ಜಾತೀಯತೆ ಮತ್ತು ನನ್ನ ಅಪ್ಪ
ಅಭಿನವ ರಾಮಾನುಜ ಎಂಬ ಶೀರ್ಷಿಕೆಯಲ್ಲಿ ನನ್ನ ಅಪ್ಪನಿಗಿದ್ದ ಸಾಮಾಜಿಕ ಕಳಕಳಿಯ ಬಗ್ಗೆ ಪ್ರಸ್ತಾಪಿಸಲಾಗಿದೆ. ನನ್ನ ಅಪ್ಪ ಜೀವಿಸಿದ್ದ ಕಾಲದಲ್ಲಿ, ಅಂದರೆ ಅವರ ಬಾಲ್ಯ ಮತ್ತು ಪ್ರೌಡವಯಸ್ಸಿನ ಕಾಲದಲ್ಲಿ ಭಾರತದಲ್ಲೆಲ್ಲಾ ಅಸ್ಪೃಶ್ಯತೆಯನ್ನು ಬಹಳ ತೀವ್ರವಾಗಿ, ಅಚ್ಚುಕಟ್ಟಾಗಿ ಆಚರಿಸುತ್ತಿದ್ದ ಸಮಯ. ಈ ಹೀನ ಆಚರಣೆಯ ವಿರುದ್ಧ ಸಮಾಜ ಸುಧಾರಕರೆಲ್ಲ ಭಾರತದ ಉದ್ದಗಲಕ್ಕೆ ನಿರಂತರ ಹೋರಾಟ ಮಾಡುತ್ತಿದ್ದ ಕಾಲವದು. ನನ್ನ ಅಪ್ಪನ ಕಾಲವಿರಲಿ, ನನ್ನ ಬಾಲ್ಯದಲ್ಲೇ, ನಾನೇ ಕಂಡ ಹಾಗೆ ಹರಿಜನರನ್ನು ದೂರದಲ್ಲಿಯೇ ಇಡುತ್ತಿದ್ದರು. ಪಟ್ಟಣ ಪ್ರದೇಶದಲ್ಲಿ ಅಷ್ಟಾಗಿ ಕಾಣದಿದ್ದರೂ, ಹಳ್ಳಿಗಳಲ್ಲಿ ಇದು ಬಹಳ ತೀವ್ರವಾಗಿಯೇ ಇತ್ತು.
ಅಂದರೆ ನನ್ನ ಕಾಲಕ್ಕೆ ಭಾರತವು ಸ್ವತಂತ್ರ ಪ್ರಜಾಪ್ರಭುತ್ವ ರಾಷ್ಟ್ರವಾದ ಮೇಲೂ ಈ ಪದ್ಧತಿ ಜಾರಿಯಲ್ಲಿ ಇತ್ತು. ಅಂದ ಮೇಲೆ ನನ್ನ ಅಪ್ಪನ ಕಾಲಕ್ಕೆ ಹರಿಜನರು ಏನಲ್ಲಾ ಪಾಡುಪಟ್ಟಿರಬೇಕು ಎಂದು ಊಹಿಸಲೂ ಸಾಧ್ಯವಿಲ್ಲ. ಅಷ್ಟೊಂದು ತೀವ್ರಸ್ವರೂಪದ ಜಾತಿ ಪದ್ಧತಿಯ ಪರಿಸರದಲ್ಲಿಯೇ ಹುಟ್ಟಿ ಬೆಳೆದ ನನ್ನ ಅಪ್ಪನಿಗೆ, ಸಮಾಜದ ಈ ಅನಿಷ್ಟ ಪದ್ಧತಿಗಳ ವಿರುದ್ಧ ನಿಲ್ಲುವ ಕ್ರಾಂತಿಕಾರಿಯಾದ ವೈಚಾರಿಕತೆ ಹೇಗೆ ಬೆಳೆಯಿತು ಎಂಬುದು ನನಗೆ ತಿಳಿಯದ ವಿಚಾರ. ಆದರೆ ಅವರನ್ನು ಹತ್ತಿರದಿಂದ ಕಂಡ ನನಗೆ, ಅವರ ಒಂದೊಂದು ಚಿಂತನೆಯೂ ಅತ್ಯಂತ ಕ್ರಾಂತಿಕಾರಿಯಾಗಿದ್ದದ್ದು ತಿಳಿದಿದೆ. ಅಂದರೆ ಯಾವುದೋ ಕಾರಣಗಳಿಗಾಗಿ ಮಾನವ ತನ್ನ ಸುತ್ತ ಮುತ್ತ ನಿರ್ಮಿಸಿಕೊಳ್ಳುವ ಅಮಾನವೀಯ, ಅಮಾನುಷವಾದ ಗೋಡೆಗಳು, ಅವನ ಮನದಾಳದಲ್ಲಿರುವ ಮಾನವೀಯ ತುಡಿತಗಳ ಕಾರಣದಿಂದ, ಅವನನ್ನು ಇವುಗಳ ವಿರುದ್ಧ ಸಿಡಿದೇಳುವಂತೆ ಮಾಡುತ್ತವೆ ಎನಿಸುತ್ತದೆ.
ಕೆಲವರು ಯಾವರೀತಿಯಾದ ಪ್ರತಿಭಟನೆಯನ್ನೂ ತೋರದೆ, ಹೇಗೋ ನಡೆಯುವುದು ನಡೆಯುತ್ತಿದೆ, ನಮಗ್ಯಾಕೆ ಈ ಉಸಾಬರಿ, ಎಂದು ಸದ್ದಿಲ್ಲದೇ ಕಾಲಹಾಕಿ ತಮ್ಮ ಜೀವನವನ್ನು ಮುಗಿಸುತ್ತಾರೆ. ಪುರಂದರ ದಾಸರು ಹಾಡಿದ ಹಾಗೆ
“ಗೆದ್ದವನು ಗೆದ್ದೇ ಹೋದ,
ಒದ್ದವನು ಒದ್ದೇ ಹೋದ,
ಇದ್ದವನು ಇದ್ದೇ ಹೋದ,
ಪುರಂದರವಿಠಲ ನಿನ್ನ ಚೋದ್ಯ ನಿನಗೇ ವೇದ್ಯ” ಎಂದು ಇರುತ್ತಾರೆ. ಎಲ್ಲೋ ಕೆಲವರು ಮಾತ್ರ ಅನ್ಯಾಯಗಳ ವಿರುದ್ಧ ಸಿಡಿದೇಳುತ್ತಾರೆ. ಈ ಕೆಲವೇ ಕೆಲವರಲ್ಲಿ ನನ್ನ ಅಪ್ಪ ಒಬ್ಬನಾಗಿದ್ದ ಎಂದು ತಿಳಿಯಲು ನನಗೆ ಬಹಳ ಹೆಮ್ಮೆಯಾಗುತ್ತದೆ. ನನ್ನ ಅಪ್ಪನ ಸ್ವಭಾವ ಎಂದರೆ, ತನಗೆ ಸರಿಕಾಣದಿದ್ದರೆ ಆ ವಿಚಾರವನ್ನು ಪ್ರಶ್ನಿಸಿ, ಪರಿಶೀಲಿಸಿ ನಂತರವೇ ಒಪ್ಪಿಕೊಳ್ಳುವ ಸ್ವಭಾವ. ಎಲ್ಲರೂ ಮಾಡುತ್ತಾರೆ ಎಂದು ತಾನೂ ಮೌನವಾಗಿ ಹಾಗೆಯೇ ಮಾಡುವ ಜಾಯಮಾನ ಅವರದ್ದಲ್ಲ. ಅಷ್ಟಾಗಿ ಅವರು ಹುಟ್ಟಿ ಬೆಳೆದಿದ್ದು ಒಂದು ಸಾಂಪ್ರದಾಯಿಕ ಬ್ರಾಹ್ಮಣ ಕುಟುಂಬದಲ್ಲಿ. ತನ್ನ ಬಾಲ್ಯದಲ್ಲಿ ಕಂಡ ಅನೇಕ ಅಮಾನವೀಯ ಆಚರಣೆಗಳು ಅವರ ಮನದಾಳದಲ್ಲಿ ತೀವ್ರ ಪರಿಣಾಮವನ್ನು ಉಂಟು ಮಾಡಿರಬೇಕು ಎಂದು ನನ್ನ ಅನಿಸಿಕೆ. ಇದರಿಂದಾಗಿ ಅವರು ಬೆಳೆದು ದೊಡ್ಡವರಾದ ಮೇಲೆ ತಮ್ಮಲ್ಲಿಯೇ, ಒಂದು ರೀತಿ ವೈಚಾರಿಕತೆಯನ್ನು ಬೆಳೆಸಿಕೊಂಡಿರಬೇಕು. ಅದೇ ಕಾರಣಕ್ಕೆ, ಅವರ ಉಡುಗೆ ತೊಡುಗೆಗಳು, ಒಬ್ಬ ಕರ್ಮನಿಷ್ಠ ಬ್ರಾಹ್ಮಣನಂತೆ ಇದ್ದರೂ, ಅವರ ಚಿಂತನೆಗಳು ಮಾತ್ರ ಕ್ರಾಂತಿಕಾರಕವಾಗಿದ್ದವು. ತಮ್ಮ ಚಿಂತನೆಗಳನ್ನು ಕಾರ್ಯರೂಪಕ್ಕೆ ತಂದರೇ ವಿನಾಃ ಎಂದೂ ಪ್ರಚಾರಕ್ಕಾಗಿ ಬಳಸಲಿಲ್ಲ. ಪ್ರಚಾರ ಅವರಿಗೆ ಬೇಕಿರಲಿಲ್ಲ.
ಬಹಳ ಜನರಲ್ಲಿರುವಂಥ ಸೋಗಲಾಡಿತನ ಅವರಲ್ಲಿರಲಿಲ್ಲ. ಅವರ ಈ ರೀತಿಯಾದ ನಡವಳಿಕೆ, ಅವರ ಸಮಕಾಲೀನರ ಕೆಂಗಣ್ಣಿಗೆ ಗುರಿಯಾಗಿತ್ತು. ಆದರೆ ಅವರ ಧೀಮಂತ ವ್ಯಕ್ತಿತ್ವ, ನೇರನುಡಿ, ಸಚ್ಛಾರಿತ್ರ್ಯದ ಕಾರಣವಾಗಿ, ಯಾರೂ ಅವರನ್ನು ನೇರವಾಗಿ ಎದುರಿಸದಂತೆ ಮಾಡಿತ್ತು. ಅವರನ್ನು ಎದುರಿಸುವ ನೈತಿಕ ತಾಕತ್ತು ಯಾರಿಗೂ ಇರಲಿಲ್ಲ. ಕರ್ಮಠ ಬ್ರಾಹ್ಮಣರು ನನ್ನ ಅಪ್ಪನ ವೈಚಾರಿಕ ಮತ್ತು ಕ್ರಾಂತಿಕಾರಿ ನಿಲುವನ್ನು ನೇರವಾಗಿ ವಿರೋಧಿಸಲು ಆಗದೆ ಒಳಗೊಳಗೇ ಬೇಗುದಿ ಪಡುತ್ತಿದ್ದರು. ಬ್ರಾಹ್ಮಣರು ಹೀಗಿದ್ದರೆ, ಇತರ ಮೇಲು ಜಾತಿಯವರೂ ಸಹ, ಹರಿಜನರ ಮೇಲಿನ ದೌರ್ಜನ್ಯದಲ್ಲಿ ಷಾಮೀಲಾಗಿದ್ದುದ್ದನ್ನು ನಾನು ನನ್ನ ಬಾಲ್ಯದಲ್ಲಿ ಕಂಡಿದ್ದೇನೆ. ನನ್ನ ಹಳ್ಳಿಯಲ್ಲಿ ಅಸ್ಪೃಶ್ಯತೆಯನ್ನು ಎಲ್ಲರೂ ಬಹಳ ಅಚ್ಚುಕಟ್ಟಾಗಿ ಆಚರಿಸುತ್ತಿದ್ದರು. ಬ್ರಾಹ್ಮಣರ ಮಾತು ಬಿಡಿ. ತಾವು ಮೇಲು ಜಾತಿ, ಕುಲೀನರು ಎಂದು ತಿಳಿದು ಇತರೆ ಜಾತಿಯವರನ್ನು ಕೀಳಾಗಿ ಕಾಣುತ್ತಿದ್ದರು. ಈ ಆರೋಪ ಅವರ ಮೇಲೆ ಮೊದಲಿನಿಂದಲೂ ಇದೆ ಮತ್ತು ಬಹುಪಾಲು ಅದು ನಿಜವೂ ಹೌದು. ಆದರೆ ಜಾತಿ ಪದ್ಧತಿಯ ಅನುಸರಣೆ ಮತ್ತು ಹರಿಜನರ ಮೇಲಿನ ದೌರ್ಜನ್ಯದಲ್ಲಿ ಎಲ್ಲ ಮೇಲು ಜಾತಿಯವರೂ ತಪ್ಪಿತಸ್ಥರೆ. ಬ್ರಾಹ್ಮಣರು ಮಾತ್ರ ಈ ಪಾಪದಲ್ಲಿ ಭಾಗಿಗಳಲ್ಲ, ಅವರೊಂದಿಗೆ ಮಿಕ್ಕೆಲ್ಲರೂ ಪಾಪಿಗಳೇ.
ಭಾರತಕ್ಕೆ ಸ್ವಾತಂತ್ರ್ಯಬಂದ ಹೊಸತರಲ್ಲಿ ಸಂವಿಧಾನವನ್ನು ಅನುಮೋದಿಸಿ, ಪ್ರಜಾಪ್ರಭುತ್ವ ರಾಷ್ಟ್ರವಾದ ಮೇಲೆ ಅಸ್ಪೃಶ್ಯತೆಯನ್ನು ಕಾನೂನು ಬಾಹಿರ ಮಾಡಿದ ಮೇಲೂ ಸಹ ಈ ಹೀನ ಪದ್ಧತಿಯ ಆಚರಣೆ ನಿಲ್ಲಲಿಲ್ಲ. ಬೇರೆ ರಾಜ್ಯಗಳಲ್ಲಿ ಹೇಗೋ ತಿಳಿಯದು, ಆದರೆ ಕರ್ಣಾಟಕದಲ್ಲಿ ಹರಿಜನರನ್ನು ಆದಿ ಕರ್ನಾಟಕರು ಎಂದು ಕರೆಯಲಾಯಿತು. ಇಂಗ್ಲೀಷು ಭಾಷೆಯಲ್ಲಿ ಆದಿ ಕರ್ನಾಟಕ ಎಂದು ಬರೆಯುವಾಗ ಆ ಪದಗಳ ಆರಂಭದ ಅಕ್ಷರಗಳಿಂದ A.K. ಎಂದೇ ಕರೆಯುತ್ತಿದ್ದರು.
ನನ್ನೂರಿನಲ್ಲಿದ್ದ ಲಿಂಗಾಯಿತ ಕೋಮಿನವರು ನಡೆಸುತ್ತಿದ್ದ ಹೋಟೆಲ್ಲು ಅಧವಾ ಖಾನಾವಳಿಗಳಲ್ಲಿ ತಿಂಡಿ, ಕಾಫಿ, ಟೀ ಕುಡಿದನಂತರ, ಅವರೇ ಆ ತಟ್ಟೆ ಲೋಟಗಳನ್ನು ತೊಳೆದು ಅವಕ್ಕೆಂದೇ ಮೀಸಲಿಟ್ಟ ಜಾಗದಲ್ಲಿ ಅವನ್ನು ಇಡಬೇಕಿತ್ತು. ವಿಚಿತ್ರವೆಂದರೆ ಈ ಪದ್ಧತಿ ಅಥವಾ ಆಚರಣೆ ಬರೀ ಹಳ್ಳಿಗಳಲ್ಲಿ ಮಾತ್ರ ಆಚರಿಸಲ್ಪಡುತ್ತಿತ್ತು. ಪಟ್ಟಣ ಪ್ರದೇಶವಾದ ಮೈಸೂರಿಗೆ ಬಂದರೆ, ಇದೇ ಲಿಂಗಾಯಿತರು, ಗಂಗಡಿಕಾರರು, ಬಣಜಿಗರು ಹೀಗೆ ಎಲ್ಲ ಮೇಲು ಜಾತಿಯವರು ಹೋಟೆಲ್ಲುಗಳಲ್ಲಿ ಆದಿ ಕರ್ನಾಟಕರೊಂದಿಗೇ ತಿಂಡಿತಿಂದು ಕಾಫಿಕುಡಿದು ಬರುತ್ತಿದ್ದರು. ಹಳ್ಳಿಗೆ ಬಂದರೆ ಪುನಃ ಹಳೆಯ ಪದ್ಧತಿಯೇ. ಇದಕ್ಕೆ ಏನು ಕಾರಣ ಅಥವಾ ಪ್ರಚೋದನೆ ಎಂಬುದು ನನಗೆ ಇನ್ನೂ ತಿಳಿದಿಲ್ಲ.
ನನ್ನ ಹುಟ್ಟೂರಿನಲ್ಲಿ ಜಮೀನಿನ ಒಡೆಯರೆಲ್ಲ ಬಹುಪಾಲು ಲಿಂಗಾಯಿತ ಕೋಮಿಗೆ ಸೇರಿದವರು. ಅವರ ಜಮೀನಿನಲ್ಲಿ ದುಡಿಯುತ್ತಿದ್ದವರೆಲ್ಲ ಆದಿ ಕರ್ನಾಟಕ ಕೋಮಿನ ಜನ. ವ್ಯವಸಾಯ ಮಾಡುವಾಗಲೂ ಸಹ ಈ ವಿಚಿತ್ರ ಜಾತಿ ಪದ್ಧತಿಯನ್ನು ಚಾಚೂ ತಪ್ಪದೇ ಆಚರಿಸುತ್ತಿದ್ದರು. ಗದ್ದೆಗಳಿಗೆ ಕಾಲುವೆಗಳಿಂದ ನೀರು ಹರಿಸಬೇಕಾದರೆ ಒಡ್ಡು ಕಟ್ಟಬೇಕಿತ್ತು. ಈ ಒಡ್ಡು ಕಟ್ಟುವ ಕೆಲಸವನ್ನು ಆದಿ ಕರ್ನಾಟಕ ಕೋಮಿಗೆ ಸೇರಿದವರೇ ಮಾಡುತ್ತಿದ್ದರು. ಅವರು ಹರಿಯುತ್ತಿರುವ ಕಾಲುವೆ ನೀರಿನಲ್ಲಿ ನಿಂತು ನೀರಿಗೆ ಅಡ್ಡವಾಗಿ ಒಡ್ಡುಕಟ್ಟಿ ನೀರನ್ನು ಗದ್ದೆಗೆ ಹರಿಯುವಂತೆ ಮಾಡುತ್ತಿದ್ದರು. ಆಗ ಕಾಲುವೆ ನೀರಿಗೆ ಇತರೆ ಮೇಲುಜಾತಿ ಜಮೀನು ಒಡೆಯರು ಆದಿ ಕರ್ನಾಟಕದ ಜನರೊಂದಿಗೆ ನೀರಿಗೆ ಇಳಿಯುತ್ತಿರಲಿಲ್ಲ. ಕಾರಣವೇನೆಂದರೆ ಆ ನೀರಿನಲ್ಲಿ ಕೀಳು ಜಾತಿಯ ಆದಿ ಕರ್ನಾಟಕರು ನಿಂತಿದ್ದಾರಲ್ಲ, ಇದರಿಂದ ತಮ್ಮ ಜಾತಿ ಕೆಡುತ್ತದೆ ಎಂಬ ಭಾವನೆ.
ದುಡಿಮೆಗೆ ಇವರು, ಜಾತಿ ಹಿರಿಮೆಗೆ ಅವರು ಹೀಗಿತ್ತು ಅಂದಿನ ಪರಿಸ್ಥಿತಿ. ವ್ಯವಸಾಯದಲ್ಲಿ ಜಾತಿ ಪದ್ಧತಿ ಹೀಗಿದ್ದರೆ, ಆದಿ ಕರ್ನಾಟಕರಲ್ಲಿ ಯಾರಾದರೂ ಸತ್ತಾಗಲೂ, ಹೆಣವನ್ನು ಸುಡುಗಾಡಿಗೆ ಸಾಗಿಸಬೇಕಾದರೆ ಹತ್ತಿರದ ಮೇಲುಜಾತಿಯವರ ಕೇರಿಯ ಮೂಲಕ ಹೋಗುವ ಹಾಗಿರಲಿಲ್ಲ. ಸುತ್ತಿ, ಬಳಸಿ, ಎಲ್ಲೂ ಮೇಲು ಜಾತಿಯವರ ಕೇರಿಗೆ ತಾಗದಂತೆ ದೂರದ ದಾರಿಯಲ್ಲೇ ಹೋಗಬೇಕು. ನನ್ನ ಅಪ್ಪ ಈ ಎರಡೂ ಹೀನ, ಅಮಾನವೀಯ ಆಚರಣೆಗಳನ್ನು ಪ್ರಬಲವಾಗಿ ವಿರೋಧಿಸಿ ಅವುಗಳನ್ನು ಪುನಃ ಆಚರಿಸದಂತೆ ಮಾಡಿದರು.
ನನ್ನ ಅಪ್ಪ ಊರಿನಲ್ಲಿ ದಿನಸಿ ಅಂಗಡಿ ಇಟ್ಟು, ಸ್ವಲ್ಪ ಸ್ವಲ್ಪವಾಗಿ ಮುಂದಕ್ಕೆ ಬಂದು, ಊರಿನ ಪಕ್ಕದ ನಾಲಾ ಬಯಲಿನಲ್ಲಿ ಒಂದು ಸಣ್ಣ ಜಮೀನನ್ನು ಖರೀದಿಸಿದರು. ಸರಿ ಆ ಜಮೀನಿಗೆ ಇಲ್ಲ ಜಮೀನುಗಳಂತೆ ಕಾಲುವೆಗೆ ಒಡ್ಡುಕಟ್ಟಿ ನೀರು ಹರಿಸಬೇಕಲ್ಲ. ಹರಿಜನ ಕೋಮಿನವರನ್ನೇ ಕೂಲಿ ಕೆಲಸಕ್ಕೆ ಕರೆಯಬೇಕು. ಇತರೆ ಕೋಮಿನವರಿಗಿಂತ, ಹರಿಜನರು ಹೆಚ್ಚಾಗಿದ್ದುದರಿಂದ ಅವರೇ ಕೂಲಿ ಕೆಲಸಕ್ಕೆ ಬರುತ್ತಿದ್ದರು. ಹಾಗೆ ಒಡ್ಡು ಕಟ್ಟುವ ಕೆಲಸ ಪ್ರಾರಂಭವಾದ ದಿನಗಳಲ್ಲಿ ನನ್ನ ಅಪ್ಪ ಸಹ ಅವರೊಂದಿಗೆ ಕಾಲುವೆ ನೀರಿಗೆ ಇಳಿದು ಒಡ್ಡು ಕಟ್ಟುವ ಕೆಲಸಕ್ಕೆ ಸಹಾಯ ಮಾಡಿದರು. ಮಿಕ್ಕವರ ಹಾಗೆ ಕಾಲುವೆ ಏರಿಯ ಮೇಲೆ ನಿಂತು ಕೂಲಿ ಕಾರ್ಮಿಕರಿಗೆ ನಿರ್ದೇಶನ ಮಾಡಲಿಲ್ಲ. ನನ್ನ ಅಪ್ಪನ ಈ ನಡವಳಿಕೆಯಿಂದ ಇತರ ಮೇಲು ಜಾತಿಯ ಜನ ಸ್ವಲ್ಪ ಮುಜುಗರಪಟ್ಟರು. ಕೆಲವು ಮುಖಂಡರು ನನ್ನ ಅಪ್ಪನನ್ನು ಭೇಟಿಮಾಡಿ, ನೀವು ಹೀಗೆ ಆದಿ ಕರ್ನಾಟಕದವರಿಗೆ ಸಲುಗೆ ಕೊಟ್ಟರೆ ನಾವೆಲ್ಲ ಸಮಾಜದಲ್ಲಿ ನಮ್ಮ ಸ್ಥಾನ ಮಾನ ಗೌರವ ಕಳೆದುಕೊಳ್ಳಬೇಕಾಗುತ್ತದೆ, ನೀವು ಸ್ವಲ್ಪ ಇತಿ ಮಿತಿ ಅರಿತು ನಡೆದುಕೊಳ್ಳಬೇಕು ಎಂದು ಹೇಳಿದರು. ಇದಕ್ಕೆ ನನ್ನ ಅಪ್ಪ, ದುಡಿಮೆಗೆ ಯಾವ ಜಾತಿಯೂ ಇಲ್ಲ. ಅದೂ ಅಲ್ಲದೆ ನನ್ನ ಜಮೀನಿನಲ್ಲಿ ನಾನು ದುಡಿಯುತ್ತೇನೆ. ನನ್ನೊಂದಿಗೆ ದುಡಿಯುವವರು ನನ್ನ ಸಹವರ್ತಿಗಳು. ಇದರಲ್ಲಿ ನೀವು ಮಧ್ಯ ಪ್ರವೇಶಿಸುವಹಾಗಿಲ್ಲ, ಅಂಥಾ ಹಕ್ಕೂ ನಿಮಗಿಲ್ಲ ಎಂದು ಖಡಾಖಂಡಿತವಾಗಿ ಹೇಳಿಬಿಟ್ಟರು. ಆದರೂ, ನನ್ನ ಅಪ್ಪನ ಈ ಮಾತುಗಳು ಮತ್ತು ಆದಿ ಕರ್ನಾಟಕರ ಬಗ್ಗೆ ಅವರು ನಡೆದುಕೊಂಡ ರೀತಿ, ಇವೆಲ್ಲ ಇತರೆ ಮೇಲ್ಜಾತಿಯವರಿಗೆ ಅಷ್ಟಾಗಿ ಇಷ್ಟವಾಗಲಿಲ್ಲ. ಆದರೂ ನನ್ನ ಅಪ್ಪನನ್ನು ನೇರವಾಗಿ ವಿರೋಧಿಸದೆ ಸುಮ್ಮನಾದರು. ಇದರಲ್ಲಿ ಮತ್ತೊಂದು ಸೂಕ್ಷ್ಮವೂ ಅಡಗಿತ್ತು. ನನ್ನ ಅಪ್ಪನಾದರೋ ಹುಟ್ಟಾ ಬ್ರಾಹ್ಮಣ ಮತ್ತು ಅಂದಿನ ಸಾಮಾಜಿಕ ಚೌಕಟ್ಟಿನ ಪ್ರಕಾರ ಅತ್ಯಂತ ಮೇಲು ಜಾತಿಗೆ ಸೇರಿದವನು. ಅದಲ್ಲದೆ ಸಂಖ್ಯಾಬಲದಲ್ಲಿ ಆದಿ ಕರ್ನಾಟಕ ಕೋಮಿನವರದ್ದೇ ಮೇಲುಗೈ, ಎಲ್ಲ ದೈಹಿಕ ಶ್ರಮದಲ್ಲೂ ಅವರ ಸಹಕಾರವಿಲ್ಲದೇ ಏನು ಮಾಡಲೂ ಸಾಧ್ಯವಿರಲಿಲ್ಲ. ನಮ್ಮೆಲ್ಲರಿಗಿಂತ ಶ್ರೇಷ್ಠ ಜಾತಿಯವನೇ, ಇಷ್ಟು ದೊಡ್ಡ ಮನಸ್ಸಿನಿಂದ ಅವರೊಂದಿಗೆ ಬೆರೆಯುವಾಗ ನಾವುಗಳು ನಮ್ಮ ಜಾತಿ ಬುದ್ಧಿಯನ್ನು ಅಷ್ಟಾಗಿ ಪ್ರಕಟಿಸುವುದು ಸಮಂಜಸವಲ್ಲ ಎಂದು ತಿಳಿದು ಜಾಣಮೌನವನ್ನು ಪ್ರದರ್ಶಿದರು ಎಂದು ಈಗ ನನಗೆ ವೇದ್ಯವಾಯಿತು.
ಕಾಲಕ್ರಮೇಣ ನೀರು ಕಟ್ಟುವಾಗ ನೀರಿಗಿಳಿಯದೇ ದೂರ ನಿಲ್ಲುವ ಪ್ರವೃತ್ತಿ ಕಡಿಮೆಯಾಗುತ್ತಾ ಬಂತು ಮತ್ತು ಹಾಗೆಯೇ ಆ ಆಚರಣೆ ಮಾಯವಾಯಿತು. ಇಂದಿನ ಪರಿಸ್ಥಿತಿಯಲ್ಲಿ ಇದು ತೀರ ಅಪ್ರಸ್ತುತ ಎನ್ನಿಸಿದರೂ (ಇದಕ್ಕೆ ಈಗ ನೀರಿಲ್ಲದಿರುವುದೂ ಕಾರಣವಾಗಿರಬಹುದು), ನನ್ನ ಹಳ್ಳಿಯಲ್ಲಿ ಪ್ರಪ್ರಥಮವಾಗಿ ಜಾತಿಬೇರುಗಳನ್ನು ಅಲುಗಾಡಿಸಿದ ಯಶಸ್ಸು ನನ್ನ ಅಪ್ಪನಿಗೇ ಸಲ್ಲಬೇಕು. ಜಾತಿಪದ್ಧತಿ ಆಳವಾಗಿ ಬೇರೂರಿದ್ದ ಸಮಯದಲ್ಲಿ, ಧೀರನಂತೆ ನಿಂತು ಅದರ ವಿರುದ್ಧ ಸೆಟೆದುನಿಂತ ನನ್ನ ಅಪ್ಪನ ಸಾಮಾಜಿಕ ಕಳಕಳಿಯನ್ನು ಶ್ಲಾಘಿಸದೇ ಇರಲು ಸಾಧ್ಯವಿಲ್ಲ.
ಈ ಘಟನೆಯು ನನ್ನ ಮನಸ್ಸಿನಲ್ಲಿ ಮೂಡಿದಾಗ, ನನಗೆ ಹರಿಶ್ಚಂದ್ರಕಾವ್ಯದ ಕೆಲವು ಮಾತುಗಳು ನೆನೆಪಿಗೆ ಬರುತ್ತದೆ. ವಿಶ್ವಾಮಿತ್ರ ಮಹರ್ಷಿ ಸೃಷ್ಟಿಸಿದ ಮಾತಂಗ ಕನ್ಯೆಯರು ಹರಿಶ್ಚಂದ್ರನಲ್ಲಿಗೆ ಬಂದು ತಮ್ಮನ್ನು ಮದುವೆ ಮಾಡಿಕೋ ಎಂದು ಪ್ರಾರ್ಥಿಸಿದಾಗ ಹರಿಶ್ಚಂದ್ರ ಚಕ್ರವರ್ತಿ ಹೀನ ಕುಲದವರಾದ ಆ ಕನ್ಯೆಯರನ್ನು ಕುಲೀನ ವಂಶದವನಾದ ತಾನು ಮದುವೆಯಾಗಲು ಸಾಧ್ಯವೇ ಇಲ್ಲ. ಹಾಗಾದರೆ ತನ್ನ ಜಾತಿ ಕೆಡುತ್ತದೆ ಎಂದು ಹೀಗೆ ಹೇಳುತ್ತಾನೆ.
“ಕೊಡವಾಲಂ ಕೆಡಿಸಲ್ ಆಮ್ರವೆನಿತಾಗಬೇಕು?”
ಅಂದರೆ ಒಂದು ಕೊಡ ಹಾಲನ್ನು ಕೆಡಿಸಲು ಹುಳಿ ಎಷ್ಟು ಬೇಕು ಎಂದು ಹೇಳಿ ಅವರನ್ನು ದೂರಮಾಡುವ ಪ್ರಯತ್ನ ಮಾಡುತ್ತಾನೆ. ಇದನ್ನೂ ಕೇಳಿದ ಮಾತಂಗ ಕನ್ಯೆಯರು,
“ಸಕಲರ ಪಾಪವಂ ತೊಳೆವ ಗಂಗೆಗೆ ಪಾಪ ಲೇಪನವುಂಟಾಯ್ತೆ?”
ಎಂದು ಹರಿಶ್ಚಂದ್ರ ಚಕ್ರವರ್ತಿಯನ್ನು ಮರುಪ್ರಶ್ನೆ ಮಾಡಿ, ನಿನ್ನನು ಸೇರಿದರೆ ನಾವು ಪಾವನರಾಗುತ್ತೇವೆಯೇ ವಿನಃ ನೀನು ಪತಿತನಾವುದಿಲ್ಲ ಎಂದಾಗ, ತನ್ನ ಜಾತಿ ವ್ಯಾಮೋಹದಿಂದ,
“ಬಚ್ಚಲುದಕಂ ತಿಳಿದೊಡಂ ಆರ ಮೀಹಕ್ಕೆ ಯೋಗ್ಯಂ?” ಎಂದು ಹೇಳಿ ಅವರನ್ನು ತಿರಸ್ಕರಿಸಿ ಬಿಡುತ್ತಾನೆ. ಅಂದರೆ ಸತ್ಯಹರಿಶ್ಚಂದ್ರ ಸತ್ಯ ಪರಿಪಾಲನೆಯಲ್ಲಿ ಎಷ್ಟು ನಿಷ್ಠುರನೋ ತನ್ನ ಕುಲೀನ ಜಾತಿಯ ಬಗ್ಗೆಯೂ ಅಷ್ಟೇ ನಿಷ್ಠುರನಾಗಿದ್ದ ಎಂದು ತಿಳಿಯಬಹುದು.
ಆದರೆ ನನ್ನ ಅಪ್ಪ ಜಾತಿಯ ಬಗ್ಗೆ ಇದಕ್ಕೆ ತದ್ವಿರುದ್ಧ ನಿಲುವನ್ನು ತೆಳೆದಿದ್ದರು. ಬಹುಶಃ ಅವರು ಬಸವಣ್ಣನವರ ವಚನದಂತೆ “ಜಲವೊಂದೆ ಶೌಚಾಮನಕ್ಕೆ” ಎಂಬ ನಿಲುವನ್ನು ಹೊಂದಿದ್ದರು ಎಂದು ನನ್ನ ಅನಿಸಿಕೆ.
ಸುಮಾರು ಅರವತ್ತು ವರ್ಷಗಳ ಹಿಂದೆಯೇ ಅವರಲ್ಲಿ ಈ ರೀತಿಯಾದ ಜಾತ್ಯಾತೀತ ಮನೋಭಾವನೆ ಇತ್ತು ಮತ್ತು ತನ್ನ ನಂಬಿಕೆಗಳ ಪ್ರಕಾರವೇ ತಮ್ಮ ನಡವಳಿಕೆಯನ್ನೂ ರೂಪಿಸಿಕೊಂಡಿದ್ದರು ಎಂಬುದು ಬಹಳ ಅಚ್ಚರಿಯ ಸಂಗತಿಯೇ.
ಹರಿಜನರು ಸುಡುಗಾಡಿಗೂ ಸಹ ಬಳಸುದಾರಿಯಲ್ಲಿಯೇ ಹೋಗಬೇಕಾಗಿತ್ತು ಎಂದು ಹಿಂದೆಯೇ ಹೇಳಿದ್ದೆ. ಈ ಹೀನ ಆಚರಣೆಯನ್ನೂ ಸಹ ಪ್ರಬಲವಾಗಿ ವಿರೋಧಿಸಿ ಅದನ್ನು ನಿರ್ಮೂಲಮಾಡಿದ ಖ್ಯಾತಿಯೂ ಸಹ ನನ್ನ ಅಪ್ಪನಿಗೇ ಸೇರಬೇಕು.
ನಾನು ಹುಟ್ಟಿ ಬೆಳೆದ ಮನೆ ಹರಿಜನ ಕೇರಿಗೆ ಹೊಂದಿಕೊಂಡೇ ಇತ್ತು. ಹರಿಜನರು ಬೇರೆಲ್ಲಿಗೆ ಹೋಗಬೇಕಾದರೂ, ಬ್ರಾಹ್ಮಣರ ಕೇರಿ ಮತ್ತು ಪಕ್ಕದ ಗಂಗಡಿಕಾರ ಕೇರಿಯನ್ನು ದಾಟಿಯೇ ಹೋಗಬೇಕು. ಇಲ್ಲವಾದರೆ ಉಪ್ಪಲಿಗರ ಕೇರಿಯನ್ನು ಹಾದು ಹೋಗಬೇಕು. ಆದರೆ ಈ ಜಾತಿಯವರು ಯಾರೂ ಸಹ ಹರಿಜನರನ್ನು ತಮ್ಮ ಕೇರಿಯನ್ನು ಹಾದು ಹೋಗಲು ಬಿಡುತ್ತಿರಲಿಲ್ಲ. ಹರಿಜನರಿಗೆಂದೇ ಇದ್ದ ಬಳಸುದಾರಿಯಲ್ಲಿ ಹೋಗಬೇಕು, ಬೇರೆ ದಾರಿ ಇರಲಿಲ್ಲ. ಅಂದರೆ ಮೇಲು ಜಾತಿಯವರ ಕಣ್ಣಿಗೆ ಕಾಣದಂತೆ ಹೋಗಬೇಕಾಗಿತ್ತು. ಇದು ಆಗ ಆಚರಣೆಯಲ್ಲಿ ಇದ್ದ ಏರ್ಪಾಡು.
ಇನ್ನು ಹರಿಜನರಲ್ಲಿ ಯಾರಾದರೂ ಸತ್ತರೆ, ಹೆಣ ಸಾಗಿಸಲು ಬಹಳ ಪಾಡು ಪಡಬೇಕು. ಮೊದಲೇ ಹೆಣಭಾರ, ಅದನ್ನು ಬಳಸು ದಾರಿಯ ಮುಖಾಂತರ ಹೊರಬೇಕು. ಎಷ್ಟೇ ಕಷ್ಟವಾದರೂ, ಸುಡುಗಾಡಿಗೆ ಸಾಗಿಸಲೇ ಬೇಕಲ್ಲ! ಬೇರೆ ದಾರಿಯಿಲ್ಲದೆ ಬಳಸುದಾರಿಯ ಓಣಿಯ ಮೂಲಕ ಬಹಳ ಪ್ರಯಸದಿಂದ, ಸುಡುಗಾಡಿಗೆ ಹೊತ್ತುಕೊಂಡು ಹೋಗುತ್ತಿದ್ದರು. ಆದರೆ ನನ್ನ ಮನೆಯ ಮುಂದೆ ಇದ್ದ ದಾರಿಯಲ್ಲಿ ಹೋದರೆ ಸುಡುಗಾಡಿಗೆ ಬಹಳ ಹತ್ತಿರವಾಗುತ್ತಿತ್ತು. ಜಾತಿಯ ಕಟ್ಟಿಗೆ ಭಯಪಟ್ಟು, ತಮ್ಮ ಹಣೆಬರಹವನ್ನು ಹಳಿಯುತ್ತ, ದೂರದ ದಾರಿಯ ಮುಖಾಂತರ ಹೆಣಸಾಗಿಸಿ ಅಂತ್ಯ ಸಂಸ್ಕಾರ ಮಾಡುತ್ತಿದ್ದರು. ಎಲ್ಲೋ ಕೆಲ ಧೈರ್ಯಶಾಲಿ ಹರಿಜನರು ಅಲ್ಪ ಸ್ವಲ್ಪ ಪ್ರತಿಭಟನೆ ತೋರುತ್ತಿದ್ದರು ಅಷ್ಟೆ. ತಮ್ಮವರ ಹೆಣ ಸಾಗಿಸಲು ಹತ್ತಿರದ ದಾರಿಯಲ್ಲಿ ಹೋಗಲು ಅನುಮತಿ ಕೇಳುವ ಧೈರ್ಯ ಮಾಡುತ್ತಿದ್ದರು. ಇದನ್ನು ಪ್ರತಿಭಟನೆ ಎಂದು ಕರೆಯುವುದಕ್ಕಿಂತ, ಗೋಗರೆಯುವುದು ಎಂದು ಹೇಳಬಹುದು. ಮನುಷ್ಯನ ಸ್ವಭಾವ ಯಥಾಸ್ಥಿತಿಯನ್ನು ಕಾಯ್ದು ಕೊಳ್ಳುವುದಲ್ಲಿಯೇ ಮಗ್ನ, ಅಷ್ಟಿಷ್ಟು ಬದಲಾವಣೆಯನ್ನೂ ಸಹ ಒಪ್ಪುವುದಿಲ್ಲ. ಇನ್ನು ಶತಶತಮಾನಗಳಿಂದ ರೂಢಿಯಲ್ಲಿದ್ದ ಜಾತಿ ಪದ್ಧತಿಯು ಅಷ್ಟು ಸುಲಭದಲ್ಲಿ ಬದಲಾವಣೆ ಹೊಂದುತ್ತದೆಯೆ?
ನನ್ನ ಅಪ್ಪ ನನ್ನೂರಿನಲ್ಲಿ ಅಂಗಡಿ ಪ್ರಾರಂಭಿಸಿದ ದಿನಗಳು, ಪ್ರಾರಂಭದಲ್ಲಿ ಅಂಗಡಿ ವ್ಯಾಪಾರವನ್ನು ಅಭಿವೃದ್ಧಿಪಡಿಸುವುದರಲ್ಲಿಯೇ ಮಗ್ನರಾಗಿದ್ದರು. ತನ್ನ ಸುತ್ತ ಮುತ್ತಲಿನ ಪರಿಸರ, ರೂಢಿ, ಆಚರಣೆ ಇವೆಲ್ಲವನ್ನೂ ಗಮನಿಸಲು ಅವರಿಗೆ ಪುರುಸೊತ್ತಿರಲಿಲ್ಲ. ಹೀಗೆ ಸ್ವಲ್ಪಕಾಲ ಕಳೆಯಿತು.
ಒಂದುದಿನ ನನ್ನ ಮನೆಯ ಪಕ್ಕದಲ್ಲಿಯೇ ಇದ್ದ ಹರಿಜನ ಕೇರಿಯಲ್ಲಿ ಒಬ್ಬ ತೀರಿಕೊಂಡಿದ್ದ. ಅವನ ಹೆಣ ಒಪ್ಪಮಾಡಬೇಕು, ಯಥಾ ಪ್ರಕಾರ ಬಳಸು ದಾರಿಯ ಮುಖಾಂತರವೇ ಹೋಗಬೇಕು. ಇದೆಲ್ಲಾ ನಡೆಯುತ್ತಿದ್ದಾಗ, ನನ್ನ ಅಪ್ಪ ಸಹ ಅಂದು ಸ್ವಲ್ಪ ಬಿಡುವಾಗಿ ಮನೆ ಮುಂದಿನ ಜಗುಲಿಯ ಮೇಲೆ ಕುಳಿತಿದ್ದರು. ಅತ್ತ ಇತ್ತ ಜನರ ಓಡಾಟ, ಗುಂಪಾಗಿ ನಿಂತು ಕೆಲವರು ಗುಸ ಗುಸ ಮಾತನಾಡುವುದು, ಇವೆಲ್ಲವನ್ನೂ ಗಮನಿಸಿದ್ದಾರೆ. ಇಂದಿನ ಹಾಗೆ ರಸ್ತೆಪೂರ ಜನರು ಇರುತ್ತಿರಲಿಲ್ಲವಾದ್ದರಿಂದ, ಒಂದೆರೆಡು ಮಂದಿ ಹೆಚ್ಚಾಗಿ ಓಡಾಡಿದರೂ, ಜನರಲ್ಲಿ ಕುತೂಹಲ ಮೂಡುತ್ತಿತ್ತು. ನನ್ನ ಅಪ್ಪನೂ ಸಹ ಈ ರೀತಿಯ ಸಹಜವಾದ ಕುತೂಹಲದಿಂದ, ಅಲ್ಲೇ ರಸ್ತೆಯಲ್ಲಿ ನಿಂತಿದ್ದ ಒಬ್ಬನನ್ನು ಹತ್ತಿರಕ್ಕೆ ಕರೆದು “ಏನು ಸಮಾಚಾರ?” ಎಂದು ವಿಚಾರಿಸಿದ್ದಾರೆ. ಹರಿಜನರಕೇರಿಯಲ್ಲಿ ಒಬ್ಬ ತೀರಿಕೊಂಡಿದ್ದಾನೆ, ಹೆಣ ಸುಡುಗಾಡಿಗೆ ಸಾಗಿಸಬೇಕು, ಅಂತ್ಯ ಸಂಸ್ಕಾರಕ್ಕೆ ಹತ್ತಿರದಾರಿಯಲ್ಲಿ ಹೋಗಲು ಅನುಮತಿ ಕೊಟ್ಟರೆ ಅನುಕೂಲ ಎಂಬ ವಿಷಯ ತಿಳಿಯಿತು.
ಆದರೆ ಮೇಲು ಜಾತಿ ಕೇರಿಯ ಮೂಲಕ ಹೋಗಲು ಅನುಮತಿ ಯಾರು ಕೊಡಬೇಕು? ಹಾಗೆ ಅನುಮತಿ ಕೇಳುವವರು ಯಾರು? ಅಂದರೆ ಬೆಕ್ಕಿನ ಕತ್ತಿಗೆ ಗಂಟೆ ಕಟ್ಟುವವರು ಯಾರು? ಈ ರೀತಿಯಾದ ಗೊಂದಲಕ್ಕೆ ಅವರೆಲ್ಲ ಸಿಕಿಬಿದ್ದಿದ್ದರು.
ಈ ಸುಡುಗಾಡಿಗೆ ಹೋಗುವ ದಾರಿ ತಕರಾರು ಇದ್ದದ್ದು ನನ್ನ ಅಪ್ಪನಿಗೆ ಮೊದಲೇ ತಿಳಿದಿತ್ತು. ಆದರೆ ಅದನ್ನು ಸರಿಪಡಿಸುವ ಸರಿಯಾದ ಸಂದರ್ಭ ಅಲ್ಲಿಯವೆರೆಗೂ ಒದಗಿ ಬಂದಿರಲಿಲ್ಲ. ಇದೇ ಸರಿಯಾದ ಸಮಯ ಎಂದು ನಿರ್ಧರಿಸಿ, “ಲೇ, ಸತ್ತಮೇಲೆ ಏನ್ರೋ ಜಾತಿ, ಹೆಣ ಸಾಗಿಸೋಕೆ ಯಾರ ಅನುಮತಿಯೂ ಬೇಕಾಗಿಲ್ಲ. ನನ್ನ ಮನೆಮುಂದೇನೆ ಹೆಣಎತ್ತಿಕೊಂಡು ಹೋಗಿ” ಎಂದು ಬಿಟ್ಟರು. ನನ್ನ ಅಪ್ಪನ ಈ ಮಾತನ್ನು ಕೇಳಿದ ಹರಿಜನರು ತಕ್ಷಣಕ್ಕೆ ಸ್ವಲ್ಪ ನಿರಾಳರಾದರೂ, ಇದು ಅಷ್ಟು ಸುಲಭದಲ್ಲಿ ಬಗೆ ಹರಿಯುವ ವಿಷಯವಲ್ಲ ಎಂಬುದನ್ನೂ ತಿಳಿದಿದ್ದರು. ನನ್ನ ಅಪ್ಪ ಹೀಗೆ ತನ್ನ ಮನೆಯ ಮುಂದಿನಿಂದಲೇ ಹರಿಜನರಿಗೆ ಹೆಣ ಸಗಿಸಲು ಹೇಳಿದ ಮಾತು ಕ್ಷಣಮಾತ್ರದಲ್ಲಿ ಕಾಳ್ಗಿಚ್ಚಿನಂತೆ ಊರಿನಲ್ಲೆಲ್ಲಾ ಹರಡಿಬಿಟ್ಟಿತು. ಮಿಕ್ಕೆಲ್ಲ ಮೇಲು ಜಾತಿ ಮುಖಂಡರು ಎಲ್ಲ ಸೇರಿ ಗುಂಪಾಗಿ ನನ್ನ ಮನೆ ಮುಂದೆ ಸೇರಿಬಿಟ್ಟರು. ಅವರೆಲ್ಲಾ ನನ್ನ ಅಪ್ಪನನ್ನು ಸುತ್ತುವರಿದು, “ನೀವು ಹೀಗಿ ಮನಸ್ಸಿಗೆ ಬಂದಂತೆ ಮಾಡುವ ಹಾಗಿಲ್ಲ. ಅನೂಚಾನವಾಗಿ ನಡೆದು ಬಂದಿರುವ ಪದ್ಧತಿಯನ್ನು ಮುರಿಯಲು ಸಾಧ್ಯವಿಲ್ಲ. ನೀವು ನಿಮ್ಮ ಮನೆ ಮುಂದೆ ಹೆಣ ಸಾಗಿಸಲು ಬಿಟ್ಟರೂ, ನಾವೆಲ್ಲ ನಮ್ಮ ಮನೆ ಮುಂದೆ ಸಾಗಿಸಲು ಬಿಡುವುದಿಲ್ಲ. ಅದೇನು ಮಾಡ್ತೀರೋ ಮಾಡಿ” ಎಂದು ಸವಾಲೆಸೆದು ಬಿಟ್ಟರು.
ನ್ಯಾಯ ಸಮ್ಮತವಾದದ್ದನ್ನು ಎಂದೂ ವಿರೋಧಿಸದ ಮತ್ತು ನ್ಯಾಯಕ್ಕೆ ವಿರುದ್ಧವಾದ್ದನ್ನು ಎಂದೂ ಸಮ್ಮತಿಸದ ನನ್ನ ಅಪ್ಪ ಈ ರೀತಿಯಾದ ಸವಾಲಿಗೆ ಬಗ್ಗುವ ಆಸಾಮಿಯಲ್ಲ. ಊರಿನ ಎಲ್ಲ ಜಾತಿ ಮುಖಂಡರೂ ಒಂದು ಕಡೆ, ನನ್ನ ಅಪ್ಪ ಮಾತ್ರ ಇನ್ನೊಂದು ಕಡೆ, ಇತರೆ ಬ್ರಾಹ್ಮಣರು ಯಾವಕಡೆಯೂ ಇಲ್ಲದೆ ತಟಸ್ಥರಾಗಿ ಮೂಕಪ್ರೇಕ್ಷಕರಾಗಿ ಬಿಟ್ಟರು. ಹರಿಜನರನ್ನು ಹೊರತುಪಡಿಸಿ ಮಿಕ್ಕೆಲ್ಲ ಜಾತಿ / ಕೋಮುಗಳಿಗೆಲ್ಲ ವಿರೋಧಿಯಾಗಿಬಿಟ್ಟರು ನನ್ನ ಅಪ್ಪ. ಸುಮಾರು ಸಾವಿರದಿಂದ, ಸಾವಿರದೈನೂರು ಜನರನ್ನು ಎದುರು ಹಾಕಿಕೊಳ್ಳಬೇಕಾದ ಪರಿಸ್ಥಿತಿಗೆ ಸಿಕ್ಕಿಬಿಟ್ಟರು. ಸಾಮಾನ್ಯವಾಗಿ ಯಾವುದೇ ಕಾಲದಲ್ಲಿಯಾದರೂ ಇದು ಬಹಳ ಗಂಭೀರ ಪರಿಸ್ಥಿತಿಯೇ. ಆದರೆ ಕೆಚ್ಚೆದೆ ಎಂಬ ಪದಕ್ಕೆ ಮತ್ತೊಂದು ಹೆಸರೆಂದರೆ ನನ್ನ ಅಪ್ಪ. ಇದಕ್ಕೆಲ್ಲ ಜಗ್ಗಲಿಲ್ಲ ಅವರು. ಆಗ ಅವರು ಹೇಳಿದ್ದು “ನೋಡಿ ಈ ದಿನ, ಈ ಎ.ಕೆ ಹೆಣ ನನ್ನ ಮನೆಮುಂದಿನ ದಾರಿಯಲ್ಲಿ ಹೋಗುತ್ತದೆ ಮತ್ತು ಇತರೆ ಮೇಲು ಜಾತಿಯವರ ಕೇರಿಯ ಮೂಲಕವೇ ಸುಡುಗಾಡಿಗೆ ಸಾಗಿಸಲ್ಪಡುತ್ತದೆ. ನಾನೇ ಎಲ್ಲರಿಗಿಂತ ಮುಂದೆ ಇರುತ್ತೇನೆ. ಆ ಹೆಣ ಸುಡುಗಾಡು ಸೇರುವವರೆಗೆ ನಾನೇ ಮುಂದೆ ನಡೆದು ಬರುತ್ತೇನೆ. ಇಲ್ಲಿ ಯಾವನಾದರೂ ಗಂಡಸಾಗಿದ್ದರೆ ಬಂದು ತಡೆಯಿರೋ ನೋಡೋಣ” ಎಂದವರೇ, ಅಲ್ಲೇ ದೂರದಲ್ಲಿ ನಿಂತು ಈ ವಾಗ್ವಾದವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಹರಿಜನರನ್ನು ಹತ್ತಿರ ಕರೆದು, “ಏಯ್ ಹೋಗಿ ಹೆಣ ಸಾಗಿಸುವ ಏರ್ಪಾಡುಮಾಡಿ, ನಾನು ಇಲ್ಲೇ ನಿಂತಿರುತ್ತೇನೆ, ಹೊತ್ತುಕೊಂಡು ಬನ್ರೋ” ಎಂದು ಘರ್ಜಿಸಿದರು.
ನನ್ನ ಅಪ್ಪನ ಈ ರೌದ್ರಾವತಾರವನ್ನು ಕಂಡ ಜಾತಿ ಮುಖಂಡರಿಗೆ ಆ ಕ್ಷಣದಲ್ಲಿ ಯಾವ ರೀತಿ ಪ್ರತಿಕ್ರಿಯೆಯನ್ನೂ ನೀಡಲು ಸಾಧ್ಯವಾಗಲಿಲ್ಲ. ಇವರು ಇಷ್ಟೊಂದು ತೀಕ್ಷ್ಣವಾಗಿ ಮತ್ತು ಕ್ಷಿಪ್ರವಾಗಿ ಈ ರೀತಿಯಾದ ನಿರ್ಧಾರಕ್ಕೆ ಬರುತ್ತಾರೆ ಎಂಬ ನಿರೀಕ್ಷೆ ಅವರಿಗೆ ಇರಲಿಲ್ಲ. Taken by surprise ಎಂಬ ನುಡಿಯಂತೆ ಅವರೆಲ್ಲ ಏನೂ ಮಾಡಲಾಗದೆ ನಿಂತು ಬಿಟ್ಟರು. ಹರಿಜನರಿಗೂ ಇದೊಂದು ಅಚ್ಚರಿಯ ಸಂಗತಿಯಾಗಿತ್ತು. ಇವನೊಬ್ಬನ ಮಾತಿನಂತೆ ನಡೆಯುವುದೇ ಎಂಬ ಅಳುಕೂ ಸಹ ಅವರಲ್ಲಿತ್ತು. ಹಾಗೂ ಹೀಗೂ ಧೈರ್ಯ ಮಾಡಿ ಹೆಣ ಹೊತ್ತುಕೊಂಡು ಬಂದರು. ನನ್ನ ಅಪ್ಪ ಹೇಳಿದಂತೆಯೆ ಆ ಅಂತ್ಯ ಯಾತ್ರೆಯ ಮುಂದೆಯೇ ನಡೆಯುತ್ತಾ, ಎಲ್ಲ ಮೇಲು ಜಾತಿಯ ಕೇರಿಗಳ ಮೂಲಕ ಸುಡುಗಾಡಿನವೆರೆಗೂ ಹೋದರು. ಯಾರು ಅವರನ್ನು ತಡೆಯುವ ಸಾಹಸಕ್ಕೆ ಕೈ ಹಾಕಲಿಲ್ಲ. ಅಂದಿನಿಂದ ಹರಿಜನರು ಬಳಸುದಾರಿಯನ್ನು ಬಿಟ್ಟು ಹತ್ತಿರದ ದಾರಿಯನ್ನು ಬಳಸಲು ಪ್ರಾರಂಭ ಮಾಡಿಬಿಟ್ಟರು. ಒಬ್ಬೊಂಟಿಗನಾಗಿ ಇಡೀ ಹಳ್ಳಿಯ ಜನರ ವಿರೋಧದ ಮಧ್ಯೆ, ಈ ರೀತಿಯಾದ ಸಾಮಾಜಿಕ ಕ್ರಾಂತಿಯ ಹರಿಕಾರನಾಗಿ ಮೆರೆದವರು ನನ್ನ ಅಪ್ಪ.
ಆ ದಿನ ಅಸ್ಪೃಶ್ಯತೆಯನ್ನು ಇಷ್ಟೊಂದು ಕಟುವಾಗಿ ಏಕಾಂಗಿಯಾಗಿ ವಿರೋಧಿಸಿದ ನನ್ನ ಅಪ್ಪನನ್ನು ಇತರ ಮೇಲುಜಾತಿಯ ಜನ ಏಕೆ ತಡೆಯಲಿಲ್ಲ. ಜನ ಬಲ, ಹಣಬಲ ಯಾವುದೂ ಇಲ್ಲದ ನನ್ನ ಅಪ್ಪ ಕೇವಲ ನೈತಿಕ ಸ್ಥೈರ್ಯದಿಂದ ಹೀಗೆ ಮಾಡಲು ಹೇಗೆ ಸಾಧ್ಯವಾಯಿತು ಎಂಬ ಪ್ರಶ್ನೆ ನನ್ನನ್ನು ಕಾಡುತ್ತಲೇ ಇದೆ. ಬಹುಶಃ ಅವರು ಬ್ರಾಹ್ಮಣ ಜಾತಿಗೆ ಸೇರಿದವರು ಎಂದೇ? ನನಗಂತೂ ತಿಳಿಯದು. ಜಾತಿ ಪದ್ಧತಿಯನ್ನು ಅಳಿಸಲು ನನ್ನ ಅಪ್ಪನಿಗೆ ಅಂದು ನೆರವಿಗೆ ಬಂದದ್ದು ಅವರು ಹುಟ್ಟಿದ ಜಾತಿಯೇ? ಈ ಸಂಶಯ / ಪ್ರಶ್ನೆ ಇಂದೂ ಸಹ ನನ್ನ ಮನಸ್ಸಿನ ಮೂಲೆಯಲ್ಲಿ ಉತ್ತರ ಸಿಗದೇ ಬಿದ್ದಿದೆ.