ತಪ್ಪಿದ ಬೇಟೆ...

ತಪ್ಪಿದ ಬೇಟೆ...

ಬಂಡಿಪುರಕ್ಕೆ ಬಂದು ತಲುಪಿದಾಗ ಸುಮಾರು ನಾಲ್ಕು ಗಂಟೆಯಾಗಿತ್ತು. ಸಫಾರಿಗೆ ಹೋಗೋಣವೆಂದು ನಿಶ್ಚಯಿಸೆದೆವು. ಇದ್ದಕ್ಕಿದ್ದಂತೆ ಸನಿಹದಲೆಲ್ಲೊ ಜಿಂಕೆಗಳ ಕೂಗು ಕೇಳಿ ಬಂತು. ಅಲ್ಲಿದ್ದ ನನ್ನ ಸ್ನೇಹಿತರು ಹೇಳಿದರು ಇದು ಎಚ್ಚರಿಕೆಯ ಕೂಗು ಎಂದು. ಹಾಗಾದರೆ ಅದು ಬೇಟೆಗಾರ ಪ್ರಾಣಿಯನ್ನು ಕಂಡಿರಬೇಕು ಅದಕ್ಕೆಂದೆ ಬೆದರಿ ಈ ರೀತಿ ಕೂಗುತ್ತಿದೆ ಎಂದುಕೊಂಡೆ.

ಸಫಾರಿಯ ಟಿಕೆಟ್ ಕೊಂಡು ನಾವೆಲ್ಲ ಬಸ್ಸಿನೊಳಗೆ ಕುಳಿತೆವು. ಆದರೆ ಬಸ್ಸಿನ ಸೀಟ್ಗಳೆಲ್ಲ ಭರ್ತಿಯಾಗುವವರೆಗು ಬಸ್ಸು ಹೊರಡುವಂತಿಲ್ಲ. ಅಷ್ಟರಲ್ಲಿ ಜಿಂಕೆಗಳ ಕೂಗು ನಿಂತು ಹೋಗಿತ್ತು. ನನಗೊ ಬಾರಿ ತಳಮಳ ಶುರುವಾಯಿತು. ಒಂದು ವೇಳೆ ಬೇಟೆಗಾರ ಪ್ರಾಣಿ ಹೊರಟು ಹೋಗಿದ್ದರೆ. ಅದು ಬೇಟೆಯಾಡಿತೆ? ಅದು ಯಾವ ಪ್ರಾಣಿಯಾಗಿರಬಹುದು? ಈ ಹಿಂದೆ ಅನೇಕ ಸಫಾರಿಗೆ ಹೋಗಿದ್ದ ನಾನು ಅತಿಯಾದ ನಿರೀಕ್ಷೆಯಿಟ್ಟುಕೊಳ್ಳಬಾರದು ಎಂದು ಕಲಿತಿದ್ದೆ.

ಹತ್ತು ಹದಿನೈದು ನಿಮಿಷದ ಬಳಿಕ ಇನ್ನೊಂದಿಷ್ಟು ಜನ ಬಂದು ಸೇರಿದ್ದರು. ಬಸ್ಸು ಹೊರಟಿತು. ಸುಮಾರು ಐದು ನಿಮಿಷದ ಪ್ರಯಾಣದ ಬಳಿಕ ಕಾಡಿನ ಮಧ್ಯೆ ದೊಡ್ಡದೊಂದು ಕೆರೆ ಕಂಡುಬಂತು. ಅದರ ಒಂದು ತುದಿಯಲ್ಲಿ ನಾಲ್ಕರು ಜಿಂಕೆಗಳು ಮೇಯುತ್ತಿದ್ದವು. ಡ್ರೈವರ್ ಬಸ್ ನಿಲ್ಲಿಸಿದರು. ಎಲ್ಲರು ಜಿಂಕೆಗಳ ಫೋಟೊ ತೆಗೆಯುವದರಲ್ಲಿ ಮಗ್ನರಾಗಿರಬೇಕಾದರೆ, ನಮ್ಮ ಡ್ರೈವರ್ ಮೆಲ್ಲಗೆ ಸೂಚನೆಯನ್ನು ಕೊಟ್ಟರು "ಅಲ್ಲೊಂದು ಚಿರತೆಯಿದೆ".

ಅಲ್ಲಿ ಕುಳಿತಿತ್ತು ಆ ಚಿರತೆ. ಕೆರೆಯ ತೀರದಲ್ಲಿ ಬೆಳೆದಿದ್ದ ಬಿದಿರು ಮೆಳೆಗಳ ನಡುವೆ ಕುಳಿತಿತ್ತು. ಜೀವನದಲ್ಲಿ ಮೊದಲ ಬಾರಿಗೆ ನಾನು ಕಾಡಿನಲ್ಲಿ ಚಿರತೆಯನ್ನು ನೋಡುತ್ತಿದ್ದೆ. ಒಂದು ತುದಿಯಲ್ಲಿ ಮೇಯುತ್ತಿದ್ದ ಜಿಂಕೆಗಳಿಗು ಮತ್ತು ಹೊಂಚು ಹಾಕಿ ಕುಳಿತ್ತಿದ್ದ ಚಿರತೆಗು ಸುಮಾರು 100 ಮೀ.ನಷ್ಟು ಅಂತರವಿತ್ತು. ನೋಡುತ್ತಿದ್ದಂತೆಯೆ ಮೆಲ್ಲನೆ ಎದ್ದ ಚಿರತೆ, ಜಿಂಕೆಗಳಿರಿವೆಡೆ ನಿದಾನವಾಗಿ ನಡೆಯತೊಡಗಿತು. ಇದಾವುದರ ಪರಿವೆಯೆ ಇಲ್ಲದೆ ಜಿಂಕೆಗಳು ತಮ್ಮ ಕೆಲಸ ಮುಂದುವರೆಸಿದ್ದವು.

ಹೀಗೆ ಚಿರತೆ ಮುಂದೆ ಸಾಗುತ್ತ ಜಿಂಕೆಗಳಿಗೆ ಸುಮಾರು 40-50 ಅಡಿಗಷ್ಟು ಸನಿಹ ಬಂದಿತ್ತು. ನಾವೆಲ್ಲ ಉಸಿರು ಬಿಗಿಹಿಡಿದು ಮುಂದಿನ ಕ್ಷಣಗಳನ್ನು ನಿರೀಕ್ಷಿಸಿತ್ತಿದ್ದೆವು. ಆದರೆ ಇದ್ದಕ್ಕಿದ್ದಂತೆ ಒಂದು ಜಿಂಕೆ ಚಿರತೆಯನ್ನು ಪತ್ತೆ ಹಚ್ಚಿತು. ಕ್ಯಾವ್ ಎಂದು ಸದ್ದು ಮಾಡುತ್ತ ತನ್ನ ಗುಂಪಿನ ಇತರರಿಗೆ ಎಚ್ಚರಿಕೆ ನೀಡಿತು. ಅಪಾಯವರಿತ ಇತರ ಜಿಂಕೆಗಳು ಒಂದಷ್ಟು ದೂರ ಓಡಿಹೋಗಿ, ಒಂದೇಸಮನೆ ಚಿರತೆಯತ್ತ ಕೂಗಿಕೊಳ್ಳ ತೊಡಗಿದವು. ಬೇಟೆ ತಪ್ಪಿದ ಚಿರತೆ ಹಿಂದಿರುಗಿ ಬಿದಿರು ಮೆಳೆಗಳ ನಡುವೆ ಮರೆಯಾಯಿತು.

ಕಾಡಿನಲ್ಲಿ ನಡೆಯುವ ಇಂಥ ರೋಮಾಂಚಕ ಸನ್ನಿವೇಶವೊಂದಕ್ಕೆ ಅಂದು ನಾನು ಸಾಕ್ಷಿಯಾಗಿದ್ದೆ. ಇತರ ಕೆಲವರು ಚಿರತೆ ಬೇಟೆಯಾಡಬೇಕಾಗಿತ್ತು ಎಂದು ಅಭಿಪ್ರಾಯ ಪಟ್ಟರು. ಆದರೆ ಅದನ್ನೆಲ್ಲ ನೋಡುವುದು ಅಷ್ಟು ಸುಲಭವಲ್ಲ. ಯಾವುದೆ ಬೇಟೆಗಾರ ಪ್ರಾಣಿ ತನ್ನ ಪ್ರತಿಯೊಂದು ಬೇಟೆಯ ಪ್ರಯತ್ನದಲ್ಲಿ ಸಫಲವಾಗುವುದಿಲ್ಲ. ಎಷ್ಟೊ ಪ್ರಯತ್ನಗಳ ಬಳಿಕ ಬೇಟೆ ದೊರಕಬಹುದು. ಇಲ್ಲಿ ಪ್ರಕೃತಿಯು ಬದುಕುವುದಕ್ಕಾಗಿ, ಜಿಂಕೆಗೆ ಹಾಗು ಚಿರತೆಗೆ ಸಮಾನವಾದ ಅವಕಾಶ ಕೊಟ್ಟಿರುತ್ತದೆ ಆದರೆ ಅವೆರಡರಲ್ಲಿ ಯಾವುದು ಬಲಿಷ್ಠವೊ ಅದು ಬದುಕುಳಿಯುತ್ತದೆ.

Rating
No votes yet