ಕೋಲುಬೆಲ್ಲ

ಕೋಲುಬೆಲ್ಲ

ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಇವತ್ತು ಒಂದು ಸುದ್ಧಿ ಓದಿದೆ. ಕಂಪ್ಲಿ ಶಾಸಕ ಸುರೇಶ್ ಬಾಬು ಮದುವೆ ವೈಭವ. ಎರಡು ಎಕರೆ ಪ್ರದೇಶದಲ್ಲಿ ಮದುವೆ ಚಪ್ಪರ. ಅದಕ್ಕೆ ಹವಾನಿಯಂತ್ರಣ ಸೌಲಭ್ಯ. ಅದಕ್ಕಾಗಿ ಇಪ್ಪತ್ತು ಜನರೇಟರ್, ನಾಲ್ಕು ಹೆಲಿಕ್ಯಾಪ್ಟರ್, ಬಳ್ಳಾರಿಯ ಬಹುತೇಕ ವಸತಿ ಗೃಹಗಳು ಮದುವೆಗೆ ಬಂದ ಅತಿಥಿಗಳಿಗಾಗಿ ಮೀಸಲು.ಸುಮಾರು ಆರು ಕೋಟಿ ರೂಪಾಯಿ ಖರ್ಚು. ರಾಜ್ಯಸರ್ಕಾರದ ಸಚಿವರ ದಂಡು.ಇಷ್ಟು ಸುದ್ಧಿ ಅಷ್ಟೆ.ಅದರ ವಿಮರ್ಶೆ ನಿಮಗೆ ಬಿಟ್ಟಿದ್ದು.

-------------------------------------------------------------

ನಾನು ಇವತ್ತು ಬರೀಬೇಕೂ ಅಂತಾ ಅಂದುಕೊಂಡಿದ್ದನ್ನು ಸರಿಯಾಗಿ ಬರೀತೀನೋ ಇಲ್ವೋ ಗೊತ್ತಿಲ್ಲ.ಕಾರಣಶಾಸಕರ ಮದುವೇ ಸುದ್ಧಿ ನನ್ ತಲೆಯನ್ನು ಆಕ್ರಮಿಸಿಕೊಂಡು ಬಿಟ್ಟಿದೆ. ಇರ್ಲಿ ವಿಚಾರಕ್ಕೆ ಬರ್ತೀನಿ."ಮುತ್ತುರತ್ನ ಗಳನು ಬಳ್ಳದಿಂದ ಅಳೆದು ಮಾರಿದಾ" ಅಂತಾ ಪ್ರೈಮರಿಶಾಲೆಯಲ್ಲಿ ಕನ್ನಡ ಪುಸ್ತಕದಲ್ಲೊಂದು ಪದ್ಯ ಓದಿದ್ದೆ.ಆಗ ನಮ್ಮ ವಿಜಯನಗರ ಸಾಮ್ರಾಜ್ಯದ ವೈಭವವನ್ನು ಬಣ್ಣಿಸುತ್ತಾ " ಎಂತಾ ನಾಡಿನಲ್ಲಿ ಹುಟ್ಟಿದ್ದೀವಿ  ನಾವು! ನಾವೇ ಪುಣ್ಯವಂತರು"  ಅಂತಾ ನಮ್ ಮೇಸ್ಟ್ರು ಹೆಮ್ಮೆಇಂದ ಹೇಳ್ತಾ ಇದ್ರೆ ನಮಗೂ ಸಂತೋಷ ಆಗ್ತ ಇತ್ತು.
ಅದೇ ಕಾಲದಲ್ಲಿ ನಮ್ಮೂರಲ್ಲಿ ಮುತ್ತುರತ್ನಗಳಿರದಿದ್ದರೂ ನಮ್ಮೂರ ಜನರೇ ಮುತ್ತುರತ್ನಗಳಾಗಿದ್ದರು. ಹೇಗೆ ಅಂತೀರಾ?..ಮುಂದೆ ಓದಿ..
ನಾನು ಪ್ರೈಮರಿ ಶಾಲೆಯಲ್ಲಿ ಓದುತ್ತಿರುವಾಗ, ಆ ಕಾಲದಲ್ಲಿ ಹಸು-ಎಮ್ಮೆ ಸಾಕಿದ್ದ ರೈತರು ಹಾಲು ಕರೆದು ,ಹೆಪ್ಪು ಹಾಕಿ, ಮೊಸರು ಕಡೆದು ಬೆಣ್ಣೆ ಮಾಡುವಾಗ ,ಬಂದ ಮಜ್ಜಿಗೆಯನ್ನು ಊರಲ್ಲಿದ್ದ ಬಡ ಬ್ರಾಹ್ಮಣರಿಗೆ ಪುಕ್ಕಟೆ ಹಂಚುತ್ತಿದ್ದರು. ಮಾಯಮ್ಮನ ಮನೆಗೆ ನಿತ್ಯವೂ ನಾನು ಹೋಗಿ " ಇವತ್ತು ಮೊಸರು ಕಡೆದಿದ್ದೀರಾ? ಅಂತಾ ಕೇಳಿ ಮಜ್ಜಿಗೆ ಇಸ್ಕೊಂಡ್ ಬರ್ತಿದ್ದೆ. ಕಣಗಾಲದಲ್ಲಿ ಯಾರ ಕಣಕ್ಕೆ ಹೋದರೂ ಐನೋರು ಬಂದವ್ರೆ ಒಂದು ಹೊರೆ ಹುಲ್ಲು ಕೊಡೋ ಮಗ ಅಂತಾ ಯಜಮಾನ ಹೇಳಿದ್ರೆ ನನ್ನ ಕೈಲಿ ಹೊರಲಾರದಷ್ಟು ಹುಲ್ಲನ್ನು ಕಟ್ಟಿ ಹೊರೆಸಿ ಕಳಿಸುತ್ತಿದ್ದರು. ಇನ್ನು ಆಲೆಮನೆ ಕಟ್ಟಿದಾಗ ನಮ್ಮಪ್ಪ ಅಲ್ಲಿ ಒಂದುಗೂಡುಮಾಡಿ ಗಣಪತಿ ಇಟ್ಟು ನಿತ್ಯ ಪೂಜೆಮಾಡಿ[ನಮ್ಮಪ್ಪನಿಗೆ ಮಂತ್ರವೇ ಬರುತ್ತಿರಲಿಲ್ಲ. ಅವನೂ ಒಬ್ಬ ರೈತ, ಒಂದು ಚೊಂಬು ನೀರು ತಗೊಂಡು ಹೋಗಿ ಅಲ್ಲಿ ಪ್ರೋಕ್ಷಣೆ ಮಾಡಿ ಊದುಗಡ್ಡಿ ಹಚ್ಚಿ ಕರ್ಪೂರದಲ್ಲಿ ಮಂಗಳಾರತಿ ಮಾಡಿದರೆ ಪೂಜೆ ಆಗ್ತಾಇತ್ತು ಅಂತಾನೆನಪು. ಆಲೆ ಮನೆಯವರು ನೈವೇದ್ಯಕ್ಕೆ ಒಂದು ಉಂಡೆ ಬೆಲ್ಲವನ್ನೇ ಇಡ್ತಾ ಇದ್ದರು.ನಾವೆಲ್ಲಾ ಆಲೆಮನೆಗೆ ಹೋದರೆ ಕುಡಿಯುವಷ್ಟು ಕಬ್ಬಿನಹಾಲು, ತಿನ್ನಲು ಕಬ್ಬು, ಕೋಲುಬೆಲ್ಲ, ಬಿಸಿಬಿಸಿಯಾಗಿ ಆಗತಾನೇ ತೆಗೆದಿದ್ದ ಬೆಲ್ಲ, ಎಲ್ಲಾ ಕೊಟ್ಟು ಕಳಿಸುತ್ತಿದ್ದ ಪುಣ್ಯಾತ್ಮರು ಅವರು. ಕೋಲು ಬೆಲ್ಲಾ ಅಂದ್ರೆ ಗೊತ್ತಾಗಲಿಲ್ಲವಾ? ಕೊಬ್ಬರಿಗೆಯಲ್ಲಿ ಕಬ್ಬಿನಹಾಲು ಕುದ್ದೂ ಕುದ್ದೂ ಇನ್ನೇನು ಪಾಕ ಬಂತೂ ಅಂತಾ ಘಮಘಮ ವಾಸನೆಯಿಂದ ಗೊತ್ತಾದಾಗ ಒಂದು ಕಬ್ಬಿನತುಂಡನ್ನು  ಪಾಕದಲ್ಲಿ ಅದ್ದಿ ಸುತ್ತಿದರೆ ಕೋಲುಬೆಲ್ಲಾ ರಡಿ. ಅದು ಆರಿದಮೇಲೆ ತಿನ್ನೋದೇ ಒಂದು ಮಜ[ ಮಜ ಎನ್ನುವ ಪದ ಅಷ್ಟೊಂದು ನನಗೆ ಒಪ್ಪಿಗೆಯಾಗದ ಪದ, ಆದರೆ ಸಧ್ಯಕ್ಕೆ ಅದಕ್ಕೆ ಪರ್ಯಾಯ ಹುಡುಕುವ ಗೋಜಿಗೆ ಹೋಗುಲ್ಲ] 

---------------------------------------------------------
ಇವತ್ತು ನಮ್ಮೂರು ಹೇಗಿದೆ ಅಂದ್ರೆ....
ಊರಲ್ಲಿ ನಿಜವಾದ ರೈತರೇ ಇಲ್ಲ.ಬೇಡುವ ಬಡ ಬ್ರಾಹ್ಮಣನೂ ಇಲ್ಲ.ಊರುಬಿಟ್ಟು ನಲವತ್ತು ವರ್ಷ ಆಗ್ತಾ ಬಂತು ಈಗ ನನ್ನ ಜೊತೆಗಾರರ ಮಕ್ಕಳು ಅವರ ಮಕ್ಕಳ ಕಾಲ. ನನಗೆ ಅವರುಗಳ ಪರಿಚಯವಾಗದಿದ್ದರೂ ಪಾಪ, ಅವರು ನನ್ನನ್ನು ಗುರುತಿಸುತ್ತಾರೆ.ಕಾರಣ ಆಗೊಮ್ಮೆ ಈಗೊಮ್ಮೆ ನಾನು ಊರಿಗೆ ಬರೋದನ್ನು ಅವರು ನೋಡಿದ್ರು. " ನಾಗಯ್ಯನೋರ ಮಗಾರಲ್ವಾ? ಚನ್ನಾಗಿದ್ದೀರಾ? ಮಕ್ಕಳೆಲ್ಲಾ ಚೆನ್ನಾಗಿ ಓದಿ ಇಂಜಿನಿಯರುಗಳಾಗಿದ್ದಾರಂತೆ, ಭಾರೀ ಸಂತೋಷ, ಅಂತಾರೆ."
ಆದರೆ ನೀವು ಏನ್ ಮಾಡ್ತಾ ಇದ್ದೀರಿ? ಅಂತಾ ಅವ್ರನ್ನು ನಾನು ಕೇಳಿದರೆ " ನಾನು ಕಂಟ್ರಾಕ್ಟ್ ಮಾಡಿಸ್ತಾ ಇದ್ದೀನಿ, ಅಂತಾಲೇ ಎಲ್ರೂ ಹೇಳೋದು, ಎಲ್ಲರ ಹತ್ರ ಮೋಟಾರ್ ಬೈಕ್ ಇದೆ. ಎಲ್ರೂ ಕಂಟ್ರಾಕ್ಟರೇ,ಕೂಲಿಮಾಡೋರು,ಹೊಲ ಉಳೋರು ಯಾರೂ ಇಲ್ಲ. ಎಷ್ಟೋ ಜಮೀನಿನ ಹತ್ತಿರ ಕ್ರಶರ್ ಗಳು ಜೆಲ್ಲಿ ಕುಟ್ಟುತ್ತಿರುತ್ತವೆ, ಇಟ್ಟಿಗೆ ಮಾಡೊ ಫ್ಯಾಕ್ಟರಿ, ಅಥವಾ ಊರು ತುಂಬಾ ಹೋಟೆಲ್ ಮತ್ತು ಅಂಗಡಿಗಳು, ಮೊಬೈಲ್ ಶಾಪ್ ಗಳು. ಜಮೀನೆಲ್ಲಾ ಕಾಡು ಗಿಡ ಬೆಳೆದು ನಿಂತಿವೆ. ಕೇಳಿದರೆ " ಕೂಲಿ ಸಿಗುವುದಿಲ್ಲ ಏನ್ ಮಾಡೋದು ಅಂತಾರೆ? ಯಾರ ಅಪ್ಪಂದಿರು ಮೈ ಮುರಿದು ಗೇಯುತ್ತಿದ್ದರೋ ಅವರ ಮಕ್ಕಳು ಮೊಮ್ಮೊಕ್ಕಳು ಈಗ ಊರಿನ ಬಸ್ ಸ್ಟಾಂಡ್ ಸರ್ಕಲ್ ನ ಕಟ್ಟೆ ಮೇಲೆ ಸದಾ ಕೂತಿರ್ತಾರೆ, ಏನಪ್ಪಾ ಮಾಡ್ತೀಯಾ, ಅಂದ್ರೆ ಕಂಟ್ರಾಕ್ಟ್ ಅಂತಾರೆ.
-----------------------------------------------------------------
ಇಂತಾ ನಮ್ಮೂರಿಗೆ ಹೋಗಿ ನಮ್ ಹಳ್ಳೀಜನರೊಡನೆ ಬದುಕುವ ಆಸೆ ಇನ್ನೂ ತಪ್ಪಿಲ್ಲ.

Rating
No votes yet

Comments