ಚರ್ಚೆ: ಕನ್ನಡದಲ್ಲಿ ವಿಜ್ಞಾನ ಹಾಗು ತಂತ್ರಜ್ಞಾನ ಕುರಿತ ಬರವಣಿಗೆ

ಚರ್ಚೆ: ಕನ್ನಡದಲ್ಲಿ ವಿಜ್ಞಾನ ಹಾಗು ತಂತ್ರಜ್ಞಾನ ಕುರಿತ ಬರವಣಿಗೆ

[ಸಂಪದ ಕಾರ್ಯಕ್ರಮ]

ಮ್ಮದೇ ಸಮುದಾಯದವರನ್ನು ತಲುಪುವುದು ತುಂಬ ಕಷ್ಟ ಎನ್ನುವುದು ನಿಜವಾದ ಸಂಗತಿ. ನಾವೆಲ್ಲ ಬೆಳೆದು ಬಂದ ಜಗತ್ತು ಈಗ ನಮ್ಮನ್ನೆಲ್ಲ ಹತ್ತಿರ ತಂದಿರುವ ಅದೇ ಭಾಷೆಯ ಸುತ್ತ ಪೋಣಿಸಿದ್ದು. ಹೀಗಾಗಿಯೇ ನಾವುಗಳು ಇಲ್ಲಿದ್ದೇವೆ, ನಮ್ಮ ಕೆಲಸಗಳಲ್ಲಿ ಬಳಸುವ ಭಾಷೆ ಬೇರೆಯದ್ದಾದರೇನು, ನಮ್ಮ ಭಾಷೆಯ ನಂಟು ಬಿಟ್ಟಿಲ್ಲ! ಸೂಕ್ಷ್ಮ ರೇಖೆಯಂತಿರುವ ಈ "ಭಾಷೆ" ಎಂಬ ಬಂಧ ಬೇರೆ ಬೇರೆ ಆಸಕ್ತಿ, ಬೇರೆ ಬೇರೆ ಅಭಿಪ್ರಾಯಗಳ ಬುತ್ತಿಯನ್ನು ಕಟ್ಟಿ ತರುವ ನಮ್ಮನ್ನೆಲ್ಲ ಅದು ಹೇಗೆ ಹಿಡಿದಿಟ್ಟಿದೆ ಎಂಬುದು ಒಮ್ಮೊಮ್ಮೆ ಆಶ್ಚರ್ಯ ಹುಟ್ಟಿಸುತ್ತದೆ.
ಕಾರ್ಯಕ್ರಮದ ದಿನದಂದು ಕಂಡುಬಂದ ಮುಖಗಳು ಸಂಖ್ಯೆಯ ಲೆಕ್ಕದಲ್ಲಿ ನಮಗೆ ಕೊಂಚ ಬೇಸರ ಮೂಡಿಸಿದರೂ, ಆ ದಿನ "ಕನ್ನಡದಲ್ಲಿ ವಿಜ್ಞಾನ ಹಾಗು ತಂತ್ರಜ್ಞಾನ ಕುರಿತ ಬರವಣಿಗೆ"ಯ ಸುತ್ತ ಒಂದು ಉತ್ತಮ ಚರ್ಚೆ ನಡೆದದ್ದು ಖುಷಿ ಕೊಟ್ಟಿತು. ಉದ್ದೇಶ ಇದ್ದದ್ದು ಹೀಗೆ ಬರೆಯಲು ಇಂಟರ್ನೆಟ್ ಬಳಸುವುದು ಹೇಗೆ? ಮತ್ತು ತದನಂತರ ಇಂಟರ್ನೆಟ್ಟಿನಿಂದ ಹೊರಗೆ, ಇಂಟರ್ನೆಟ್ ವ್ಯಾಪ್ತಿಯಿಲ್ಲದೆಡೆಗೆ ಅದನ್ನು ವಿಸ್ತರಿಸುವುದು ಹೇಗೆ ಎನ್ನುವುದರ ಸುತ್ತ. ಚರ್ಚೆ ನಡೆದದ್ದು ಭಾನುವಾರ ೨೯, ೨೦೦೯, ಸೆಂಟರ್ ಫಾರ್ ಇಂಟರ್ನೆಟ್ ಎಂಡ್ ಸೊಸೈಟಿ, ಕನ್ನಿಂಗ್ಹಾಮ್ ರೋಡಿನಲ್ಲಿ.

ಅಂದು ನಾವು ಕನ್ನಿಂಗ್ಹಾಮ್ ರೋಡಿಗೆ ಹೊರಟು ನಿಂತಾಗ ನಮಗದು 'ಮತ್ತೊಂದು ಭಾನುವಾರ'. ಆದರೂ ಎಷ್ಟು ಜನ ಬರುತ್ತಾರೋ, ಯಾರು ಯಾರು ಬರುವರು ಎಂಬ ಕುತೂಹಲ ನಮಗೆ! ನಾವುಗಳು ಎಲ್ಲರಿಗೂ ಆಮಂತ್ರಣ ಕಳುಹಿಸಿದ್ದೇ ಕೊಂಚ ತಡವಾಗಿ! ಕಾರ್ಯಕ್ರಮದ ಬಗ್ಗೆ ತಿಳಿಸಲು ಒಂದು ವಾರ ಕೂಡ ಇರಲಿಲ್ಲ. ಅದಕ್ಕೆ ಸೇರಿಕೊಂಡಂತೆ ಮೂರು ದಿನ ರಜೆ ಬೇರೆ - ಯುಗಾದಿ, ಶನಿವಾರ ಮತ್ತು ಭಾನುವಾರ!

ಆದರೆ ಆ ಭಾನುವಾರ ವಿಶೇಷ ದಿನವೆನಿಸಿದ್ದು ಹೌದು. ನಮ್ಮ ನೆಚ್ಚಿನ ವಿಷಯಗಳು - ತಂತ್ರಜ್ಞಾನ, ಕನ್ನಡ ಇವುಗಳೊಡನೆ - ಅಂತರ್ಜಾಲ ಕೂಡ ಬೆರೆತದ್ದಲ್ಲದೆ ಅವುಗಳ ಕುರಿತು ಉತ್ತಮ ಚರ್ಚೆ ನಡೆದದ್ದು ನಮ್ಮೆಲ್ಲರ ಮನಸ್ಸಿನಲ್ಲಿ ಅಚ್ಚಾಗಿ ಉಳಿಯುವ ನಿಮಿಷಗಳು.

ಮೊದಲ ಅವಧಿ ಕನ್ನಡದಲ್ಲಿ ತಂತ್ರಾಂಶಗಳು ಹಾಗು ಅದರ ಸುತ್ತ ಇರುವ ತಂತ್ರಜ್ಞಾನದ ಕುರಿತು ಬರೆಯುವ ಬಗ್ಗೆ ಮಾತುಕತೆ ಎಂಬುದಾಗಿತ್ತು ನಮ್ಮ ಉದ್ದೇಶ. ನಾನು ಕೊಟ್ಟ ಒಂದು ಪುಟ್ಟ ಪೀಠಿಕೆಯ ನಂತರ ಪತ್ರಕರ್ತ ಗೆಳೆಯರಾದ ಇಸ್ಮಾಯಿಲ್ ಚರ್ಚೆ ಪ್ರಾರಂಭಿಸಿದರು, ಚರ್ಚೆ ತಂತ್ರಾಂಶಗಳ ಕುರಿತು ಹೇಗೆ ಬರೆಯುವುದು ಎಂಬುದರ ಸುತ್ತ ನಡೆಯಿತು. ಹಲವು ವಿಷಯಗಳು ಚರ್ಚೆಗೆ ಬಂದವು. ತೀರ ಗ್ರಾಂಥಿಕವಾದ ಅನುವಾದ ಮಾಡಬೇಕಿಲ್ಲ ಎಂಬ ವಿಷಯವನ್ನು ಇಸ್ಮಾಯಿಲ್ ಕೂಡಲೆ ಪ್ರಸ್ತಾಪಿಸಿದರು. ಈಗಾಗಲೇ ಬಳಕೆಯಲ್ಲಿರುವ ಕೆಲವು ಪದಗಳು ಅವು ಇದ್ದಂತೆಯೇ ಬಳಸಬಹುದು ಎಂಬ ವಿಷಯವನ್ನು ಮುಂದಿಟ್ಟರು. ಅತಿಯಾದ ಸಂಸ್ಕೃತ ಬಳಸಿ ತಂತ್ರಜ್ಞಾನದ ಪದಗಳನ್ನು ಅನುವಾದ ಮಾಡುವ, ಹೊಸ ಹೊಸ ಪದಗಳನ್ನು ರಚಿಸುವ ಮನೋಭಾವ ಪ್ರಶ್ನಿಸಿದರು. ಅದೇ ಸಮಯ ಹಳೆಗನ್ನಡ ಬಳಸಿಯೂ ಹೀಗೆಯೇ ಮಾಡಲಾಗುತ್ತಿರುವ ಮತ್ತೊಂದು extreme ಕುರಿತು ಗಮನ ಸೆಳೆಯುವ ಎಂದಿದ್ದೆ - ಅಷ್ಟರೊಳಗೆ ಚರ್ಚೆಯಲ್ಲಿ ಮತ್ತಷ್ಟು ದನಿ, ಅಭಿಪ್ರಾಯಗಳು ಬೆರೆತು ಮಾತುಕತೆ ಮುನ್ನಡೆದು ಹೋಗಿತ್ತು. ಒಟ್ಟಾರೆ, ಪರ್ಯಾಯ ಪದಗಳಿಲ್ಲದ ಸಮಯ, ಗೊಂದಲ ಮೂಡಿಸುವಂತಹ ಪದಗಳಿರುವ ಸಮಯ, ಆಗಲೇ ಬಳಕೆಯಲ್ಲಿರುವ ಇಂಗ್ಲೀಷ್ ಪದಗಳನ್ನೇ ಬಳಸುವುದು ಎಂಬ ವಿಷಯಕ್ಕೆ ಬೆಂಬಲ ಸಿಕ್ತು. ಚರ್ಚೆ ನಡೆಯುತ್ತಿದ್ದ ಸಮಯ ಕಳೆದ ಚುನಾವಣೆಯಲ್ಲಿ ಬಿಜೆಪಿಯ "Feel Good Factor" ಕನ್ನಡಕ್ಕೆ ಅನುವಾದಗೊಳ್ಳುವಾಗ ಪತ್ರಿಕೆಗಳಲ್ಲಿ ಏನೆಲ್ಲ ಅನಾಹುತಕ್ಕೀಡುಮಾಡಿತ್ತು, ಏನೆಲ್ಲ ಗೊಂದಲ ಹುಟ್ಟುಹಾಕಿತ್ತು ಎಂಬ ವಿಷಯ ಪ್ರಸ್ತಾಪವಾಯಿತು. ಓದುಗರಿಗೆ ಸರಿಯಾಗಿ ಅರ್ಥವಾಗದೇ ಇದ್ದದ್ದಷ್ಟೇ ಅಲ್ಲ, ಆಗ ಪತ್ರಕರ್ತರು ಬರೆದ ವಿಷಯ ಓದುಗರಿಗೆ ಸರಿಯಾಗಿ ತಲುಪದೇ ಹೋಗಿತ್ತು ಕೂಡ. ಈ ವಿಷಯ ಈಗ ನಗಣ್ಯವೆನಿಸಬಹುದು, ಆದರೆ ಮಾಹಿತಿ ತಲುಪಿಸುವಾಗ ಈ ಚಿಕ್ಕ ಸಮಸ್ಯೆಯೂ ಪ್ರಮುಖ ವಿಷಯವಾಗಬಹುದು.  

ನಂತರ ತಂತ್ರಜ್ಞಾನ ಕುರಿತು ಬರೆಯುವಾಗ ಮತ್ತೆ ಮತ್ತೆ ಎದುರಾಗುವ ತೊಂದರೆಗಳು, ಬರೆಯುವ ಉತ್ಸಾಹವನ್ನೇ ಹೋಗಲಾಡಿಸುವಂತಹ ತೊಂದರೆಗಳು - ಈ ಕುರಿತು ಚರ್ಚೆ ಮುಂದುವರೆಯಿತು.

ಇಸ್ಮಾಯಿಲ್ ಹಾಕಿದ ಪ್ರಶ್ನೆ: "ಪ್ರೊಜೆಕ್ಟರನ್ನು ಕನ್ನಡದಲ್ಲಿ ಏನಂತ ಕರೆಯುತ್ತೀರಿ?" ಬರವಣಿಗೆಯ ಮೂಲ ಉದ್ದೇಶದ ಕುರಿತು ಗಮನ ಹರಿಸಬೇಕಾದ ಅವಶ್ಯಕತೆ, ಭಾಷೆಯನ್ನು 'ಶುದ್ಧ'ವಾಗಿಟ್ಟುಕೊಳ್ಳುವುದಕ್ಕಿಂತ ಮುಖ್ಯವಾದದ್ದು ಎಂಬುದನ್ನು ಒಪ್ಪುವಂತೆ ಮಾಡಿತ್ತು.

ನಡುವೆ ಕೆಲವು ಸ್ವತಂತ್ರ ತಂತ್ರಾಂಶಗಳ ಕುರಿತು, ಅದರಲ್ಲಿ ಕನ್ನಡವನ್ನು ಬಳಸುವ, ಕನ್ನಡದಲ್ಲಿ ಅದನ್ನು ಬಳಸುವ ಕುರಿತು ಚರ್ಚೆ ನಡೆಯಿತು.

ನಾಗೇಶ ಹೆಗಡೆಯವರು ಮಧ್ಯಾಹ್ನದ ಅವಧಿಗೆ ಜೊತೆಗೂಡಿದರು, ಚರ್ಚೆಯಲ್ಲಿ ಪಾಲ್ಗೊಂಡರು. ಕನ್ನಡದಲ್ಲಿ ತಂತ್ರಜ್ಞಾನ ಹಾಗು ವಿಜ್ಞಾನ ಬರಹಗಳನ್ನು ಚರ್ಚಿಸುವಾಗ ನಾಗೇಶ ಹೆಗಡೆಯವರ ಹೆಸರಿಲ್ಲದೆ ನಡೆಯದು. ಸ್ವತಃ ಅವರೇ ಚರ್ಚೆಯಲ್ಲಿ ಭಾಗವಹಿಸಿದ್ದು ಒಂದು ಅಪೂರ್ವ ಕ್ಷಣ.

ಕನ್ನಡ ಪ್ರಭದ ಕಾರ್ಯನಿರ್ವಾಹಕ ಸಂಪಾದಕರಾದ ರವಿ ಹೆಗಡೆ ಕೂಡ ಎರಡನೇ ಅವಧಿಯ ಚರ್ಚೆಯಲ್ಲಿ ಪಾಲ್ಗೊಂಡರು. ಎರಡನೆಯ ಅವಧಿ ಕನ್ನಡದಲ್ಲಿ ಪರಿಸರದ ಸುತ್ತ ಬರೆಯುವ ಬಗ್ಗೆ ಮಾತುಕತೆಯಿಂದ ಪ್ರಾರಂಭವಾದದ್ದು. ಅಲ್ಲಿಂದ ಚರ್ಚೆ ಡೇಟ ಸೆಂಟರುಗಳು ಗ್ಲೋಬಲ್ ವಾರ್ಮಿಂಗಿಗೆ ಎಷ್ಟು ಕಾಣಿಕೆ ನೀಡುತ್ತಿದೆ ಎನ್ನುವಲ್ಲಿಂದ ಗೂಗಲ್ ವರೆಗೂ ಮುಟ್ಟಿತು. ಅಂತರ್ಜಾಲ ಬಳಸುವವರ ಪ್ರೈವೆಸಿಗಿರುವ ತೊಂದರೆಗಳ ಕುರಿತು ಚರ್ಚೆ ನಡೆಯಿತು. ಆ ನಂತರ ಆರ್ ಟಿ ಐ (ರೈಟ್ ಟು ಇನ್ಫರ್ಮೇಶನ್ ಆಕ್ಟ್) ಕುರಿತ ಚರ್ಚೆ ನಡೆಯಿತು. ಕನ್ನಡದಲ್ಲಿ ಆರ್ ಟಿ ಐ ಕುರಿತ ಮಾಹಿತಿ, ಸಹಾಯ ಪುಟಗಳ ಅಗತ್ಯವಿರುವ ಕುರಿತು ಚರ್ಚೆ ನಡೆಯಿತು. ತದನಂತರ ಸ್ವತ್ರಂತ್ರ ತಂತ್ರಾಂಶಗಳಾಗಿ ಲಭ್ಯವಿರುವ ಪರ್ಯಾಯ ಆಯ್ಕೆಗಳ ಕುರಿತು ಮಾತುಕತೆ ನಡೆಯಿತು. ಗ್ನು/ಲಿನಕ್ಸ್ ಹಾಗು ಅದರಲ್ಲಿ ಕನ್ನಡದ ಸುತ್ತ ಲಭ್ಯವಿರುವ ತಂತ್ರಾಂಶಗಳು, ಪದ್ಮ (ಕನ್ವರ್ಶನ್ ಮಾಡಲು ಬಳಸಬಹುದಾದ ತಂತ್ರಾಂಶ) ಹಾಗು ಉದಯೋನ್ಮುಖ ಬರಹಗಾರರಿಗೆ, ಪತ್ರಕರ್ತರಿಗೆ ಉಪಯೋಗವಾಗಬಹುದಾದ ಕೆಲವು ಪ್ಲಗಿನ್ನುಗಳು - ಇವುಗಳ ಕುರಿತು ಚರ್ಚೆ ನಡೆಯಿತು. ಕೊನೆಗೆ ಕಂಪ್ಯೂಟರನ್ನು ಪ್ಲಾನೆಟೋರಿಯಂನಂತೆಯೇ ಮಾಡಿಬಿಡುವ ಸ್ಟೆಲೇರಿಯಂ ಎಂಬ ತಂತ್ರಾಂಶದ ಕುರಿತು ಚರ್ಚೆ ನಡೆಯಿತು - ಒಂದು ದೃಶ್ಯಾವಳಿ ಕೂಡ ಇತ್ತು (ಸ್ಟೆಲೇರಿಯಂ ಒಂದು 'ಸ್ವತಂತ್ರ' ತಂತ್ರಾಂಶ).

ಚರ್ಚೆಯಲ್ಲಿ ನಾಗೇಶ ಹೆಗಡೆಯವರು ಹಲವು ಪ್ರಮುಖ ವಿಷಯಗಳನ್ನು ಮುಂದಿಟ್ಟರು. ಬರವಣಿಗೆ ಹೊಸ ರೂಪದಲ್ಲಿ ಬರುತ್ತಿರಬೇಕು, ಹೊಸ ನೆಲೆಗಳನ್ನು ಕಂಡುಕೊಂಡು ಮುಂದುವರೆಯುತ್ತಿರಬೇಕು, ಹಳತನ್ನು ಅಥವ ಮತ್ತೊಬ್ಬರ ಬರವಣಿಗೆ ಶೈಲಿಯನ್ನು ನಕಲು ಮಾಡುವಂತಿರಬಾರದು ಎಂಬುದರ ಕುರಿತು ಅವರು ಹೇಳಿದ ಮಾತುಗಳು ನನ್ನ ನೆನಪಿನಲ್ಲಿ ಅಚ್ಚುಳಿದದ್ದು. ತಂತ್ರಜ್ಞಾನದ ಬಗ್ಗೆ ಬರೆಯುವುದಷ್ಟೇ ಅಲ್ಲ, ಅದರ ಬಳಕೆ (ಹೇಗೆ, ಎಲ್ಲೆಲ್ಲಿ ಇತ್ಯಾದಿ), ಅದರಿಂದಾಗುವ ಬೆಳವಣಿಗೆಗಳು, ತೊಡರುಗಳು - ಈ ಕುರಿತು ಬರೆಯುವುದು ಕೂಡ ಅಷ್ಟೇ ಮುಖ್ಯ ಎಂದರು.  ರವಿ ಹೆಗಡೆಯವರು ಬ್ಲಾಗುಗಳು ಸಾಂಪ್ರದಾಯಿಕ ಮಾಧ್ಯಮ ಮುಟ್ಟುವ ಎಷ್ಟೋ ಓದುಗರನ್ನು ಮುಟ್ಟುವುದಿಲ್ಲ ಎಂಬುದರ ಕುರಿತು ತಿಳಿಸುತ್ತ ಅಂತರ್ಜಾಲದಲ್ಲಿ ಬರೆಯುವವರು ಹೆಚ್ಚು ಹೆಚ್ಚು ಸಾಂಪ್ರದಾಯಿಕ ಮಾಧ್ಯಮಗಳಲ್ಲಿ, ಟಿವಿ, ಪುಸ್ತಕ ಇತ್ಯಾದಿಗಳಲ್ಲೂ ತಂತ್ರಜ್ಞಾನ ಹಾಗು ವಿಜ್ಞಾನ ವಿಷಯಗಳ ಬಗ್ಗೆ ಬರೆದು ಮಾಹಿತಿ ಹಂಚಿಕೊಳ್ಳಬೇಕು ಎಂದರು. ಅಂತರ್ಜಾಲದ ಸಾಮರ್ಥ್ಯ ಬಳಸಿ ಹೇಗೆ ಸಮುದಾಯ ಹೊಸ ಹೆಜ್ಜೆಗಳನ್ನಿಟ್ಟು ಬದಲಾವಣೆಗಳನ್ನು ತರಬಹುದು, ಇಲ್ಲಿಂದ ಪ್ರಾರಂಭಿಸಿ ಹೊರನಡೆದು ಹೇಗೆ ರಾಜ್ಯದ ಎಲ್ಲ ಭಾಗಗಳನ್ನು ಮುಟ್ಟಬಹುದು ಎಂಬುದರ ಕುರಿತು ಸಹ ಚರ್ಚೆ ನಡೆಯಿತು. ಈ ರೀತಿಯ ಸಮುದಾಯ ಪ್ರಯತ್ನಗಳು ಹೆಚ್ಚು ದೂರ ಅನಿಸಲಿಲ್ಲ ನಮಗೆ - ಅಂದು ಜೊತೆಗೂಡಿದ್ದ ನಮ್ಮಲ್ಲಿ ಹಲವರಿಗೆ ಇತರರ ಪರಿಚಯವಾದದ್ದು ಕೂಡ ಅಂತರ್ಜಾಲದ ಮೂಲಕವೇ...  'ನಮ್ಮ ಭಾಷೆ' ಎಂಬ ಒಂದು ಆಸಕ್ತಿಯ ಸುತ್ತ ಹೆಣೆದು.
ಅಲ್ಲದೆ ಈಗಾಗಲೇ ಹಲವು ಸಮುದಾಯ ಪ್ರಯತ್ನಗಳು ಅಂತರ್ಜಾಲದಲ್ಲಿ ಪ್ರಾರಂಭಗೊಂಡು ಹೊರಗಿನ ಜನರಿಗೂ ತಲುಪುತ್ತಿರುವುದು.

ಚರ್ಚೆ ಅನೌಪಚಾರಿಕವಾಗಿ ಪ್ರಾರಂಭವಾದದ್ದಲ್ಲದೆ ಹಾಗೆಯೇ ಮುಗಿದದ್ದು ನಮಗೆಲ್ಲ ಒಂದು ರೀತಿಯ ಆಶ್ಚರ್ಯ, ಖುಷಿ ತಂದಿತು. ಕಾರ್ಯಕ್ರಮಗಳು, ಮಾತುಕತೆ ಎಂದರೆ ಎಂದಿನಂತೆ ಕೆಲವರ ಮಾತು - ಇನ್ನುಳಿದವರು ಕುಳಿತು ಕೇಳಿಸಿಕೊಳ್ಳುವುದು ಎಂಬಂತೆ. ಆದರೆ ಈ ದಿನದ ಮಾತುಕತೆ ವಿಭಿನ್ನವಾಗಿದ್ದು, ಎಲ್ಲರಿಗೂ ತಮ್ಮ ಅಭಿಪ್ರಾಯ ಮಂಡಿಸುವ ಸ್ವಾತಂತ್ರ ನೀಡಿತು. ಅಲ್ಲದೆ, ನಮ್ಮ ಮನಸ್ಸಿನ ಮುಂದೆ ಹಾದೂ ಹೋಗಿರದಂತಹ ಕೆಲವು ವಿಷಯಗಳು ಮತ್ತೊಬ್ಬರ ಮಾತಿನಲ್ಲಿ ಕೇಳಿಬಂದಾಗ ಉಪಯೋಗವಾಗುವ ಸಾಧ್ಯತೆಗಳು ಇಲ್ಲಿದ್ದವು. ಇದನ್ನೆಲ್ಲ ಸಾಧ್ಯವಾಗಿಸಿದ ಸೆಂಟರ್ ಫಾರ್ ಇಂಟರ್ನೆಟ್ ಎಂಡ್ ಸೊಸೈಟಿಯವರಿಗೆ ಎಷ್ಟು ಥ್ಯಾಂಕ್ಸ್ ಹೇಳಿದರೂ ಸಾಲದು. ಕಾರ್ಯಕ್ರಮ ನಡೆಸಲು ಜಾಗ ಕೊಟ್ಟಿದ್ದಲ್ಲದೆ ಮಧ್ಯಾಹ್ನದ ಊಟ, ಬೆಳಗಿನ ಕಾಫಿ ಮುಂತಾದವುಗಳನ್ನೂ ಅವರೇ ವಹಿಸಿಕೊಂಡಿದ್ದರು! ಇಷ್ಟೆಲ್ಲ ಪ್ರೋತ್ಸಾಹ ನೀಡುವುದಲ್ಲದೆ ಕಾರ್ಯಕ್ರಮ ಮುಕ್ತ, ಸ್ವತಂತ್ರ ಹಾಗು ಸಾಂಪ್ರದಾಯಿಕವಲ್ಲದಂತೆ ನಡೆಸುವಲ್ಲಿ ಇವರ ಸಹಕಾರ ಮರೆಯಲಾಗದ್ದು. ಒಂದು ರೀತಿಯಲ್ಲಿ ಕಾರ್ಯಕ್ರಮ ಸಾಧ್ಯವಾದದ್ದು ಇವರಿಂದಲೇ.

ಅಂದು ಭಾಗವಹಿಸಿ ಚರ್ಚೆಯಲ್ಲಿ ಪಾಲ್ಗೊಂಡ ಎಲ್ಲರಿಗೂ ವಂದನೆಗಳು, ಅಭಿನಂದನೆಗಳು. ಮುಂದೊಮ್ಮೆ, ಮತ್ತೊಮ್ಮೆ ಕಾರ್ಯಕ್ರಮ ಇಟ್ಟುಕೊಂಡಲ್ಲಿ ಇಲ್ಲೇ ಅದರ ಕುರಿತು ಬರೆದು ನಿಮಗೆ ತಿಳಿಸುತ್ತೇವೆ. ಈ ಬಾರಿ ಕಾರಣಾಂತರಗಳಿಂದ ಭಾಗವಹಿಸಲಾಗದವರು ಆಗ ಪಾಲ್ಗೊಳ್ಳಬಹುದು. ನವ ಚಿಗುರಾಗಿ ಹಳೆ (ಬೀರ್ ಅಲ್ಲ) ಬೇರಿನ ನಂಟು ಬಿಡದೆ ಹೊಸತನ್ನು ಕಾಣುತ್ತ ಹೊಸ ಹೆಜ್ಜೆ ಇಡೋಣ, ಒಟ್ಟಾಗಿ! 

ಇದೇ ಕುರಿತು ನಾನು ಇಂಗ್ಲೀಷಿನಲ್ಲಿ ಬರೆದ ಬ್ಲಾಗ್ ಇಲ್ಲಿ ಓದಬಹುದು.

Rating
No votes yet

Comments