ಕವಲ್ ದಾರಿ

ಕವಲ್ ದಾರಿ

ನಾನ್ ಹಟ್ಟಿ ಬುಟ್ಟಿ ಏಷ್ಟ್ ವರ್ಸ ಆಯ್ತು ಅಂತ್ ನಂಗೇ ಜ್ಞಾಪ್ಕ ಇಲ್ಲ. ಮೊದ್ಲಿಗೆ ಒಟ್ಟೆ ಪಾಡು, ಆಮೇಲೆ ಹಿಂತಿರುಗಕ್ಕೆ ಏನೋ ಮುಜುಗ್ರ. ನನ್ನ್ ವೇಸ, ಭಾಸೆ, ಆಡು-ಪಾಡು ಎಲ್ಲಾ ಬದಲಾಗದೆ. ಶುರೂಲಿ ತಿಂಗ್ಳಿಗ್ ಒಂದ್ಸಾರಿ ಹೋಗ್ತಿದ್ದೆ. ಓದಾಗ ಏನೇನೋ - ಬಟ್ಟೆ, ಆಟಸಾಮಾನು, ತಿಂಡಿ, ಪಾತ್ರೆ ಎಲ್ಲಾ ಕೊಂಡ್ಕೊಂಡು ಹೋಗಿ ಕೊಡ್ತಿದ್ದೆ. ಅವ್ರಿಗೆ ಖುಷಿಯಾಗೋದು. ಮೈ ಸವ್ರಿ ಏಂಗಾಗ್ಬುಟ್ಟ ಅನ್ನೋವ್ರು. ಆದ್ರೆ ಈಗೀಗ ವರ್ಷಕ್ಕೊಂದ್ಸಾರಿ ಹೋದ್ರು "ಬಂದ್ಯಾ ಬಾ. ಚೆಂದಾಕ್ಕಿದ್ಯ? ಕೆಲ್ಸ ಎಂಗದೆ?" ಅಂತ ಕೇಳಿ ತಮ್ಮ ಪಾಡ್ಗೆ ತಾವು ಓಯ್ತಾರೆ. ಏನಾದ್ರು ತೊಗೊಂಡ್ ಹೋದ್ರೆ, ಒಂದ್ಸಾರಿ ಕಣ್ ಹಾಯ್ಸಿ ಅಲ್ಲೇ ಇಡ್ತಾರೆ. ಮನ್ಸಿಗ್ ಯಾಕೋ ಬೋ ಬೇಸರ ಆಗತ್ತೆ.

ಹಂಗಂತ ಹಟ್ಟಿಗ್ ಹೋಗೋದು, ಬಿಡಕ್ ಆಯ್ತದ? ಯೋಳಿ! ಹಂಗೇ ಯೋಚ್ಸ್ಕೊಂಡ್ ಹೋದೆ ಹಟ್ಟಿ ಕಡೆ ಈ ಬಾರಿನು. ಈ ಸಾರಿ, ಎರಡ್ ವರ್ಷ ಆಮೇಲೆ ಹೋಯ್ತಿರೋದು ಹಟ್ಟಿಗೆ. ಎಂಗೆಂಗಾಗೈತೋ, ಎಂಗೆಂಗವ್ರೋ ವಸಿ ನೋಡಾಣ ಅಂತ ಹೊರಟೆ. ನಮ್ ಪಟ್ಟಣದಾಗೆ ಒಂದ್ ಬಸ್ ಹಿಡ್ಕಂಡ್ ಹೋದ್ರೆ ನಮ್ ಕಾಡಿನ್ತವ ಇರೋ ಒಂದ್ ಹಳ್ಳಿಗ್ ತಂದ್ ನಿಲ್ಸ್ತಾನೆ. ಅಲ್ಲಿಂದ ಬೋ ದೂರ ನಡ್ಕಂಡ್ ಹೋಗ್ಬೇಕು. ಅರ್ಧ ದಿನಾನೆ ಬೇಕು ನಡ್ಯಾಕ್ಕೆ. ಒಬ್ಬನೇ ಬೇರೆ. ಅಭ್ಯಾಸ ಬೇರೆ ತಪ್ಪಿ ಹೋಗದೆ. ಉಸ್ಸಪ್ಪ ಅನ್ಕೋಂಡ್ ಹೋಗ್ಬೇಕಲ್ಲಪ್ಪ ಅಂತ ಯೋಚ್ಸ್ಕೊಂಡು ಬಸ್ ಹತ್ದೆ. ಒಂದೆರಡ್ ಗಂಟೆ ಕಳೀತು. ಒಳ್ಳೆ ನಿದ್ದೆ ಮಾಡಿದ್ದೆ. ಕಂಡಕ್ಟ್ರಪ್ಪಾ ನನ್ ಮುಖ್ದಾಗೆ ಸೀಟಿ ಊದಿ ಎಬ್ರಸ್ದ. "ನಿನ್ ಹಳ್ಳಿ ಬಂದೈತೆ ಇಳ್ಕಳಣ್ಣೌ" ಅಂದ. ನಾನು ನನ್ ಗಂಟು, ಮೂಟೆನೆಲ್ಲಾ ಹಿಡ್ದು ಇಳ್ದೆ. ನಾನು ಇಳ್ದ್ ತಕ್ಷಣ ಬಸ್ನವ ಮುಂದಕ್ ಹೊಂಟ್ಬಿಟ್ಟ.

"ಮುಂದಕ್ಕೆ? ಇದು ಹೆಂಗೆ ಅಂತ? ಮುಂದಕ್ಕೆ ಬರೀ ಕಾಡ್ದಾರಿ ಅಲ್ವ? ಅಲ್ಲಿ ಬಸ್ ಎಂಗ್ ಬುಡ್ತಾನವ?" ಅಂತ ನಾನ್ ಬಾಯ್ಬಾಯ್ ಬಿಟ್ಕೊಂಡ್ ನೋಡ್ಬೇಕಾದ್ರೆ ನನ್ ಮೂತಿ ನೋಡಿ, ಅದೇ ಹಳ್ಳಿಯವ್ನಾದ ಅನುಮ್ಯ ಕೂಗ್ದ.
"ಏನ್ಲಾ ಹಂಗ್ ಬಾಯ್ ತೆಕ್ಕೋಂಡ್ ನೋಡ್ತಿದ್ದಿ? ಮೊದ್ಲು ಮುಚ್ಚು. ಸೊಳ್ಳೆ ಗಿಳ್ಳೆ ಹೋಗ್ಬುಟ್ಟಾತು!!" ಅಂದ. ನಾನು, "ಅಲ್ಲ, ಅನುಮ್ಯ! ಈ ಬಸ್ನವ ಕಾಡ್ನಾಗ್ ಯಾಕ್ಲಾ ಓಗ್ತಾವ್ನೆ? ಅವ್ನಿಗೆ ಏನ್ ತಲೆಗಿಲೆ ಕೆಟ್ಟೈತೋ ಏನು?" ಅಂದೆ. ಅದಕ್ಕವ "ಅಯ್ಯೋ ನಿನ್ನ! ಯಾಕೋ? ನಿಂಗೆ ಗೊತ್ತಿಲ್ಲ್ವ ಕಾಡೊಳಾಕ್ ರಸ್ತೆ ಮಾಡಿದ್ದು? ನಿಮ್ ಹಟ್ಟಿ ತನ್ಕಾನು ಓಯ್ತಾನಲ್ಲೋ ಬಸ್ಸು! ಇಲ್ಯಾಕ್ ಇಳ್ಕೊಂಡೆ?" ಅಂದ. "ಅಯ್ಯೋ! ಹೌದೇನೋ, ಆ ಕಂಡಕ್ಟ್ರಪ್ಪಾ ಯೋಳ್ಲೆ ಇಲ್ಲ ನಂಗೆ!! ಯಾವಾಗಿಂದಾನೋ ಈ ರಸ್ತೆ ಆಗಿರೋದು?" ಅಂತ ಕೇಳ್ದೆ. ಅವ, "ಅಯ್ತು ಓಂದ್ ವರ್ಸ. ಓದ್ ಸಾರಿ ಹಳ್ಳಿ ಜಾತ್ರೆ ಹೊತ್ಗೆ ಆಗ್ ಹೋಗಿತ್ತಲ್ಲೋ!!" ಅಂದ.

ಸರಿ, ಇನ್ನು ಅವ್ನ್ ಜೊತೆ ಮಾತಾಡ್ತಿದ್ರೆ ಇನ್ನೇನು ಆಶ್ಚರ್ಯ ತಪ್ಪೋಯ್ತದೋ ಅಂತ ನಡ್ಕೊಂಡ್ ಹೊರ್ಟೆ ಕಾಡೊಳಕ್ಕೆ, ನಮ್ ಹಟ್ಟಿಗೆ.

Rating
No votes yet

Comments