ಚಿಂತೆ

ಚಿಂತೆ

ಚಿಂತೆಯ ಸಂತ್ಯಾಗ, ಸಿಗತಾರ ಎಲ್ಲಾರು,
ಅಲ್ಲಿಲ್ಲ ಬಡವ, ಶ್ರೀಪತಿ,
ಮೇಲು, ಕೀಳೆಂಬ
ಭೂತ ಪ್ರೇತದ ಭಾವನೆಗಳು.

ಇರುವುದು ಅದು ಬಹುದೂರ
ಇವುಗಳ ಒಡೆತನದಿಂದ
ಅದಕ್ಕಿಲ್ಲ ಗಡಿಗಳು
ಅಲ್ಲಿಲ್ಲ ಯಾವುದೇ ಧರ್ಮದ ಗುಡಿಗಳು
ಭಾರತ, ಲಂಕೆ, ಅಮೆರಿಕೆಗಿರುವಂತೆ
ಅದಕ್ಕಿಲ್ಲ ಮೋಹಕ ಕಡಲ ತೀರಗಳು
ಸೌರಮಂಡಲಕೆ ಸೂರ್ಯನಿರುವಂತೆ
ಬೆಳಕ ನೀಡಲು
ಅಲ್ಲಿಲ್ಲ ಯಾವುದೇ ತಾರೆಗಳು
ಬೇಕಿಲ್ಲ ಅಲ್ಲಿ ಹೋಗಲು ಯಾವುದೇ ಪಾಸ್ಪೋರ್ಟು
ಬಸ್ಸು, ರೈಲು ಬಂಡಿಗಳ ತಿಕೀಟು

ಎಚ್ಚರ!!!
ಒಮ್ಮೆ ಒಳಹೊಕ್ಕರಲ್ಲಿಗೆ
ಹಿಂದಿರುಗಿಬರಲು,
ಅಲ್ಲಿಲ್ಲ ಬಂಡಿ, ಬೈಸಿಕಲ್ಲು
ಟಾಕ್ಸಿ, ಆಟೋರಿಕ್ಷಾಗಳು,
ಏನೋ? ಕಷ್ಟಪಟ್ಟರೆ,
ಸಿಗಬಹುದಂತೆ
ಮನಸ್ಸೆಂಬ ಒಂದು ವಿಮಾನ.

ತಪ್ಪಿ ಅಲ್ಲೇನಾದರು, ಸಿಕ್ಕಿಬಿದ್ದರೆ
ದೇವರೇ!!!
ಕಡಲು, ಹೊಳೆಗಳ ಸುಳಿಯಲ್ಲಿ
ಸಿಕ್ಕಿಕೊಳ್ಳುವುದಕ್ಕಿಂತಲೂ ಬಲು ಭೀಕರ
ಆಗ, ಅದು ತೋರದಿರದು
ತನ್ನ ವಿಧ ವಿಧವಾದ
ಬಣ್ಣ ಬಣ್ಣದ ರೂಪಗಳ ಆಕಾರ
ಕಗ್ಗತ್ತಲ ಕೋಣೆಯೊಳಗಿರುವುದಕ್ಕಿಂತಲೂ
ಬಲು ಅಪಾಯಕರ.

ಮನ ಮುರ್ಕ ಚಿಂತೆ
ಮನೆ ಮುರ್ಕ ಚಿಂತೆ
ಸರ್ವೋದ್ಧಾರಕ ಚಿಂತೆ
ಸರ್ವ ವಿನಾಶಕವೂ ಅಹುದು
ಅಬ್ಬಾ!
ಇದೆಂತಾ ವಿಸ್ಮಯಕರ.

ಅದು ಏನೇ ಇರಲಿ
ಹರಿ-ಹರ, ಅಲ್ಲ, ಅಲ್ಲಮ, ಗೌತಮ, ಮಹವೀರ , ಏಸು
ಯಾರನ್ನಾದರೂ ಬೇಡಿ
ಇರಲೆನ್ನ ಮನ
ಚಿಂತೆಯಿಂ ಬಲು ದೂರ.....

- ಜಯಪ್ರಕಾಶ ನೇ ಶಿವಕವಿ

Rating
No votes yet