ತೇಜಸ್ವಿ: ಈ ಭೂಮಿಯಿಂದ ಆ ಆಕಾಶದವರೆಗೆ...

ತೇಜಸ್ವಿ: ಈ ಭೂಮಿಯಿಂದ ಆ ಆಕಾಶದವರೆಗೆ...

ತೇಜಸ್ವಿ: ಈ ಭೂಮಿಯಿಂದ ಆ ಆಕಾಶದವರೆಗೆ...

ಇದೇ ತಿಂಗಳ(ಏಪ್ರಿಲ್,2007) 7 ಅಥವಾ 8 ರಂದು ನಾವು ನಮ್ಮ ಸ್ನೇಹಿತರನ್ನು ಕಾಣಲು ಚಿಕ್ಕಮಗಳೂರು - ಅರೇಹಳ್ಳಿ- ಹಾಸನಗಳಿಗೆ ಹೋಗಿ ಬರಬೇಕೆಂದಿದ್ದೆವು. ದಾರಿಯಲ್ಲಿ ಪೂರ್ಣಚಂದ್ರ ತೇಜಸ್ವಿಯವರ ಮನೆಗೂ ಒಂದು ಸಂಕ್ಷಿಪ್ತ ಭೇಟಿ ನೀಡಬೇಕೆಂಬ ಉದ್ದೇಶವೂ ಇತ್ತು. ಒಂದೂವರೆ ತಿಂಗಳ ಹಿಂದಷ್ಟೇ ಕುಪ್ಪಳ್ಳಿಯ ಕುವೆಂಪು ಪ್ರತಿಷ್ಠಾನದವರು ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸಿಕ್ಕಿದ್ದ ತೇಜಸ್ವಿಯನ್ನು ಶಿವಮೊಗ್ಗಕ್ಕೆ ಆಹ್ವಾನಿಸಿದ್ದೆ. `ಅಲ್ಲಿಗ್ಯಾಕೆ ಬರಲೋ ಮಾರಾಯಾ!!' ಎಂದಿದ್ದ ಅವರು ನಮ್ಮನ್ನು ಮೂಡಿಗೆರೆಯ ತಮ್ಮ ಮನೆಗೆ ಆಹ್ವಾನಿಸಿದ್ದರು. ನಮ್ಮ ಜೊತೆ ಬಂದಿದ್ದ ಕಡಿದಾಳು ಶಾಮಣ್ಣ ಕೂಡಾ ಒಮ್ಮೆ ಹೋಗಿ ಬರೋಣ ಎಂದಿದ್ದರು. ಆದರೆ ನಾವು ಹೋಗುವ ಮುನ್ನವೇ ಅವರೇ `ಮನೆ' ಬಿಟ್ಟು ಹೋಗಿಬಿಟ್ಟಿದ್ದಾರೆ.
ಮೂರು ನಾಲ್ಕು ವರ್ಷಗಳ ಹಿಂದೆ ಎಂದು ಕಾಣುತ್ತದೆ - ಪತ್ರಿಕೆಯೊಂದರಲ್ಲಿ ಯಾವುದೋ ವಿಷಯಕ್ಕೆ ಪ್ರತಿಕ್ರಿಯಿಸುತ್ತಾ ನಮ್ಮ ಬಹುಮುಖ್ಯ ಲೇಖಕರಾದ ತೇಜಸ್ವಿ ಎಲ್ಲ ಬಿಟ್ಟು ಈಗ ಬರೀ ಮಾಹಿತಿಯ ಪುಸ್ತಕಗಳನ್ನು ಬರೆಯುತ್ತಾ `ಇಂಟರ್ನೆಟ್ ಸಾಹಿತಿ' ಎಂದು ಪ್ರಖ್ಯಾತರಾಗುತ್ತಿರುವುದು ವಿಷಾದಕರ ಎಂದು ಬರೆದಿದ್ದೆ. ಇದರಿಂದ ಕೆರಳಿದ್ದ ತೇಜಸ್ವಿ ಮೈಸೂರಿನಲ್ಲೊಮ್ಮೆ ಸಿಕ್ಕಾಗ ಜಗಳಾಡಿದ್ದರು. ನಾನು ನನ್ನ ಅಭಿಪ್ರಾಯವನ್ನು ವಿವರಿಸುತ್ತಾ, `ಆ ಅಭಿದಾನ ನಾನು ಕೊಟ್ಟಿದ್ದಲ್ಲ, ನಿಮ್ಮ ಅಭಿಮಾನಿಗಳೇ ನಿರಾಶರಾಗಿ ಕೊಟ್ಟ ಬಿರುದದು!' ಎಂದು ಎಷ್ಟೇ ಹೇಳಿದರೂ (ವಾಸ್ತವವಾಗಿ `ಅಗ್ನಿ' ಪರಿವಾರದೊಂದಿಗೆ ನಮ್ಮ ಮನೆಗೆ ಬಂದಿದ್ದ ಸುಜಾತಾ ಕುಮಟಾ ಅವರು ಬಳಸಿದ್ದ ಪದವದು) ಕೇಳದೆ, `ಇಲ್ಲ ನೀನೇ ವಿಲನ್' ಎಂದು ಮುನಿಸಿಕೊಂಡು ಮುಂದೆ ಮಾತೇ ಆಡದಾದರು. ನಾನು `ಸರಿಬಿಡಿ, ನಿಮ್ಮ ಸಿನಿಮಾದಲ್ಲಿ ನಾನು ವಿಲನ್, ನನ್ನ ಸಿನಿಮಾದಲ್ಲಿ ನೀವು ವಿಲನ್' ಎಂದು ಹೇಳಿ ಬಂದಿದ್ದೆ. ಕುಪ್ಪಳ್ಳಿಯಲ್ಲಿ ಸಿಕ್ಕಾಗ ನಾನು ಪರಿಚಯದ ನಗೆ ಬೀರಿ ನಮಸ್ಕರಿಸಿದೊಡನೆ ಆ ಘಟನೆಯ ಕಹಿ ಒಂಚೂರೂ ಇಲ್ಲದಂತೆ ಅದೇಹಳೆಯ ಪ್ರೀತಿ-ವಿಶ್ವಾಸದಿಂದ ಮಾತನಾಡಿಸಿದರು. ಆದರೆ ಆ ಹಿಂದಿನ ಉಲ್ಲಾಸ ಅವರ ವ್ಯಕ್ತಿತ್ವದಿಂದ ಮಾಯವಾಗಿದ್ದುದು ಎದ್ದು ಕಾಣುತ್ತಿತ್ತು. ಆರೇಳು ತಿಂಗಳುಗಳ ಹಿಂದೆ ಅವರ ಕಾಲುಗಳಿಗೆ ಆಗಿದ್ದ ತೊಂದರೆಯಿಂದಾಗಿ ಅವರು ಅನುಭವಿಸಿದ ದೀರ್ಘಕಾಲಿಕ ಅನಾರೋಗ್ಯದ ತೀವ್ರತೆ ಅವರನ್ನು ತುಂಬಾ ಬಳಲಿಸಿತ್ತು. ಹಾಗಾಗಿಯೇ ನಾನು `ಮಾಯಾಲೋಕ-1ರ ಮುಂದಿನ ಭಾಗ ಯಾವಾಗ?' ಎಂದು ಕುತೂಹಲದಿಂದ ಕೇಳಿದಾಗ ಅವರು ತಮ್ಮ ಸಹಜ ಶೈಲಿಯಲ್ಲಿ `ನಾನೇನು ಒಂದಾದರ ಮೇಲೆ ಒಂದರಂತೆ ಕೃತಿ ರಚಿಸಿ ಕೊಡುತ್ತೇನೆ ಅಂತಾ ನಿಮಗೆಲ್ಲಾ ಛಾಪಾ ಕಾಗದದ ಮೇಲೆ ಬರೆದು ಕೊಟ್ಟಿದ್ದೀನೇನ್ರೀ?' ಎಂದು ಹುಸಿ ಹಸಿಯಾಗಿ ರೇಗುತ್ತಾ 'ನಾನು ಸಾವನ್ನು ಮುಟ್ಟಿ ಬಂದಿದ್ದೀನಿ. ಆದ್ದರಿಂದ ಭಯವಿಲ್ಲ. ಮಾಯಾಲೋಕ-2 ಮಾತ್ರ ಅಲ್ಲ ಕಣ್ರೀ; ಒಂದು ಸರಣಿಯೇ ಬರುವಷ್ಟು ಸರಕು ಇದೆ. ಆದರೆ ಕಾಯಬೇಕು' ಎಂದು ಆಶ್ವಾಸನೆ ನೀಡುವ ಧ್ವನಿಯಲ್ಲಿ ನನ್ನ ಹೆಗಲ ಮೇಲೆ ಕೈಹಾಕಿ ಮಾತನಾಡುತ್ತಾ; ಸಂಜೆಯ ಉಪಹಾರ ವಿತರಿಸುತ್ತಿದ್ದ ಕುವೆಂಪು ಶತಮಾನೋತ್ಸವ ಭವನದ ಪಕ್ಕದಲ್ಲಿದ್ದ ದಿಬ್ಬದ ಕಡೆ ನನ್ನೊಂದಿಗೆ ನಡೆದು ಬಂದರು. ನನ್ನ ಕಾಲಿನ ಸಮಸ್ಯೆಯ ವಿವರಗಳನ್ನು ಕೇಳಿ, ನಾನು ಪ್ರಾಣಾಪಾಯದಿಂದ ಪಾರಾದ ಬಗೆಗೆ ತಮ್ಮ ಸಂತೋಷಭರಿತ ಆಶ್ಚರ್ಯ ವ್ಯಕ್ತಪಡಿಸಿದರು.
ಈ ಕೊನೆಯ ಭೇಟಿಯ ಸ್ಥಳದಲ್ಲೇ, ಅನತಿ ಕಾಲದಿಂದಲೇ ಅವರ ಅಂತ್ಯ ಸಂಸ್ಕಾರಕ್ಕೆ ಹಾಜರಾಗುವ ಸಂದರ್ಭ
ಎದುರಾಗುತ್ತದೆಂದು ನಾನು ಎಣಿಸಿರಲಿಲ್ಲ. ಅವರ ಅಂತಿಮ ದರ್ಶನಕ್ಕಾಗಿ ನಾನು ಮತ್ತು ನನ್ನ ಪತ್ನಿ ಕಂಬನಿಯಿಂದ ತೊಯ್ದ
ಹಾರದೊಂದಿಗೆ ಅದೇ ಕುವೆಂಪು ಶತಮಾನೋತ್ಸವ ಭವನದಲ್ಲಿ ನಿಲ್ಲಬೇಕಾಗಬಹುದೆಂದು ಎಣಿಸಲಾದರೂ ಹೇಗೆ ಸಾಧ್ಯ? ನಿಜ, ತೇಜಸ್ವಿ ಹಣ್ಣಾಗಿದ್ದರು. ಆದರೆ ತೊಟ್ಟು ಕಳಚಿ ಬೀಳುವ ಯಾವ ಸೂಚನೆಯೂ ಇರಲಿಲ್ಲ. ಬಹಳ ವರ್ಷಗಳ ಹಿಂದೆಯೇ ವ್ಯವಹಾರಿಕ ಕಾರಣಗಳಿಂದಾಗಿ ಕಳಚಿಹೋಗಿದ್ದ ಲಂಕೇಶರ ಸ್ನೇಹ ಹಾಗೂ ಅದರ ಅಡ್ಡ ಪರಿಣಾಮದಂತೆ ತಪ್ಪಿಹೋಗಿದ್ದ ಜೀವದ ಗೆಳೆಯ ರಾಮದಾಸರ ಒಡನಾಟ ಅವರನ್ನು ಕಂಗೆಡಿಸಿದ್ದಂತಿತ್ತು... ಅಂದು ಆಪ್ತಮಿತ್ರ ಕಡಿದಾಳು ಶಾಮಣ್ಣ ಹಾಗು ಕಿರಿಯ ಮಿತ್ರ ದಿವಾಕರ ಹೆಗಡೆಯೊಂದಿಗೆ ಲೋಕಾಭಿರಾಮವಾಗಿ ಮಾತನಾಡುತ್ತ ನಮ್ಮನ್ನೆಲ್ಲ ಆ ರಾತ್ರಿ ಅವರು ಅಲ್ಲೇ ಉಳಿಸಿಕೊಂಡು ಆ ಅದೇ ಹಳೆಯ ಬದುಕಿನ ಉಲ್ಲಾಸಮಯ ಕ್ಷಣಗಳ ನೆನಪುಗಳಲ್ಲಿ ತೊಯ್ಯುವ ಆಸೆ ವ್ಯಕ್ತಪಡಿಸಿದ್ದರು. ಆದರೆ ಅನಿರೀಕ್ಷಿತವಾಗಿ ಅಲ್ಲಿಗೆ ಹೋಗಿದ್ದ ನಾವು ಆ ದಿನವೇ ನಮ್ಮ ಊರುಗಳಿಗೆ ಹಿಂದಿರುಗುವ ಒತ್ತಡದಲ್ಲಿದ್ದೆವು. ಹಾಗಾಗಿ ನಾವು ಬಂದುಬಿಟ್ಟೆವು. ಆದರೆ ಅಂತಹ ಯಾವ ಒತ್ತಡದಲ್ಲೂ ಇದ್ದಂತೆ ತೋರದ ಅವರು ಹಿಂದಿರುಗಿ ಬಾರದ ಊರಿಗೆ ಹೋಗಿಯೇಬಿಟ್ಟರು...
ತೇಜಸ್ವಿ ನಿಧನದ ಸುದ್ದಿ ತಿಳಿದೊಡನೆ ಮೂಡಿಗೆರೆಗೆ ಧಾವಿಸಿದ ಶಾಮಣ್ಣ ಹಾಗೂ ದಿವಾಕರ ಹೆಗಡೆ ಕುಟುಂಬಗಳು ಅಂತ್ಯ ಸಂಸ್ಕಾರ ಮುಗಿಯುವವರೆಗೂ ಇದೇ ದಿಗ್ಭ್ರಮೆಯಲ್ಲಿದ್ದವು. ಹಾಗೇ ಶವದೊಡನೆ ಮೂಡಿಗೆರೆಯಿಂದ ಬಂದ ರಾಮದಾಸ್ ಕುಟುಂಬ ಲಂಕೇಶರ ಸಾವಿನೊಂದಿಗೆ ಅರ್ಧ ಬದುಕನ್ನು ಕಳೆದುಕೊಂಡು ಈಗ ತೇಜಸ್ವಿ ಸಾವಿನೊಂದಿಗೆ ಪೂರ್ತಿ ಬದುಕನ್ನೇ ಕಳೆದುಕೊಂಡ ಶೂನ್ಯಸ್ಥಿತಿಯ ಪರಿತಾಪದಲ್ಲಿತ್ತು. ಇವರೆಲ್ಲ ಮಾತ್ರವಲ್ಲ, ರಾಜ್ಯದ ವಿವಿಧೆಡೆಯಿಂದ ಕುಪ್ಪಳ್ಳಿಗೆ ಧಾವಿಸಿದ್ದ ಇಡೀ ಜನಸ್ತೋಮವೇ ಆ ದಿಗ್ಭ್ರಮೆ-ಪರಿತಾಪಗಳಲ್ಲಿ ಮುಳುಗಿಹೋಗಿತ್ತು. ಮೈಸೂರಿನಲ್ಲಿ ನಿಧನದ ಸುದ್ದಿ ಕೇಳಿ ಜನರಿಂದ ಮರೆಯಾಗಿ ಗೂಡು ಸೇರಿದ್ದ ದೇವನೂರ ಮಹಾದೇವ ಮತ್ತೆ ಜನರ ಕಣ್ಣಿಗೆ ಕಂಡದ್ದು ಕುಪ್ಪಳಿಯಲ್ಲಿ- ಅದೂ ಅಂತ್ಯ ಸಂಸ್ಕಾರ ಮುಗಿದು ಜನಸ್ತೋಮ ಕರಗಿಹೋದಮೇಲೆ. ತೇಜಸ್ವಿಯವರ ಅನಿರೀಕ್ಷಿತ ನಿಧನ ಹಾಗೆ ಅವರ ಗೆಳೆಯರನ್ನು ಕಂಗೆಡಿಸಿದೆ. ಈ ಗೆಳೆಯರು ಎಂದರೆ ಗೆಳೆಯರು ಮಾತ್ರವಲ್ಲ; ಅವರನ್ನು ಓದಿ ಸಂತೋಷಪಟ್ಟ, ಬದುಕಿನ ಹೊಸ ರುಚಿಗಳನ್ನು ಕಂಡುಕೊಂಡ ಹಾಗೂ ಆ ಮೂಲಕ ಬದುಕನ್ನು ಪರಿಭಾವಿಸುವ ಕ್ರಮವನ್ನೇ ಬದಲಾಯಿಸಿಕೊಂಡ ಅಬಾಲವೃದ್ಧರವರೆಗಿನ ಅವರ ಅಪಾರ ಓದುಗ ಸಮೂಹವೂ ಸೇರಿದೆ. ಅಂದು ಏಪ್ರಿಲ್ ಆರರಂದು ಕುಪ್ಪಳಿಯಲ್ಲಿ ಕರ್ನಾಟಕದ ಇಡೀ ಕುವೆಂಪು ಕುಟುಂಬವೇ ಒಟ್ಟಿಗೆ ಸೇರಿದಂತಿತ್ತು- ಗತಿಸಿದ ಮಹನೀಯರು ಹಾಗೂ ದೂರ ಪ್ರಯಾಣ ಮಾಡಲಾಗದ ಹಿರಿಯರ ಹೊರತಾಗಿ. ಅವರೆಲ್ಲ ಎದೆಯಲ್ಲಿ ಮಡುಗಟ್ಟಿದ ದುಃಖವನ್ನು ಹೊರಚೆಲ್ಲದ ಸಂಯಮದಲ್ಲಿ ಕುವೆಂಪು ಕುಟುಂಬಕ್ಕೆ ತಕ್ಕುದಾದ ವ್ಯವಧಾನ-ಶಾಂತಿ-ಸಮಾಧಾನಗಳೊಂದಿಗೆ ಕುವೆಂಪು ಮಗನನ್ನು ತಮ್ಮ ಮಧ್ಯದಿಂದ ಬೀಳ್ಕೊಟ್ಟರು. ತೇಜಸ್ವಿ ಹೇಗೆ ತಾವು ನಂಬಿದಂತೆ
ಧಾರ್ಮಿಕ ಸಂಪ್ರದಾಯಗಳ ಭಾರವಿಲ್ಲದೆ ನಿರುಮ್ಮಳವಾಗಿ ಬದುಕಿದರೋ ಹಾಗೇ ಯಾವ ಪುರೋಹಿತನ ಮಧ್ಯವರ್ತಿಕೆ ಇಲ್ಲದೆ
ನಿರುಮ್ಮಳ ಮೌನದಲ್ಲಿ ನಮ್ಮಿಂದ ತೆರಳಿದರು. ಅವರ ಪತ್ನಿ-ಪುತ್ರಿಯರು ಹಾಗೂ ಬಂಧು ಬಳಗವೂ ಅಷ್ಟೇ ಘನತೆ-
ಗಾಂಭೀರ್ಯಗಳಿಂದ ತಮ್ಮ ಬದುಕಿನ ಒಂದು ಭಾಗವನ್ನು ಅದು ತಮ್ಮದು ಮಾತ್ರವಲ್ಲವೆಂಬ ವಿನಯದಲ್ಲಿ ಬೀಳ್ಕೊಟ್ಟಿತು. `ಇದು
ನಮ್ಮೆಲ್ಲರ ಕೊನೆಯ ಸಂತಾಪಸಭೆ' ಎಂದು ದುಃಖ ಉಮ್ಮಳಿಸಿಕೊಂಡು ಬಂದಂತೆ ಘೋಷಿಸಿದ ರಾಮದಾಸ್, ಒಂದು ತಲೆಮಾರಿನ ಕ್ರಿಯಾಶೀಲತೆ ಇಲ್ಲಿಗೆ ಮುಗಿದಂತೆ; ಈ ನಂತರದ ಜವಾಬ್ದಾರಿಯೇನಿದ್ದರೂ ಮುಂದಿನ ತಲೆಮಾರುಗಳದ್ದು ಎಂದು ವಿದಾಯದ ಅಶ್ರುತರ್ಪಣ ಅರ್ಪಿಸಿ, ಆಧುನಿಕ ಕನ್ನಡ ಸಾಹಿತ್ಯ-ಸಂಸ್ಕೃತಿಯ ಒಂದು ಯುಗ ಮುಗಿದಿದ್ದರ ಸೂಚನೆ ನೀಡಿದರು.
ತೇಜಸ್ವಿ, ನವೋದಯ ಮುಗಿದ ನಂತರದ ಕನ್ನಡ ಸಾಹಿತ್ಯ-ಸಂಸ್ಕೃತಿಗಳ ತ್ರಿಮೂರ್ತಿಗಳೆನಿಸಿದವರಲ್ಲಿ ಉಳಿದಿಬ್ಬರೊಡನೆ ಇದ್ದೂ
ಇಲ್ಲದಂತಿದ್ದವರು. ಈ ಉಳಿದಿಬ್ಬರಾದ ಲಂಕೇಶ್ ಮತ್ತು ಅನಂತಮೂರ್ತಿ ಆಧುನಿಕ ಬದುಕಿನ ಆಕರ್ಷಣೆಗಳಿಗೆ
ಅವಿಮರ್ಶಾತ್ಮಕವೆಂಬಂತೆ ತಮ್ಮನ್ನು ತಾವು ಒಪ್ಪಿಸಿಕೊಂಡು ನಂತರದ ದಿನಗಳಲ್ಲಿ ಪರಿತಪಿಸುತ್ತಾ, ಆ ಪರಿತಾಪದಲ್ಲೇ ಕನ್ನಡಕ್ಕೆ
`ನಿಜ'ವೆನ್ನಿಸುವ ಕೃತಿಗಳನ್ನು ನೀಡಿದವರು. ಆದರೆ ತೇಜಸ್ವಿ ಕುವೆಂಪು ಮಗನಾಗಿ ಹುಟ್ಟಿ ಅವರ ಸಾಹಚರ್ಯದಲ್ಲಿ ಬೆಳೆದ
ಕಾರಣದಿಂದಲೋ ಏನೋ, ಆರಂಭದಿಂದಲೇ ಆಧುನಿಕ ಬದುಕಿನ ಆಕರ್ಷಣೆಗಳ ಬಗ್ಗೆ ಅನುಮಾನವಿಟ್ಟುಕೊಂಡೇ ತಮ್ಮ ಬದುಕಿನ ತಾತ್ವಿಕತೆ ಕಟ್ಟಿಕೊಂಡವರು. ಲಂಕೇಶ್, ಎಳೆಬಿಸಿಲು, ತಂಪುಮಳೆ, ಉನ್ಮತ್ತ ಹುಡುಗಿಯರು ಎಂದು ಬೆಂಗಳೂರಿನಲ್ಲಿ ನೆಲೆನಿಂತು, ಪದೇಪದೇ ಬದಲಾಗುತ್ತಿದ್ದ ತಮ್ಮ ಗೆಳೆಯರ ಬಳಗದ ಜೈಕಾರದ ನಡುವೆ ಮತ್ತೇರಿಸಿಕೊಂಡು ಕರ್ನಾಟಕವನ್ನು ಬೌದ್ಧಿಕವಾಗಿ ಆಳಲು ಹಾತೊರೆದ ಆಧುನಿಕ ಪಾಳೇಗಾರನಾಗಿ ಮೂಡಿನಿಂತರೆ; ಅನಂತಮೂರ್ತಿ, ತಮ್ಮ ವಿಸ್ತಾರಕ್ಕೆ ಮೈಸೂರು ಸಾಲದೆಂಬಂತೆ ಬೆಂಗಳೂರಿಗೆ ವಲಸೆ ಬಂದು, ಅಲ್ಲೂ ಕುಂತಲ್ಲಿ ಕೂರಲಾಗದೆ, ನಿಂತಲ್ಲಿ ನಿಲ್ಲಲಾಗದೆ ಪ್ರಪಂಚವನ್ನೇ ಸುತ್ತು ಹೊಡೆಯುತ್ತಾ, ಮಾತಿನ ಮಾಟಗಾರರಾಗಿ ಪರಿವರ್ತಿತರಾಗಿ ಕನ್ನಡ ಲೋಕವನ್ನು ತಮ್ಮ ಬೆಡಗಿನಲ್ಲಿ ಸುತ್ತುವರಿದುಕೊಳ್ಳುವ ಹವಣಿಕೆಯಲ್ಲಿದ್ದಂತೆ ತೋರುತ್ತಿದ್ದಾರೆ. ಆದರೆ ತೇಜಸ್ವಿ ತಮ್ಮ ಔಪಚಾರಿಕ ವಿದ್ಯಾಭ್ಯಾಸವನ್ನು ಹಾಗೂ ಹೀಗೂ ಕಷ್ಟಪಟ್ಟು ಮುಗಿಸಿದೊಡನೆ, ಎರಡನೇ ಆಲೋಚನೆಯೇ ಇಲ್ಲವೆಂಬಂತೆ ಹಳ್ಳಿಗೆ ತೆರಳಿದರು. ಮಲೆನಾಡಿನ ಮೂಲೆಯೊಂದರಲ್ಲಿ ಭೂಮಿ ನೆಚ್ಚಿ ಬೇಸಾಯ ಮಾಡತೊಡಗಿದವರು. ಅದು ಕುವೆಂಪು ಕಾಲದ ಹೊತ್ತಿಗೇ ಬದುಕಿನ ಸಾರ್ಥಕ್ಯ ಕಂಡುಕೊಳ್ಳುವ ಹೊಸ ಮಾರ್ಗವೆಂಬಂತೆ ಅನಾವರಣಗೊಂಡಿದ್ದ ಹಳ್ಳಿಯಿಂದ ನಗರದೆಡೆಯ ಪ್ರಯಾಣದ ಉತ್ತುಂಗ ಕಾಲ. ಆದರೆ ತೇಜಸ್ವಿ ಇದಕ್ಕೆ ವಿರುದ್ಧ ದಿಕ್ಕಿನ ಪ್ರಯಾಣ ಕೈಗೊಂಡರೆಂಬುದು ಮೇಲ್ನೋಟಕ್ಕೆ ಎದ್ದು ಕಾಣುವಷ್ಟು ಸರಳ ವಿಷಯವಾಗಿರಲಿಲ್ಲ.
ಆಧುನಿಕ ಜೀವನಕ್ರಮ ನಿಜವಾಗಿಯೋ, ಹುಸಿಯಾಗಿಯೋ ಹುಟ್ಟಿಸತೊಡಗಿದ್ದ ಅಪಾಯಕಾರಿ ಅನಾಥಪ್ರಜ್ಞೆಯ ಬಲೆಗೆ ಸಿಕ್ಕಿಬೀಳದೇ ಬದುಕಿನ ಅರ್ಥವನ್ನು ತನ್ನದೇ ಆಯ್ಕೆಯ ಅನುಭವಗಳಲ್ಲಿ ಅನ್ವೇಷಿಸಿಕೊಳ್ಳಲು ಕೈಗೊಂಡಂತೆ ತೋರುವ ಈ ಪ್ರಯಾಣದ ಸಾರ್ಥಕ ಕ್ಷಣಗಳಲ್ಲಿ ತೇಜಸ್ವಿಗೆ ಅನಿಸಿದ್ದು: ``ಲೋಹಿಯಾರ ತತ್ವಚಿಂತನೆ, ಕುವೆಂಪುರವರ ಕಲಾಸೃಷ್ಟಿ, ಕಾರಂತರ ಜೀವನದ ದೃಷ್ಟಿ ಮತ್ತು ಬದುಕಿನಲ್ಲಿ ಪ್ರಯೋಗಶೀಲತೆ - ಈ ಮೂರೇ ನನ್ನ ಈಚಿನ ಸಾಹಿತ್ಯ ರಚನೆಯ ಮೇಲೆ ಗಾಢ
ಪರಿಣಾಮಗಳನ್ನುಂಟುಮಾಡಿರುವಂಥವು. ಬಹುಶಃ ಮುಂಬರುವ ಕಲಾವಿದರಿಗೆ ಕನ್ನಡ ಸಾಹಿತ್ಯ ಸೃಷ್ಟಿಯಲ್ಲಿ ಚೈತನ್ಯ
ಶಕ್ತಿಯಾಗಬಲ್ಲಂಥವು ಈ ಮೂರೇ''. ಹೋದ ಶತಮಾನದ ಎಪ್ಪತ್ತರ ದಶಕದ ಹೊತ್ತಿಗೆ ಕನ್ನಡ ಸಾಹಿತ್ಯದ ದಿಕ್ಕನ್ನೇ ಬದಲಾಯಿಸಿದ ತಮ್ಮ `ಅಬಚೂರಿನ ಪೋಸ್ಟಾಪೀಸು' ಕಥಾ ಸಂಕಲನಕ್ಕೆ `ಹೊಸ ದಿಗಂತದ ಕಡೆಗೆ' ಎಂಬ ಶೀರ್ಷಿಕೆಯಡಿಯಲ್ಲಿ ಬರೆದ ಮುನ್ನುಡಿಯ ಆರಂಭದ ಈ ಮಾತುಗಳ ಹಿಂದಿರುವುದು ಪರಂಪರೆ, ಪ್ರತಿಭಟನೆ ಮತ್ತು ಪ್ರಯೋಗಗಳು ಮುಪ್ಪುರಿಗೊಂಡ ಜೀವನಕ್ರಮ. ಅದೇನೂ ಕಡಿಮೆ ಆಧುನಿಕವಾಗಿರಲಿಲ್ಲ. ಅದು ಸ್ವಾತಂತ್ರ್ಯ, ಸಮಾನತೆ ಹಾಗೂ ಸೌಂದರ್ಯಗಳನ್ನು ತನ್ನ ತಿರುಳಾಗಿ-ಹೊರಕವಚವಾಗಿ ಅಲ್ಲ-ಪಡೆದುಕೊಂಡ ಆಧುನಿಕತೆ. ಎಲ್ಲರನ್ನೂ ಸಮನಾಗಿ `ಕಾಣುವ' ನಾಗರಿಕ ಪ್ರಜ್ಞೆಯ ಆಧುನಿಕತೆಯಲ್ಲ. ಬದಲಾಗಿ ಎಲ್ಲರೂ ಸಮಾನರು ಎಂದು `ಅರಿಯುವ' ಬದುಕಿನ ಕ್ರಮದಲ್ಲಿ ದತ್ತವಾದ ಆಧುನಿಕತೆ.
ತೇಜಸ್ವಿಯವರ ಬಹಳಷ್ಟು ಕೃತಿಗಳ ಸೌಂದರ್ಯ ಸೃಷ್ಟಿಯಾಗುವುದು ಈ ನೆಲೆಯಲ್ಲೇ. ಹಾಗಾಗಿ ಈ ಸೌಂದರ್ಯ ಆಧುನಿಕ ಹೇಗೋ ಹಾಗೇ ಅಪ್ಪಟ ದೇಸೀ ಕೂಡ ಆದದ್ದು. ಹಾಗಾಗಿಯೇ ಬೋಬಣ್ಣ-ಕಾವೇರಿ, ಗೌರಿ-ಸೂರಾಚಾರಿ, ತುಕ್ಕೋಜಿ-ಸರೋಜಾ, ಇಯಾಲ, ಪ್ಯಾರ, ಮಂದಣ್ಣ, ಕರಿಯಪ್ಪ, ಎಂಗ್ಟ, ಮಾರ, ಬೈರ, ಮಾಸ್ತಿ, ಕಾಳಪ್ಪ, ಲೈನ್ಮ್ಯಾನ್ ದುರ್ಗಪ್ಪ, ದಾನಮ್ಮ, ಜಬ್ಬಾರ್ ಸಾಬಿ, ಕೃಷ್ಣೇಗೌಡ, ರಫೀಕ್, ರಮೇಶ್, ಇಂಗ್ಲಿಷ್ ಗೌಡ, ಜೋಸೆಫ್ ಅಂಗಾರ, ಕರಾಟೆ ಮಂಜ, ಭಂಡಾರಿ ಬಾಬು, ಜಲೀಲು, ಫಾತಿಮಾ, ತಿಮ್ಮಾಬೋಯಿ, ಅಣ್ಣಪ್ಪಣ್ಣ, ಕುಂಟರಾಮ, ಹುಚ್ಚರಾಮ ಮುಂತಾದ ಆಧುನಿಕ ಬದುಕಿನ ಗೆರೆಯಾಚೆ ಅಥವಾ ಅಂಚಿನಲ್ಲಿದ್ದುಕೊಂಡೇ ಬದುಕಿನ ತಮ್ಮ ಸ್ವಾಯತ್ತತೆಯನ್ನು ಕಾಪಾಡಿಕೊಳ್ಳುವ ಮೂಲಕ ಅವರ ಕಥೆ-ಕಾದಂಬರಿಗಳ defining ಪಾತ್ರಗಳೆನಿಸಿಕೊಳ್ಳುತ್ತವೆ. ಹಾಗೇ ನಿರೂಪಕನಾದ ಲೇಖಕನೂ ಸೇರಿದಂತೆ ಕರ್ವಾಲೋ, ಜೋಗಿಹಾಳರಂತಹ ಮುಖ್ಯಪಾತ್ರಗಳು ಈ ಅಂಚಿನ ಪಾತ್ರಗಳನ್ನು define ಮಾಡುವಷ್ಟಕ್ಕೇ ಮೂಡಿನಿಂತಂತೆ ಚಿತ್ರಿತವಾಗಿವೆ. ಅಂದರೆ ಇಡೀ ಸಾಹಿತ್ಯ ಪ್ರಕ್ರಿಯೆಯೇ ಇಲ್ಲಿ ಬುಡಮೇಲುಗೊಂಡಿದೆ. ತೇಜಸ್ವಿ ನಮ್ಮ ಸಾಹಿತ್ಯದಲ್ಲಿ ಮಾಡಿದ ದೊಡ್ಡ ಕ್ರಾಂತಿಯಿದು. ಇದು ಪರಿಧಿಯೇ ಕೇಂದ್ರವಾಗುವ ಬೆರಗಿನ ಸಾಂಸ್ಕೃತಿಕ ಕ್ರಾಂತಿ ಕೂಡಾ. ಈ ಕ್ರಾಂತಿ ಕನ್ನಡ ಸಾಹಿತ್ಯದಲ್ಲಿ ಸುಸ್ಥಿರವಾಗಿರುವುದು, ಮುಖ್ಯಪಾತ್ರಗಳ ಮುಲಾಜೇ ಇಲ್ಲದೆ ಈ ಅಂಚಿನ ಪಾತ್ರಗಳೇ ಸೃಷ್ಟಿಸಿರುವ `ಕಿರಗೂರಿನ ಗಯ್ಯಾಳಿಗಳು' ಹಾಗೂ `ಜುಗಾರಿ ಕ್ರಾಸ್' ನಂತಹ ಕೃತಿಗಳಲ್ಲಿ. ಹೀಗಾಗಿ ಸಹಜವಾಗಿಯೇ ತೇಜಸ್ವಿಯವರ ಕೃತಿಗಳು ಭಾಷೆ ಮತ್ತು ತಂತ್ರಗಳ ವಿಷಯದಲ್ಲೂ ಕನ್ನಡ ಸಾಹಿತ್ಯ ತಲೆಮೇಲೆ ಹೊತ್ತುಕೊಂಡಿದ್ದ ಯಮಭಾರಗಳನ್ನು ಇಳಿಸಿ ಚೇತೋಹಾರಿ ಎನಿಸಿದವು.
ಇದನ್ನು ಜನಪ್ರಿಯ ಧಾಟಿ ಎನ್ನುವವರಿದ್ದಾರೆ. ಹಾಗೆಯೇ ತೇಜಸ್ವಿಯವರ ಸಾಹಿತ್ಯವನ್ನು ತ್ರಿಮೂರ್ತಿಗಳಲ್ಲಿ ಉಳಿದಿಬ್ಬರ
ಸಾಹಿತ್ಯದೊಂದಿಗೆ ಹೋಲಿಸಿ ಬೆಲೆ ಕಟ್ಟುವ ಅಂಗುಲ ಹುಳ ವಿಮರ್ಶೆಗೆ ನಮ್ಮಲ್ಲೇನೂ ಕೊರತೆಯಿಲ್ಲ. ಆದರೆ ತೇಜಸ್ವಿ ಸ್ವಭಾವತಃ ಹೊಸ ದಿಗಂತಗಳನ್ನರಿಸಿಕೊಂಡು ಹೋಗುವ ಮಾರ್ಗಪ್ರವರ್ತಕ ಲೇಖಕರಾಗಿ ಆಧುನಿಕ ಕನ್ನಡ ಸಾಹಿತ್ಯದ ಮೈಚಳಿ ಬಿಡಿಸಲು ಮಂಡಿಸಿದ ತಾತ್ವಿಕತೆ ಈ ಅಂಗುಲ ಹುಳು ವಿಮರ್ಶೆಯನ್ನೇ ಅಸಂಗತಗೊಳಿಸುವಂತಹದು. ಕನ್ನಡ ಸಾಹಿತ್ಯ-ಸಂಸ್ಕೃತಿ-ರಾಜಕಾರಣಗಳ ಚರ್ಚೆಯ ದಿಕ್ಕನ್ನೇ ಬದಲಿಸಿದ ಅಖಿಲ ಕರ್ನಾಟಕ ಲೇಖಕ ಹಾಗೂ ಕಲಾವಿದರ ಒಕ್ಕೂಟದ ಸಮಾವೇಶದಲ್ಲಿನ ತಮ್ಮ ಮುಖ್ಯ ಭಾಷಣದಲ್ಲಿ ಕನ್ನಡ ಸಾಹಿತ್ಯ-ಸಂಸ್ಕೃತಿ ಚರಿತ್ರೆಯನ್ನೇ `ಶೂದ್ರ ಸಮುದಾಯದ ಮೂಕ ಅನುಭವಗಳು ಪ್ರಜ್ಞಾಗಮ್ಯವಾಗುತ್ತಾ ಅಭಿವ್ಯಕ್ತಿಯನ್ನು ಸಾಧಿಸಿಕೊಳ್ಳುತ್ತಾ ಬಂದುದರ ಚರಿತ್ರೆ' ಎಂದು ನಿರೂಪಿಸಿದ ತೇಜಸ್ವಿ, ಅದನ್ನು ತಮ್ಮ ಕೊನೆಯ ಕೃತಿ `ಮಾಯಾಲೋಕ-1' ರಲ್ಲಿ ತಾವೇ ದಾಟಿನಿಂತು, ಲೋಕ ಚರಿತ್ರೆಯ ನೆಲೆಯಲ್ಲಿ ನಿಂತು ಸಮಕಾಲೀನ ಕನ್ನಡ ಸಾಹಿತ್ಯಲೋಕದ ಪ್ರಜ್ಞಾಗಮ್ಯತೆಯ ಎಲ್ಲೆಗಳನ್ನು ವಿಸ್ತರಿಸುವ ಪ್ರಯತ್ನ ಮಾಡುತ್ತಾರೆ. `ಮಾಯಾಲೋಕ'ದ ಮೂಲಕ ಅವರು ಈ ಇಡಿಯಾದ ವಿಶ್ವದ ಧಾರಣಾಶಕ್ತಿಯ ರೂಪಗಳನ್ನು ಅನ್ವೇಷಿಸಲು ಹೊರಟಿದ್ದು, ಅವರ ಈ ಮೊದಲಿನ ಕಾಳಜಿಗಳಾಗಿದ್ದ ಮನುಷ್ಯ ಮತ್ತು ಪ್ರಕೃತಿ ಈ ಅನ್ವೇಷಣೆಯಲ್ಲಿ ಆನುಷಂಗಿಕವಾಗಿ ಬಿಡುವ ಬೆರಗನ್ನು ನಾವು ಕಾಣಬಹುದು. ನಮ್ಮ ಕಾಲದ ಮೂಲಭೂತ ಆಕರ್ಷಣೆಯೆನಿಸಿರುವ `ಆಧುನಿಕತೆ' ಇಲ್ಲಿ ಆಧ್ಯಾತ್ಮಿಕ ಪ್ರಶ್ನೆಯಾಗಿ ಎದುರಾಗುವ ಪರಿ ಕನ್ನಡಕ್ಕೇ ಹೊಸದು.
ಸುಮಾರು ನಾನು 25 ವರ್ಷಗಳ ಹಿಂದೆ ತೇಜಸ್ವಿಯವರ ಮೂಡಿಗೆರೆ ಮನೆಗೆ ಎರಡನೇ ಬಾರಿಯೋ, ಮೂರನೇ ಬಾರಿಯೋ ಹೋಗಿದ್ದಾಗ ನಾನು ಗಣಿತಶಾಸ್ತ್ರದ ವಿದ್ಯಾರ್ಥಿಯಾಗಿ ಕುತೂಹಲಕ್ಕಾಗಿ ಓದಿಕೊಂಡಿದ್ದ high energy Physicsನ Quantum mechanics ಬಗ್ಗೆ ಅವರ ಕುತೂಹಲದ ಒಂದೆರಡು ಪ್ರಶ್ನೆಗಳಿಗೆ ಉತ್ತರ ಹೇಳಲು ಪ್ರಯತ್ನಿಸಿದ್ದೆ. ಆ ಸಂದರ್ಭದಲ್ಲಿ ಅವರ ಮನೆಯ ಹಜಾರದ ಗೋಡೆಗಳ ಮೇಲಿದ್ದ ರಾಮಕೃಷ್ಣ ಪರಮಹಂಸ ಮತ್ತು ಶಾರದಾದೇವಿಯವರ ದೊಡ್ಡ ಫೋಟೋಗಳನ್ನು ನೋಡಿ ಸ್ವಲ್ಪವಿಚಲಿತಗೊಂಡು `ಇವನ್ನು ನಿಮ್ಮ ತಂದೆ ಹಾಕಿಸಿದ್ದಾ?' ಎಂದು ಅವರಿಗೆ ಉತ್ತರ ಕೊಡಲು ಸಹಾಯಕವಾಗುವ ಧ್ವನಿಯಲ್ಲಿ ಕೇಳಿದ್ದೆ. ಅದಕ್ಕೆ ಅವರು ಕೊಂಚ ಸಿಟ್ಟಾಗಿ `ನಾನೇ ಹಾಕಿಸಿಕೊಂಡಿದ್ದೇನೆ ಎಂದರೆ ನೀನೇನು ನನ್ನನ್ನು ಢೋಂಗಿ ವಿಚಾರವಾದಿಯೆಂದು ಪ್ರಚಾರ ಮಾಡಬೇಕೆಂದಿದ್ದಿಯಾ? ಈವರೆಗೆ ನೀನು ವಿವರಿಸಿದ quantum mechanics ನ Principle of Uncertainty ಇತ್ಯಾದಿಗಳೆಲ್ಲ ನಿನ್ನ ಪ್ರಕಾರ ವಿಜ್ಞಾನವೋ, ಆಧ್ಯಾತ್ಮವೋ ಅದನ್ನು ಮೊದಲು ಹೇಳು' ಎಂದು ನನ್ನನ್ನು ದೊಡ್ಡ ಒಗಟಿನಲ್ಲಿ ನೇತು ಹಾಕಿದರು.
ಅವರ `ಕರ್ವಾಲೋ'ದಿಂದ ಆರಂಭವಾಗಿ `ಚಿದಂಬರ ರಹಸ್ಯ'ದ ಮೂಲಕ ಕಟ್ಟಿಕೊಂಡು `ಮಾಯಾಲೋಕ'ದಲ್ಲಿ ಪೂರ್ಣರೂಪ ಪಡೆದಂತೆ ತೋರುವ ಈ `ವಿಜ್ಞಾನವೋ, ಆಧ್ಯಾತ್ಮವೋ?' ಎಂಬ ಪ್ರಶ್ನೆ ಈ ಆಧುನಿಕ ನಾಗರೀಕತೆಯ ಚರಿತ್ರೆಯಲ್ಲಿ ಮನುಕುಲ ಎದುರಿಸುತ್ತಿರುವ ದೊಡ್ಡ ಪ್ರಶ್ನೆ. ತಾವು ನಂಬಿ ಭಾಗವಹಿಸಿದ್ದ ಸಮಾಜವಾದಿ ಚಳುವಳಿ, ರೈತ ಚಳುವಳಿ, ದಲಿತ ಚಳುವಳಿ ಹಾಗೂ ಆಸಕ್ತಿಯಿಂದ ಕೈಗೊಂಡ ಸಂಗೀತಾಭ್ಯಾಸ, ಫೋಟೋಗ್ರಫಿ, ಚಿತ್ರಕಲೆ, ಮೀನು ಹಿಡಿಯುವುದು ಹಾಗೂ ಕಂಪ್ಯೂಟರ್ ತಂತ್ರಾಂಶ ಆವಿಷ್ಕಾರ ಪ್ರಯತ್ನಗಳ ಮೂಲಕವೂ ಅವರು ಎದುರಿಸಿದ್ದು, ಬಿಡಿಸಲೆತ್ನಿಸಿದ್ದು ಈ ದೊಡ್ಡ ಪ್ರಶ್ನೆಯನ್ನೇ. ತಮ್ಮ ಬಾಳಿನ ಕೊನೆಯ ದಿನಗಳಲ್ಲಷ್ಟೇ ತೇಜಸ್ವಿಯವರನ್ನು ಕಂಡ ಶಿವರಾಮ ಕಾರಂತರು ತಮ್ಮ ಬಾಳ್ವೆಗಳಲ್ಲಿನ ಸಮಾನಾಂತರತೆಯನ್ನು ಕಂಡು ಹಿಗ್ಗಿ, ಈ ಮೊದಲೇ ಭೇಟಿಯಾಗದಿದ್ದುದರ ಬಗ್ಗೆ ವಿಷಾದಪಟ್ಟಿದ್ದರಂತೆ. ಅದು ತೇಜಸ್ವಿಯವರ ಬಾಳಿನ ಸಾರ್ಥಕ ಕ್ಷಣ. ಆದರೆ ಕಾರಂತರಂತೆ ತೇಜಸ್ವಿ ಹಠತೊಟ್ಟ ವಿಜ್ಞಾನವಾದಿಯಾಗಿರಲಿಲ್ಲ. ಹಾಗಾಗಿಯೇ ಪರಸ್ಪರ ಭೇಟಿಯಾಗಲಿಲ್ಲವೇನೊ! ಅದೇನೇ ಇರಲಿ `ಅವನತಿ' ಎಂಬ ಸಣ್ಣಕಥೆಯಿಂದ ಹಿಡಿದು ಅವರ ಕೊನೆಯ ಕೃತಿ ಎನಿಸಿದ `ಮಾಯಾಲೋಕ'ದವರೆಗೆ ತೇಜಸ್ವಿ ಚಿತ್ರಿಸಿರುವುದು ವಿಜ್ಞಾನ ನಾಗರೀಕತೆಯ ವಿಚಿತ್ರ ಒತ್ತಡಗಳಿಗೆ ಸಿಕ್ಕಿ ಮನುಷ್ಯನ ಸೂಕ್ಷ್ಮತೆ ಮತ್ತು ಸಂವೇದನಾಶೀಲತೆಗಳು ಕ್ರಮೇಣ ನಾಶವಾಗುತ್ತಿರುವ ದುರಂತವನ್ನೇ. ಹೀಗಿರುವಾಗ ತೇಜಸ್ವಿ ಜಾಗತೀಕರಣವನ್ನು ಬೆಂಬಲಿಸುತ್ತಿದ್ದರು ಎಂದು ಹೇಳುವವರಿಗೆ ತೇಜಸ್ವಿಯಾಗಲಿ ಜಾಗತೀಕರಣವಾಗಲಿ ಅರ್ಥವಾಗಿಲ್ಲ ಎಂದು ಹೇಳಬಹುದಷ್ಟೇ.
ತೇಜಸ್ವಿ ನಮ್ಮ ಕಾಲದ ಚರಿತ್ರೆಯನ್ನು ತಮ್ಮ ಕೃತಿಗಳ ಮೂಲಕ ವ್ಯಾಖ್ಯಾನ ಮಾಡುತ್ತಿದ್ದ ದೊಡ್ಡ ದಾರ್ಶನಿಕ ಲೇಖಕ. ಹಾಗಾಗಿ ಅವರ ಚೈತನ್ಯವೀಗ ಭೂಮಿಯಿಂದ ಆಕಾಶದವರೆಗೆ ಹಬ್ಬಿನಿಂತಿದೆ. ಅದೇ, `ವಿಜ್ಞಾನವೋ, ಆಧ್ಯಾತ್ಮವೋ?' ಎಂಬ ಪ್ರಶ್ನೆಗೆ ಉತ್ತರವೂ ಆಗಿದೆ...

Rating
No votes yet

Comments