ಕ್ರೂಟ್ಸರ್ ಸೊನಾಟಾ ಅಧ್ಯಾಯ ಹದಿನೇಳು

ಕ್ರೂಟ್ಸರ್ ಸೊನಾಟಾ ಅಧ್ಯಾಯ ಹದಿನೇಳು

“ಹೀಗೇ ದಿನ ಕಳೆಯುತ್ತಿತ್ತು. ನಾವು ವೈರಿಗಳಾಗಿಬಿಟ್ಟಿದ್ದೆವು. ಭಿನ್ನಾಭಿಪ್ರಾಯದಿಂದ ದ್ವೇಷ ಹುಟ್ಟುವ ಬದಲಾಗಿ ದ್ವೇಷ ಇದ್ದ ಕಾರಣದಿಂದಲೇ ಭಿನ್ನಾಭಿಪ್ರಾಯ ಹುಟ್ಟುತ್ತಿತ್ತು. ಅವಳು ಮಾತಾಡುವ ಮೊದಲೇ ನನ್ನ ಮನಸ್ಸು ವಿರೋಧಿಸುವುದಕ್ಕೆ ರೆಡಿಯಾಗಿರುತ್ತಿತ್ತು. ಅವಳ ಮನಸ್ಸೂ ಅಷ್ಟೆ.
“ಮದುವೆಯಾಗಿ ನಾಲ್ಕು ವರ್ಷವಾಗುವಷ್ಟರಲ್ಲಿ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳುವುದಕ್ಕೆ ಸಾಧ್ಯವೇ ಇಲ್ಲವೆಂಬ ತೀರ್ಮಾನಕ್ಕೆ ಇಬ್ಬರೂ ಬಂದುಬಿಟ್ಟಿದ್ದೆವು. ಅರ್ಥಮಾಡಿಕೊಳ್ಳುವ ಪ್ರಯತ್ನವನ್ನೇ ಬಿಟ್ಟುಬಿಟ್ಟೆವು. ಯಾವ ಜಗಳವೂ ಮುಗಿಯುತ್ತಲೇ ಇರಲಿಲ್ಲ. ಸಣ್ಣಪುಟ್ಟವಿಚಾರಗಳಲ್ಲೂ ಅಷ್ಟೆ, ಮಕ್ಕಳ ಮಾತಿಗಂತೂ ನಮ್ಮ ನಮ್ಮ ತೀರ್ಮಾನಕ್ಕೇ ಬಲವಾಗಿ ಅಂಟಿಕೊಳ್ಳುತ್ತಿದ್ದೆವು. ಈಗ ಯೋಚನೆಮಾಡಿದರೆ ಎಷ್ಟೋ ವಿಚಾರಗಳಲ್ಲಿ ನನ್ನ ಹಟ ತಪ್ಪಾಗಿತ್ತು, ನನ್ನ ತೀರ್ಮಾನಗಳನ್ನು ಸಡಿಲಮಾಡಿಕೊಂಡು ಬಿಟ್ಟುಬಿಡಬಹುದಿತ್ತು ಅನ್ನಿಸುತ್ತದೆ. ಆದರೆ ಅವಳ ಅಭಿಪ್ರಾಯ ನನ್ನದಕ್ಕೆ ವಿರುದ್ಧವಾಗಿರುವಾಗ ನಾನು ಸಡಿಲಬಿಟ್ಟರೆ ಅವಳು ಗೆದ್ದಂತಾಗುವುದಲ್ಲ, ಅದು ನನಗೆ ಇಷ್ಟವಿರಲಿಲ್ಲ. ಅವಳೂ ನನ್ನ ಹಾಗೆಯೇ ಅಂದುಕೊಳ್ಳುತ್ತಿದ್ದಳು. ಬಹುಶಃ ತಾನಂದುಕೊಂಡದ್ದೇ ಸರಿ ಎಂಬುದು ಅವಳ ಭಾವನೆಯೋ, ನನ್ನ ಬಗ್ಗೆ ಅವಳ ವರ್ತನೆ ಸರಿಯಾಗಿಯೇ ಇದೆ ಎಂದೋ ತಿಳಿದಿದ್ದಳು. ನಾನಂತೂ ಅವಳ ಮಟ್ಟಿಗೆ ಸಂತನ ಹಾಗೆ ವರ್ತಿಸುತ್ತಿದ್ದೇನೆ ಎಂದೇ ನಂಬಿದ್ದೆ. ನಾವಿಬ್ಬರೇ ಇದ್ದಾಗ ಬಾಯಿಹೊಲಿದುಕೊಂಡಿರುತ್ತಿದ್ದೆವು. ಆಗೀಗ ಮಾತಾಡಿದರೂ ಅದು ಪ್ರಾಣಿಗಳ ಮಟ್ಟದ ಸಂಭಾಷಣೆ. ‘ಈಗ ಎಷ್ಟು ಗಂಟೆ?’ ‘ಮಲಗುವ ಹೊತ್ತಾಯಿತು.’ ‘ಇವತ್ತು ರಾತ್ರಿಗೆ ಏನು ಅಡಿಗೆ?’ ‘ಎಲ್ಲಿಗೆ ಹೋಗೋಣ?’ ‘ಪೇಪರಿನಲ್ಲಿ ಏನು ಸುದ್ದಿ?’ ‘ಮಾಷಾಗೆ ಗಂಟಲು ನೋವು, ಡಾಕ್ಟರಿಗೆ ಹೇಳಿಕಳಿಸಬೇಕು.’ ಇಂಥವೇ ಮಾತು. ನಮ್ಮ ಮಾತು ಈ ವಿಷಯಗಳ ಗಡಿಯನ್ನು ಮೀರಿ ಕೂದಲೆಳೆಯಷ್ಟು ಅತ್ತಿತ್ತ ಚಾಚಿಕೊಂಡರೂ ರೇಗಿಕೊಂಡು ಕಿರುಚಾಡಿಬಿಡುತ್ತಿದ್ದೆವು. ಕಾಫಿಯ ಬಗ್ಗೆ, ಟೇಬಲ್‌ಕ್ಲಾತಿನ ಬಗ್ಗೆ, ಆಡುವಾಗ ನಮಗೆ ಬಿದ್ದ ಕಾರ್ಡುಗಳ ಬಗ್ಗೆ, ಕುದುರೆಗಾಡಿಯ ಬಗ್ಗೆ, ನಮ್ಮಿಬ್ಬರಲ್ಲಿ ಯಾರಿಗೂ ಇಷ್ಟಿಷ್ಟೂ ಮುಖ್ಯವಲ್ಲದ ಸಂಗತಿಗಳ ಬಗ್ಗೆ ಕೂಗಾಡಿ ಬೈದಾಡಿಕೊಳ್ಳುತ್ತಿದ್ದವು. ಅವಳ ಬಗ್ಗೆ ನನ್ನೊಳಗೆ ಸದಾ ದ್ವೇಷದ ಬೆಂಕಿ ಇದ್ದೇ ಇರುತ್ತಿತ್ತು. ಅವಳು ಟೀ ಬಗ್ಗಿಸಿಕೊಳ್ಳುವ ರೀತಿ, ಕುರ್ಚಿಯಮೇಲೆ ಕೂತು ಕಾಲಾಡಿಸುವುದು, ಚಮಚವನ್ನು ಹೇಗೆ ಬಾಯಿಗಿಟ್ಟುಕೊಳ್ಳುತ್ತಾಳೆ ಅನ್ನುವುದು, ಅವಳು ನೀರು ಕುಡಿಯುವಾಗ ಆಗುವ ಸದ್ದು ಇಂಥವೆಲ್ಲ ಕ್ಷಮಿಸಲು ಅರ್ಹವೇ ಅಲ್ಲದ ಮಹಾಪರಾಧಗಳಾಗಿ ಕಾಣುತ್ತಿದ್ದವು ನನಗೆ. ಆಗ ನನಗೆ ಗೊತ್ತಾಗಲಿಲ್ಲ-ಪ್ರೀತಿಯ ಅವಧಿಗೂ ದ್ವೇಷದ ಅವಧಿಗೂ ಹೇಳಿಮಾಡಿಸಿದಂಥ ಸಂಬಂಧ ಇತ್ತು. ಒಂದಷ್ಟು ಕಾಲ ತೀವ್ರವಾದ ಪ್ರೀತಿ, ಆಮೇಲೆ ಅಷ್ಟೇ ಕಾಲ ತೀವ್ರವಾದ ದ್ವೇಷ; ಚೂರೇ ಚೂರು ಪ್ರೀತಿಯ ದಿನ, ಆಮೇಲೆ ಕಡಮೆ ಕೋಪದ ದ್ವೇಷದ ದಿನ. ಈ ಪ್ರೀತಿ ಈ ದ್ವೇಷ ಒಂದೇ ಮೃಗೀಯ ಫೀಲಿಂಗಿನ ವಿರುದ್ಧ ಧೃವಗಳು ಎಂದು ನಮಗೆ ತಿಳಿಯಲಿಲ್ಲ.
“ನಮಗೆ ಗೊತ್ತಾಗಿದ್ದಿದ್ದರೆ ನಮ್ಮ ಬದುಕೊಂದು ಕೆಟ್ಟಕನಸಾಗಿಬಿಡುತ್ತಿತ್ತು. ನಮ್ಮಿಬ್ಬರಿಗೂ ಅರ್ಥವಾಗಲಿಲ್ಲ. ನಮ್ಮ ಬದುಕಿನ ಸತ್ಯ ನಮಗೆ ಕಾಣಲಿಲ್ಲ. ಹಾಗೆ ಕಾಣದಿರುವುದೇ ಮನುಷ್ಯನ ಪಾಲಿಗೆ ಶಿಕ್ಷೆ, ಮತ್ತೆ ಮುಕ್ತಿ ಕೂಡಾ. ಮನುಷ್ಯ ಎಂಥದೇ ತಪ್ಪು ದಾರಿಯಲ್ಲಿ ಹೋಗುತ್ತಿರಲಿ ಅದು ತನಗೇ ಕಾಣದಂತೆ ಕಣ್ಣಿಗೆ ಅಡ್ಡವಾಗಿ ಪರದೆ ಎಳೆದುಕೊಳ್ಳಬಲ್ಲ. ತನ್ನ ಪರಿಸ್ಥಿತಿಯ ಟ್ರಾಜಿಡಿಗೆ ಸಂತೋಷದ ಮುಖವಾಡ ತೊಡಿಸಬಲ್ಲ. ನಾವು ಮಾಡಿದ್ದೂ ಅದನ್ನೇ. ಅವಳು ಮುಖ ಬಿಗಿದುಕೊಂಡು ಮನೆಕೆಲಸದಲ್ಲಿ ಮೈಮರೆಯುತ್ತಿದ್ದಳು, ಅವಳ ಬಟ್ಟೆ, ಮಕ್ಕಳ ಬಟ್ಟೆ ಜೋಡಿಸಿಡುತ್ತಾ, ಮಕ್ಕಳಿಗೆ ಮನೆಪಾಠ ಹೇಳಿಕೊಡುತ್ತಾ, ರೂಮುಗಳನ್ನೆಲ್ಲ ಅಚ್ಚುಕಟ್ಟುಮಾಡುತ್ತಾ ಮನಸ್ಸನ್ನು ಬೇರೆಕಡೆಗೆ ತಿರುಗಿಸಿಕೊಳ್ಳುತ್ತಿದ್ದಳು. ನಾನು ಆಫೀಸಿನ ಕೆಲಸ, ಕುಡಿತ, ಬೇಟೆ, ಕಾರ್ಡ್ಸು ಎಂದು ಮೈಮನಸ್ಸು ಮರೆಯುತ್ತಿದ್ದೆ. ಒಂದು ಕ್ಷಣ ಪುರಸೊತ್ತಿಲ್ಲದ ಹಾಗೆ ಏನಾದರೂ ಮಾಡುತ್ತಾ ಇರುತ್ತಿದ್ದೆವು. ಹಾಗೆ ಬ್ಯುಸಿಯಾಗಿದ್ದಷ್ಟೂ ಒಬ್ಬರು ಇನ್ನೊಬ್ಬರನ್ನು ನಿಂದಿಸಲು ಹೊಸ ಹಕ್ಕು ದೊರೆಯುತ್ತದೆ ಎಂದುಕೊಳ್ಳುತ್ತಿದ್ದೆವು. ‘ಅದೇಕೆ ಹಾಗೆ ಮುಖ ಮಾಡಿಕೊಳ್ಳುತ್ತೀ, ರಾತ್ರಿಯೆಲ್ಲ ನಿನ್ನ ಕಾಟಕ್ಕೆ ನಿದ್ರೆ ಬರಲಿಲ್ಲ, ಇವತ್ತು ಬೇರೆ ಆಫೀಸಿನಲ್ಲಿ ಮೀಟಿಂಗು ಇದೆ’ ಎಂದು ಮನಸ್ಸಿನಲ್ಲೇ ಅಂದುಕೊಳ್ಳುತ್ತಿದ್ದೆ. ‘ನಿಮಗೇನು ಹೇಳಿ, ಆರಾಮವಾಗಿ ಮಲಗಿದ್ದಿರಿ, ಮಗು ರಾತ್ರಿಯೆಲ್ಲ ರಚ್ಚೆ ಹಿಡಿದು ಅಳುತ್ತಿತ್ತು, ನಿದ್ರೆಯೇ ಬರಲಿಲ್ಲ’ ಎಂದು ಅವಳು ಜೋರಾಗಿಯೇ ಹೇಳಿಬಿಡುತ್ತಿದ್ದಳು. ಮನೋರೋಗದ ಹೊಸ ಥಿಯರಿಗಳು ಕೇವಲ ಮೂರ್ಖತನದ ಸಿದ್ಧಾಂತಗಳು, ಅಸಹ್ಯ ಹುಟ್ಟಿಸುತ್ತವೆ. ಮನೋವೈದ್ಯರು ನನ್ನ ಹೆಂಡತಿ ಹಿಸ್ಟೀರಿಕಲ್ ಎಂದೂ ನಾನು ಅಬ್‌ನಾರ್ಮಲ್ ಎಂದೂ ಹೇಳಿ ನಮ್ಮನ್ನು ವಾಸಿಮಾಡುವುದಕ್ಕೆ ಶುರುಮಾಡಿಬಿಡುತ್ತಿದ್ದರು. ಆದರೆ ವಾಸಿಮಾಡುವುದಕ್ಕೆ ನಮಗೇನೂ ಆಗಿರಲಿಲ್ಲ.
“ನಮ್ಮ ದೃಷ್ಟಿಗೆ ಕೊನೆಯಿರದ ಕಾವಳ ಕವಿದಿತ್ತು. ನಾವಿರುವ ಸ್ಥಿತಿ ನಮಗೆ ಕಾಣುತ್ತಲೇ ಇರಲಿಲ್ಲ. ನನ್ನ ಬದುಕಿನಲ್ಲಿ ಏನಾಯಿತೋ ಅದು ಆಗದಿದ್ದರೆ ಹಣ್ಣು ಹಣ್ಣು ಮುದುಕನಾಗುವವರೆಗೂ ಹಾಗೇ ಇದ್ದುಬಿಡುತ್ತಿದ್ದೆ. ಸಾಯುವ ಕಾಲದಲ್ಲಿ ‘ನಾನು ಪೂರಾ ಒಳ್ಳೆಯವನಲ್ಲದಿದ್ದರೂ ಒಳ್ಳೆಯ ಬಾಳು ಬಾಳಿದ್ದೇನೆ’ ಅಂದುಕೊಳ್ಳುತ್ತಿದ್ದೆನೇ ಹೊರತು ಎಂಥ ಪ್ರಪಾತಕ್ಕೆ ಬಿದ್ದು ಎಂಥಾ ಸುಳ್ಳನ್ನೇ ಅಪ್ಪಿಕೊಂಡು ಬದುಕಿದ್ದೆ ಎಂದು ತಿಳಿಯುತ್ತಲೇ ಇರಲಿಲ್ಲ.
‘ಇಬ್ಬರು ಬದ್ಧವೈರಿಗಳನ್ನು ಒಂದೇ ಸರಪಳಿಯಲ್ಲಿ ಕಟ್ಟಿಹಾಕಿ, ಅವರು ಒಬ್ಬರಿಗೊಬ್ಬರು ವಿಷ ತಿನ್ನಿಸುತ್ತಾ, ತಾವು ಮಾಡುತ್ತಿರುವುದೇನು ಎಂದು ಗೊತ್ತೇ ಇಲ್ಲದ ಹಾಗೆ ಇದ್ದರೆ ಹೇಗಿರುತ್ತದೋ ಹಾಗಿದ್ದೆವು ನಾವು. ನೂರಕ್ಕೆ ತೊಂಬತ್ತೊಂಬತ್ತು ದಂಪತಿಗಳ ಪಾಡು ಇದೇ ಎಂದು ನನಗೆ ಆಗ ಗೊತ್ತಿರಲಿಲ್ಲ. ನಾನು ಹೀಗಿದ್ದೇನೆ, ಎಲ್ಲರೂ ಹೀಗೆಯೇ ಇದ್ದಾರೆ ಎಂದು ಆಗ ತಿಳಿದಿರಲಿಲ್ಲ.
“ನೆಟ್ಟಾಗಾದರೂ ಬದುಕಲಿ, ಸೊಟ್ಟಗಾದರೂ ಬದುಕಲಿ. ಬದುಕಿನಲ್ಲಿ ಆಕಸ್ಮಿಕಗಳಂತೂ ಆಗುತ್ತಲೇ ಇರುತ್ತವೆ. ಗಂಡ ಹೆಂಡತಿಯರಿಗೆ ನಾವು ಒಟ್ಟಿಗೆ ಬದುಕುವುದು ಅಸಾಧ್ಯ ಅನ್ನಿಸುವಷ್ಟುಹೊತ್ತಿಗೆ ಮಕ್ಕಳ ಎಜುಕೇಶನ್ನಿಗಾಗಿ ಸಿಟಿಗೆ ಹೋಗಬೇಕಾದ ಸಂದರ್ಭ ಬಂದಿರುತ್ತದೆ.”
ಮಾತು ನಿಲ್ಲಿಸಿದ. ಒಂದೆರಡು ಬಾರಿ ವಿಚಿತ್ರವಾಗಿ ಸದ್ದುಮಾಡಿದ. ಅಳುವನ್ನು ತಡೆದುಕೊಂಡು ಬಿಕ್ಕಳಿಸಿದ ಹಾಗೆ ಇತ್ತು. ಯಾವುದೋ ಸ್ಟೇಷನ್ನು ಹತ್ತಿರವಾಗುತ್ತಿತ್ತು.
“ಎಷ್ಟು ಗಂಟೆಯಾಯಿತು?” ಎಂದ.
ಗಡಿಯಾರ ನೋಡಿಕೊಂಡೆ. ಎರಡು ಗಂಟೆಯಾಗಿತ್ತು.
“ಆಯಾಸವಾಗಿದೆಯೇ?” ಎಂದ.
“ಇಲ್ಲ. ನಿಮಗೆ?” ಎಂದೆ.
“ಉಸಿರು ಕಟ್ಟಿದ ಹಾಗೆ ಇದೆ. ಇಳಿದು ಕೊಂಚ ವಾಕ್‌ಮಾಡಿ ಟೀನೋ ನೀರೋ ಕುಡಿದು ಬರುತ್ತೇನೆ.”
ಜೋಲಿ ತಪ್ಪಿದವನಂತೆ ಬೋಗಿಯುದ್ದಕ್ಕೂ ನಡೆದುಹೋದ. ಅವನ ಮಾತುಗಳನ್ನೇ ಮೆಲುಕು ಹಾಕುತ್ತಾ ಕುಳಿತಿದ್ದೆ. ಅವನು ಬೋಗಿಯ ಇನ್ನೊಂದು ತುದಿಯ ಬಾಗಿಲಿನಿಂದ ಮತ್ತೆ ಒಳಗೆ ಬಂದದ್ದು ತಿಳಿಯಲೇ ಇಲ್ಲ.
(ಮುಂದುವರೆಯುವುದು)

Rating
No votes yet