೂ ಪ್ರಶ್ನಿಸದೆ, ವಿರೋಧಿಸದೆ, ತೆಪ್ಪಗೆ ಒಪ್ಪಿಕೊಂಡು ಬದುಕಿ ಸದ್ದಿಲ್ಲದೆ ಸತ್ತು ಮುಗಿಸಬೇಕು ಎನ್ನುತ್ತಿಲ್ಲ. ನಮ್ಮ ಪ್ರತಿರೋಧ, ಪ್ರತಿಭಟನೆಯ ಉದ್ದೇಶಗಳು ಸ್ಪಷ್ಟ, ಸ್ವಚ್ಚ ಇದ್ದರೆ ಅವುಗಳ ಸ್ವರೂಪ ಈಗಿರುವಂತೆಯೇ ಇರಬೇಕಿಲ್ಲ, ನಮ್ಮ ಉದ್ದೇಶ ಸಾಧನೆಯನ್ನು ಈಡೇರಿಸುವ ಅನ್ಯ ಮಾರ್ಗಗಳಿರಬಹುದು ಅನಿಸುವುದಿಲ್ಲವೇ, ಯಾರಿಗೂ?

ಇಷ್ಟರ ನಡುವೆ ವಿಚಿತ್ರ ಮೌನವಿದೆ. ಸರಿ ತಪ್ಪುಗಳ ಕುರಿತು ಮಾತನಾಡಬೇಕಿದ್ದ, ಆಡಿ ಜನಾಭಿಪ್ರಾಯ ರೂಪಿಸಬೇಕಿದ್ದ ಮಂದಿ ಮೌನವಾಗಿದೆ. ಯಾವುದು ಜನಬಲ, ಧನಬಲಗಳಿಂದ ಮೆರೆಯುತ್ತಿದೆಯೋ ಅದೇ ಜನಾಭಿಪ್ರಾಯವೆ ಎಂಬಂಥ ಸ್ಥಿತಿ ಇದೆ. ಆದರೆ ಇದು ಸುಳ್ಳು. ಈ ಸುಳ್ಳನ್ನೇ ಸತ್ಯವೆಂದು ಬಿಂಬಿಸುವ ಪ್ರಯತ್ನ ನಡೆಯುತ್ತಿದೆ. ಅದು ಮಾತನಾಡುತ್ತಿರುವವರ ಬಾಯಿ ಮುಚ್ಚಿಸುವ ಮೂಲಕ.

ಅನಂತಮೂರ್ತಿಯವರು ಒಮ್ಮೆ ಪತ್ರಿಕೆಯೊಂದರ ಪ್ರತಿನಿಧಿಯ ಬಳಿ ಮಸಿ ಹಚ್ಚಿದ ಪ್ರಕರಣದ ಬಗ್ಗೆ ಆಡಿದ ಮಾತಿಗೆ ಪ್ರತಿಕ್ರಿಯೆಯಾಗಿ ಅದೇ ಪತ್ರಿಕೆ ಮರುದಿನವೇ ತನ್ನ ವಾಚಕರ ವಾಣಿಯಲ್ಲಿ ಒಂದು ಪತ್ರ ಪ್ರಕಟಿಸಿತು. ಧಾಟಿ "ಅನಂತಮೂರ್ತಿ ಬಾಯಿ ಮುಚ್ಚಿಕೊಂಡಿರಬೇಕು" ಎನ್ನುವುದೇ ಆಗಿತ್ತು. ಮೊನ್ನೆ ಮೊನ್ನೆ ಗೌರಿಲಂಕೇಶ್ ಮತ್ತು ಕಲ್ಕುಳಿ ವಿಠ್ಠಲ ಹೆಗ್ಡೆ ಮಾತನಾಡದಂತೆ ಸಾಹಿತ್ಯ ಸಮ್ಮೇಳನದ ಎದುರು ನಡೆದ ವಿದ್ಯಮಾನ ಎಲ್ಲರಿಗೂ ಗೊತ್ತು. "ವಿಕ್ರಾಂತ ಕರ್ನಾಟಕ" ದ ಸಂಪಾದಕ ಬಳಗ ಬದಲಾದ ಬಗ್ಗೆ, ಅಲ್ಲಿಗೆ ಲಂಕೇಶರ ಒಡನಾಡಿಯಾಗಿದ್ದ ರವೀಂದ್ರ ರೇಶ್ಮೆ ಬಂದಿರುವ ಬಗ್ಗೆ, ಅವರ ಜೊತೆಗೇ ಅನಂತಮೂರ್ತಿ, ಜಿ.ಕೆ.ಗೋವಿಂದರಾವ್ ಮುಂತಾದ ಬುದ್ಧಿಜೀವಿಗಳು ಕಾಣಿಸಿಕೊಳ್ಳಬಹುದಾದ ಬಗ್ಗೆ "ಎಚ್ಚರಿಸು"ವಂಥ ಪತ್ರವೊಂದು ಬಂದಿದೆ. ಬೇಕಿದ್ದರೆ ಬೇರೆ ಓದುಗರನ್ನು ಕೇಳಿ ನೋಡಿ ಎನ್ನುವ ಈ ನಮ್ಮ ನಿಮ್ಮೆಲ್ಲರ "ಪ್ರತಿನಿಧಿ" ಕರ್ನಾಟಕದ ಮೌನಿಗಳಿಗೆಲ್ಲ ಧ್ವನಿಯಾಗುವ ಹೊಣೆಹೊತ್ತಿದ್ದಾರೆ. ಪ್ರಜ್ಞಾವಂತರ ಮೌನ ಹೇಗೆ ಮಾತನಾಡುವ ರಿಸ್ಕ್ ತೆಗೆದುಕೊಂಡ ಕೆಲವರ ವಾಕ್ ಸ್ವಾತಂತ್ರ್ಯವನ್ನೇ ಕೊಚ್ಚಿಹಾಕಲು ಪ್ರೇರೇಪಿಸಿದೆ ಎನ್ನುವುದಕ್ಕೆ ಇದಕ್ಕಿಂತ ಹೆಚ್ಚಿನ ಸಾಕ್ಷಿ ಬೇಕಿಲ್ಲ.

ಇತ್ತೀಚೆಗೆ ಪತ್ರಿಕೆಯೊಂದು ಗಾಂಧಿಗೊಬ್ಬಳು ಪ್ರೇಯಸಿ ಇದ್ದಳು, ಸತ್ಯ ಸತ್ಯ ಎಂದು ಎಲ್ಲವನ್ನೂ ತೆರೆದಿಟ್ಟ ನಮ್ಮ ಗಾಂಧಿ ಕೂಡ ಕೆಲವನ್ನು ಹೇಳೇ ಇಲ್ಲ ನೋಡಿ, ಇದು ಈ ಸತ್ಯವಂತನ ಮುಖ ಎಂದು ಲೇವಡಿ ಮಾಡಿ ಏನನ್ನೋ ಸಾಧಿಸಿದಂತೆ ತನ್ನ ಬೆನ್ನನ್ನು ತಾನೇ ತಟ್ಟಿಕೊಂಡಿದ್ದನ್ನು ಕಂಡೆವು. ತಾಲೀಬಾನಿಗಳು ಬುದ್ಧನ ಪ್ರತಿಮೆಯನ್ನು ಒಡೆದು ಹುಡಿಹಾರಿಸಿದ ನೆನಪಿನ್ನೂ ಮಾಸಿಲ್ಲ. ಇಲ್ಲಿಯೂ ಗಾಂಧಿಯ ಪ್ರತಿಮೆಯನ್ನು ಒಡೆಯುವ ದಿನ ಬಂದೀತು ಎನಿಸುತ್ತದೆ.

ಆಗಲೂ ಮೌನ ತಬ್ಬುವುದೆ ನೆಲವ ಜುಮ್ಮನೆ? ಧಾರಿಣಿ ಪುಳಕಗೊಳ್ಳುವಳೆ, ಗಾಂಧಿಯ ಸ್ಪರ್ಶಕ್ಕೆ?

Rating
Average: 3.3 (3 votes)

Comments