ಕಾಡತಾವ ನೆನಪು....

ಕಾಡತಾವ ನೆನಪು....

ನೆನ್ನೆ ಸಂಜೆ ಯಾಕೋ ಮನಸು ಸರಿ ಇರ್ಲಿಲ್ಲ. ಒಂಟಿತನ ತುಂಬಾ ಕಾಡ್ತಿತ್ತು. ಅಮ್ಮನ ಮಡಿಲಲ್ಲಿ ತಲೆ ಇಟ್ಟು ಜೋರಾಗಿ ಒಂದುಸಲ ಅಳಬೇಕು ಅನ್ನಿಸ್ತಿತ್ತು. ಆದ್ರೆ ಆಮೇಲೆ ಅಮ್ಮನ ಪ್ರಶ್ನೆಗಳಿಗೆ ನನ್ನ ಹತ್ರ ಉತ್ರ ಇಲ್ಲ ಅಂದುಕೊಂಡು ಸುಮ್ನಾದೆ.. ಏನ್ಮಾಡ್ಲಿ ಅಂತ ಗೊತ್ತಾಗ್ಲಿಲ್ಲ...

ದೈಹಿಕ ಚಟುವಟಿಕೆ ಮನಸ್ಸಿನ ನೋವಿಗೆ ಮದ್ದು ಅಂತ ನೆನಪಾಯ್ತು.. ಇನ್ನೇನೂ ಮಾಡಕ್ಕೆ ತೋಚ್ದೆ ನನ್ನ ರೂಂ ಕ್ಲೀನ್ ಮಾಡಣ ಅಂತ ಬಂದೆ.. ಒಂದೊಂದೇ ಶೆಲ್ಫ್ ಕ್ಲೀನ್ ಮಾಡ್ತಿದ್ರೆ ನನ್ನ ಹಳೆ ಹಡಪಗಳೆಲ್ಲ ಒಂದೊಂದಾಗಿ ಸಿಕ್ಕಿದ್ವು... ಎಲ್ಲ ಹರಡಿಕೊಂಡು ಕೂತವಳಿಗೆ ಸಮಯ ಸರಿದಿದ್ದೇ ಗೊತ್ತಾಗ್ಲಿಲ್ಲ...

ಹೈಸ್ಕೂಲ್ ನಲ್ಲಿ ಬರೆದಿದ್ದ ಪ್ರಬಂಧ ಪುಸ್ತಕ ಸಿಕ್ತು.. ಅದ್ರಲ್ಲಿ ನಮ್ ಕನ್ನಡ ಮಿಸ್ಸು "ನೀನು ಮಾತ್ರ ಗುಂಡುಮಣಿ ತರ ಇದ್ದೀಯಾ ನಿನ್ನ ಅಕ್ಷರಗಳು ನಿನ್ನ ಅಕ್ಷರಗಳು ನಿನ್ನ ತರನೇ ಇರ್ಲಿ " ಅಂತ ಶರಾ ಬರೆದಿದ್ರು.. ಅದನ್ನ ನೋಡಿ ಆ ದಿನಗಳ ನೆನಪಿಗೆ ಜಾರುತ್ತಿದ್ದಂತೆ ಕೈಗೆ ಸಿಕ್ಕಿದ್ದು ಸ್ಲಾಮ್ ಬುಕ್ಕುಗಳು.. ಸವಿ ನೆನಪಿನ ಅಕ್ಷಯ ಪಾತ್ರೆಗಳು ಅವು..
ಏಳನೇ ಕ್ಲಾಸ್ ಸೆಂಡ್ ಆಫ್ ಆದನಂತರ ಬರೆಸಿಕೊಂಡಿದ್ದು.. ಎಂಟನೇ ತರಗತಿಯಲ್ಲಿ ನಾನು ಶಾಲೆ ಬದಲಾಯಿಸಿದಾಗ ಗೆಳತಿಯರು ಬರೆದುಕೊಟ್ಟಿದ್ದು ... ನಮಗಿಂತ ಸೀನಿಯರ್ಸ್ ಕೊಟ್ಟಿದ್ದು.. ಹತ್ತನೇ ತರಗತಿಯಲ್ಲಿ ಇನ್ನೊಂದು ಶಾಲೆಯ ಗೆಳತಿಯರು ಕೊಟ್ಟಿದ್ದು.. ಎರಡನೇ ಪಿ ಯು ಸಿ ನಲ್ಲಿ ಟ್ಯೂಷನ್ ಫ್ರೆಂಡ್ಸ್, ಕಾಲೇಜ್ ಫ್ರೆಂಡ್ಸ್ ಬರೆದಿದ್ದು....
ಅಬ್ಬಬ್ಬಾ ಎಷ್ಟೊಂದು ಪುಸ್ತಕಗಳು. ಒಂದೊಂದು ಪುಸ್ತಕ, ಅದರ ಒಂದೊಂದು ಪುಟ ತೆರೆಯುತ್ತಿದ್ದಂತೆ ಆ ದಿನಗಳ ನೆನಪಲ್ಲಿ ಮುಳುಗೇಳುತ್ತಿದ್ದೆ...
"ಚರಂಡಿಯಲ್ಲಿ ಬಿದ್ರೂ ಚಿರಂಜೀವಿಯಾಗು" ಎಂಬ ಹಾರೈಕೆ
" ಮದುವೆಗೆ ಕರಿಯದಿದ್ರು ಮಗುವಿನ ನಾಮಕರಣಕ್ಕೆ ಕರಿತೀನಿ " ಅನ್ನೋ ಭರವಸೆ..

ಒಂದಾ ಎರಡಾ

ಒಂಟಿತನ ಎಲ್ಲಿ ಓಡಿ ಹೋಯ್ತು ಗೊತ್ತಿಲ್ಲ...

ಈಗ ಆ ಗೆಳತಿಯರಲ್ಲಿ ಬಹಳಷ್ಟು ಮಂದಿ ಸಂಪರ್ಕದಲ್ಲಿಲ್ಲ..
ಯಾರ್ಯಾರು ಎಲ್ಲಿದ್ದಾರೋ ಗೊತ್ತಿಲ್ಲ...
ಆದ್ರೆ ಅವರ ನೆನಪು ಸದಾ ಈ ಮೂಲಕ ಹಸಿಯಾಗಿರುತ್ತೆ ಅಲ್ವ??

ಈ ನೆನಪುಗಳು ತೀರಾ ವಿಚಿತ್ರ
ಒಟ್ಟಾಗಿ ಕೂತು ಅತ್ತ ನೆನಪುಗಳು ನಗು ತರಿಸಿದರೆ
ಒಟ್ಟಾಗಿ ನಕ್ಕ ನೆನಪುಗಳು ಕಣ್ಣಲ್ಲಿ ನೀರು ತರಿಸುತ್ತವೆ..

ನನ್ನಿ
ದೃಶ್ಯ ಪ್ರದೀಪ :)

Rating
No votes yet

Comments