ಕೊನೇ ಸಾಲಿನ ಕಮಂಗಿಗಳು
ಟೀಚರ್ ಬೋರ್ಡ್‍ಕಡೆಗೆ ಮುಖ ಮಾಡಿ ಏನೋ ಬರೀಬೇಕು ಅಂತ ಯೋಚನೆ ಮಾಡ್ತಾ ಇದ್ರೆ. ಆಗ್ಲೇ ಇಲ್ಲಿ ನಮ್ ತಲೇಲಿ ಬೇರೆ ಯೋಚನೆಗಳು ಬರ್ತಾ ಇದ್ವು. ಯಾರ ಊಟದ ಡಬ್ಬಿಯಲ್ಲಿ ಏನಿರಬಹುದು ಅನ್ನೋ ಲೆಕ್ಕಾಚಾರ. ಟೀಚರ್ ಆ ಕಡೆಗೆ ತಿರುಗಿದ ತಕ್ಷಣ ನಮ್ ಕೈಗಳು ಡಬ್ಬಿ ಅರಸುತ್ತ ಹೋಗ್ತಿದ್ವು. ಬರೀ ಶೇಕ್ ಅಂಡ್ ವೇಟ್‍ನಲ್ಲೇ ಆ ಡಬ್ಬಿಯಲ್ಲಿ ಎನ್ ಐಟಂ ಇದೆ ಅಂತ ಗ್ರಹಿಸುವ ಶಕ್ತಿ ಇತ್ತು. ಹಾಗೆ ಮಾಡಿ ಒಂದೆರಡು ಡಬ್ಬಿಗಳನ್ನ ಡೆಸ್ಕ್ ಕೆಳಗಡೆಗೆ ಜೋಡಿಸಿ ಅದರ ಮುಚ್ಚಳ ತೆಗೆಯೊಷ್ಟರಲ್ಲಿ ಟೀಚರ್ ನಮ್ ಕಡೆಗೆ ತಿರುಗಿದ್ರು. ನಮಗೆ ಆವಾಗ ಬಹಳ ಗ್ರಹಣ ಶಕ್ತಿ. ಟೀಚರ್‍ನ ಮೂಮೆಂಟ್ಸ್ ಅಲ್ಲೆ ನಮಗೆ ಅರ್ಥ ಆಗ್ತಿತ್ತು ಟೀಚರ್ ಈಗ ತಿರುಗುತ್ತಾರೋ ಇಲ್ವೋ ಅಂತ. ಹೀಗೆ ಒಳ್ಳೆ ಡಬ್ಬಿಗಳನ್ನ ಕಾಲಿ ಮಾಡೋ ಖಯಾಲಿಯಲ್ಲೇ ದಿನಾ ಇರ್ತಿದ್ವಿ.
ನಿಮಗೆಲ್ಲಾ ಒಂದು ದಿನದ ಕಥೆ ಹೇಳಬೇಕು.ನಮ್ಮ ಒಬ್ಬ ಫ್ರೆಂಡ್, ಅವನು ಸ್ವಲ್ಪ ಕುಳ್ಳ ಹಾಗಾಗಿ ಅವನು ಮೊದಲ ಬೆಂಚಿನ ವಿದ್ಯಾರ್ಥಿ. ಅವನು ಒಂದು ಸಲ ನಮ್ ಜೊತೆಗೆ ಲಾಸ್ಟ್ ಬೆಂಚ್‍ಗೆ ಬಂದ. ಅವಾಗ್ಲೇ ನಮಗೆಲ್ಲಾ ಡೌಟ್ ಬಂತು ಇವನು ಏನೊ ಮಾಡ್ತಾನೆ ಅಂತ. ಆದ್ರೆ ನಮ್ಮ ಬೆಳಗಿನ ಉಪಾಹಾರ ಎಲ್ಲಾ ಚೆನ್ನಾಗಾಯ್ತು. ಸಾಯಂಕಾಲ ಸ್ನಾಕ್ಸ್ ಟೈಂ ಆಗಿತ್ತು. ಯಾವ ಡಬ್ಬಿಯಲ್ಲೂ ಏನೂ ಇರಲಿಲ್ಲ. ದೇವರಿಗೆ ನಮ್ಮ ಕರೆ ಕೇಳಿಸಿರಬೇಕು, ನಮ್ ಮುಂದಿನ ಬೆಂಚಿನ ಹುಡುಗ ನಮಗೆಲ್ಲಾ ಚಕ್ಕುಲಿ ಕೊಟ್ಟ. ಅದು ಈ ಕುಳ್ಳನ ಕೈಯಲ್ಲೇ ಕೊಟ್ಟಿದ್ದು ಅವನು. ಡೆಸ್ಕ್ ಕೆಳಗೆ ಇಟ್ಕೊಂಡು ತಿನ್ನೊ ಪ್ರೋಗ್ರಾಂ ನಮ್ದಿತ್ತು. ನಮಗೆ ಟೀಚರ್ ತಿರುಗೋ ಟೈಂ ಗೊತ್ತಿದೆ,ಇದರಲ್ಲಿ ನಾವೆಲ್ಲಾ ಹಳೇ ಹುಲಿಗಳು. ತಿಂದು ಹಾಗೆ ಮುಖ ಒರೆಸಿಕೊಂಡು ಸುಮ್ಮನೆ ಕುಳಿತಿದ್ವಿ. ಈ ಕುಳ್ಳನಿಗೆ ಆ ಕಲೆ ಇನ್ನೂ ಕರಗತ ಆಗಿರಲಿಲ್ಲ . ಈತ ಇನ್ನು ತಿನ್ತಾ ಇದ್ದ. ನಾನು ಹೇಳೊಷ್ಟರಲ್ಲಿ ಟೀಚರ್ ನಮ್ಮನ್ನ ನೋಡಿಯೇ ಬಿಟ್ಟರು. ಆತನ ಬಾಯಲ್ಲಿ ಚಕ್ಕುಲಿಯ ಅರೆತ ಮಿಸ್‍ಗೆ ಗೊತ್ತಾಯ್ತು. ನನ್ ಕಡೆಗೆ ನೋಡಿದಾಗ ಅದು ಇರಲಿಲ್ಲ. ನಾನು ಸುಮ್ನೆ ಕುಂತಿದ್ದೆ. ಟೀಚರ್ "ಏ ಹುಡುಗ ಏನು ತಿನ್ತಾ ಇದಿಯಾ" ಅಂದ್ರು. ಏನೂ ಇಲ್ಲಾ ಟೀಚರ್ ಅಂತ ಫುಲ್ ಹೆದರಿಕೆಯಿಂದ ಹೇಳ್ದ. ನಮಗೆಲ್ಲಾ ಭಯ, ಈತ ನಮ್ ಹೆಸರು ಹೇಳಿಬಿಟ್ರೆ ಅಂತ. ಅದಕ್ಕೆ ಟೀಚರ್ ಏನೂ ಹೆದರಬೇಡ, ನನಗೂ ಚಕ್ಕುಲಿ ತಿನ್ನೋ ಹಾಗೆ ಆಗಿದೆ, ನನಗೂ ಕೊಡು ಅಂದ್ರು. ಈತ ಸೀದಾ ಎದ್ದು ಹೋಗಿ ಅವರ ಮುಂದೆ ಡಬ್ಬಿ ಹಿಡಿದ. ಅವರೂ ಎರಡು ಚಕ್ಕುಲಿ ತಿಂದು, ಎಲ್ಲರಿಗೂ ಹೀಗೆ ಹಂಚಿ ತಿನ್ನಬೇಕು ಅಂತ ಹೇಳಿದ್ರು. ಆಮೇಲೆ ನಿನ್ ಜೊತೆ ಮತ್ಯ್ತಾರಾದ್ರು ತಿನ್ತಾ ಇದ್ರಾ ಅಂತ ಕೇಳಿದ್ದಕ್ಕೆ ಈತ ಎಲ್ಲರ ಹೆಸರೂ ಹೇಳಿ ಬಿಟ್ಟ ಭೂಪ. ಅಷ್ಟಕ್ಕೇ ಸುಮ್ನೆ ಆಗಿದ್ದ ಅಂದ್ರೆ ಏನೂ ಪ್ರಾಬ್ಲಂ ಇರಲಿಲ್ಲ."ಇಲ್ಲ ಮಿಸ್ಸ್ ನಾನು ಇವತ್ತೇ ಹಿಂದೆ ಹೋಗಿದ್ದು, ಇವ್ರು ದಿನಾ ಹಾಗೆ ಮಾಡ್ತಾರೆ"ಅಂದ. ಅವಾಗ ನಮ್ ಕ್ಲಾಸಲ್ಲಿ ಇದ್ದ ನಮ್ಮ ವೈರಿಗಳಿಗೆ ಇದೇ ಬೇಕಿತ್ತಲ್ಲ...ಅವರೂ ಹೌದು ಮಿಸ್ ಇವ್ರೆಲ್ಲಾ ನಮ್ ಡಬ್ಬಿನ ಖಾಲಿ ಮಾಡ್ತಾರೆ. ಮದ್ಯಾಹ್ನಕ್ಕೆ ನಮಗೆ ಊಟ ಇರಲ್ಲ ಅಂದ್ರು. ಅವಾಗ ಸಿಟ್ಟು ನೆತ್ತಿಗೆ ಏರಿದ್ದ ನನ್ ಪಕ್ಕದ ಹುಡುಗ, ಇಲ್ಲಾ ಮಿಸ್ ನಾವು ಅವನ ಡಬ್ಬಿನೇ ತಿಂದಿಲ್ಲ ಇಷ್ಟು ದಿನ, ಅಂತ ಡಿಫೆಂಡ್ ಮಾಡ್ಕೊಳ್ಳೊಕೆ ಹೋಗಿ, ನನಗೆ ಕೇಳ್ದಾ "ಯಾವತ್ತಾದ್ರು ಅವನ ಡಬ್ಬಿ ತಿಂದಿವೆನ್ಲೇ"?ಒಳ್ಳೆ ಬರೀ ಪುಳಿಯೊಗರೆ. ಮೊಸರನ್ನ ತರ್ತಾನೆ. ಅವನ್ದು ಯಾಕೆ ತಿನ್ನೋಣ ಅಂತ ಹೇಳ್ದ.ಇಷ್ಟೆಲ್ಲಾ ಕೇಳಿಸ್ಕೊಂಡ ಮೇಲೆ ಮಿಸ್‍ಗೆ ಸಿಟ್ಟು ಬರ್ದೇ ಇರೋಕೆ ಸಾಧ್ಯನೇ ಇರಲಿಲ್ಲ. ಇತ್ತು ನೋಡಿ ಅವಾಗ ಮಾರಿ ಹಬ್ಬ. ಹೆಡ್ಮಿಸ್ಟ್ರೆಸ್ಸ್ ಹತ್ರ ಕರ್ಕೊಂಡು ಹೋಗಿ ಎಲ್ರಿಗೂ ಸರಿಯಾಗಿ ಬೈಸಿ, ಆಮೇಲೆ ಕೈಗಳಿಗೆ, ಕುಂಡಿಗೆ ಬಿದಿರಿನ ಕೋಲಿಂದ ಒದೆ ಕೊಟ್ಟು,ಎರಡು ದಿನ ಅವರ ಪಿರಿಯಡ್‍ಗಳಲ್ಲಿ Kneel down ಮಾಡಿಸಿದ್ರು. ಅದು ಆದ್ಮೇಲೆ ನಾವೇನು ಸೀದಾ ಆಗ್ಲಿಲ್ಲ.ಮತ್ತೆ ಒಂದು ತಿಂಗಳು ಬಿಟ್ಟು ಅದೇ ರಾಗ ಅದೇ ಹಾಡು. ಆದ್ರೆ ಇಲ್ಲಿ ಸ್ವಲ್ಪ ಚೇಂಜ್ ಮಾಡಿದ್ವಿ ನಮ್ stratergy ನ. ನಮ್ಮನ್ನ ಹೊರತು ಆ ಬೆಂಚಿಗೆ ಬೇರೆಯವರ ಪ್ರವೇಶ ನಿಶಿದ್ಧ. Compalint ಮಾಡಿದ್ದ ಟೀಚರ್ ಕ್ಲಾಸ್ಸಲ್ಲಿ ಮಾಡೋ ಹಾಗಿಲ್ಲ.
ಹೀಗೆ ನಡೆದಿತ್ತು ಕೊನೇ ಸಾಲಿನ ಕಮಂಗಿಗಳ ಕಾರುಬಾರು...
ಇದೆಲ್ಲಾ ನೆನಪಾಗಿದ್ದು ಯಾಕೆ ಅಂದ್ರೆ,ಅವತ್ತು ಕಥೆ ಮಾಡಿದ್ದ ಆ ಫ್ರೆಂಡ್‍ನ ರಿಕ್ವೆಸ್ಟ್ ಫೇಸ್‍ಬುಕ್‍ನಲ್ಲಿ ಬಂದಿತ್ತು.