ಗಾಡ್ ಆಫ್ ಲಿರಿಕ್ಷ್ - ಲಕ್ಷ್ಮೀಕಾಂತ ಇಟ್ನಾಳ
ಗಾಡ್ ಆಫ್ ಲಿರಿಕ್ಷ್
ಏನು ಹೇಳಲಿ ಗೆಳೆಯಾ,
ಯಾರನ್ನು ದೂರದಿಂದಲಾದರೂ ಸರಿ, ಕಣ್ದುಂಬಿಕೊಳ್ಳಲು,
ಜೀವನವೆಲ್ಲಾ ಕಾಯಲು ಸಿದ್ಧನಾಗಿದ್ದೆನಲ್ಲಾ,
ಆ ಸಾಹಿತ್ಯದ ಗಂಗೋತ್ರಿಯೊಂದಿಗೆ
ಇಡೀ ದಿನ ‘ಎದುರು- ಬದುರು’ ಮಾತುಕತೆಯಾಯಿತಲ್ಲ,
ಮಾತಾಯಿತು, ಚಹ ಮತ್ತೆ ಸಿಹಿ ತಿನಿಸುಗಳ ಕೊಡುಕೊಳ್ಳುವಿಕೆ,
ಚಂದ್ರನ ‘ಕಾಪಿ ರೈಟ್’ ಹೊಂದಿದ ಆ ಕಿನ್ನರನೊಡನೆ,
ನಮ್ಮೆಲ್ಲರ ಒಲವಿನ ಚಂದಿರನ ಜೊತೆಯಲ್ಲೆ
ಮುತ್ತಿನಂಥ ಮಾತಾದವಲ್ಲಾ!
ನನ್ನ ಅನುವಾದಗಳನ್ನು ಅದೆಷ್ಟು ಜತನವಾಗಿ,
ಪ್ರೀತಿಯಿಂದ ಕೈಯಲ್ಲಿ ನೇವರಿಸಿ, ಕವನಗಳ ಬೆರಳುಗಳ ಹಿಡಿದು,
ಒಲವಿನ ಮಾತುಗಳ ಮಳೆ ಸುರಿಸಿದರಲ್ಲಾ, ಮೈದಡವಿದರಲ್ಲಾ,
ವರುಷಗಳಿಂದ ಪ್ರೀತಿ ಅಕ್ಕರೆಯಲ್ಲಿ ಅಕ್ಷರಗಳ ಹೂಗಳಿಂದ ಅಲಂಕರಿಸಿದ್ದೆ,
ಗುರುವಿನ ಮುಂದೆ ಸಾಲದಾದವೆಲ್ಲಾ!
ಸಾಹಿತ್ಯದ ಮೇರು ಪರ್ವತ, ಇವರಲ್ಲವೇ ನಮ್ಮ ಚಂದಿರ,
ಅದರಿವರು ‘ಪ್ಲೂಟೋ’ ಕೂಡ ಹೌದಲ್ಲವೇ?
‘ಪು-ನೀ’ ಅನ್ನುತ್ತಿದ್ದರಲ್ಲ, ಮೊದಲು,
ಮತ್ತೊಮ್ಮೆ ‘ಗುಲ್ಜಾರ ದೀನ್ವಿ’ ಅಂದರಲ್ಲವೇ?
ಮತ್ತೀಗ ನಮ್ಮೆಲ್ಲರ ‘ಗುಲ್ಜಾರ ‘ ಅಲ್ಲವೆ!
ಇವೆಲ್ಲ ಹೆಸರುಗಳನ್ನು ಹೊತ್ತು ಒಂದೊಮ್ಮೆ ಎದ್ದು ನಿಂತರೆ,
ಅದು ಹೇಗೆ ಕಾಣುತ್ತಾರವರು! ಅಬ್ಬಾ
ನೊರೆಯ ಬಿಳುಪಿನ, ಶುಭ್ರ ಹೊಳಪಿನ, ಕಾಂಚನಜುಂಗಾ
ಹಾಂ . ಅದೇ ‘ಚೋಮೋ ಲುಂಗ್ಮಾ’
ನಿಂತ ಹಾಗೆ, ಆಕಾಶದೆತ್ತರ….. ಲಿರಿಕ್ಷ್‍ಗಳ ರಾಜನಾಗಿ!
ಮತ್ತೇನು ಹೇಳಲಿ?
ಇಂತಹ ಕನಸೊಂದು ಬೀಳುವುದು
ಎಂದು ಕನಸಿನಲ್ಲಿಯೂ ಎಣಿಸಿರಲಿಲ್ಲ,
ಹಾಗೊಮ್ಮೆ ಧಿಗ್ಗನೆ ಕನಸಿಂದ ಎಚ್ಚರಾಗಲು,
ನೋಡಲು ಅಲ್ಲೇನೂ ಇಲ್ಲವಲ್ಲಾ
ತಲೆತುಂಬ ಮಧುರ ಸುಗಂಧ,
ಶಬ್ದಗಳ ಕಣ್ಣುಗಳಲ್ಲಿ ಪರಿಮಳ ಬೀರುತ್ತಿವೆ,
ಕಾಲನ್ನು ನೆಲದ ಮೇಲೆ ಇಡಲು ಹೊರಟವನಿಗೆ
ಕಂಡದ್ದೇನು?
ಅರೆ, ಕಾಲ ಬುಡದಲ್ಲಿ ಸ್ವರ್ಗವಿದೆಯಲ್ಲಾ!
ಆದರೆ ಸುತ್ತ ಯಾರ ಸುಳಿವೂ ಇಲ್ಲವಲ್ಲಾ
ಯಾರೋ ಬಂದು ಹೋದ ಹಾಗೆ ಅನಿಸುತ್ತಿದೆಯಲ್ಲಾ
ಗುಲ್ಜಾರರ ಪುಸ್ತಕದಲ್ಲಿ ಇದೇನಿದು , ನನ್ನ ಹೆಸರು!
ಹಸ್ತಾಕ್ಷರ ಅವರದು ಒಡಮೂಡಿದೆಯಲ್ಲಾ!
ಏನಿದು ನನಸೋ! ಇಲ್ಲಾ ಬದುಕಿನ ಕನಸೋ?!!
Comments
ಉ: ಗಾಡ್ ಆಫ್ ಲಿರಿಕ್ಷ್ - ಲಕ್ಷ್ಮೀಕಾಂತ ಇಟ್ನಾಳ
ಇಟ್ನಾಳರೆ ನಮಸ್ಕಾರ. ನಿಮ್ಮ ಭೇಟಿಯ ಅನುಭವವನ್ನು ಕಾವ್ಯವಾಗಿ ಬಿಚ್ಚಿಟ್ಟ ರೀತಿ ಚೆನ್ನಾಗಿದೆ. ನಿಮ್ಮ ಆ ಹೊತ್ತಿನ ಭಾವ ತೀವ್ರತೆ, ಮನದ ದಿಗ್ಭ್ರಮೆ, ಹರ್ಷೋತ್ಕರ್ಷ, ಅದೆಲ್ಲವನ್ನು ಮೀರಿಸಿದ ಧನ್ಯತಾ ಭಾವ - ಕವನದ ಪ್ರತಿ ಸಾಲುಗಳಲ್ಲಿ ಎದ್ದು ಕಾಣುತ್ತವೆ. ತಮ್ಮ ಕಾತರದ ಭೇಟಿ ಮತ್ತದರ ಸೂಕ್ತ ಕಾವ್ಯಾಭಿವ್ಯಕ್ತಿ - ಎರಡಕ್ಕೂ ಅಭಿನಂದನೆಗಳು ಮತ್ತು ಧನ್ಯವಾದಗಳು.
In reply to ಉ: ಗಾಡ್ ಆಫ್ ಲಿರಿಕ್ಷ್ - ಲಕ್ಷ್ಮೀಕಾಂತ ಇಟ್ನಾಳ by nageshamysore
ಉ: ಗಾಡ್ ಆಫ್ ಲಿರಿಕ್ಷ್ - ಲಕ್ಷ್ಮೀಕಾಂತ ಇಟ್ನಾಳ
ಆತ್ಮೀಯ ನಾಗೇಶ್ ಜಿ, ತಮ್ಮ ಕವನದ ಮೆಚ್ಚುಗೆಗೆ, ಭೇಟಿಯ ಅಭಿನಂದನೆಗಳಿಗೆ ನಮ್ರ ನಮನಗಳು
In reply to ಉ: ಗಾಡ್ ಆಫ್ ಲಿರಿಕ್ಷ್ - ಲಕ್ಷ್ಮೀಕಾಂತ ಇಟ್ನಾಳ by lpitnal
ಉ: ಗಾಡ್ ಆಫ್ ಲಿರಿಕ್ಷ್ - ಲಕ್ಷ್ಮೀಕಾಂತ ಇಟ್ನಾಳ
ಕವನ ತುಂಬಾ ಚೆನ್ನಾಗಿ ಒಡಮೂಡಿದೆ....
ಅಭಿನಂದನೆಗಳು...
In reply to ಉ: ಗಾಡ್ ಆಫ್ ಲಿರಿಕ್ಷ್ - ಲಕ್ಷ್ಮೀಕಾಂತ ಇಟ್ನಾಳ by Gururaj Halmat
ಉ: ಗಾಡ್ ಆಫ್ ಲಿರಿಕ್ಷ್ - ಲಕ್ಷ್ಮೀಕಾಂತ ಇಟ್ನಾಳ
ಆತ್ಮೀಯ ಗುರುರಾಜ್ ಜಿ, ತಮ್ಮ ಮೆಚ್ಚುಗೆಗೆ ವಂದನೆಗಳು
ಉ: ಗಾಡ್ ಆಫ್ ಲಿರಿಕ್ಷ್ - ಲಕ್ಷ್ಮೀಕಾಂತ ಇಟ್ನಾಳ
ಸಾಧನೆ ಮತ್ತು ನಡವಳಿಕೆ- ಎರಡರಲ್ಲೂ ದೊಡ್ಡವರೆನಿಸಿಕೊಂಡವರು ಪೂಜ್ಯರಾಗುತ್ತಾರೆ. ಅದೇ ಭಾವ ನಿಮ್ಮೀ ಬರಹದಲ್ಲಿ ಒಡಮೂಡಿದೆ.
In reply to ಉ: ಗಾಡ್ ಆಫ್ ಲಿರಿಕ್ಷ್ - ಲಕ್ಷ್ಮೀಕಾಂತ ಇಟ್ನಾಳ by kavinagaraj
ಉ: ಗಾಡ್ ಆಫ್ ಲಿರಿಕ್ಷ್ - ಲಕ್ಷ್ಮೀಕಾಂತ ಇಟ್ನಾಳ
ಕವಿನಾ ಸರ್ ಜಿ, ತಮ್ಮ ಆತ್ಮೀಯ ಪ್ರೀತಿ ಪೂರ್ವಕ ಮೆಚ್ಚುಗೆಯ ಭಾವಗಳಿಗೆ ನಮನಗಳು