ತಂಗಳು ಬದುಕಿನ ಮಳೆ

ತಂಗಳು ಬದುಕಿನ ಮಳೆ

 

ಇನ್ನು ಸ್ವಲ್ಪ ದಿನದಲ್ಲಿ, ನಿಲ್ದಾಣದಲ್ಲಿ ಪ್ರಯಾಣಿಕರ ವಿಮಾನಗಳು ಇಳಿಯುವುದಿಲ್ಲ. ನಗರಕ್ಕೆ ಸಮೀಪ, ಭವ್ಯವಾದ ಆಧುನಿಕ ಸೌಲಭ್ಯವುಳ್ಳ ಹೊಸ ನಿಲ್ದಾಣ ಸಿದ್ಧವಾಗಿದೆ. ಪ್ರಧಾನ ಮಂತ್ರಿಯ ಆಗಮನದ ದಿನಾಂಕ ನಿಗಧಿಯಾಗದ ಕಾರಣಕ್ಕೆ ಉದ್ಘಾಟನೆಯಾಗದೆ ಉಳಿದಿದೆ. ಹಳೆಯ ನಿಲ್ದಾಣದಲ್ಲಿ ಪೆಚ್ಚು ಕಳೆಯೊಂದಿಗೆ ನಿತ್ಯದ ಹಾರಟಗಳು ನಡೆಯುತ್ತಿತ್ತು. ಸಿಬ್ಬಂದಿಗಳು, ಟ್ಯಾಕ್ಸಿ ಡ್ರೈವರುಗಳು, ಟ್ರಾಲಿಗಳು, ಆಸನಗಳು, ಕಟ್ಟಡ, ಸ್ಟಾಲುಗಳು ಪುರಾತನ ಇತಿಹಾಸಕ್ಕೆವಿದಾಯ ಹೇಳುವ ಮೂಡಿನಲ್ಲಿ ಇದ್ದ ಹಾಗೇ ಕಾಣಿಸುತ್ತಿತ್ತು. ಪ್ರಯಾಣಿಕರು ಮಾತ್ರ ಇದನ್ನು ಗಮನಿಸದೆ, ಹತ್ತುವ - ಇಳಿಯುವ ಕ್ರಿಯೆಯಲ್ಲಿ ತೊಡಗಿಸಿ ಉಲ್ಲಾಸಿತರಾಗಿಯೇ ಇದ್ದ ಹಾಗೇ ತೋರುತ್ತಿತ್ತು. ನಗರದಲ್ಲಿ ಹೆಸರುವಾಸಿ, ಉದ್ಯಮಿಯೊಬ್ಬರ ಕಾರು ಹಿಂದೆ ಮತ್ತು ಮುಂದೆ ಪೋಲಿಸ್ ಎಸ್ಕಾರ್ಟ್ ನೊಂದಿಗೆ ವಿಪರೀತ ವೇಗದಲ್ಲಿ ಬಂದು ಪ್ರಯಾಣಿಕರು ವಿಮಾನ ಹತ್ತುವ, ನಿರ್ಗಮನ ಬಾಗಿಲಿನ ನೇರಕ್ಕೆ ನಿಂತಿತು. ಒಂದು ಕ್ಷಣ ಎಲ್ಲಾ ಸ್ಥಬ್ಧವಾದ ಹಾಗೇ ಕಂಡಿತು. ಕಾರಿನಿಂದ ಇಳಿದ ಎರಡು ವ್ಯಕ್ತಿಗಳು, ಕಾರಿನ ಒಡೆಯರಿಗೆ ಸಂಭಂದ ಪಟ್ಟವರಾಗಿರಲಿಲ್ಲ. ಗರಿ ಗರಿ ಖಾವಿ ಬಟ್ಟೆಯಲ್ಲಿ ಒಣಕಲು ಶರೀರದ, ಹಿಂಡಿದರೆ ಒಂದು ಲೀಟರ್ ರಕ್ತ ಕಷ್ಟದಲ್ಲಿ ಸಿಗಬಹುದು ಅನಿಸುವ ಹಾಗಿದ್ದ, ಮಾಂಸವೇ ಇಲ್ಲದ ಪುಟ್ಟ ಶರೀರದ, ಪ್ರಖ್ಯಾತ ಜನಾಂಗದ ಬಲಿಷ್ಟ ಮಠದ ಯತಿ ಇಳಿದರು. ಕುರುಚಲು ಗಡ್ಡ ತುಸು ಬಾಗಿದ ನಿಲುವು, ಮುಖದಲ್ಲಿ ತೇಜಸ್ಸು, ನಿಧಾನ ಸಮಾಧಾನದ ನಡೆ, ನೋಡಿದ ತಕ್ಷಣ ನಮಸ್ಕರಿಸುವ ಆತುರ ಹುಟ್ಟಿಸುವ ಗೌರವದ ನೋಟ ಬೀರುವ ಕಣ್ಣುಗಳು ಯತಿಗಿದ್ದವು. ಸಾರ್ವಜನಿಕ ಕಾರ್ಯಕ್ರಮಗಳಿಗೆ, ಅದರಲ್ಲೂ ಯತಿ ಪ್ರತಿನಿಧಿಸುವ ಜನಾಂಗದ ಸಭೆಗಳಿಗೆ ಹಾಜರಾಗಲು ಬೇಡಿಕೆಯಿಟ್ಟು ಕಾಯುವವರಿಗೆ, ಯತಿ ವಿರಾಮವಾಗಿರುವ ದಿನಗಳು ಜನಾಂಗದ ವರಿಷ್ಟರ ರೆಕಮೆಂಡೇಷನ್ ಇದ್ದರೆ ದೊರೆಯುತ್ತಿತ್ತು. ಮಾತುಗಳು ಪ್ರಖರವಾಗಿರುತ್ತಿತ್ತು. ಗುರಿ ತಪ್ಪದ ತೀಕ್ಷಣ ಭಾಷಣಕ್ಕೆ ನೆರೆದ ಸಭಾ ಜನರು ಮರುಳಾಗುವ ಮೋಡಿ ಇರುತ್ತಿತ್ತು. ಯತಿಯ ಪಟ್ಟದ ನಂತರ ಮಠ ಶ್ರೀಮಂತಿಕೆಯನ್ನು ಹತ್ತು ಪಟ್ಟಾಗಿಸಿತ್ತು. ತಾನು ನಂಬಿದ ದಾರಿಯೇ ಸರಿಯಾದದ್ದು, ಯಾವ ಅಡೆ ತಡೆ ಬಂದರು ನಿವಾರಿಸಿಕೊಳ್ಳುವ ಛಾತಿ ಇತ್ತು. ಚಾಲಾಕಿ ಶಿಷ್ಯ ವರ್ಗವೂ ಇತ್ತು. ಸಾವು ನೋವುಗಳು, ನಂಬಿದ ತತ್ವವನ್ನು ಜೀವಂತವಿರಿಸಲು ಅನಿವಾರ್ಯವಾಗಿದ್ದರೆ ಅದಕ್ಕೂ ಸೈ ಎನ್ನುವ ನಿಲುವು. ವಿರೋಧಿಗಳನ್ನು ನಿವಾರಿಸಲು ಶಿಷ್ಯವರ್ಗಕ್ಕೆ ಪ್ರಚೋದನೆ, ಖಂಡ ತುಂಡು ಭಾಷಣದಿಂದ, ಯತಿಗೆ ಜೀವ ಬೆದರಿಕೆಯ ಕರೆಗಳು ಬಂದಿತ್ತು. ಯತಿಯ ನಿಲುವನ್ನು ಬೆಂಬಲಿಸುವ, ಅದೇ ತತ್ವಗಳಿಂದ ಗೆದ್ದು ಬಂದ ಸರಕಾರ ರಾಜ್ಯದಲ್ಲಿತ್ತು. ಪೋಲಿಸು ಕಾವಲು ಸರಕಾರವೇ ಒದಗಿಸಿತ್ತು. ಯತಿ ಬೇರೆ ರಾಜ್ಯವೊಂದರಲ್ಲಿ ಯಾವುದೋ ಕಾರ್ಯಕ್ರಮದಲ್ಲಿ ಭಾಗವಹಿಸಲು ವಿಮಾನ ಪ್ರಯಾಣಕ್ಕೆ ಸಿದ್ಧರಾಗಿ ಬಂದಿದ್ದರು.  ಕಾರಿನ ಮುಂದಿನ ಸೀಟಿನಿಂದ ಯತಿಯ ಚೇಲ ಬಿಳಿ ಪಂಚೆ, ಬೆಳ್ಳನೆ ಮಿರುಗುವ ಜುಬ್ಬಾ, ಖಾವಿ ಹೆಗಲು ಚೀಲದೊಂದಿಗೆ ಇಳಿದ. ಗಟ್ಟಿ ಮುಟ್ಟು ಯುವಕನಾಗಿದ್ದ. ಅವನೂ ಯತಿಯ ಜೊತೆಗೆ ಪ್ರಯಾಣಿಸುವವನೇ ಆಗಿದ್ದ. ಕಾರಿನ ಢಿಕ್ಕಿಯಿಂದ ದೊಡ್ಡದೊಂದು, ಚಕ್ರಗಳು ಇದ್ದ ವಿಐಪಿ ಬ್ಯಾಗನ್ನು ಡ್ರೈವರು ಇಳಿಸಿದ. ಕಾರಿನ ಚಾಲಕ ಯತಿಯ ಅನುಮತಿ ಪಡೆದು ಜಾಗ ಖಾಲಿ ಮಾಡಿದ. ಪೋಲಿಸು ಸಿಬ್ಬಂದಿ ಪೋಲಿಸು ಯೂನಿಫಾರ್ಮ್ ನಲ್ಲಿ, ಯತಿ ನಿರ್ಗಮನ ದ್ವಾರದ ಮೂಲಕ ಒಳ ಪ್ರವೇಶಿಸುವುದನ್ನು ಕಾಯುತ್ತಿತ್ತು.  ಯತಿ ಒಂದು ಕ್ಷಣ ನಿಂತ. ಇಡೀ ನಿಲ್ದಾಣವನ್ನು ಧ್ರಷ್ಟಿಸಿದ. ಕೆಲವರನ್ನು ಬಿಟ್ಟು ಉಳಿದ ವ್ಯಕ್ತಿಗಳು ಯತಿಯನ್ನು ನೋಡುತ್ತಾ, ಬಂದ ಕಾರ್ಯ ಮರೆತು ನಿಂತಿದ್ದರು. ಸರ್ವ ತ್ಯಾಗಿ ಯತಿ ಎಲ್ಲರೂ ನೋಡುತ್ತಾ ಇದ್ದ ಹಾಗೇ ಚೇಲನ ಮುಂದೆ ಕೈ ಚಾಚಿದ, ಚೇಲ ಖಾವಿ ಚೀಲದಿಂದ, ಇದ್ದದರಲ್ಲಿ ಅತೀ ಹೆಚ್ಚು ಬೆಲೆಯುಳ್ಳ ನೋಟೊಂದನ್ನು ಸೆಳೆದು ಯತಿಯ ಕೈಗೆ ಕೊಟ್ಟ. ಒಂದಿಡೀ ದಿನ ಡ್ಯೂಟಿ ಮಾಡಿದರೆ ಸರಕಾರದ ಲೆಕ್ಕದಲ್ಲಿ ಸಿಗುವ ಪಗಾರಕ್ಕೆ ಸರಿಸಮಾನ ಆಗುವ ಮೊತ್ತದಷ್ಟಿತ್ತು.  ಯತಿಯ ಮಠದ ದೇವತೆಯನ್ನು ಪೂಜಿಸಿದ ಪ್ರಸಾಧದ ಸಣ್ಣ ಕಟ್ಟು ಹೆಗಲಮೇಲೆ ನಕ್ಷತ್ರ ಇದ್ದ ಫೋಲಿಸನಿಗೆ, ಕಣ್ಣಲ್ಲಿ ಮಿಂಚು ಹರಿಸಿ ಸಣ್ಣ ನಗು ಆಶೀರ್ವಾದದ ಜೊತೆಗೆ ಸಂಧಾಯವಾಯಿತು. ಉಳಿದ ಆರು ಪೇದೆಗಳಿಗೂ ಸಂಧಾಯವಾದದ್ದು, ಅವರವರ ದಿನದ ಪಗಾರಕ್ಕಿಂತಲೂ ಹೆಚ್ಚಿರಬಹುದಾದ ನೋಟಾಗಿತ್ತು. ಇಸಿದು ಕೊಳ್ಳುವ ಪೋಲಿಸು ದೇಹ ಬಾಗುತ್ತಿತ್ತು, ಹಿರಿದು ಕೊಡುತ್ತಿದ್ದ ಯತಿಯ ಮುಖದಲ್ಲಿ ಕೊಡುವ ಗತ್ತಿತ್ತು. ಕಣ್ಣಿಗೆ ಕಾಣಿಸಿತು.    

Rating
No votes yet