ಕ್ರೂಟ್ಸರ್ ಸೊನಾಟಾ: ಅಧ್ಯಾಯ ನಾಲ್ಕು
“ಹೌದು. ಉದಾತ್ತ ಪ್ರೇಮದ ಕನಸು ಕಾಣುತ್ತಾ, ಪ್ರೀತಿಯ ಹೆಸರು ಹೇಳಿಕೊಂಡು ಹತ್ತು ವರ್ಷ ಅಸಹ್ಯವಾಗಿ ಬದುಕಿದೆ. ನನ್ನ ಹೆಂಡತಿಯನ್ನು ಹೇಗೆ ಕೊಂದೆ--ಹೇಳಬೇಕು. ಅದಕ್ಕೆ ನಾನೆಂಥ ಲಂಪಟ ಎಂದು ತಿಳಿಯಬೇಕು. ನನಗೆ ಅವಳು ಗೊತ್ತಾಗುವ ಮೊದಲೇ ಕೊಂದುಬಿಟ್ಟೆ. ಪ್ರೀತಿ ಕಿಂಚಿತ್ತೂ ಇಲ್ಲದೆ ಮೈಯ ಸುಖವನ್ನು ಮೊದಲ ಬಾರಿಗೆ ಉಂಡಾಗಲೇ ‘ಹೆಂಡತಿ’ಯನ್ನು ಕೊಂದುಬಿಟ್ಟೆ. ಆಮೇಲೆ ‘ನನ್ನ’ ಹೆಂಡತಿಯನನ್ನು ಕೊಂದೆ. ಹೌದು. ನರಳಿ ನರಳಿ, ನನಗೇ ಹಿಂಸೆ ಕೊಟ್ಟುಕೊಂಡು, ಕೆಡುಕಿನ ಬೇರು ಬುಡ ತಿಳಿದುಕೊಂಡೆ. ಹೇಗೆ ಬದುಕಬೇಕು, ಹೇಗೆ ಬದುಕಿದ್ದೇವೆ ಅಂತ ಗೊತ್ತಾಗಿದೆ. ನನ್ನ ದುರಂತಕ್ಕೆ ಕಾರಣವಾದ ನಾಟಕ ಹೇಗೆ ಶುರುವಾಯಿತೆಂದರೆ...
“ನನಗೆ ಆಗ ಹದಿನೈದು ವರ್ಷ. ಇನ್ನೂ ಸ್ಕೂಲಿಗೆ ಹೋಗುತ್ತಿದ್ದೆ. ಅಣ್ಣ ಕಾಲೇಜು ಸೇರಿದ್ದ. ನನಗೆ ಹೆಣ್ಣಿನ ಪರಿಚಯ ಆಗಿರಲಿಲ್ಲ. ಆದರೆ ನಮ್ಮ ಸಮಾಜದ ಎಲ್ಲ ನತದೃಷ್ಟ ಮಕ್ಕಳ ಹಾಗೆಯೇ ನಾನೂ ಮುಗ್ಧನಾಗಿರಲಿಲ್ಲ. ನೂರರಲ್ಲಿ ತೊಂಬತ್ತೊಂಬತ್ತೂ ಮುಕ್ಕಾಲು ಹುಡುಗರ ಹಾಗೆಯೇ ನನ್ನ ಮನಸ್ಸೂ ಬಲು ಬಲು ಹಿಂಸೆಪಡುತ್ತಿತ್ತು. ಜೊತೆಯ ಹುಡುಗರ ಸಹವಾಸದಿಂದ ನನ್ನ ಕಲ್ಪನೆ ಆಗಲೇ ವಿಕೃತವಾಗಿತ್ತು. ಯಾವ ಹೆಂಗಸಿನ ಸಹವಾಸವೂ ಆಗಿರಲಿಲ್ಲ. ಆದರೂ ಹೆಣ್ಣು ಅನ್ನುವ ಕಲ್ಪನೆಯೇ ಕಾಡಿಸುತ್ತಿತ್ತು. ಹೆಣ್ಣು ಅಂದರೆ ಆಸೆ ಹುಟ್ಟುತ್ತಿತ್ತು, ಕಂಡ ಎಲ್ಲ ಹೆಂಗಸರ ಬತ್ತಲೆ ಮೈಯ ಚಿತ್ರವನ್ನು ಊಹೆಮಾಡಿಕೊಳ್ಳುತ್ತಿದ್ದೆ. ಕಂಡ ಚಿತ್ರ ಕಾಡುತ್ತಿತ್ತು. ಹಾಗೆ ಕಾಡಿದ್ದು ಸವಿ, ಸಿಹಿ ಅನಿಸುತ್ತಿತ್ತು. ಏಕಾಂತದ ಗಳಿಗೆಗಳು ಶುದ್ಧವಾಗಿರಲಿಲ್ಲ. ಭಯವಾಗುತ್ತಿತ್ತು, ನರಳುತ್ತಿದ್ದೆ. ದೇವರೇ ಅಂತ ಪ್ರಾರ್ಥನೆ ಮಾಡುತ್ತಿದ್ದೆ. ಸೋತುಬಿಡುತ್ತಿದ್ದೆ. ನಿಜವಾಗಿ ಯಾವ ಹೆಣ್ಣನ್ನೂ ಮುಟ್ಟಿರದಿದ್ದರೂ ಕಲ್ಪನೆಗಳಲ್ಲೂ ನಿಜದಲ್ಲೂ ಭ್ರಷ್ಟನಾಗಿದ್ದೆ. ಕೊನೆಯ ಹೆಜ್ಜೆ ಇಡುವುದು ಬಾಕಿ ಇತ್ತು ಅಷ್ಟೆ. ತಪ್ಪಿಸಿಕೊಳ್ಳಬಹುದಾಗಿತ್ತೋ ಏನೋ. ನನ್ನ ಅಣ್ಣನ ಗೆಳೆಯ, ರಸಿಕ ಶ್ರೇಷ್ಠ ಎಂದು ಕರೆಯತ್ತಾರಲ್ಲ ಅಂಥವನು, ನಮಗೆಲ್ಲ ಕುಡಿಯುವುದು, ಇಸ್ಪೀಟು ಆಡುವುದು ಕಲಿಸಿದ್ದಾತ, ಒಂದು ದಿನ, ನಮಗೆಲ್ಲ ಚೆನ್ನಾಗಿ ಮತ್ತೇರಿದ್ದಾಗ, ‘ಅಲ್ಲಿಗೆ’ ಕರೆದುಕೊಂಡು ಹೋದ. ಶುರುಮಾಡಿಕೊಂಡೆವು. ನನ್ನಷ್ಟೇ ಮುಗ್ಧನಾಗಿದ್ದ ಅಣ್ಣನ ಪತನ ಅವತ್ತು ಆಯಿತು. ಅವತ್ತೇ ರಾತ್ರಿ ನಾನು, ಬರೀ ಹದಿನಾರು ವರ್ಷದ ಹುಡುಗ, ಸ್ವತಃ ಕೆಟ್ಟು ಹೋದೆ, ಏನು ಮಾಡುತ್ತಿದ್ದೇನೆಂದು ಗೊತ್ತಿಲ್ಲದೆ, ನನ್ನ ತಂಗಿಯಂಥ ಒಬ್ಬ ಹುಡುಗಿಯನ್ನೂ ಕೆಡಿಸಿಬಿಟ್ಟೆ. ನಾನು ಮಾಡಿದ್ದು ಕೆಟ್ಟ ಕೆಲಸವೆಂದು ದೊಡ್ಡವರು ಯಾರೂ ಹೇಳಲಿಲ್ಲ. ಈಗಲೂ ದೊಡ್ಡವರು ಇಂಥದರ ಬಗ್ಗೆ ಹೇಳುವುದಿಲ್ಲ. ಬೈಬಲ್ಲಿನಲ್ಲಿ ಟೆನ್ ಕಮಾಂಡ್‌ಮೆಂಟುಗಳಿವೆ ಅನ್ನುವುದು ನಿಜ. ಅದು ಪರೀಕ್ಷೆಗಳಲ್ಲಿ ಪಾದರಿಗಳ ಎದುರು ಪಾಠ ಒಪ್ಪಿಸುವುದಕ್ಕೆ ಅಷ್ಟೆ. ಅಲ್ಲೂ ಅದು ತೀರ ಮುಖ್ಯವಲ್ಲ. ಲ್ಯಾಟಿನ್ ವ್ಯಾಕರಣದಲ್ಲಿ ut ಅನ್ನುವ ಪ್ರತ್ಯಯ ಹೇಗೆ ಬಳಸಬೇಕು ಎಂದು ಪಾಠ ಕಲಿಯುತ್ತೇವಲ್ಲ, ಅದರಷ್ಟೂ ಮುಖ್ಯವಲ್ಲ.
“ದೇಹಕ್ಕೆ ತೃಪ್ತಿಯಾದಮೇಲೆ ಮನಸ್ಸಿನ ಹಿಂಸೆ, ಒದ್ದಾಟಗಳು ಕಡಮೆಯಾಗುತ್ತವೆ ಎಂದು ನಾನು ಗೌರವ ಕೊಡುತ್ತಿದ್ದ ಹಿರಿಯರು ಹೇಳಿದ್ದು ಕೇಳಿದ್ದೇನೆ. ದೊಡ್ಡವರ ಪ್ರಕಾರ ಅದು ದೇಹದ ಆರೋಗ್ಯಕ್ಕೆ ಒಳ್ಳೆಯದು. ಗೆಳೆಯರ ಪ್ರಕಾರ ಅದು ಗಂಡಸುತನದ ಲಕ್ಷಣ. ಹಾಗೆಂದರೇನೆಂದು ನನಗೆ ಗೊತ್ತಿರಲಿಲ್ಲ. ಒಟ್ಟಿನಲ್ಲಿ ನಾನು ಮಾಡಿದ್ದು ಮೆಚ್ಚುವಂಥ, ಎಲ್ಲರೂ ಮಾಡುವಂಥ ಕೆಲಸವೇ ಆಗಿತ್ತು. ಇನ್ನು ಕಾಯಿಲೆಯ ಅಪಾಯ, ಸರ್ಕಾರ ಅದಕ್ಕೆ ವ್ಯವಸ್ಥೆ ಮಾಡುತ್ತದಲ್ಲವೇ? ವೇಶ್ಯೆಯರ ಮನೆಯ ಮೇಲೆ ಸರಿಯಾಗಿ ನಿಗಾ ಇಟ್ಟು ಸ್ಕೂಲು ಹುಡುಗರು ಕೂಡ ಕ್ಷೇಮವಾಗಿ ಮೈಚಟ ತೀರಿಸಿಕೊಳ್ಳುವ ವ್ಯವಸ್ಥೆ ಮಾಡಿದೆ. ಅದಕ್ಕಾಗಿಯೇ ಡಾಕ್ಟರಿಗೆ ಸಂಬಳ ಕೊಟ್ಟು ಇಟ್ಟಿದೆ. ಲಂಪಟತನವು ಆರೋಗ್ಯವನ್ನು ಕಾಪಾಡುತ್ತದೆ, ಆದ್ದರಿಂದ ಶುಭ್ರವಾದ, ಸ್ವಚ್ಛವಾದ ಪರಿಸರದಲ್ಲಿ ಲಂಪಟರಾಗಿ ಎಂದು ಹೇಳುತ್ತಾರೆ. ಕೆಲವು ತಾಯಂದಿರೂ ತಮ್ಮ ಗಂಡು ಮಕ್ಕಳ ಆರೋಗ್ಯದ ಸಲುವಾಗಿ ಇಂಥದಕ್ಕೆ ಸಹಾಯಮಾಡಿದ್ದು ನೋಡಿದ್ದೇನೆ. ವಿಜ್ಞಾನವೇ ಯುವಕರನ್ನು ಸೂಳೆಯರ ಹತ್ತಿರ ಕಳಿಸಿ ನಮ್ಮನ್ನು ಭ್ರಷ್ಟಗೊಳಿಸುತ್ತಿದೆ.”
“ವಿಜ್ಞಾನ? ಅದು ಹೇಗೆ?” ಎಂದು ಕೇಳಿದೆ.
“ಡಾಕ್ಟರುಗಳಿಲ್ಲವೆ? ಅವರು ವಿಜ್ಞಾನದ ಪೂಜಾರಿಗಳಲ್ಲವೆ? ಲೈಂಗಿಕತೆ ಆರೋಗ್ಯಕ್ಕೆ ಅಗತ್ಯ ಎಂದು ಹೇಳುತ್ತಾ ಯುವಕರನ್ನು ವಿಕೃತಗೊಳಿಸುವುದಿಲ್ಲವೆ? ಆಮೇಲೆ ಮುಖ ಬಿಗಿದುಕೊಂಡು ಸಿಫಿಲಿಸ್‌ಗೆ ಔಷಧಿ ಕೊಡುವುದಿಲ್ಲವೆ? ಮಕ್ಕಳಾಗದಂತೆ ನೋಡಿಕೊಳ್ಳುವ ಉಪಾಯಗಳನ್ನು ಕಂಡುಹಿಡಿದು, ಹೆಂಗಸರಿಗೆ ಅದನ್ನು ಹೇಳಿಕೊಟ್ಟು ಅವರನ್ನೂ ವಿಕೃತಮಾಡಿಲ್ಲವೆ?
“ಹೌದು. ಸಿಫಿಲಿಸ್ ವಾಸಿಮಾಡುವುದಕ್ಕೆ ಮಾಡುವ ಪ್ರಯತ್ನಗಳಲ್ಲಿ ನೂರರಲ್ಲಿ ಒಂದು ಪಾಲಿನಷ್ಟಾದರೂ ಲಂಪಟತನವನ್ನು ವಾಸಿಮಾಡುವುದಕ್ಕೆ ಬಳಸಿದ್ದಿದ್ದರೆ ಅಂಥ ಕಾಯಿಲೆಗಳು ಎಂದೋ ಮಾಯವಾಗಿರುತ್ತಿದ್ದವು. ಈಗ ಲಂಪಟತನವನ್ನು ನಿವಾರಿಸುವುದಕ್ಕಲ್ಲ, ನಿರಪಾಯಕಾರಿಯಾಗಿ ಲಂಪಟತನವನ್ನು ಅನುಭವಿಸುವುದು ಹೇಗೆ ಅಂತ ಕಂಡುಹಿಡಿದು ತಿಳಿಸುವುದಕ್ಕೆ ಪ್ರಯತ್ನಗಳು ನಡೆಯುತ್ತಿವೆ. ಪ್ರಶ್ನೆ ಅದಲ್ಲ, ನಾನು ಹೇಗೆ ಕೆಟ್ಟುಹೋದೆ ಅನ್ನುವುದು ಪ್ರಶ್ನೆ. ನನಗೆ ಆದ ಗತಿಯೇ ಹತ್ತರಲ್ಲಿ ಒಂಬತ್ತು ಹುಡುಗರಿಗೆ ಆಗುತ್ತದೆ. ನಮ್ಮ ಶ್ರೀಮಂತ ಸಮಾಜದ ಹುಡುಗರಿಗೆ ಮಾತ್ರವಲ್ಲ, ಎಲ್ಲ ಹುಡುಗರಿಗೂ, ಹಳ್ಳಿಯ ರೈತ ಹುಡುಗರಿಗೂ ಹೀಗಾಗುತ್ತದೆ. ಭಯಂಕರವಾದ ಸಂಗತಿ ಏನೆಂದರೆ ಯಾವ ಹೆಂಗಸೂ ನನ್ನ ಕೆಡಿಸಲಿಲ್ಲ. ನಾನೇ ಕೆಟ್ಟೆ. ನನ್ನ ಸುತ್ತಮುತ್ತಲೂ ನಡೆಯುತ್ತಿರುವುದನ್ನು ನೋಡಿದೆ. ಈ ಅಸಹ್ಯವು ಸಹಜವಾದದ್ದು, ಎಲ್ಲರೂ ಹೀಗೆ ಮಾಡುತ್ತಾರೆ ಅಂದುಕೊಂಡೆ. ಹುಡುಗರು ಹೀಗೆ ಮಾಡುವುದು ಆರೋಗ್ಯಕ್ಕೆ ಅಗತ್ಯ ಎಂದು ಹಿರಿಯರು ಭಾವಿಸಿದ್ದರು. ನಾನು ಮಾಡಿದ ಕೆಲಸ ಕೇವಲ ಕ್ಷಮೆಗೆ ಅರ್ಹವಾದದ್ದು ಮಾತ್ರವಲ್ಲ ಮುಗ್ಧ ಯುವಕನೊಬ್ಬನ ಸಹಜ ಮನರಂಜನೆ ಇದು ಎಂದು ಮಿಕ್ಕವರೂ ತಿಳಿದಿದ್ದರಿಂದ ನಾನು ಪತನಗೊಂಡಿದ್ದೇನೆ ಅನ್ನುವುದೇ ತಿಳಿಯಲಿಲ್ಲ. ಕುಡಿಯುವ ಸಿಗರೇಟು ಸೇದುವ ಖುಶಿಯನ್ನೂ ಅನುಭವಿಸತೊಡಗಿದೆ. ಅದಕ್ಕೆ ಕೊಂಚ ಮಟ್ಟಿಗೆ ಆಸೆಯೂ ಕಾರಣ, ಇನ್ನು ಕೊಂಚ ಮಟ್ಟಿಗೆ ಅವು ಅಗತ್ಯವೂ ಆಗಿದ್ದವು. ನನ್ನ ವಯಸ್ಸಿಗೆ ತಕ್ಕ ಲಕ್ಷಣ ಇದು ಎಂದೇ ತಿಳಿದೆ.
“ಆದರೂ ಮೊದಲು ಎಡವಿ ಬಿದ್ದಾಗ ವಿಚಿತ್ರವಾಗಿ ಅನ್ನಿಸಿತ್ತು, ಮನಸ್ಸು ಬೆಂದು ಕರಗಿಹೋಗಿತ್ತು. ಜ್ಞಾಪಕ ಇದೆ ನನಗೆ. ಅವಳ ರೂಮಿನಿಂದ ಹೊರಕ್ಕೆ ಬರುವ ಮೊದಲೇ ಮನಸ್ಸಿನ ತುಂಬ ದುಃಖ ತುಂಬಿಕೊಂಡಿತ್ತು. ಅಳಬೇಕು ಅನ್ನಿಸಿತ್ತು. ಹೆಂಗಸರೊಡನೆ ನನ್ನ ಸಂಬಂಧ ಕಳೆದೇ ಹೋಯಿತು ಅನ್ನಿಸಿತು. ಹೌದು. ನಾನು ಎಡವಿದ ಆ ಕ್ಷಣದಿಂದ ಹೆಂಗಸರೊಡನೆ ಇದ್ದ ನನ್ನ ಸಂಬಂಧ ಪೂರಾ ಹಾಳಾಯಿತು. ಯಾವುದೇ ಹೆಂಗಸಿನೊಡನೆ ಶುದ್ಧವಾದ ಸಂಬಂಧ ಅಂದಿನಿಂದ ಅಸಾಧ್ಯವಾಯಿತು. ನಾನು ಕಾಮುಕನಾಗಿಬಿಟ್ಟಿದ್ದೆ. ಕಾಮುಕನಾಗುವುದೊಂದು ದೈಹಿಕ ಸ್ಥಿತಿ. ಮಾರ್ಫೀನು, ಮದ್ಯ, ತಂಬಾಕುಗಳಿಗೆ ಬಲಿಯಾಗುವುದಂಥದೇ ದೈಹಿಕ ಸ್ಥಿತಿ.
“ಮಾರ್ಫೀನು, ಕುಡಿತ, ಸಿಗರೇಟುಗಳಿಗೆ ಬಲಿಯಾದವನು ಸಹಜ ಸಾಮಾನ್ಯ ಮನುಷ್ಯ ಅಲ್ಲ. ಹಾಗೆಯೇ ತನ್ನ ಸುಖಕ್ಕೆ ಹಲವು ಹೆಣ್ಣುಗಳನ್ನು ಬಯಸುವವನೂ ಸಹಜ, ಸಾಮಾನ್ಯ ಅಲ್ಲ, ಅಲ್ಲವೆ? ಅವನು ಆಸೆಬುರುಕ ಕಾಮುಕ. ಕುಡಿತಕ್ಕೆ ಬಿದ್ದವರನ್ನೂ ಮಾರ್ಫೀನು ಚಟ ಇರುವವರನ್ನೂ ಮುಖ ನೋಡಿ ಗುರುತಿಸಬಹುದು, ವರ್ತನೆ ನೋಡಿ ಗುರುತಿಸಬಹುದು. ಹಾಗೆಯೇ ಕಾಮುಕನನ್ನೂ ಕೂಡ. ಕಾಮುಕತನವನ್ನು ಬಚ್ಚಿಟ್ಟುಕೊಳ್ಳಲು ಟ್ರೈ ಮಾಡಬಹುದು, ಹೋರಾಡಬಹುದು. ಆದರೆ ಸರಳವಾದ, ಶುದ್ಧವಾದ ತಂದೆ-ಮಗಳ ಪ್ರೀತಿಯಂಥ ಪ್ರೀತಿಯನ್ನು ಎಂದೆಂದಿಗೂ ಅನುಭವಿಸಲಾರ. ಅವನು ಹುಡುಗಿಯರನ್ನು ನೋಡುವ ರೀತಿಯಲ್ಲಿಯೇ ಕಾಮುಕತನವನ್ನು ಗುರುತುಹಿಡಿಯಬಹುದು. ನಾನು ಕಾಮುಕನಾದೆ, ಕಾಮುಕನಾಗಿಯೇ ಇದ್ದೇನೆ. ಹಾಳಾಗಿದ್ದೇನೆ.”
(ಮುಂದುವರೆಯುವುದು)
Comments
ಉ: