ಡಾll ಅಬ್ದುಲ್ ಕಲಾಮ್ ಅವರ ಚಿಂತನ ಧಾರೆ : ಭಾಗ ೬; ಯುವಕರಿಗೆ ಸಂದೇಶ - ದೇಶಾಭಿಮಾನದಿಂದ ಬದುಕಿ

ಡಾll ಅಬ್ದುಲ್ ಕಲಾಮ್ ಅವರ ಚಿಂತನ ಧಾರೆ : ಭಾಗ ೬; ಯುವಕರಿಗೆ ಸಂದೇಶ - ದೇಶಾಭಿಮಾನದಿಂದ ಬದುಕಿ

ಯುವ ಮಿತ್ರರೆ,
       ನೀವು ಪ್ರಸಾರ ಮಾಧ್ಯಮಗಳ ಮೂಲಕ ಅಥವಾ ಮತ್ತಾವುದರಿಂದಲೋ ಉತ್ಪ್ರೇಕ್ಷಿತ ಸಾಂಸ್ಕೃತಿಕ ದಾಳಿಗಳಿಂದ ವಿಚಲಿತಗೊಂಡಾಗ, ನೀವು ನಾಗರೀಕತೆಯ ಪರಮಾನಂದದ ಮಕ್ಕಳೆಂದು ಭಾವಿಸಿ. ನಾವು ಹಲವು ವಿಧವಾದ ದಾಳಿಗಳಿಗೆ ತುತ್ತಾದರೂ ಕೂಡಾ ಅವೆಲ್ಲವನ್ನೂ ಎದುರಿಸಿದ್ದೇವೆ, ಎಷ್ಟೋ ವಂಶಗಳು ನಮ್ಮನ್ನಾಳಿದವು. ಈ ದಿನ ಭಾರತವು ದಾಳಿಗಳಿಂದ ಮುಕ್ತವಾಗಿ ಸ್ವತಂತ್ರ್ಯವಾಗಿದೆ. ನಮಗೆ ಕೌಟುಂಬಿಕ ಹಾಗೂ ಆಧ್ಯಾತ್ಮಿಕ ಮೌಲ್ಯಗಳ ಭವ್ಯ ಪರಂಪರೆ ಇದೆ. ಎಷ್ಟೋ ಅಭಿವೃದ್ಧಿ ಹೊಂದಿದ ದೇಶಗಳು ಈ ರೀತಿಯ ಪರಿಪೂರ್ಣವಾದ ಜೀವನದ ಕನಸು ಕಾಣುತ್ತಿವೆ. ನಮ್ಮ ತತ್ವವೆಂದರೆ, "ಅವರಿಗೆ ಕೊಡಿ ಮತ್ತು ಕೊಡುತ್ತಾ ಹೋಗಿ"
 
          ಸ್ನೇಹಿತರೇ, ಯಾವಾಗ ನೀವು ನಮ್ಮ ಸಮಾಜದಲ್ಲಿ ಉತ್ಪ್ರೇಕ್ಷಗೊಂಡ ಗಲಭೆಗಳ ಬಗ್ಗೆ ಕೇಳುತ್ತೀರೋ, ಆವಾಗ ಧೈರ್ಯದಿಂದ ಮನನ ಮಾಡಿಕೊಳ್ಳಿ ನಮ್ಮದು ಒಂದು ನೂರು ಕೋಟಿ ಜನರಿರುವ ಬಹು ಸಂಸ್ಕೃತಿ ಮತ್ತು ಭಾಷೆಗಳುಳ್ಳ ದೇಶವೆನ್ನುವುದನ್ನು. ನಾವು ಈ ಗ್ರಹದಲ್ಲಿ ನಿರಂತರವಾಗಿರುವ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯುಳ್ಳವರು. ಬೇರೆ ಯಾವುದೇ ದೇಶಕ್ಕೆ ನಮ್ಮ ಅನುಭವಕ್ಕಿರುವ ಈ ಅದ್ವಿತೀಯ ಶಕ್ತಿಯಿಲ್ಲ. ಅನುಭವವೇ ಶಾಂತಿಯ ಮೂಲ. ಈ ಸುಂದರ ಸಂದೇಶವನ್ನು ಎಲ್ಲೆಡೆ ಪಸರಿಸಿ. 
 
       ಸ್ನೇಹಿತರೇ, ನಿಮಗೆ ಸೋಲಿನ ಮನೋಭಾವವುಂಟಾದಾಗ, ನಿಮ್ಮ ಯುವ ಮನಸ್ಸನ್ನು ಉತ್ತೇಜನಗೊಳಿಸಿಕೊಳ್ಳಿ, ಏಕೆಂದರೆ ನೀವು ಈ ಮಹಾನ್ ದೇಶಕ್ಕೆ ಸೇರಿದವರಾಗಿದ್ದೀರ. ನಾವು ಆಹಾರದಲ್ಲಿ ಸ್ವಾವಲಂಬನೆಯನ್ನು ಪಡೆದಿದ್ದೇವೆ, ನಾವು ನಮ್ಮ ಸ್ವಂತ ಸಂಪರ್ಕ ಉಪಗ್ರಹಗಳನ್ನು ತಯಾರು ಮಾಡಿಕೊಳ್ಳುತ್ತೇವೆ, ಮತ್ತು ನಾವೇ ಸ್ವತಃ ನಮ್ಮ ದೂರ ಸಂವೇದಿ ಉಪಗ್ರಹಗಳನ್ನು ಉಡಾವಣೆ ಮಾಡಿಕೊಳ್ಳುತ್ತೇವೆ. ಯಾವಾಗ ಭಾರತವು ಅಣ್ವಸ್ತ್ರ ರಾಷ್ಟ್ರವಾಗಿ ಹೊರಹೊಮ್ಮಿತೋ ಆಗ ಮುಂದುವರೆದ ದೇಶಗಳು ನಮ್ಮ ಮೇಲೆ ಆರ್ಥಿಕ ಮತ್ತು ತಾಂತ್ರಿಕ ನಿಷೇದಗಳನ್ನು ೧೯೯೮ರಲ್ಲಿ ಹೇರಿದವು. ಆವಾಗ ನಮ್ಮ ವ್ಯವಸಾಯ, ತಾಂತ್ರಿಕತೆ, ಉದ್ದಿಮೆಗಳ ಬೃಹತ್ ಶಕ್ತಿ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ದೇಶದ ಜನರ ಧೀಃಶಕ್ತಿಯಿಂದಾಗಿ ಅದನ್ನು ನಾವು ಸಮರ್ಥವಾಗಿ ಎದುರಿಸಿದೆವು. ಈ ಸ್ಪೂರ್ತಿಯನ್ನು ಉಳಿಸಿಕೊಂಡು ನಿಮ್ಮ ಕ್ರಿಯಾಶಕ್ತಿಯನ್ನು ಅನೇಕ ಪಟ್ಟು ಹೆಚ್ಚಿಸಿಕೊಳ್ಳಿ. 
 
         ಸ್ನೇಹಿತರೆ, ಒಮ್ಮೆ ನೀವು ಸುತ್ತಲಿನ ವಿಶ್ವವನ್ನು ನೋಡಿದರೆ, ನಿಮಗೆ ನಿರಾಶೆಯುಂಟಾಗುತ್ತದೆ; ಏಕೆಂದರೆ ನೀವು ಒಂದು ನೂರು ಕೋಟಿ ಜನಸಂಖ್ಯೆಯನ್ನು ಹೊಂದಿದ್ದೂ ಇನ್ನೂ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಒಬ್ಬರಾಗಿದ್ದೀರಿಯೇ ಹೊರತು ಅಭಿವೃದ್ಧಿ ಹೊಂದಿದ್ದೇವೆಂದು ಕೊಚ್ಚಿಕೊಳ್ಳುವ G -8 ದೇಶಗಳ ಗುಂಪಿನಲ್ಲಿಲ್ಲ. ಒಮ್ಮೆ  ಈ ೧೦೦ ಕೋಟಿ ಪ್ರಜ್ವಲಿತ ಮನಸ್ಸುಗಳ ಬಗ್ಗೆ ಆಲೋಚಿಸಿ. ಇದು ಅತ್ಯಂತ ಬಲಶಾಲಿಯಾದ ಸಂಪನ್ಮೂಲ ಭೂಮಿಯ ಮೇಲಾಗಲಿ, ಅಥವಾ ಭೂಮಿಯನ್ನು ಬಿಟ್ಟು ಅದರ ಹೊರಗಾಗಲಿ ಅಥವಾ ಭೂಮಿಯ ಒಳಗಾಗಲಿ. ನೀವು ದೇಶದ ಒಂದು ಮಹತ್ತರವಾದ ಶಕ್ತಿ. ನಿಮ್ಮ ಬೆವರು ಅಭಿವೃದ್ಧಿ ಹೊಂದುತ್ತಿರುವ ದೇಶವನ್ನು ಅಭಿವೃದ್ದಿ ಹೊಂದಿದ ಭಾರತವಾಗಿ ಮಾರ್ಪಡಿಸುತ್ತದೆ. ಇದೇ ಆ ಕನಸು, ಗುರಿ. INDIAN MILLENIUM MISSION 2020 - A DEVELOPED INDIA. (ಭಾರತದ ಸಹಸ್ರಮಾನದ ಯೋಜನೆ ೨೦೨೦ - ಅಭ್ಯುದಯ ಭಾರತ). ಒಬ್ಬ ಕವಿಯ ಪ್ರಸಿದ್ಧ ಉಕ್ತಿಯನ್ನು ಜ್ಞಾಪಿಸಿಕೊಳ್ಳಿ, "ನಾನು ಕೆಲಸ ಮಾಡಿದಾಗ ದೇವರು ನನ್ನನ್ನು ಸನ್ಮಾನಿಸುತ್ತಾನೆ." ಆದ್ದರಿಂದ ನಾವೆಲ್ಲಾ ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ದುಡಿಯೋಣ. 
 
      ಸ್ನೇಹಿತರೆ, ಎರಡು ಆಲೋಚನೆಗಳನ್ನು ನಾನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ಮೊದಲನೆಯದು, ನೊಬೆಲ್ ಪಾರಿತೋಷಿಕ ಗ್ರಹೀತ, ಪ್ರೊಫೆಸರ್ ಸುಬ್ರಹ್ಮಣ್ಯಂ ಚಂದ್ರಶೇಖರ್, ತಮ್ಮ ಆತ್ಮಕಥೆ ’ಚಂದ್ರ’ದಲ್ಲಿ ಉಲ್ಲೇಖಿಸಿದ್ದು. ಅವರು ಒಂದು ಪ್ರಶ್ನೆಯನ್ನು ಕೇಳುತ್ತಾರೆ; ಅದು ಹೇಗೆ ಒಂದು ನಿರ್ಧಿಷ್ಟ ಸಮಯ ೧೯೨೦-೨೫ರ ಮಧ್ಯ ಕಾಲದಲ್ಲಿ ಭಾರತದ ವಿಜ್ಞಾನ ಚರಿತ್ರೆಯಲ್ಲಿ  ಅಂತರರಾಷ್ಟ್ರೀಯ ಮಟ್ಟದ ಐವರು ವಿಜ್ಞಾನಿಗಳು ಸಮಕಾಲೀನರಾಗಿದ್ದರು? ಅವರೆಂದರೆ - ಸರ್. ಸಿ.ವಿ. ರಾಮನ್, ಜಗದೀಶ್ ಚಂದ್ರ ಬೋಸ್, ಶ್ರೀನಿವಾಸ ರಾಮಾನುಜಮ್, ಮೇಘನಾದ್ ಸಹಾ ಮತ್ತು ಪ್ರೊಫೆಸರ್ ಚಂದ್ರಶೇಖರ್. ಚಂದ್ರ ಅವರ ಉತ್ತರ ಹೀಗಿತ್ತು, ಭಾರತೀಯ ವಿಜ್ಞಾನಿಗಳಿಗೆ ಭಾರತವನ್ನು ಆಳುತ್ತಿದ್ದ ಬ್ರಿಟೀಷ್ ಆಧಿಪತ್ಯಕ್ಕೆ ಭಾರತೀಯರ ಮೇಧಾ ಶಕ್ತಿ ಉತ್ಕೃಷ್ಟವಾದದ್ದೆಂದು ನಿರೂಪಿಸಬೇಕಿತ್ತು. ವಿಜ್ಞಾನಿಗಳು ಎಬ್ಬಿಸಿದ ಈ ಅಲೆಯು, ರಾಜಕೀಯ ಸ್ವಾತಂತ್ರ್ಯದ ಜೊತೆಗೆ ಭಾರತದ ಸ್ವಾತಂತ್ರ್ಯ  ಸಂಗ್ರಾಮಕ್ಕೆ ಇನ್ನೊಂದು ಆಯಾಮವನ್ನು ಒದಗಿಸಿತು. ಆದ್ದರಿಂದ ದೇಶದ ಮೊದಲ ದಿಶೆಯು ರಾಜಕೀಯ, ಇತಿಹಾಸ, ವಿಜ್ಞಾನ ಮತ್ತು ಉದ್ಯಮ ರಂಗಗಳ ಅತ್ಯುತ್ತಮ ನಾಯಕರಿಂದ ರೂಪಿಸಲ್ಪಟ್ಟಿತ್ತು. 
 
        ಈ ಸಂದರ್ಭದಲ್ಲಿ ನನಗೆ ಸರ್ದಾರ್ ವಲ್ಲಭ ಭಾಯ್ ಪಟೇಲರ ಆತ್ಮಕತೆ ಜ್ಞಾಪಕಕ್ಕೆ ಬರುತ್ತದೆ.  ಹೇಗೆ ಮಿಂಚಿನ ವೇಗದಲ್ಲಿ ಸ್ವಾತಂತ್ರ್ಯೋತ್ತರ ಭಾರತದಲ್ಲಿ ದೇಶದ ಅಧಿಕಾರಿಕ ಏಕತೆಯನ್ನು ICS ಅಧಿಕಾರಿಗಳ ಬದಲಿಗೆ IAS ಅಧಿಕಾರಿಗಳನ್ನು ನಿಯೋಜಿಸುವುದರ ಮೂಲಕ ಕೈಗೊಂಡರು ಮತ್ತು ಸಣ್ಣಪುಟ್ಟ ರಾಜರ ಆಡಳಿತವಿದ್ದ ಸಂಸ್ಥಾನಗಳನ್ನು ಐಕ್ಯಗೊಳಿಸಿದರು. ಆ ಸಮಯದಲ್ಲಿ ಒಬ್ಬ ಜೈನ ಮುನಿಯು ಸರ್ದಾರ್ ಪಟೇಲರನ್ನುದ್ದೇಶಿಸಿ, "ಸರ್ದಾರ್ ಸಾಹೇಬರೆ, ನೀವು ಭಾರತದ ಚರಿತ್ರೆಯನ್ನು ಬರೆಯಬೇಕು." ಎಂದು ಹೇಳಿದರಂತೆ. ಅದನ್ನು ಕೇಳಿ ಸರ್ದಾರ್ ಪಟೇಲರು ಮನಸಾರೆ ನಕ್ಕು ಹೀಗೆ ಹೇಳಿದರು, "ನಾವು ಚರಿತ್ರೆಯನ್ನು ಬರೆಯುವುದಿಲ್ಲ ಆದರೆ ಚರಿತ್ರೆಯನ್ನು ಸೃಷ್ಟಿಸುತ್ತೇವೆ." ಅಭಿವೃದ್ಧಿ ಹೊಂದುತ್ತಿರುವ ಭಾರತವನ್ನು ಅಭಿವೃದ್ಧಿ ಹೊಂದಿದ ಭಾರತವನ್ನಾಗಿ ಪರಿವರ್ತಿಸುವುದರಲ್ಲಿ ನಿಜವಾಗಿಯೂ ಚರಿತ್ರೆಯನ್ನು ಸೃಷ್ಟಿಸುವ ಕಾರ್ಯ ಅಡಗಿದೆ. 
 
         ಈ ಎರಡು ಪ್ರಸಂಗಗಳು ಭಾರತದ ಬುನಾದಿಯನ್ನು ಪ್ರತಿಫಲಿಸುತ್ತವೆ. ನಾವು ಅದನ್ನು ಸಾಧಿಸಬಲ್ಲೆವು. ದೇಶವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲು ನಮಗೆ ಎಲ್ಲಾ ರೀತಿಯ ರಾಜಕೀಯ, ತಾಂತ್ರಿಕ ಮತ್ತು ಉದ್ದಿಮೆಗಳ ಸಾಮರ್ಥ್ಯವಿದೆ. ಲೋಕಸಭೆಯು, ಭಾರತವು ಎರಡು ದಶಕಗಳಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಬೇಕೆಂದು ಶಾಸನವನ್ನು ಹೊರಡಿಸಬಹುದು. ಈ ಯೋಜನೆಯು ಜನರ ಆಲೋಚನೆಯಾಗಿ ಪರಿವರ್ತಿತವಾಗುತ್ತದೆ. ನೂರು ಕೋಟಿ ಜನರ ಆಲೋಚನೆಯು ಪ್ರಜ್ವಲಿತಗೊಳ್ಳುತ್ತದೆ ಮತ್ತು ಅದರಿಂದ ಸಂಪದ್ಭರಿತ ಮತ್ತು ಶಾಂತಿಯುತ "ಅಭಿವೃದ್ಧಿ ಹೊಂದಿದ ಭಾರತ" ಸಾಧ್ಯವಾಗುತ್ತದೆ. 
 
ವಿ.ಸೂ.: ಈ ಲೇಖನವು, ಡಾll ಅಬ್ದುಲ್ ಕಲಾಂ ಅವರು ನಿಮ್ಮೊಂದಿಗೆ ಮಾತನಾಡುತ್ತಾರೆ – ಒಂದು ಸಂಗ್ರಹ ಗ್ರಂಥ )Dr. Abdul Kalam Speaks to you – A Compilation), ಪ್ರಕಟಣೆ: ಶ್ರೀ ಸಂತ್ ಗಜಾನನ್ ಮಹರಾಜ್ ತಾಂತ್ರಿಕ ಮಹಾವಿದ್ಯಾಲಯ, ಶೇಗಾಂವ್ – ೪೪೪ ೨೦೩, ಬುಲ್ಡಾನಾ ಜಿಲ್ಲೆ, ಮಹರಾಷ್ಟ್ರ ರಾಜ್ಯ; ಆಂಗ್ಲ ಭಾಷೆಯ ಪುಸ್ತಕದ ೪೯ರಿಂದ ೫೩ನೇ ಪುಟಗಳ ಅನುವಾದದ ಭಾಗ. 
 
 
 
 
Rating
No votes yet

Comments