ಡೈರಿಯ ಕೆಲವು ಹಾಳೆಗಳು - ಭಾಗ ೬

ಡೈರಿಯ ಕೆಲವು ಹಾಳೆಗಳು - ಭಾಗ ೬

ದಿನಾಂಕ: ೨೬-ಜನವರಿ
ಅವನು:
ಈ ದಿನ ರಜೆ ಇದ್ದುದ್ದರಿಂದ ನನಗೆ ನಿಧಾನವಾಗಿ ಯೋಚಿಸಲು ಸಮಯ ಇತ್ತು. ಇದರಲ್ಲಿ ತಪ್ಪಾಗಿದ್ದೇನು? ನಾನು ಯಾವ ತಪ್ಪನ್ನು ಮಾಡಿಲ್ಲ. ನಾನವಳನ್ನು ಮಾತನಾಡಿಸಿಯು ಇಲ್ಲ, ಅವಳ ಜೊತೆ ಫ್ಲರ್ಟ್ ಮಾಡೋಕೆ ಕೂಡ ಪ್ರಯತ್ನಿಸಿಲ್ಲ, ಅವಳ ಬಗ್ಗೆ ನನ್ನ ಸ್ನೇಹಿತರನ್ನ ಹೊರತುಪಡಿಸಿ ಯಾರ ಹತ್ತಿರಾನು ಮಾತನಾಡಿಲ್ಲ. ನಾನು ಪ್ರಯಾಣಿಸುವ ಬಸ್ಸಿನಲ್ಲಿರುವ ಸಹ ಪ್ರಯಾಣಿಕರಿಗೂ ಕೂಡ ನಾನು ಅವಳನ್ನ ಇಷ್ಟ ಪಡೋದು ಗೊತ್ತಿಲ್ಲ. ಅವಳನ್ನ ನೋಡುವಾಗಲು ಕೂಡ ಅದು ಉದ್ದೇಶಪೂರ್ವಕ ಅನ್ನೋ ಭಾವನೆ ಬರದ ಹಾಗೆ ನೋಡ್ತೇನೆ. ಅವಳನ್ನ ಯಾವುದೇ ರೀತಿಯ ಮುಜುಗರಕ್ಕೆ ಈಡು ಮಾಡುವುದು ನನ್ನ ಮನಸ್ಸಿಗೆ ಸರಿ ಬರುವುದಿಲ್ಲ.
ನಾನು ಇಷ್ಟೆಲ್ಲಾ ಪ್ರಯತ್ನ ಮಾಡಿದ್ರುನು, ಅವಳ ಮುಖದ ಮೇಲೆ ಯಾಕೆ ನನ್ನ ಬಗ್ಗೆ ಕ್ರೂರ ಭಾವನೆಗಳು?

ನನಗನ್ನಿಸುತ್ತೆ ಅವಳನ್ನ ನಾನು ಇಷ್ಟ ಪಡೋದು, ಅವಳನ್ನ ನಾನು ಗುರಾಯಿಸೋದು ಎಲ್ಲ ಗೊತ್ತು. ಅವಳಿಗೆ ನಾನು ಇಷ್ಟ ಇಲ್ಲ ಅನ್ನ್ಸುತ್ತೆ ಅದಕ್ಕೆ ಪ್ರೋತ್ಸಾಹಿಸೋದು ಬೇಡ ಅಂತ ಹೀಗೆ ಮಾಡ್ತಿರಬಹುದು ಅಥವಾ ಯಾವುದೇ ಕಾರಣವಿಲ್ಲದೆ ನನ್ನ ದ್ವೇಷಿಸುತ್ತಿರಬಹುದು; ನನ್ನ ಬಹಳಷ್ಟು ಸಹಪಾಟಿಗಳು ಯಾವುದೇ ಕಾರಣವಿಲ್ಲದೆ ನನ್ನ ದ್ವೇಷಿಸಿದ ಹಾಗೆ.
ಈಗೇನು ಮಾಡ್ಬೇಕು ಅಂತ ಗೊತ್ತಾಗುತ್ತಿಲ್ಲ ನನಗೆ, ಯಾವುದೇ ರೀತಿಯಿಂದಲೂ ಅವಳು ನನ್ನನ್ನ ಅವಳ ಹತ್ತಿರ ಬರದಹಾಗೆ ನೋಡ್ಕೊತಿದಾಳೆ. ಅವಳು ನನ್ನನ್ನ ದ್ವೇಶಿಸ್ತಾಳೆ. ನನ್ನ ಮತ್ತೊಂದು ಸೋಲು. ನನಗಿದು ನೋವು ಕೊಡುತ್ತಾ? ಖಂಡಿತವಾಗಿ, ಆದ್ರೆ ನನಗಿದೆಲ್ಲ ಅಭ್ಯಾಸ ಆಗಿಹೋಗಿದೆ. ಇನ್ನ್ಮೆಲಿಂದ ಅವಳನ್ನ ನೋಡೋದು ಬಿಡೋಕೆ ಪ್ರೋಯತ್ನ ಮಾಡ್ತೀನಿ.
ಅವಳಿಗೆ ಇಷ್ಟ ಆಗದೆ ಇರೋ ಯಾವ ಕೆಲಸ ಮಾಡೋಕು ನಂಗೆ ಇಷ್ಟ ಇಲ್ಲ. ಅವ್ಳು ನನ್ನ ಬಾಳಿನಲ್ಲಿ ಕೇವಲ ಒಂದು ಸುಂದರ ಸ್ವಪ್ನ ಆಗಿ ಬಂದಿದ್ಲು ಅಂತ ಅನ್ಕೊಂಡು ಅವಳನ್ನ ಮರೆಯೋಕೆ ಪ್ರಯತ್ನ ಪಡ್ತೀನಿ. ಅವಳು ನನ್ನ ಪಾಲಿಗೆ "ಗಗನ ಕುಸುಮ". ಬಹುಶಃ ಅವಳ ಜೊತೆ ಇರೋಕೆ ನಾನು ಯೋಗ್ಯ ಅಲ್ಲ. ಎಷ್ಟೇ ಅದ್ರು ಇದು ವಿಧಿ, ಇದನ್ನ ನಾನು ಒಪ್ಪಿಕೊಳ್ಳಲೇ ಬೇಕು.

ಅವಳು:
ಇವತ್ತು ರಜೆ ಇತ್ತು. ಹಾಗಾಗಿ ಅವನನ್ನ ನೋಡೋಕೆ ಆಗ್ಲಿಲ್ಲ, ಅವನನ್ನ ನೋಡೋ ಅಸೆ ಇದ್ರೂ ಕೂಡ. ನಿಜವಾಗ್ಲು ನಾನು ನಿನ್ನೆ ನಡೆದ ಘಟನೆಯ ಬಗ್ಗೆ ಕ್ಷಮಾಪಣೆ ಕೇಳ್ಬೇಕು ಅವ್ನಿಗೆ. ನಾನು ಬಸ್ಸು ಹತ್ತಿದ ತಕ್ಷಣ ಜಾಗ ಹುಡುಕುತಿದ್ದೆ. ಅವ್ನು ೩ ಜನ ಕೂಡೋ ಜಾಗದಲ್ಲಿ ಒಬ್ಬನೇ ಕೂತಿದ್ದ, ಅವನ ಜೊತೆ ಕೂತು ಮಾತನಾಡೋಕೆ ಒಳ್ಳೆಯ ಅವಕಾಶ ಇದಾಗಿತ್ತು. ನಾನು ರೋಮಾಂಚಿತಳಾಗಿದ್ದೆ . ಇನ್ನೇನು ಅಲ್ಲಿ ಹೋಗಿ ಕೂಡಬೇಕು ಅನ್ನುವಷ್ಟರಲ್ಲೇ ಕೃತಿ ಏನೋ ಹೇಳಿದ ಹಾಗಾಯಿತು. ಸರಿಯಾಗಿ ಕೇಳಲಿಲ್ಲ ಅಂತ ಅವಳ ಕಡೆ ತಿರುಗಿದೆ. "ನೋಡಿಲ್ಲಿ ರಾಘವ ನಮಗಾಗಿ ಜಾಗ ಹಿಡಿದಿಟ್ಟಿದ್ದಾನೆ ನೋಡು" ಅಂತ ಅಂದಳು.
ಆ ರಾಘವನ ಹೆಸರು ಕೇಳಿದರೆ ನನ್ನ ಮೈ ಉರಿಯುತ್ತೆ. ಅವನು ಯಾವುದೇ ಹುಡುಗಿಯ ಜೊತೆ ಫ್ಲರ್ಟ್ ಮಾಡೋಕೆ ತಯಾರಗಿರ್ತಾನೆ. ಅವನ್ನ ನೋಡಿದ್ರೆ, ಅವನಿಂದ ಎಷ್ಟು ದೂರ ಇರೋಕೆ ಸಾಧ್ಯನೋ ಅಷ್ಟು ದೂರ ಇರೋಕೆ ಪ್ರಯತ್ನ ಪಡ್ತೀನಿ. ನಾನು ಅವನನ್ನ ಸೇರೋಲ್ಲ ಅಂತ ಸ್ಪಷ್ಟವಾಗಿ ತೋರ್ಸಿದ್ರು ಕೂಡ ಈ ಹುಡುಗ ಯಾವುದನ್ನು ಕೇರ್ ಮಾಡಲ್ಲ. ಕೃತಿಗೆ ಇವ್ನು ಯಾಕೆ ಇಷ್ಟ ಆಗ್ತಾನೆ ಅಂತ ನಂಗೆ ಅರ್ಥ ಆಗಿಲ್ಲ.
ನಾನು ರಾಘವ ನಮಗಾಗಿ ಕಾದಿರಿಸಿದ್ದ ಜಾಗದಲ್ಲಿ ಕೂತ್ಕೊಂಡೆ. ನಿರು ಬಗ್ಗೆ ನಂಗೆ ತುಂಬ ಬೇಸರ ಅನ್ನಿಸ್ತು. ಆದ್ರೆ ನಾನು ರಾಘವನ ಕೋರಿಕೆಯನ್ನ ತಿರಸ್ಕರಿಸಿ ನಿರು ಜೊತೆ ಕೂತ್ಕೊಂಡಿದ್ರೆ ಅದು ಸಾಮಾನ್ಯ ಸಂಗತಿ ಆಗ್ತಿತ್ತು. ಅವನಿಗೆ ಇನ್ನಷ್ಟು ಮುಜುಗರ ಆಗ್ತಿತ್ತು. ಪಾಪದ ಹುಡುಗ ನಿರು :-(

Rating
No votes yet

Comments