ಗಾಂಧೀಜಿ ಮತ್ತು ಪಾನನಿಷೇಧ

ಗಾಂಧೀಜಿ ಮತ್ತು ಪಾನನಿಷೇಧ

ನಮ್ಮ ಭಾರತ ವೈರುಧ್ಯಗಳ ಆಗರ ಅನ್ನೋದಕ್ಕೆ ಮತ್ತೊಂದು ಪುರಾವೆ.

ಮಹಾತ್ಮ ಗಾಂಧೀಜಿ ತಮ್ಮ ಜೀವಿತದುದ್ದಕ್ಕೂ ಕುಡಿತ ಮತ್ತದರ ದುಷ್ಪರಿಣಾಮಗಳ ಬಗ್ಗೆ ಜನರಿಗೆ ಬುದ್ಧಿವಾದ ಹೇಳಿ ತಿದ್ದಲೆತ್ನಿಸಿದವರೇ, ಜೊತೆಗೆ ಪಾನ ನಿಷೇಧವನ್ನ ಜಾರಿಗೆ ತರಲು ಕೂಡ ಶ್ರಮಿಸಿದವರು. ಸಂಪೂರ್ಣ ಪಾನ ನಿಷೇಧ ಅಲ್ಲದಿದ್ದರೂ ಅವರಿಗೆ ಗೌರವ ಸಲ್ಲಿಸಲು ನಮ್ಮ ಸರ್ಕಾರ ಎಟ್ ಲೀಸ್ಟ್ ಅವರ ಹುಟ್ಟುಹಬ್ಬಕ್ಕಾದರೂ ಪಾನ ನಿಷೇಧವನ್ನ ಜಾರಿಗೆ ತಂದಿದೆ, ಇದ್ರಿಂದಾದ್ರೂ ಅವರ ಆತ್ಮಕ್ಕೆ ಶಾಂತಿ ಸಿಗ್ಲಿ ಅಂತ :-)

ಅದ್ರೆ ಇಲ್ಲಿ ವೈರುಧ್ಯ ಗಮನಿಸಿದ್ರಾ? ಗಾಂಧೀಜಿಯವರ ಸ್ಮರಣಿಕೆಗಳನ್ನ ಹರಾಜಿಗೆ ಹಾಕಿದಾಗ ಅವನ್ನು ಭಾರತಕ್ಕೆ ಕೊಂಡು ತಂದು ಸರ್ಕಾರದ; ಭಾರತೀಯರ ಮಾನ ಉಳಿಸಿದವರು ಮತ್ತಾರೂ ಅಲ್ಲ ವಿಜಯ್ ಮಲ್ಯ ಎಂಬ ಅಬಕಾರಿ ದೊರೆಯೇ, ಮತ್ತು ಅವರು ಅದನ್ನ ತರೋಕ್ಕೆ ಆಗಿದ್ದು ಕೂಡ ಅವರು ಆಲ್ಕೋಹಾಲ್ ಮಾರಾಟ ಮಾಡಿ ಗಳಿಸಿದ ಸಂಪತ್ತಿನಿಂದಲೇ!!! ಗಾಂಧೀಜಿ ತಮ್ಮ ಸರಳತೆಗೆ ಹೆಸರುವಾಸಿ ಆದ್ರೆ ಈ ಮಲ್ಯ ಮಾಮ್ ತಮ್ಮ ಶೋಕಿಗೇ ಜಗದ್ವಿಖ್ಯಾತರು.

ಗಾಂಧಿ ಟೋಪಿ / ಮಹಾತ್ಮ ಅವರು ಪ್ರತಿಪಾದಿಸಿದ ನೂಲಿನ (ಖಾದಿಯ) ವಸ್ತ್ರ ಧರಿಸಿದ ರಾಜಕಾರಣಿಗಳು ನುಂಗಣ್ಣಗಳಾಗಿ, ಚುನಾವಣೆಯ ತಯಾರಿಯ ಭರಾಟೆಯಲ್ಲಿ ಒಂದೆಡೆ ಮೈಮರೆತಿದ್ದಾರೆ. ಹಣ ಹೆಚ್ಚಾಗಿರುವ ಮತ್ತೂ ಕೆಲವು ನಟ ನಟಿಯರು ಕ್ರಿಕೆಟ್ ಆಟಗಾರರನ್ನೇ ನಿಲಾವಿಗೆ ಹಾಕಿ ಕೊಂಡುಕೊಳ್ತಿದ್ದಾರೆ ಯಾಕಂದ್ರೆ ಅವ್ರಿಗೆ ಅದ್ರಲ್ಲೇ ಲಾಭ ಕಂಡಿದೆ. ಆದ್ರೆ ಗಾಂಧೀಜಿ ಸ್ಮರಣಿಕೆಗಳು ಯಾರಿಗೂ ಬೇಡವಾಗಿದ್ದ ಅಥವಾ ಯಾರೂ ಹೆಚ್ಚು ಉತ್ಸುಕತೆ ತೋರದಿದ್ದ ಸಂದರ್ಭದಲ್ಲಿ ಮಲ್ಯ ತಾವೇ ಸಮಯೋಚಿತ ನಿರ್ಧಾರ ಕೈಗೊಂಡು ಕೊಂಡು ತಂದ ಗಾಂಧೀಜಿ ವಸ್ತುಗಳನ್ನ ಸರ್ಕಾರಕ್ಕೇ ಅರ್ಪಿಸಿದ್ದಾರೆ. ಈ ಹಿಂದೆ ಟಿಪ್ಪು ಖಡ್ಗವನ್ನೂ ಇವರು ಹೀಗೇ ಭಾರತಕ್ಕೆ ಮರಳಿ ತಂದಿದ್ದನ್ನ ಮರೆಯುವಂತಿಲ್ಲ.

“ಈ ಪ್ರಪಂಚದಲ್ಲಿ ಹುಟ್ಟಿದ್ದಕ್ಕೆ ಋಣ ತೀರಿಸೋದು ಹೇಗಂದ್ರೆ, ನೀನಿರುವ ಸಮಾಜಕ್ಕೆ ಸೇವೆ ಮಾಡೋದೇ “ ಅಂತ ಟಿ.ಪಿ. ಕೈಲಾಸಂ ಹೇಳಿದ್ದು ಇದಕ್ಕೇನಾ? ಅಥವಾ ತಾನು ಮಾರುತ್ತಿರುವ ಆಲ್ಕೋಹಾಲ್ ಸಮಾಜವನ್ನ ಹಾಳು ಮಾಡಿರಬಹುದು ಅನ್ನೋ ಅಳುಕು ಮಲ್ಯರನ್ನ ಇಂಥಾ ’ಪ್ರಾಯಶ್ಚಿತ್ತಕ್ಕೆ’ (ಹಾಗೆ ಕರೆಯಬಹುದಾದ್ರೆ) ಪ್ರೇರೇಪಿಸಿತಾ ಕೇಳೋರ್ಯಾರು? ಎಷ್ಟು ಜನ ಹಣವಂತರಿಗೆ ಇಂಥಾ ಸದ್ಬುದ್ಧಿ ಇದ್ದೀತು ಅಲ್ವಾ?
ಏನೇ ಆಗಲಿ ’ಮಲ್ಯ ಕೀ ಜಯ್ ಹೋ’ :-) ಅನ್ನೋಣ್ವಾ?

Rating
No votes yet

Comments