ಜೀವ ಹೂವಾಗಿದೆ - ಭಾಗ ೫

ಜೀವ ಹೂವಾಗಿದೆ - ಭಾಗ ೫

ಮೊದಲೆರಡು ದಿನ ಯಾವುದಕ್ಕೂ ಯೋಚನೆ ಮಾಡದೆ ಆರಾಮಾಗಿದ್ದ ಸೃಜನ್...ಮೂರನೇ ದಿವಸದಿಂದ ಚಡಪಡಿಸಲು ಶುರುಮಾಡಿದ. ಅವನೊಬ್ಬನನ್ನೇ ಮನೆಯಲ್ಲಿ ಬಿಟ್ಟು ಅಪ್ಪ ಅಮ್ಮ ಎಲ್ಲೂ ಹೋಗುತ್ತಿರಲಿಲ್ಲ. ಸೃಜನ್ ಅವರ ಕಣ್ಣು ತಪ್ಪಿಸಿ ಫೋನ್ ಮಾಡಲು ಲ್ಯಾಂಡ್ ಲೈನ್ ಬಳಿ ಬರುತ್ತಿದ್ದ. ಆದರೆ ಅಪ್ಪ ಅಮ್ಮನನ್ನು ಕಂಡು ಸುಮ್ಮನಾಗಿ ಬಿಡುತ್ತಿದ್ದ. ಅವನು ಯಾರ ಬಳಿಯೋ ಮಾತನಾಡಲು ಪ್ರಯತ್ನಿಸುತ್ತಿದ್ದಾನೆ. ಅದು ಯಾರೆಂದು ತಿಳಿದುಕೊಂಡು ನಾವೇ ಅವರಿಗೆ ವಿಷಯ ತಿಳಿಸಿ ಇವನ ಜೊತೆ ಮಾತಾಡಲು ಬಿಡಬೇಕು ಎಂದು ಅಪ್ಪ ಅಮ್ಮ ಇಬ್ಬರೂ ಮಾತಾಡಿಕೊಂಡರು.

ಸೃಜನ್ ರೂಮಿನಲ್ಲಿ ಕುಳಿತಿದ್ದಾಗ ಒಳಗೆ ಬಂದ ಅವರಮ್ಮ, ಸೃಜನ್ ನೀನು ಪದೇ ಪದೇ ಫೋನ್ ಬಳಿ ಬರುತ್ತಿದ್ದೀಯ...ಯಾರ ಬಳಿಯಾದರೂ ಮಾತನಾಡಬೇಕ ಹೇಳು. ನಾವು ಅವರನ್ನು ಮನೆಗೆ ಕರೆಸುತ್ತೇವೆ. ಹೇಳು ಸೃಜನ್ ಯಾರ ಬಳಿ ಮಾತಾಡಬೇಕು?

ಅಮ್ಮ ನಾನು ಶರತ್ ಜೊತೆ ಮಾತಾಡಬೇಕು. ನೀವು ಅವನಿಗೆ ಈ ವಿಷಯ ತಿಳಿಸಿಲ್ಲವ?

ಸೃಜನ್ ಮುಂಚಿನಿಂದಲೂ ಹೆಚ್ಚು ಸ್ನೇಹಿತರನ್ನು ಮಾಡಿಕೊಂಡಿರಲಿಲ್ಲ. ಇದ್ದರೂ ಅವರು ಬಹಳ ಆಪ್ತರಾಗಿರಲಿಲ್ಲ. ಆದರೆ ಶರತ್ ಜೊತೆ ಮಾತ್ರ ತುಂಬಾ ಸಲುಗೆಯಿಂದ ಇದ್ದ. ಶರತ್ ಸಹ ಅದೇ ಆಪ್ತತೆಯನ್ನು ಕಾಪಾಡಿಕೊಂಡಿದ್ದ. ಇವನ ಮನೆಗೆ ಅವನು ಅವನ ಮನೆಗೆ ಹೋಗಿ ಬಂದು ಮಾಡುತ್ತಿದ್ದರು. ಆದ್ದರಿಂದ ಇಬ್ಬರ ಮನೆಯಲ್ಲೂ ಇವರಿಬ್ಬರ ಸ್ನೇಹದ ಬಗ್ಗೆ ಅರಿವಿತ್ತು. ಶರತ್ ಮತ್ತು ಸೃಜನ್ ಸ್ನೇಹ ನಾಲ್ಕು ವರ್ಷದ ಸ್ನೇಹ. ಸೃಜನ್ ಕೆಲಸಕ್ಕೆ ಸೇರಿದಾಗ ಪರಿಚಯವಾದ ಶರತ್ ಸ್ವಲ್ಪ ದಿನದಲ್ಲೇ ಆಪ್ತರಾಗಿದ್ದರು.

ಅಯ್ಯೋ ಇಲ್ಲ ಸೃಜನ್...ಈ ಗಲಾಟೆಯಲ್ಲಿ ನಾನು ಶರತ್ ಗೆ ವಿಷಯ ತಿಳಿಸಿಲ್ಲ. ನಾನು ನಿಮ್ಮ ತಂದೆಗೆ ಹೇಳುತ್ತೇನೆ. ಸಂಜೆ ವಾಕಿಂಗ್ ಗೆ ಹೋದಾಗ ಶರತ್ ಮನೆಗೆ ಹೋಗಿ ಈ ವಿಷಯ ತಿಳಿಸಿ ಮನೆಗೆ ಬರಲು ತಿಳಿಸುತ್ತೇನೆ.

ಅಲ್ಲಿಂದ ಆಚೆ ಬಂದ ಸೃಜನ್ ತಾಯಿ ಸೀದಾ ಅವರ ಯಜಮಾನರನ್ನು ಆಚೆ ಕರೆದುಕೊಂಡು ಬಂದು..ಸೃಜನ್ ಗೆ ಕೇಳಿಸುತ್ತಿಲ್ಲವೆಂದು ಖಚಿತಪಡಿಸಿಕೊಂಡು ರೀ....ಸೃಜನ್ ಶರತ್ ಜೊತೆ ಮಾತಾಡಬೇಕೆಂದು ಕೇಳುತ್ತಿದ್ದಾನೆ. ಈಗ ಏನು ಮಾಡುವುದು? ಇವನ ಮದುವೆಯ ಎರಡು ವಾರದ ಮುಂಚೆಯಷ್ಟೇ ಅವನು ಆನ್ಸೈಟ್ ಹೋಗಿದ್ದಾನೆ. ಇನ್ನು ಅವನು ಬರುವುದು ಎರಡು ವಾರದ ನಂತರವೇ...ಈಗ ಏನೆಂದು ಹೇಳುವುದು. ನಾನು ಸೃಜನ್ ಗೆ ಹೇಳಿದ್ದೇನೆ. ಸಂಜೆ ನೀವು ವಾಕಿಂಗ್ ಗೆ ಹೋದಾಗ ಶರತ್ ಮನೆಗೆ ಹೋಗಿ ವಿಷಯ ತಿಳಿಸಿ ಅವನಿಗೆ ಬರುವುದಾಗಿ ಹೇಳಿದ್ದೇನೆ. ಈಗ ಏನು ಮಾಡುವುದು?

ಅಷ್ಟರಲ್ಲಿ ಸೃಜನ್ ತಂದೆಯವರ ಮೊಬೈಲ್ ರಿಂಗಾಯಿತು. ನೋಡಿದರೆ ಸೃಜನ್ ಮ್ಯಾನೇಜರ್ ಕರೆ ಮಾಡಿದ್ದರು. ಸರ್ ನಾನು ನನ್ನ ಟೀಮಿನ ಜೊತೆ ಸೃಜನ್ ನನ್ನು ಭೇಟಿ ಮಾಡಲು ಬರುತ್ತಿದ್ದೇನೆ. ಯಾವ ಸಮಯಕ್ಕೆ ಬರಬಹುದು?

ಸಾರ್ ನೀವು ಯಾವ ಸಮಯಕ್ಕೆ ಬೇಕಾದರೂ ಬರಬಹುದು. ಆದರೆ ನಿಮ್ಮ ಜೊತೆ ಬರುವವರಿಗೆ ಸೃಜನ್ ವಿಷಯ ಗೊತ್ತಿದೆಯ? ಏಕೆಂದರೆ ಒಂದು ವೇಳೆ ಅವರೇನಾದರೂ ಪ್ರಸ್ತುತ ವಿಷಯದ ಬಗ್ಗೆ ಮಾತನಾಡಿದರೆ ಎಲ್ಲ ಯಡವಟ್ಟು ಆಗುವುದು...

ನೀವೇನೂ ಚಿಂತೆ ಮಾಡಬೇಡಿ..ನಾನು ಎಲ್ಲರಿಗೂ ವಿಷಯ ತಿಳಿಸಿದ್ದೇನೆ. ನಾನು ಇನ್ನೊಂದು ಅರ್ಧಗಂಟೆಯಲ್ಲಿ ಅಲ್ಲಿರುತ್ತೇನೆ.
ಅವರ ಫೋನ್ ಕಟ್ ಮಾಡುವ ವೇಳೆಗೆ ಒಳಗಿನಿಂದ ಸೃಜನ್ ಅಮ್ಮ ಎಂದು ಕೂಗಿದ. ಗಾಭರಿಯಿಂದಲೇ ಒಳಗೆ ಓಡಿದ ಸೃಜನ್ ತಾಯಿಗೆ ಮತ್ತೊಂದು ಆಘಾತ ಕಾದಿತ್ತು. ಅಮ್ಮ, ಎಲ್ಲಿ ಮನೆಯಲ್ಲಿ ಮೂರು ಕ್ಯಾಲೆಂಡರ್ ಇತ್ತು...ಈಗ ಒಂದಾದರೂ ಕಾಣುತ್ತಿಲ್ಲ. ಎಲ್ಲಿ ಹೋಯಿತು ಎಲ್ಲ?

ಸೃಜನ್.....ಅದೂ...ಅದೂ....ಅದೇ ಕಣೋ ಅವಾಗಲೇ ಹೇಳಿದ್ನಲ್ಲ...ಪೇಂಟ್ ಹೊಡೆಸಲು ಎಲ್ಲ ತೆಗೆದಿದ್ದೆವು ಎಂದು. ಆ ಸಾಮಾನುಗಳ ಅಡಿಯಲ್ಲಿ ಸಿಕ್ಕಿ ಎಲ್ಲ ಹರಿದು ಹೋದವು. ನಾಳೆಯೇ ಹೊಸ ಕ್ಯಾಲೆಂಡರ್ ತರಿಸಿ ಹಾಕುತ್ತೇನೆ. ಹಾ..ನಿಮ್ಮ ಮ್ಯಾನೇಜರ್ ಫೋನ್ ಮಾಡಿದ್ದರು. ಅವರು ನಿನ್ನನ್ನು ನೋಡಲು ಮನೆಗೆ ಬರುತ್ತಿದ್ದಾರಂತೆ. ಹೋಗು ಸ್ವಲ್ಪ ಮುಖ ತೊಳೆದುಕೊಂಡು ಫ್ರೆಶ್ ಆಗು ಎಂದು ಅಲ್ಲಿಂದ ಆಚೆ ಬಂದರು.

ಬಂದವರೇ.....ರೀ....ನನಗೆ ಆಗುತ್ತಿಲ್ಲ...ಪ್ರತಿಯೊಂದು ಕ್ಷಣವೂ ಮುಂದೇನಾಗುತ್ತದೋ ಎಂಬ ಆತಂಕದಲ್ಲಿ ಬದುಕಲು ನನ್ನ ಕೈಲಿ ಆಗುತ್ತಿಲ್ಲ. ಅವನು ಯಾವಾಗ ಏನು ಕೇಳುತ್ತಾನೋ ಗೊತ್ತಾಗುತ್ತಿಲ್ಲ. ನೆನೆಸಿಕೊಂಡರೆ ಭಯ ಆಗುತ್ತಿದೆ. ಒಂದು ವೇಳೆ ಅವನು ಏನೋ ಕೇಳಿ ನಾನು ಏನೋ ಹೇಳಿ ಅವನಿಗೇನಾದರೂ ಹೆಚ್ಚು ಕಡಿಮೆ ಆದರೆ?? ನಮ್ಮ ಗತಿ ಏನು....ನಮಗಿಂತ ಪಾಪ ಅವನನ್ನೇ ನಂಬಿಕೊಂಡಿರುವ ಸಿಂಧು ಗತಿ ಏನು....ಅನ್ಯಾಯವಾಗಿ ಅವಳ ಬಾಳು ಹಾಳಾಗುತ್ತದೆ....ಇಲ್ಲ ಹಾಗಾಗಬಾರದು...

ಇಲ್ಲಿ ನೋಡು...ಹಾಗಾಗಬಾರದೆಂದರೆ...ನಮಗೆಷ್ಟೇ ಕಷ್ಟ ಆದರೂ ಅದನ್ನು ತೋರಗೊಡದೆ ಪರಿಸ್ಥಿತಿಯನ್ನು ನಿಭಾಯಿಸಬೇಕು. ಅದು ಸರಿ ಈಗ ಅವನಿಗೆ ಏನು ಬೇಕಂತೆ?

ಅವನು ಕ್ಯಾಲೆಂಡರ್ ಕೇಳುತ್ತಿದ್ದಾನೆ...ಮೊನ್ನೆ ಪೇಂಟ್ ಹೊಡೆಸುವಾಗ ಹರಿದು ಹೋಯಿತು. ನಾಳೆ ಹೊಸದು ತಂದು ಹಾಕುತ್ತೇನೆ ಎಂದು ತಿಳಿಸಿದ್ದೇನೆ. ಮೊದಲು ಅವನ ಪ್ರಕಾರ ಈಗ ಯಾವ ಡೇಟ್ ಎಂದು ತಿಳಿದುಕೊಂಡರೆ ನಮಗೆ ಮುಂದಿನ ಹೆಜ್ಜೆಗಳು ಸ್ವಲ್ಪವಾದರೂ ಸುಲಭ ಆಗಬಹುದು ಎಂದೆನಿಸುತ್ತಿದೆ.

ಹೌದು ಕಣೆ ನೀನು ಹೇಳಿದ್ದು ನಿಜ. ನಾಳೆಯೇ ಕ್ಯಾಲೆಂಡರ್ ತಂದು ಹಾಕುತ್ತೇನೆ ಎಂದು ಮಾತಾಡುತ್ತಿದ್ದಾಗ ಸೃಜನ್ ನ ಮ್ಯಾನೇಜರ್ ಮತ್ತು ಅವನ ಟೀಮ್ ಸೃಜನ್ ನನ್ನು ನೋಡಲು ಬಂದರು.

ಅವರನ್ನು ಬರಮಾಡಿಕೊಂಡ ಸೃಜನ್ ನ ತಂದೆ ಅವರನ್ನು ಒಳಗೆ ಕರೆದುಕೊಂಡರು. ಅವರಿಗೆಲ್ಲ ಸೃಜನ್ ನ ಪರಿಸ್ಥಿತಿ ಗೊತ್ತಿದ್ದರಿಂದ ಎಲ್ಲರೂ ಎಚ್ಚರವಾಗಿ ಮಾತನಾಡಿದರು. ಸೃಜನ್ ಅವರ ಮ್ಯಾನೇಜರ್ ಕುರಿತು ಸಾರ್ ಇನ್ನೊಂದು ತಿಂಗಳು ನಾನು ಎಲ್ಲೂ ಆಚೆ ಬರುವ ಹಾಗಿಲ್ಲ. ಸಂಪೂರ್ಣ ರೆಸ್ಟ್ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ. ದಯವಿಟ್ಟು ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ಳಿ ಸರ್. ತಿಂಗಳಿಗೆ ಮುಂಚೆಯೇ ಬರಲು ಪ್ರಯತ್ನಿಸುತ್ತೇನೆ.

ಅವನ ಮಾತನ್ನು ಅರ್ಧದಲ್ಲೇ ತುಂಡರಿಸಿದ ಮ್ಯಾನೇಜರ್...ನೋಡಿ ಸೃಜನ್ ಅರ್ಜೆಂಟ್ ಏನೂ ಇಲ್ಲ...ಹೇಗಿದ್ದರೂ ನೀವು ಹೊರಡುವ ದಿನವಷ್ಟೇ ರಿಲೀಸ್ ಆಗಿದೆ. ಇನ್ನು ಕ್ಲೈಂಟ್ ಅಪ್ರೂವಲ್ ಆಗುವುದಕ್ಕೆ ಸಮಯವಿದೆ. ಆದ್ದರಿಂದ ನೀವು ಆರಾಮಾಗಿ ಬನ್ನಿ. ರಜದ ಬಗ್ಗೆ ನೀವೇನೂ ತಲೆ ಕೆಡಿಸಿಕೊಳ್ಳಬೇಡಿ. ನಾನು HR  ಜೊತೆ ಮಾತಾಡುತ್ತೇನೆ. ನಿಮಗೆ ಇನ್ನೂ ಒಂದು ಆಪ್ಶನ್ ಕೊಡಿಸುತ್ತೇನೆ. ಈ ಒಂದು ತಿಂಗಳ ನಂತರ ಇನ್ನೊಂದು ತಿಂಗಳು ನಿಮಗೆ Work  from  home  ಆಪ್ಶನ್ ಕೊಡಿಸುತ್ತೇನೆ. ನೀವು ಆರಾಮಾಗಿ ಬನ್ನಿ.

ಸರ್...ತುಂಬಾ ಧನ್ಯವಾದಗಳು. ನಿಮ್ಮ ಸಹಾಯಕ್ಕೆ ನಾನು ಆಭಾರಿಯಾಗಿರುತ್ತೇನೆ. ಸರ್ ಸಾಧ್ಯವಾದಷ್ಟು ಬೇಗ ಬರಲು ಪ್ರಯತ್ನಿಸುತ್ತೇನೆ. ನೀವೆಲ್ಲ ಬಂದದ್ದು ಬಹಳ ಸಂತೋಷ ಆಯಿತು. ಸರ್ ಹೌದು ಶರತ್ ಬಂದಿಲ್ಲವ ಇವತ್ತು?

ಈ ಪ್ರಶ್ನೆಯನ್ನು ನಿರೀಕ್ಷಿಸಿರದ ಮ್ಯಾನೇಜರ್ ಗೆ ಏನು ಹೇಳಬೇಕೋ ಗೊತ್ತಾಗದೆ ಸೃಜನ್ ತಂದೆಯ ಮುಖ ನೋಡಿದರು. ತಕ್ಷಣ ಅವರು ಮಧ್ಯದಲ್ಲಿ ಬಂದು ಅವರ ಮಡದಿಯನ್ನು ಕರೆದು ಅವರಿಗೆಲ್ಲ ಕುಡಿಯಲು  ಕಾಫೀ ತೆಗೆದುಕೊಂಡು ಬಾ ಎಂದು ತಿಳಿಸಿದರು. ಹಾಗೆ ಮಾತನ್ನು ಬೇರೆ ಕಡೆ ಹೊರಳಿಸಿ ಸೃಜನ್ ಗೆ ಶರತ್ ನ ವಿಷಯವನ್ನು ಮರೆಸಿದರು.

ಒಂದರ್ಧ ಗಂಟೆಯ ನಂತರ ಅವರೆಲ್ಲರೂ ಹೊರಟರು. ಅವರು ಹೊರಟ ನಂತರ ಸೃಜನ್ ಅವರ ಅಪ್ಪನನ್ನು ಕುರಿತು ಅಪ್ಪ...ಹೌದು ನಮ್ಮ ಮ್ಯಾನೇಜರ್ ಗೆ ನಿಮ್ಮ ಮೊಬೈಲ್ ನಂಬರ್ ಹೇಗೆ ಗೊತ್ತಾಯಿತು?

 
ಅದೂ...ಅದೂ...ಅದೇ ಮೊನ್ನೆ ನಿನಗೆ ಆಕ್ಸಿಡೆಂಟ್ ಆದ ದಿನ ನಿನ್ನ ಜೊತೆ ಮಾತಾಡಬೇಕೆಂದು ನಿನ್ನ ಮೊಬೈಲ್ ಗೆ ಟ್ರೈ ಮಾಡಿದರಂತೆ. ಆದರೆ ನಿನ್ನ ಫೋನ್ ಸ್ವಿಚ್ ಆಫ್ ಬಂದಿದ್ದರಿಂದ, ನಿನ್ನ ಸ್ನೇಹಿತ ಬಳಿ ಲ್ಯಾಂಡ್ ಲೈನ್ ನಂಬರ್ ತೆಗೆದುಕೊಂಡು ಮನೆಗೆ ಕರೆ ಮಾಡಿದ್ದರು. ಆ ಸಮಯದಲ್ಲಿ ನಾನು ಆಸ್ಪತ್ರೆಯಲ್ಲಿ ಇದ್ದೆ...ಆಗ ನಿಮ್ಮಮ್ಮ ನನ್ನ ನಂಬರ್ ಕೊಟ್ಟಿದ್ದಳು. ಉಫ್.......
 
ಹ್ಮ್ಮ್...ಸರಿ ಸರಿ....ಅಪ್ಪ ಅಮ್ಮ ಹೇಳಿದರ? ಇವತ್ತು ಸಂಜೆ ವಾಕಿಂಗ್ ಗೆ ಹೋದಾಗ ಮರೆಯದೆ ಶರತ್ ಗೆ ನನ್ನನ್ನು ಭೇಟಿ ಮಾಡಬೇಕಂತೆ...ಬಹಳ ಅರ್ಜೆಂಟಾದ ವಿಷಯ ಮಾತಾಡಬೇಕು ಎಂದು ತಿಳಿಸಪ್ಪ.
 
ನಾನು ಅವನ ಬಳಿ ಒಂದು ಮುಖ್ಯವಾದ ವಿಷಯ ಮಾತಾಡಬೇಕು....ಪ್ಲೀಸ್ ಅವನನ್ನು ಇವತ್ತೇ ಬರಲು ಹೇಳಪ್ಪ.
ಅದೇನು ಸೃಜನ್ ಅಂಥಹ ಅರ್ಜೆಂಟ್ ವಿಷಯ? ನನ್ನ ಬಳಿ ಹೇಳು ನಾನು ಅವನಿಗೆ ಹೇಳುತ್ತೇನೆ...
 
ಇಲ್ಲ ಅಪ್ಪ ನೀವು ಅವನಿಗೆ ಬರಲು ಹೇಳಿ ನಾನೇ ಮಾತಾಡುತ್ತೇನೆ...ಪ್ಲೀಸ್....
 
ಸರಿ...ನಾನು ಸಂಜೆ ಹೇಳುತ್ತೇನೆ.
 

ಏನಿರಬಹುದು ಅಂಥಹ ಮುಖ್ಯವಾದ ವಿಷಯ...ಅವನ ಬಳಿಯೇ ಮಾತಾಡುತ್ತೇನೆ ಎಂದು ಹೇಳುತ್ತಿದ್ದಾನೆ...ಅವನು ನೋಡಿದರೆ ಊರಲ್ಲಿ ಇಲ್ಲ...ಈಗ ಏನು ಮಾಡುವುದು?

Rating
No votes yet