ಜೂನ್ ೪ - ಅಂತರರಾಷ್ಟ್ರೀಯ ಶೋಷಿತ ಮಕ್ಕಳ ದಿನ, ಗೊತ್ತಾ ನಿಮಗೆ?
ಅಮ್ಮನ ಉದರದಿಂದ ಧರೆಗಿಳಿದ ಮರುಕ್ಷಣ, ಶುರುವಾಯಿತು ನಮ್ಮೆಲ್ಲರ ಹೊಸ ಬದುಕಿನ ಪಯಣ.
ಅಂತಹ ಅಪೂರ್ವ ಕ್ಷಣಗಳಲ್ಲಿ ಅಮ್ಮ-ಅಪ್ಪರಿಗಾದ ಆನಂದಕ್ಕೆ ಪಾರವೇ ಇರಲಿಲ್ಲ ಅಲ್ಲವೆ?
ಮೊದಲ ಆಳುವಿನಿಂದ ಹಿಡಿದು ಮೊದಲ ಮುಗ್ಧ ನಗುವಿನವರೆಗೆ ಅಮ್ಮನಿಂದ ಪಡೆದ ಅತ್ಯಮೂಲ್ಯವಾದ
ಪ್ರೀತಿ-ಪೋಷಣೆ ಎಲ್ಲರಿಗೂ ಸಿಕ್ಕಿದ್ದುಂಟೇ? ಎಲ್ಲರೂ ಅಷ್ಟೊಂದು
ಭಾಗ್ಯವಂತರಾಗಿರುವುದಿಲ್ಲ. ಕೆಲವರು ಮೊದಮೊದಲು ಅಮ್ಮ-ಅಪ್ಪಂದಿರ ಪೋಷಣೇ ಪಡೆದರೂ ಮತ್ತೆ
ವಂಚಿತರಾಗಿತುತ್ತಾರೆ, ಪೋಷಕರ ತಪ್ಪಿನಿಂದಲ್ಲ, ಮಾನವನ ಹೀನ ಕೃತ್ಯಗಳಾದ
ಯುದ್ಧ-ವಿವಾದಗಳಿಂದ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಶೋಷಣೆಯಿಂದ. ಜಗತ್ತಿನಲ್ಲಿ
ಸುಮಾರು ೩,೦೦,೦೦೦ (ಹೌದು, ಮೂರು ಲಕ್ಷ!)ಕ್ಕೂ ಹೆಚ್ಚು ’ಬಾಲ ಸೈನಿಕ (child
soldiers)’ರಿದ್ದಾರೆ, ಅದರಲ್ಲಿ ೧೦ ವರ್ಷಕ್ಕಿಂತಲೂ ಕಡಿಮೆಯಿರುವ ಎಷ್ಟೋ
ಬಾಲಕಿಯರಿದ್ದಾರೆ. ಹೆಜ್ಜೆ ಹೆಜ್ಜೆಗೂ ಬಾಲ ಸೈನ್ಯದಲ್ಲಿರುವ ಮುಗ್ಧ ಬಾಲಕಿಯರು ಲೈಂಗಿಕ
ಕಿರುಕಿಳಕ್ಕೆ ಒಳಗಾಗುತ್ತಿದ್ದಾರೆ, ವ್ಯೇಶ್ಯಾವಾಟಿಕೆಗೆ ಬಲಿಯಾಗುತ್ತಿದ್ದಾರೆ [2001,
source].
ಕಳೆದ ಎರಡು ದಶಕಗಳಲ್ಲಿ ಸುಮಾರು ಇಪ್ಪತ್ತು ಲಕ್ಷಕ್ಕೂ ಹೆಚ್ಚು ಮಕ್ಕಳು
ಯುದ್ಧ-ವಿವಾದಗಳಿಗೆ ಬಲಿಪಶುಗಳಾಗಿದ್ದಾರೆ, ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬಿಯನ್
ನಾಡಿನಲ್ಲಿ ಪ್ರತಿ ವರ್ಷ ೮೦ ಸಾವಿರಕ್ಕೂ ಹೆಚ್ಚು ಮಕ್ಕಳು ಸಮಾಜದಲ್ಲಿ, ತಮ್ಮ ತಮ್ಮ
ಪ್ರದೇಶದಲ್ಲಿ ನಡೆಯುವ ದೌರ್ಜನ್ಯಕ್ಕೆ ಬಲಿಯಾಗುತ್ತಿರುವುದು ಶೋಚನೀಯ ಸಂಗತಿ[UN].
ಶಾಲೆಯಲ್ಲಿ ಅ-ಆ-ಇ-ಈ ಕಲಿಯಬೇಕಾದ ಮಕ್ಕಳು, ಬಡತನ ಮತ್ತು ಹಸಿವಿನಿಂದಾಗಿ ಬಾಲ
ಕಾರ್ಮಿಕರಾಗುತ್ತಿತುವುದು ಹೊಸದೇನಲ್ಲ. ಅದೇನೆ ಇರಲಿ, ಈ ಮಕ್ಕಳು ಮಾಡಿದ ತಪ್ಪಾದರೂ
ಏನು? ಧರೆಗಿಳಿದು ತಮ್ಮ ಬದುಕಿನ ಪಯಣ ಪ್ರಾರಂಭಿಸಿದ್ದೇ? ಇಲ್ಲ, ಇದು ಮಾನವನ ಹೀನ
ಕೃತ್ಯಗಳಿಗೆ ಪ್ರಕೃತಿ ನೀಡುತ್ತಿರುವ ಶಿಕ್ಷೆ.
ಮಾನವನ ಈ ಹೀನ ಕೃತ್ಯಗಳನ್ನು ಪ್ರತಿಬಿಂಬಿಸಲೆಂದೇ United Nations (ಸಂಯುಕ್ತ
ರಾಷ್ಟ್ರಗಳು) ೧೯೮೨ರಲ್ಲಿ ಪ್ರತಿ ವರ್ಷ ಜೂನ್ ೪ನ್ನು ಅಂತರರಾಷ್ಟ್ರೀಯ ಶೋಷಿತ ಮಕ್ಕಳ
ದಿನ (The International Day of Innocent Children Victims of Aggression)
ಎಂದು ಘೋಷಿಸಿತು. ಇದು ೮೦ರ ದಶಕದಲ್ಲಿ ಪ್ಯಾಲೆಸ್ಟೇನ್ ದೇಶದಲ್ಲಿ ನಡೆದ ವಿವಾದದ
ಸಂಕೇತವಾಗಿರುವುದೂ ಒಂದು ವಿಶೇಷ. ಜೂನ್ ೪, ತೀವ್ರ ಗತಿಯಲ್ಲಿ ನಡೆಯುತ್ತಿರುವ ಮುಗ್ಧ
ಮಕ್ಕಳ ಶೋಷಣೆಯನ್ನು ಸಾರಿ ಹೇಳುತ್ತದೆ. ಮಾನವೀಯ ಮೌಲ್ಯಗಳನ್ನು ಚರ್ಚಿಸುವ ನಾವು ಇಂತಹ
ಒಂದು ದಿನವನ್ನು ಕಾಯ್ದಿರಿಸಬೇಕಾಯಿತಲ್ಲ ಎನ್ನುವುದು ವಿಷಾದನೀಯ ಸಂಗತಿ ಅಲ್ಲವೆ? ನಮ್ಮ
ದೇಶದಲ್ಲೂ ಇಂತಹ ಶೋಷಣೆ ಹೊಸದೇನಲ್ಲ. ಪ್ರತಿ ವರ್ಷ ೨೦ ಲಕ್ಷಕ್ಕೂ ಹೆಚ್ಚು ಮಕ್ಕಳು,
ಅಂದರೆ ಪ್ರತಿ ದಿನ ಸುಮಾರು ೬೦೦೦ ಮಕ್ಕಳು ಬಲಿಪಶುಗಳಾಗುತ್ತಿದ್ದಾರೆ [CNN-IBN report].
ಪ್ರತಿ ದಿನ ಮಕ್ಕಳು ಸರ್ಕಸ್ ಗಳಲ್ಲಿ, ಫ್ಯಾಕ್ಟರಿಗಳಲ್ಲಿ, ಹೊಟೇಲುಗಳಲ್ಲಿಯಲ್ಲದೆ,
ವೆಶ್ಯಾವಾಟಿಕೆಯಲ್ಲೂ ಬಲವಂತವಾಗಿ ಕೆಲಸ ಮಾಡುತ್ತಿರುವುದು ಎಲ್ಲರಿಗೂ ಗೊತ್ತೆ ಇದೆ
ಅಲ್ಲವೆ? International Organization for Migration (IMO) ಪ್ರಕಾರ,
ಜಗತ್ತಿನಲ್ಲಿ ನಡೆಯುತ್ತಿರುವ ’ಮಾನವ ವ್ಯಾಪಾರ (human industry)' ಸುಮಾರು ೮
ಬಿಲಿಯನ ಡಾಲರುಗಳಿಗೆ ಸಮವಾಗಿದೆ! ಅಷ್ಟೇ ಅಲ್ಲ, IMO ವರದಿಯ ಪ್ರಕಾರ, ಪ್ರತಿ ವರ್ಷ
ಸುಮಾರು ೫೦೦೦೦-೭೦೦೦೦ ಮುಗ್ಧ ಬಾಲಕಿಯರನ್ನು (೧೦ ವರ್ಷಕ್ಕಿಂತ ಚಿಕ್ಕವರನ್ನು)
ಭಾರತಕ್ಕೆ ರವಾನಿಸಲಾಗುತ್ತಿದೆ [source - Yojana,
May 2008]. ಇವರೆಲ್ಲರೂ ಭಾರತದಲ್ಲಿ ನಡೆಯುವ ಅನೈತಿಕ ಚಟುವಟಿಕೆಗಳಲ್ಲಿ
ಪಾಲುದಾರರಾಗುತ್ತಾರೆ. ಯಾರ ತಪ್ಪಿದು? ಮಕ್ಕಳದೋ? ಅಥವ ಅವರನ್ನು ಮಾರಿಕೊಂಡವರದೋ?
ಇಂತಹ ಹೀನ ಕೃತ್ಯಗಳು ನಡೆದರೂ, ಸರಕಾರವಾಗಲಿ, ಸಂಯುಕ್ತ ರಾಷ್ಟ್ರಗಳಾಗಲಿ, NGOಗಳಾಗಲಿ,
ಏನೂ ಮಾಡುತ್ತಿಲ್ಲವೇ? ಎಲ್ಲರೂ ಇಂತಹ ಹೃದಯ ಹಿಂಡುವಂತಹ ಕಾರ್ಯಗಳಿಗೆ ಮೂಕ
ಪ್ರೇಕ್ಷಕರಾಗಿದ್ದಾರೆಯೆ? ಮಾಡುತ್ತಿಲ್ಲ ಎಂದರೆ ತಪ್ಪಾದೀತು.
ಯಾರು ಎಷ್ಟೇ ಕಾಯಿದೆಗಳನ್ನು ಮಾಡಿದರೂ ಕಾಡ್ಗಿಚ್ಚಿನಂತೆ ಹರಡಿದ ಮುಗ್ಧ ಮಕ್ಕಳ ಶೋಷಣೆಯ
ಸಮಸ್ಯೆ ಎಷ್ಟು ವ್ಯಾಪಕವಾಗಿದೆಯೆಂದರೆ, United Nations (ಸಂಯುಕ್ತ ರಾಷ್ಟ್ರಗಳ)
ಪ್ರಯತ್ನಗಳು ಸಹ ಈ ಸಮಸ್ಯಯ ಬೇರನ್ನು ಅಲುಗಾಡಿಸಲಾಗುತ್ತಿಲ್ಲ. United Nationsನ
ಕನಸಿನ ಕೂಸಾದ UNICEF ೧೯೯೦ರಲ್ಲಿ ’ಅಂತರರಾಷ್ಟ್ರೀಯ ಮಕ್ಕಳ ಹಕ್ಕುಗಳು’ - ಎಂಬ
ಅಧಿವೇಶನವನ್ನು ಹೊರಡಿಸಿತು ("Convention on the Rights of the Child
- CRC)." ಈ ಅಧಿವೇಶನಕ್ಕೆ ಈಗಾಗಲೆ ೧೯೩ ದೇಶಗಳು ಸದಸ್ಯತ್ವವನ್ನು ಪಡೆದಿವೆ. ಕುತೂಹಲದ
ಸಂಗತಿಯೆಂದರೆ, United States ಈ ಅಧಿವೇಶನದ ಸದಸ್ಯ ರಾಷ್ಟ್ರವಾಗಿಲ್ಲ! ಸದಸ್ಯ
ರಾಷ್ಟ್ರಗಳು ಈ ಅಧಿವೇಶನದ ಕಾಯಿದೆಗಳಿಗೆ ಬದ್ಧವಾಗಿರುತ್ತವೆ. ಅಂದರೆ, ಸದಸ್ಯ
ರಾಷ್ಟ್ರಗಳು CRC ಸ್ಪಷ್ಟಪಡಿಸಿದಂತಹ ಮಕ್ಕಳಿಗೆ ಸಂಭಂದಿಸಿದ ವಿಷೇಶ ಹಕ್ಕುಗಳನ್ನು
ಮತ್ತು ಕಾಯಿದೆಗಳನ್ನು ಕಾರ್ಯರೂಪಕ್ಕೆ ತರಲು ಕಾನೂನುಬದ್ಧವಾಗಿರುತ್ತವೆ. ಯಾವ ದೇಶ
ಎಷ್ಟರ ಮಟ್ಟಿಗೆ CRCಯನ್ನು ಪಾಲಿಸುತ್ತಿದೆ ಎಂಬ ವಿಷಯ ಅಷ್ಟೊಂದು ಸ್ಪಷ್ಟವಾಗಿ (ನನಗೆ)
ಸಿಕ್ಕಿಲ್ಲ. UNICEF ಅಲ್ಲದೆ ಜಗತ್ತಿನಲ್ಲಿ ಹಲವಾರು ಸಂಘ ಸಂಸ್ಥೆಗಳು ಮಕ್ಕಳ
ಹಕ್ಕುಗಳಿಗಾಗಿ ಹೋರಾಡುತ್ತಿವೆ. ಅವುಗಳಲ್ಲಿ CRY, Human Rights Organizations-India, CRC Kids, Children's Rights Today, Child Rights Information Network, Human Rights Watch - Children's Rights Division, ಕೆಲವು. ಇನ್ನು ಸಾವಿರಾರು ಸಂಘ ಸಂಸ್ಥೆಗಳು ಜಗತ್ತಿನಾದ್ಯಂತ ಕೆಲಸ ಮಾಡುತ್ತಿವೆ.
ನಮ್ಮಿಂದೇನಾದರೂ ಮಾಡಲು ಸಾಧ್ಯವಿದೆಯೆ?
ಖಂಡಿತವಾಗಿ. ಮಕ್ಕಳ ಶೋಷಣೆಗೆ ಸಂಭಂಧಿಸಿದ ಹೋರಾಟದಲ್ಲಿ ನಾವೂ ಸಹ ಪಾಲ್ಗೋಳ್ಳಬಹುದು.
UNICEF, NGOs, Non-profit organizations ಮತ್ತು ಸರಕಾರಕ್ಕೆ ನಮ್ಮ ಸಹಾಯ
ಹಸ್ತವನ್ನು ನೀಡಬಹುದು. ಅದೆಲ್ಲ ಹೇಗೆ? [source: UN, ನನ್ನ save the childhood ಲೇಖನ]
- ನೀವೇನಾದರು ತಂದೆ/ತಾಯಿ, ಶಿಕ್ಷಕ/ಕಿ, ಸಮಾಜ ಸೇವಕ/ಕಿ ಯಾಗಿದ್ದರೆ, ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿಯನ್ನು ಮೂಡಿಸಿ. ಶೋಷಣೆಯ ವಿರುದ್ಧದ ಹೋರಾಟಕ್ಕೆ ನಿಮ್ಮಿಂದೇನಾದರು ಸಹಾಯವಾಗುವುದಿದ್ದರೆ ದಯವಿಟ್ಟು ಸಹಕರಿಸಿ.
- ನೀವೇನಾದರು ಸಮೂಹ ಮಾಧ್ಯಮ(Media)ಗಳಲ್ಲಿ ಕೆಲಸ ಮಾಡುತ್ತಿದ್ದರೆ, CRC ಬಗ್ಗೆ, ಮಕ್ಕಳ ಹಕ್ಕುಗಳ ಬಗ್ಗೆ ಹೆಚ್ಚಿನ ಗಮನ ಕೊಡಿ, ಜಾಗೃತಿಯನ್ನು ಮೂಡಿಸಿ. ಎಲ್ಲಾದರು ಶೋಷಣೆ ನಡೆಯುತ್ತಿದ್ದರೆ, ಅದನ್ನು ಬೆಳಕಿಗೆ ತನ್ನಿ.
- ನಿಮ್ಮ ಸುತ್ತ ಮುತ್ತ ಎಲ್ಲಾದರು ಮಕ್ಕಳಿಗೆ ಶೋಷಣೆ
ನಡೆಯುತ್ತಿದ್ದರೆ, ಅಂತಹ ಪರಿಸ್ಥಿತಿಯಲ್ಲಿ ನಿಮ್ಮಿಂದೇನಾದರು ಸಹಾಯ ಮಾಡಲು
ಸಾಧ್ಯವಿದ್ದರೆ ದಯವಿಟ್ಟು ಮುನ್ನುಗ್ಗಿ,ಮಕ್ಕಳ ಹಕ್ಕುಗಳ ಕಾವಲು ನಾಯಿಯಂತಿರುವ ಹಲವಾರು ಸಂಘ ಸಂಸ್ಥೆಗಳಿಗೆ ವರದಿಯನ್ನು ರವಾನಿಸಿ. ಒಟ್ಟಿನಲ್ಲಿ ಅಲ್ಪ-ಸ್ವಲ್ಪವಾದರೂ ಸಹಾಯಕರಾಗಿರಿ. - ನಿಮಗೆ ಹಣಕಾಸಿನ ಸಹಾಯಹಸ್ತ ನೀಡುವ ಮನಸಿದ್ದರೆ, ಗೊತ್ತಿದ್ದ ಸಂಘಸಂಸ್ಥೆಗಳಿಗೆ ನಿಮ್ಮ ಸಹಾವನ್ನು ನೀಡಿ. ಕೆಲವು ಸಂಸ್ಥೆಗಳು: Smile foundation, Save the Children, World vision Foundation, Compassion, SOS Children India site, Child Charity and NGO India, Big Help Foundation, Sponsor a Dalit child.
- ಮಕ್ಕಳಿಗೆ ನಡೆಯುತ್ತಿರು ಅನ್ಯಾಯವನ್ನು ಮಾಧ್ಯಮದ ಮುಖಾಂತರ ಬೆಳಕಿಗೆ ತನ್ನಿ. (ಮಾಧ್ಯಮದವರ ಕರ್ತವ್ಯ ಇದೇ ಅಲ್ಲವೆ?)
- ಸಮಯವಿದ್ದರೆ, ಹತ್ತಿರದ UNICEF ಕಛೇರಿಗೆ ಭೇಟಿ ನೀಡಿ. ನಿಮ್ಮಿಂದ ಏನೆಲ್ಲ ಸಹಯವಾಗಬಹುದೆಂದು ತಿಳಿದುಕೊಳ್ಳಿ. ಸಾಧ್ಯವಾದರೆ ದಯವಿಟ್ಟು ಸಹಕರಿಸಿ.
- ಸಹಾಯ ಮಾಡುವ ಮನಸ್ಸಿದೆ, ಆದರೆ ಸಮಯವಿಲ್ಲ ಎಂದರೆ ತಪ್ಪಾದೀತು. ಅಷ್ಟೊಂದು busyಯಾಗಿದ್ದರೆ ಒಂದು online transaction ಸಾಕಲ್ಲವೆ ಸಹಾಯ ಮಾಡಲು?
ಬದಲಾವಣೆಯಲ್ಲಿ ನಮ್ಮೆಲ್ಲರ ಪಾಲಿರಲಿ....
PS: ಇದೇ ಲೇಖನದ ಇಂಗ್ಲಿಷ್ ಭಾಷಾಂತರ ಇಲ್ಲಿದೆ ನೋಡಿ -> June 4 - International Day of Innocent Children Victims of Aggression, do you know that?