ಗಂಟೆ ಹನ್ನೆರಡಾಗಿತ್ತು

ಗಂಟೆ ಹನ್ನೆರಡಾಗಿತ್ತು

ಕತ್ತಲೆಯ ರುದ್ರ ನರ್ತನಕ್ಕೆ ಬೆಳಕು ಸೋತು ಸುಣ್ಣವಾಗಿತ್ತು. ಬೆಳಕನ್ನು ನುಂಗಿ ನೀರು ಕುಡಿದ ಕತ್ತಲೆ ಗೆದ್ದ ಸಂಭ್ರಮದಲ್ಲಿ ಬೀಗುತ್ತಲಿತ್ತು. ಕತ್ತಲೆಯ ಆರ್ಭಟಕ್ಕೆ ತತ್ತರಿಸಿದ್ದ ಬೀದಿ ದೀಪಗಳು ತಮ್ಮ ಕೊನೆ ಉಸಿರು ಬಿಡುತ್ತಿರುವಂತೆ ಸಣ್ಣಗೆ ಉರಿಯುತ್ತಲಿದ್ದವು. ಕತ್ತಲೆಯ ವಿಕಾರ ರೂಪ ಕಂಡು ನಾಯಿಗಳು ಊಳಿಡುತ್ತಿದ್ದವು. ಇದೆಲ್ಲದರ ಮದ್ಯ ಮನುಷ್ಯ ಪ್ರಾಣಿ ಮಾತ್ರ ತನಗೇನು ಅರಿವಿಲ್ಲದಂತೆ ತನ್ನದಲ್ಲದ ಲೋಕದಲ್ಲಿ ವಿಹರಿಸುತ್ತಲಿತ್ತು.

ಕತ್ತಲೆಯ ಅಟ್ಟಹಾಸ ತನ್ನ ವಿಕಾರ ಸ್ವರೂಪದಲ್ಲಿರುವಾಗ ಸುತ್ತಲಿನ ಸ್ಮಶಾನ ಮೌನವನ್ನು ನೋಡಿ ಇದೆ ಸಮಯಕ್ಕೆ ಹೊಂಚು ಹಾಕಿ ಕುಳಿತಂತಿದ್ದ ಗಡಿಯಾರದ ದೊಡ್ಡ ಮುಳ್ಳು ಚಿಕ್ಕ ಮುಳ್ಳನ್ನು ಬಿಗಿಯಾಗಿ ತಬ್ಬಿಕೊಂಡಿತ್ತು. ಮೊದ ಮೊದಲು ಚಿಕ್ಕ ಮುಳ್ಳು ಪ್ರತಿಭಟಿಸಿದಂತೆ ಹನ್ನೆರಡು ಸಾರಿ ಲಬ ಲಬ ಬಾಯಿ ಬಡಕೊಂಡರು ದೊಡ್ಡ ಮುಳ್ಳಿನ ಬಾಹು ಬಂಧನದಲ್ಲಿ ಶರಣಾಗಿತ್ತು. ಸಮಯ ಕೈಜಾರಿ ಹೋಗಿತ್ತು ಗಡಿಯಾರದ ಗರ್ಭದಿಂದ ಮತ್ತೊಂದು ಹಕ್ಕಿ ಮರಿ ಹೊರಬಂದಿತ್ತು, ಏನನ್ನೂ ಅರಿಯದ ಕಂದಮ್ಮ ಚಿಲಿಪಿಲಿಗುಟ್ಟಿತ್ತು ಕಾಲದ ಕೈ ಗೊಂಬೆಯಂತೆ.

Rating
No votes yet