ಗಝಲ್
ಗೆಳೆಯ ಆನಂದ ಥಾಕೂರ ಹಿಂದುಸ್ತಾನಿ ಗಾಯಕ ಮುಂಬೈಯಲ್ಲಿ. ಹಾಗೂ ಕವಿ, ಇಂಗ್ಲೀಷನಲ್ಲಿ ಬರೆಯುತ್ತಾನೆ. Waking in December ಅವನ ಮೊದಲ ಕವನ ಸಂಕಲನ. ಕಾವ್ಯ ಮತ್ತು ಶಬ್ದಮಳ್ಳರು ಒಂದು ನಮೂನೆ ಜನ. ಇವನೊಬ್ಬ. ನನಗಿಷ್ಟವಾದ ಅವನ ಗಝಲ್ ಎಂಬ ಕವನದ ಅನುವಾದ ಇಲ್ಲಿದೆ. ನನ್ನ ಕರಡು ಅನುವಾದಗಳನ್ನು ಈಗಾಗಲೇ ನಿಮ್ಮ ಮೇಲೆ ಹೇರಿದ್ದೇನೆ. ಸೈರಿಸಿಕೊಂಡು ಓದಿ ಬಿಡಿ.
ಸುಮ್ಮನಿರಲೇ ಪ್ರಭು ಯಾ ಕರೆಯಲೇ ನಾನು ನಿನ್ನ?
ತಡೆದುಕೊಳ್ಳಲೇ ನನ್ನನ್ನ ಯಾ ಮಾಡಲೇ ಜಗಳವನ್ನ?
ಮಡಿದ ಗುರು ಮರಳಿದ, ಮಾತಲ್ಲಿ ಅವನ ತೆಪ್ಪಗಾಗಿಸಲೇ
ಯಾ ಶಾಲೊಳಗೆ ಸುತ್ತಿಡಲೆ ಅವನ ಮೂರ್ತಿಯನ್ನ?
ಕತ್ತಲೆಯ ಮೀರುವ ಬಯಕೆಯಿದ್ದರೂ ಮರುಳಾದೆ
ಕಾತರಿಸಿ ಕಾಯುವೆ ಆ ಗೂಡೊಳಗೆ ಮತ್ತೆ ಸೇರುವುದನ್ನ;
ಸಂತಜನರ ನುಡಿಗಳು ಕೆಟ್ಟಕನಸಂತೆ ಮಾಸುತಿವೆ
ಅವರಿಗಾಗಿ ಈ ಖೋಲಿಯಲಿ ಹಾಡಲಾರೆ ಹಾಡನ್ನ;
ಬಿಡು ಎನ್ನ ಪ್ರಭುವೆ, ಬಿಡು ನನ್ನ ಗೀತೆಗಳೊಡನೆ
ಇಂದು ರಾತ್ರಿ ದಾಸನಾಗಿರಲಾರೆ ನಾನು ನಿನ್ನ;
ತೆರೆದೇ ಇರಲಿ ಬಾಗಿಲು ಹೊರ ನೀನು ಹೋದಂತೆ
ರಮಿಸುವುದಿದೆ ಇನ್ನೊಬ್ಬ ಸಂಗಾತಿಯನ್ನ;
ಬಾ ಎನ್ನ ಸಖಿ ಬಾ ಜತೆಯಾಗೋಣ ಮತ್ತೊಮ್ಮೆ
ಈ ಸಂಜೆ ನೆನೆಯೋಣ ಪ್ರಾಚೀನ ಪತನವನ್ನ.