ಕ್ರೂಟ್ಸರ್ ಸೊನಾಟಾ ಅಧ್ಯಾಯ ಹದಿನಾರು

ಕ್ರೂಟ್ಸರ್ ಸೊನಾಟಾ ಅಧ್ಯಾಯ ಹದಿನಾರು

ಅಧ್ಯಾಯ ಹದಿನಾರು
“ಬೇಗ ಬೇಗ ಮಕ್ಕಳಾದರು. ನಮ್ಮ ಸಮಾಜದಲ್ಲಿ ಮಕ್ಕಳಿಂದ ಏನಾಗಬೇಕೋ ಅದೇ ಆಯಿತು. ಮಕ್ಕಳನ್ನು ದೇವರು ಕೊಡುವ ವರ, ತಾಯ್ತದನ ಆನಂದ ಎಂದೆಲ್ಲ ಹೇಳುತ್ತಾರೆ. ಬರೀ ಸುಳ್ಳು. ಒಂದು ಕಾಲದಲ್ಲಿ ಹಾಗಿದ್ದಿರಬಹುದು, ಈಗಿಲ್ಲ. ನಮ್ಮ ಶ್ರೀಮಂತವರ್ಗದ ಹೆಂಗಸರಿಗೆ ಮಕ್ಕಳು ಸಂತೋಷವೂ ಅಲ್ಲ, ಹೆಣ್ತನದ ಹೆಮ್ಮೆಯೂ ಅಲ್ಲ. ಮಕ್ಕಳೆಂದರೆ ಭಯ, ಆತಂಕ, ಕೊನೆಯಿಲ್ಲದ ನರಳಾಟ, ಹಿಂಸೆ. ತಾಯಂದಿರಿಗೆ ಇದು ಚೆನ್ನಾಗಿ ಗೊತ್ತು, ಕೊಂಚ ಮೈರೆತಿದ್ದಾಗ ಕೇಳಿದರೆ ಹಾಗೆ ಹೇಳಿಯೂಬಿಡುತ್ತಾರೆ. ಮಕ್ಕಳಿಗೆ ಕಾಯಿಲೆಯಾದರೆ, ಸತ್ತು ಹೋದರೆ ಎಂಬ ಭಯ, ಆತಂಕಗಳ ಕಾರಣದಿಂದ ಮಕ್ಕಳೇ ಬೇಡ ಅನ್ನಿಸುತ್ತದೆ ಅವರಿಗೆ. ಅಕಸ್ಮಾತ್ತು ಮಕ್ಕಳಾದರೂ ಅವಕ್ಕೆ ಹಾಲೂಡಿಸಿ ಬೆಳೆಸುವುದು ಬೇಡ ಅನ್ನಿಸುತ್ತದೆ. ಮಕ್ಕಳಿಗೆ ಹಾಲು ಕುಡಿಸಿ ಬೆಳೆಸಿದರೆ ಅವುಗಳ ಬಗ್ಗೆ ವ್ಯಾಮೋಹ ಹೆಚ್ಚಾಗಿಬಿಡುತ್ತದೆ, ಮಗುವಿಗೆ ಎಲ್ಲಿ ಕಾಯಿಲೆ ಆಗುತ್ತದೋ, ಸಾಯುತ್ತದೋ ಅನ್ನುವ ಆತಂಕದಿಂದ ಹಿಂಸೆಯಾಗುತ್ತದೆ ಅನ್ನುತ್ತಾರೆ. ಜ್ವರ ಬರದ, ಸಾಯದ, ಮುರಿದರೆ ರಿಪೇರಿಮಾಡಿಕೊಳ್ಳಬಹುದಾದ ರಬ್ಬರಿನ ಮಕ್ಕಳು ಇದ್ದಿದ್ದರೆ ಚನ್ನಾಗಿರುತ್ತಿತ್ತೇನೋ! ಹೆಂಗಸರೋ, ಅವರ ಸಿಕ್ಕು ಸಿಕ್ಕು ಆಲೋಚನೆಗಳೋ! ಮಕ್ಕಳಾಗದಿರುವುದೇ ವಾಸಿ ಅನ್ನುತ್ತಾರೆ. ಮಗುವಿನ ಮೇಲೆ ತಮಗೆ ಪ್ರೀತಿಯಿರುವುದರಿಂದಲೇ ಇಂಥ ಆಲೋಚನೆ ಎಂದು ಹೆಮ್ಮೆಯನ್ನೂ ಪಡುತ್ತಾರೆ. ಇದು ಪ್ರೀತಿಯ ನಿರಾಕರಣೆ, ಸ್ವಾರ್ಥದ ಆಲೋಚನೆ ಎಂದು ಹೊಳೆಯುವುದೇ ಇಲ್ಲ. ಮಗುವಿನ ಚೆಲುವನ್ನು ಕಂಡು ಪಡುವ ಆನಂದಕ್ಕಿಂತ- ಎಂಥ ಪುಟ್ಟ ಪುಟ್ಟ ಕೈ! ಪುಟ್ಟ ಬೆರಳು! ಪುಟ್ಟ ಪಾದ! ಎಂಥ ನಗು! ಎಂಥ ಪುಟ್ಟ ಮೈ! ಅದರ ತೊದಲು! ಮುದ್ದು ಬಿಕ್ಕಳಿಕೆ!- ಮಗುವಿಗೆ ಏನಾದರೂ ಆದರೆ, ಕಾಯಿಲೆ ಬಂದರೆ, ಸತ್ತರೆ, ಅನ್ನುವ ಆತಂಕವೇ ಹೆಚ್ಚು. ಪ್ರೀತಿಸುವ ಜೀವಕ್ಕಾಗಿ ತ್ಯಾಗಮಾಡುವ ಬದಲಾಗಿ ತಮ್ಮ ಮನಸ್ಸಿನ ನೆಮ್ಮದಿಗಾಗಿ ಪ್ರೀತಿಗೆ ಅರ್ಹವಾದ ಮಗುವನ್ನೇ ತ್ಯಾಗಮಾಡಿಬಿಡುತ್ತಾರೆ.
“ಇದು ಪ್ರೀತಿಯಲ್ಲ, ಸ್ವಾರ್ಥ. ಆದರೂ ಹೆಂಗಸರನ್ನ ಬೈಯುವುದಕ್ಕೆ ಆಗುವುದಿಲ್ಲ. ಮಕ್ಕಳ ಆರೋಗ್ಯದ ಸಲುವಾಗಿ ಎಷ್ಟೊಂದು ಭಯಂಕರವಾಗಿ ನರಳುತ್ತಾರೆ. ಹಾಗೆ ಅವರು ನರಳುವುದಕ್ಕೆ ಮತ್ತೆ ಅದೇ ಡಾಕ್ಟರುಗಳೇ ಕಾರಣ. ನಮ್ಮ ಮದುವೆಯಾದ ಮೊದಲ ಕೆಲವು ವರ್ಷಗಳಲ್ಲಿ, ನಮಗೆ ಮೂರೋ ನಾಲ್ಕೊ ಮಕ್ಕಳಿದ್ದವಲ್ಲ ಆಗ, ನನ್ನ ಹೆಂಡತಿಯ ಸ್ಥಿತಿ ಹೇಗಿತ್ತು ಎಂದು ನೆನೆದರೆ ನಡುಗಿಹೋಗುತ್ತೇನೆ. ದಿನದ ಒಂದೊಂದು ನಿಮಿಷವನ್ನೂ, ಅವಳ ಶಕ್ತಿಯ ಒಂದೊಂದು ಹನಿಯನ್ನೂ ಆ ಮಕ್ಕಳ ಆರೈಕೆ ಹೀರಿಬಿಟ್ಟಿತ್ತು. ನನ್ನನ್ನು ಗಮನಿಸುವುದಕ್ಕೆ ಅವಳಿಗೆ ಟೈಮೇ ಇರಲಿಲ್ಲ. ಯಾವಾಗಲೂ ಭಯ, ಭಯದಿಂದ ಪಾರಾಗುವ ತವಕ, ಒಮ್ಮೆ ಪಾರಾದರೆ ಮತ್ತೆ ಇಂಥ ಸ್ಥಿತಿ ಯಾವಾಗ ಬಂದೀತೋ ಎಂಬ ಕಳವಳ, ನಾವು ಮುಳುಗುತ್ತಿರುವ ಹಡಗಿನಲ್ಲಿ ಇದ್ದವರ ಥರಾ ಇದ್ದೆವು. ಕೆಲವು ಸಾರಿ ಅವಳು ಬೇಕಂತಲೇ ಹೀಗೆ ಮಾಡುತ್ತಿರಬೇಕು, ನನ್ನ ಮೇಲೆ ಗೆಲ್ಲುವುದಕ್ಕೆಂದೇ ಮಕ್ಕಳ ಆರೋಗ್ಯದ ಬಗ್ಗೆ ಆತಂಕಪಡುತ್ತಿರಬೇಕು ಅನ್ನಿಸುತ್ತಿತ್ತು. ಇಲ್ಲ. ತಪ್ಪು ತಿಳಿದುಕೊಂಡಿದ್ದೆ. ಮಕ್ಕಳ ಆರೋಗ್ಯ, ಕಾಯಿಲೆ ಎಂದು ನರಳುತ್ತಾ ಹಿಂಸೆ ಪಡುತ್ತಿದ್ದಳು, ನನಗೂ ಹಿಂಸೆಯಾಗುತ್ತಿತ್ತು. ನರಳದೆ, ಹಿಂಸೆ ಪಡದೆ ಸುಮ್ಮನೆ ಇರುವುದಕ್ಕೆ ಅವಳಿಗೆ ಆಗುತ್ತಲೇ ಇರಲಿಲ್ಲ. ಹೊತ್ತು ಹೊತ್ತಿಗೆ ಸ್ನಾನ, ಊಟ, ಬಟ್ಟೆ, ಆರೈಕೆ, ಜೋಪಾನ ಹೀಗೆ ಪ್ರಾಣಿಗಳಿಗೆ ತಮ್ಮ ಮರಿಗಳ ಬಗ್ಗೆ ಇರುವಂಥದೇ ಎಚ್ಚರ ಅವಳಿಗೂ ಮಕ್ಕಳ ಬಗ್ಗೆ ಇತ್ತು. ಎಲ್ಲ ಹೆಂಗಸರಿಗೂ ಇರುತ್ತದೆ. ಆದರೆ ಪ್ರಾಣಿಗಳಿಗೆ ಇಲ್ಲದ ಒಂದು ಗುಣ ಹೆಚ್ಚಾಗಿತ್ತು ಅವಳಿಗೆ. ಅದು ವಿಚಾರಮಾಡುವ ಮತ್ತು ಕಲ್ಪನೆಮಾಡಿಕೊಳ್ಳುವ ಶಕ್ತಿ. ಪುಟ್ಟ ಮರಿಗೆ ಯಾವ ಯಾವ ಕಾಯಿಲೆ ಬರಬಹುದೆಂದು ಕೋಳಿಗೆ ಗೊತ್ತಿಲ್ಲ. ಜನ ಮಾಡುವ ಹಾಗೆ ತನ್ನ ಮರಿಗೆ ಕಾಯಿಲೆ ಬರದಹಾಗೆ, ಸಾವು ಬರದ ಹಾಗೆ ಏನೇನು ಉಪಾಯಮಾಡಬೇಕು ಎಂದು ಕೋಳಿ ಯೋಚನೆಮಾಡುವುದಿಲ್ಲ. ಮರಿಯನ್ನು ಜೋಪಾನವಾಗಿ ನೋಡಿಕೊಳ್ಳಬೇಕಲ್ಲಾ ಎಂದು ನರಳಿ ಹಿಂಸೆಪಡುವುದಿಲ್ಲ. ತಾಯಿ ಕೋಳಿ ತನ್ನ ಮರಿಗಳಿಂದ ಸಂತೋಷವನ್ನಷ್ಟೇ ಪಡೆಯುತ್ತದೆ. ಒಂದು ವೇಳೆ ಮರಿಗೆ ಕಾಯಿಲೆಯಾದರೆ ಏನು ಮಾಡಬೇಕೆಂದು ಸ್ಪಷ್ಟವಾಗಿ ಗೊತ್ತಿರುತ್ತದೆ-ಅವಕ್ಕೆ ಹೊಟ್ಟೆಗೆ ಹಾಕಿ, ಬೆಚ್ಚಗಿರುವಂತೆ ನೋಡಿಕೊಳ್ಳುತ್ತದೆ. ಮಾಡಬೇಕಾದ್ದನ್ನೆಲ್ಲ ಮಾಡಿ ಆಯಿತು ಎಂದು ಸುಮ್ಮನಿರುತ್ತದೆ. ಮರಿ ಒಂದುವೇಳೆ ಸತ್ತರೆ ಯಾಕೆ ಸತ್ತಿತು, ನಾನೇನು ಮಾಡಬೇಕಾಗಿತ್ತು, ಸತ್ತು ಎಲ್ಲಿಗೆ ಹೋಯಿತು ಎಂದೆಲ್ಲ ಕೇಳಿಕೊಳ್ಳುವುದಿಲ್ಲ. ಸ್ವಲ್ಪ ಹೊತ್ತು ಕೊಕ್ಕೊಕ್ಕೊ ಅಂದುಕೊಂಡಿದ್ದು ಮಾಮೂಲಿನಂತೆ ತನ್ನ ಜೀವನ ನಡೆಸುತ್ತದೆ. ಹೆಂಗಸರು, ಅದರಲ್ಲೂ ನನ್ನ ಹೆಂಡತಿ ಹಾಗಲ್ಲ. ಮಕ್ಕಳನ್ನು ಸಾಕಿ, ವಿದ್ಯೆ ಕಲಿಸಿ, ಬೆಳಸವುದರ ಬಗ್ಗೆ ತುಂಬ ಜನರ ಮಾತು ಕೇಳಿದ್ದಳು, ತುಂಬ ಪುಸ್ತಕ ಓದಿದ್ದಳು. ಮಕ್ಕಳ ಕಾಯಿಲೆ, ಉಪಚಾರಗಳ ಬಗ್ಗೆಯಂತೂ ಹೇಳುವಂತೆಯೇ ಇಲ್ಲ. ಇದನ್ನು ತಿನ್ನಿಸಬೇಕು, ಅದನ್ನ ತಿನ್ನಿಸಬಾರದು; ಅದು ಕೊಡಬೇಕು, ಇದು ಬಾರದು; ಪ್ರತಿ ವಾರವೂ ಮಕ್ಕಳಿಗೆ ಹೇಗೆ ಸ್ನಾನಮಾಡಿಸಬೇಕು, ಹೇಗೆ ಉಣಿಸಬೇಕು, ಹೇಗೆ ಮಲಗಿಸಬೇಕು, ಹೇಗೆ ವಾಕ್ ಕರೆದುಕೊಂಡು ಹೋಗಬೇಕು, ಹೇಗೆ ಇದು, ಹೇಗೆ ಅದು ಎಂದು ಒಂದಲ್ಲ ಒಂದು ಹೊಸ ಪುಸ್ತಕ ಓದುತ್ತಿದ್ದಳು. ಜಗತ್ತಿನಲ್ಲಿ ಮಕ್ಕಳು ನಿನ್ನೆಯಷ್ಟೇ ಹುಟ್ಟಲು ತೊಡಗಿದವೋ ಎಂಬಂತೆ! ಯಾವುದೇ ಒಂದು ಮಗು ಕಾಯಿಲೆಬಿದ್ದರೆ ಸರಿಯಾಗಿ ಉಣಿಸಿಲ್ಲ, ಸರಿಯಾಗಿ ಸ್ನಾನಮಾಡಿಸಿಲ್ಲ, ಸರಿಯಾದ ಹೊತ್ತಿನಲ್ಲಿ ಏನೋ ಮಾಡಿಲ್ಲ, ಒಟ್ಟಿನಲ್ಲಿ ನನ್ನದೇ ತಪ್ಪು, ಮಾಡಬೇಕಾದ ಏನನ್ನೋ ಮಾಡಬೇಕಾದ ಕಾಲದಲ್ಲಿ ಮಾಡಿಲ್ಲ ಅಂತ ಕೊರಗುತ್ತಿದ್ದಳು.
“ಮಕ್ಕಳು ಚೆನ್ನಾಗಿರುವಾಗ ಈ ಕಥೆ, ಇನ್ನು ಯಾವುದೇ ಒಂದು ಮಗು ಹುಷಾರು ತಪ್ಪಿದರಂತೂ ಮನೆ ನರಕವಾಗಿಬಿಡುತ್ತಿತ್ತು. ಮನೆಯ ಬದುಕು ಒಂದೇ ಸಮ ಇರುವುದೇ ಇಲ್ಲ. ಎಲ್ಲವೂ ಮಕ್ಕಳ ಆರೋಗ್ಯದ ಮೇಲೆ ಡಿಪೆಂಡಾಗಿರುತ್ತದೆ. ಮತ್ತೆ ಮಕ್ಕಳ ಆರೋಗ್ಯ ಯಾರ ಮೇಲೂ ಡಿಪೆಂಡಾಗಿರುವುದಿಲ್ಲ. ಆದರೆ ಡಾಕ್ಟರುಗಳು ಮಾತ್ರ ತಾವು ಎಲ್ಲ ಕಾಯಿಲೆಯನ್ನೂ ವಾಸಿಮಾಡುತ್ತೇವೆ ಅಂದುಕೊಂಡಿರುತ್ತಾರೆ. ಎಲ್ಲ ಡಾಕ್ಟರೂ ಅಲ್ಲ, ಯಾರೋ ಒಬ್ಬ ಡಾಕ್ಟರನ ಕೈಗುಣ ಮಾತ್ರ ಚೆನ್ನಾಗಿರುತ್ತದೆ. ಅವನು ಸಿಗದೆ ಇದ್ದರೆ ಏನು ಗತಿ? ಅವನು ಇರುವ ಊರಿನಲ್ಲಿ ನಾವು ಇಲ್ಲದೆ ಇದ್ದರೆ ಏನು ಗತಿ? ಮಗು ಕೈ ಬಿಟ್ಟ ಹಾಗೇ! ನನ್ನ ಹೆಂಡತಿಮಾತ್ರವಲ್ಲ, ನಮ್ಮ ಶ್ರೀಮಂತ ಹೆಂಗಸರೆಲ್ಲ ಹಾಗೆಯೇ! ‘ಅವಳು ಗೊತ್ತಲ್ಲ, ಇವಾನ್ ಝಕರಯ್ಯ ಡಾಕ್ಟರನ್ನ ಬೇಗ ಕರೆಸಲಿಲ್ಲ. ಮಗು ಹೋಗಿಯೇ ಬಿಟ್ಟಿತು’; ‘ಮೇರಿ ಮಗಳಿಗೆ ಕಾಯಿಲೆ ಆಗಿತ್ತು, ಝಕರಯ್ಯ ಹವಾ ಬದಲಾವಣೆ ಆಗಬೇಕು ಎಂದರು ಮಗು ಉಳಿದುಕೊಂಡಿತು’; ‘ಜಕರಯ್ಯಾ ಮಾತು ಕೇಳಿದ್ದರಿಂದ ಪೆಟ್ರೋವ್ ಮನೆಯವರು ದಕ್ಷಿಣ ಪ್ರಾಂತಕ್ಕೆ ಹೋದರು, ಮಗುವಿನ ಖಾಯಿಲೆ ವಾಸಿಯಾಯಿತು’ ಇಂಥ ಮಾತುಗಳು ಯಾವಾಗಲೂ ಕಿವಿಗೆ ಬೀಳುತ್ತಿದ್ದವು. ಸದಾ ಮಕ್ಕಳ ಆರೋಗ್ಯದ ಬಗ್ಗೆ ವ್ಯಾಕುಲಗೊಂಡಿರುವ ನನ್ನ ಹೆಂಡತಿ, ತನ್ನ ಮರಿಯ ಕ್ಷೇಮದ ಬಗ್ಗೆ ಕಾತರವಾಗಿರುವ ಯಾವುದೇ ಪ್ರಾಣಿಯಂತೆ ಕಾತರಳಾಗಿರುವಾಕೆ, ಮಗುವಿಗೆ ಏನೇ ಆದರೂ, ತೀರ ಕೈಮೀರುವುದಕ್ಕೆ ಮೊದಲು ಝಕರಯ್ಯಾ ಏನು ಹೇಳುತ್ತಾರೋ ಎಂದು ಚಿಂತೆಮಾಡುತ್ತಿದ್ದಳು. ಅವರು ಏನು ಹೇಳಿಯಾರೆಂದು ಯಾರಿಗೂ ಗೊತ್ತಿರಲಿಲ್ಲ, ಸ್ವತಃ ಅವನಿಗೂ ಗೊತ್ತಿರಲಿಲ್ಲ. ಆದರೆ ತನಗೆ ಎಲ್ಲಾ ಗೊತ್ತಿದೆ ಎಂಬ ನಂಬಿಕೆ ಜನರ ಮನಸ್ಸಿನಿಂದ ಹೋಗದಿರಲಿ ಎಂದು ಏನೇನೋ ಮಾಡುತ್ತಿರುವ ಹಾಗೆ ನಟನೆಮಾಡುತ್ತಾನೆ. ನೋಡಿ, ಅವಳು ಪ್ರಾಣಿಯ ಥರ ಇದ್ದಿದ್ದರೆ ಇಂಥ ನರಳಾಟ ಇರುತ್ತಿರಲಿಲ್ಲ. ಅಥವಾ ದೇವರಲ್ಲಿ ನಂಬಿಕೆ ಇರುವ ಮನುಷ್ಯಳಾಗಿದ್ದಿದ್ದರೆ ‘ದೇವರು ಕೊಟ್ಟ, ದೇವರು ಕಿತ್ತುಕೊಂಡ, ಏನು ಮಾಡುವುದಕ್ಕೆ ಆಗುತ್ತದೆ, ಎಲ್ಲಾ ಅವನ ಇಚ್ಛೆ’ ಎಂದುಕೊಂಡು ನಿರಾಳವಾಗಿರುತ್ತಿದ್ದಳು. ಆದರೆ ಅತೀ ವೀಕಾದ, ಸೂಕ್ಷ್ಮವಾದ ಜೀವಗಳನ್ನು ಸಾಕುವ ಜವಾಬ್ದಾರಿ ನನ್ನ ಪಾಲಿಗೆ ಬಂದಿದೆ ಅಂದುಕೊಂಡಿದ್ದಳು. ಪ್ರಾಣಿಗಳಿಗೆ ಇರುವಂಥ ತೀವ್ರವಾದ ಪ್ರೀತಿ ತೋರುತ್ತಿದ್ದಳು. ಅವರ ಜೀವ ಕಾಪಾಡುವ ಜವಾಬ್ದಾರಿ ನನ್ನದು, ಆದರೆ ಹೇಗೆ ಎಂದು ಗೊತ್ತಿಲ್ಲವಲ್ಲಾ, ಇರುವ ದುಡ್ಡೆಲ್ಲಾ ಸುರಿದು ಹೇಗಾದರೂ ಸರಿ ಒಳ್ಳೆಯ ಡಾಕ್ಟರನ್ನು ಹಿಡಿದು ಮಗುವನ್ನು ಕಾಪಾಡಿಕೊಳ್ಳಬೇಕು ಎಂದು ಆತಂಕಪಡುತ್ತಿದ್ದಳು.
“ಮಕ್ಕಳಿಂದ ಸಂತೋಷ ಸಿಗುವ ಬದಲು ಬರೀ ಹಿಂಸೆ. ಮಕ್ಕಳ ಜೊತೆ ಏಗುತ್ತಾ ನನ್ನ ಹೆಂಡತಿ ಹಿಂಸೆಪಡುತ್ತಿದ್ದಳು, ಅದರಿಂದ ನನಗೂ ಹಿಂಸೆ ಆಗುತ್ತಿತ್ತು. ಒಂದೊಂದು ಸಾರಿ ಹೊಟ್ಟಕಿಚ್ಚಿಗೋ ಅಥವ ಕಾರಣವಿಲ್ಲದೆಯೋ ಜಗಳವಾಡಿ, ಸುಸ್ತಾಗಿ, ಸುದಾರಿಸಿಕೊಳ್ಳಬೇಕು, ಏನಾದರೂ ಒಂದು ಚೂರು ಓದಬೇಕು, ಮನಸ್ಸು ಹಗುರವಾಗುವ ಹಾಗೆ ಏನಾದರೂ ಮಾಡಬೇಕು ಅಂದುಕೊಳ್ಳುವಷ್ಟರಲ್ಲಿ ಪುಟ್ಟ ಪಿಯರೆ ಬಂದು ಸೇಬು ಹಣ್ಣು ತಿನ್ನಲೇ ಎಂದು ಕೇಳುತ್ತಾನೆ. ಅಥವಾ ಯಾವ ಅಂಗಿ ಹಾಕಿಕೊಳ್ಳಲಿ ಎಂದು ಕಾಡುತ್ತಾನೆ, ಇಲ್ಲವೇ ಮನೆ ಕೆಲಸದವಳು ಭೋರೆಂದು ಅಳುತ್ತಿರುವ ಪುಟ್ಟ ಪಾಪು ಎತ್ತಿಕೊಂಡು ಬರುತ್ತಾಳೆ. ವಾಸ್ಯಾಗೆ ವಾಂತಿ ಆಯಿತು ಅಂತಲೋ, ಮಾಷಾಗೆ ಭೇದಿಯಲ್ಲಿ ರಕ್ತ ಬಿತ್ತು ಅಂತಲೋ, ಆಂಡ್ರೆಗೆ ಮೈಯೆಲ್ಲ ದದ್ದು ಆಗಿದೆ ಅಂತಲೋ ಗೊತ್ತಾಗುತ್ತಿತ್ತು. ಶಾಂತಿ ಸಮಾಧಾನ ಹಾರಿಹೋಗುತ್ತಿತತ್ತು. ತಟ್ಟನೆ ಮಾಡುತ್ತಿದ್ದನ್ನೆಲ್ಲ ಅಲ್ಲೇ ಬಿಟ್ಟು, ಎಲ್ಲ ಮರೆತು, ಎಲ್ಲಿಗೆ ಹೋಗಲಿ? ಯಾವ ಡಾಕ್ಟರನ್ನು ಕರೆದುಕೊಂಡು ಬರಲಿ? ಕಾಯಿಲೆ ಮಗುವನ್ನು ಉಳಿದ ಮಕ್ಕಳಿಂದ ಬೇರೆಯಾಗಿ ಎಲ್ಲಿ ಹೇಗೆ ಮಲಗಿಸಲಿ? ಇಂಥವೇ ಆತಂಕಗಳು. ಎನಿಮಾಗಳು, ಟೆಂಪರೇಚರುಗಳು, ಔಷಧಗಳು, ಡಾಕ್ಟರುಗಳು. ಒಂದು ಮಗುವಿಗೆ ವಾಸಿ ಆಗಲಿ ಎಂದು ಕಾಯುತ್ತಿತ್ತೋ ಅನ್ನುವ ಹಾಗೆ ಮತ್ತೊಂದು ಮಗುವಿಗೆ ಇನ್ನೇನಾದರೂ ಆಪತ್ತು. ಮಕ್ಕಳಿಂದ ಸುಖವೂ ಇಲ್ಲ, ನೆಮ್ಮದಿಯೂ ಇಲ್ಲ. ಮನೆ ನಡೆಸುವುದು ಎಂದರೆ ನಿಜವಾದ ಅಥವಾ ಕಲ್ಪಿಸಿಕೊಂಡ ಅಪಾಯಗಳಿಂದ ತಪ್ಪಿಸಿಕೊಳ್ಳುವ ದಾರಿ ಹುಡುಕುವುದು ಅಂತಷ್ಟೇ ಆಗಿಬಿಟ್ಟಿತ್ತು. ಎಲ್ಲಾ ಮನೆಗಳೂ ಹೀಗೇ ಇರಬಹುದು. ಆದರೆ ನಮ್ಮ ಮನೆಯ ಕಥೆಯೇ ಬೇರೆ. ನನ್ನ ಹೆಂಡತಿಗೆ ಮಕ್ಕಳ ಮೇಲೆ ಮೋಹಾನೂ ಹೆಚ್ಚು, ಕೇಳಿದ್ದನ್ನೆಲ್ಲ ನಂಬುವ ಬುದ್ಧಿಯೂ ಜಾಸ್ತಿ.
“ಮಕ್ಕಳು ಆದಮೇಲೆ ನಮ್ಮ ಬದುಕಿನಲ್ಲಿ ವಿಷ ತುಂಬಿಕೊಳ್ಳುತ್ತಾ ಹೋಯಿತು. ಮಕ್ಕಳ ಕಾರಣದಿಂದಲೇ ಜಗಳ ಹುಟ್ಟಿಕೊಳ್ಳುತ್ತಿತ್ತು. ನಮ್ಮ ಜಗಳದಲ್ಲಿ ಒಬ್ಬರನ್ನೊಬ್ಬರು ನೋಯಿಸಲು ನಮ್ಮ ನಮ್ಮ ಮುದ್ದಿನ ಮಕ್ಕಳನ್ನು ಆಯುಧಗಳ ಹಾಗೆ ಉಪಯೋಗಿಸಿಕೊಂಡೆವು. ನಾನು ದೊಡ್ಡ ಹುಡುಗ ವಾಸ್ಯಾನ ಬಯ್ಯುತ್ತಾ ಅವಳ ಮೇಲೆ ದಾಳಿ ಮಾಡುತ್ತಿದ್ದೆ, ಅವಳು ಚಿಕ್ಕ ಮಗಳು ಲಿಸಾಳಲ್ಲಿ ತಪ್ಪು ಹುಡುಕುತ್ತಾ ನನ್ನ ಮೇಲೆ ಯುದ್ಧಕ್ಕೆ ಬರುತ್ತಿದ್ದಳು. ಅವರು ಬೆಳೆದ ಹಾಗೆಲ್ಲ ಅವಳಿಗೆ ಪ್ರಿಯನಾದ ಹುಡುಗನನ್ನು ನನ್ನ ಪಕ್ಷಕ್ಕೆ, ನನಗೆ ಪ್ರಿಯವಾದ ಮಗಳನ್ನು ಅವಳ ಪಕ್ಷಕ್ಕೆ ಎಳೆದುಕೊಳ್ಳಲು ಉಪಾಯ ಮಾಡುತ್ತಿದ್ದೆವು. ಮಕ್ಕಳು ಕಂಗೆಟ್ಟು ಹೋದವು. ಆದರೆ ನಮ್ಮ ಜಗಳಗಳಲ್ಲೇ ಮೈಮರೆತಿದ್ದ ನಮಗೆ ಅವರ ಬಗ್ಗೆ ಯೋಚಿಸಲು ಪುರಸೊತ್ತು ಇರಲಿಲ್ಲ. ಚಿಕ್ಕ ಮಗಳು ಲೀಸಾ ಯಾವಾಗಲೂ ನನ್ನ ಪಾರ್ಟಿ, ನೋಡುವುದಕ್ಕೆ ಅಮ್ಮನ ಹಾಗೆಯೇ ಇದ್ದ ದೊಡ್ದಮಗನಿಗೆ ನನ್ನನ್ನು ಕಂಡರೆ ದ್ವೇಷ, ಸಿಟ್ಟು.”
(ಮುಂದುವರೆಯುವುದು)

Rating
No votes yet