ದಿನಕ್ಕೊಂದು ಪುಸ್ತಕದ ಓದು ?

ದಿನಕ್ಕೊಂದು ಪುಸ್ತಕದ ಓದು ?

ಓದುವ ಚಟವುಳ್ಳ ನನಗೆ ಡಿಜಿಟಲ್ ಲೈಬ್ರರಿಯಿಂದಾಗಿ ಒಂದು ನಿಧಿಯೇ ಸಿಕ್ಕಂತಾಗಿದೆ. ಕನ್ನಡದಲ್ಲಿ ೨೫ ಸಾವಿರ , ಇಂಗ್ಲೀಷಿನಲ್ಲಿ ಒಂದು ಲಕ್ಷ ಪುಸ್ತಕ ಇದ್ದು ಮನೆಗೆ ಇಂಟರ್ನೆಟ್ಟು ಬಂದು , ಅಲ್ಲಿ ಒಂದು ಸಣ್ಣ ಪ್ರೋಗ್ರಾಮ್ ಬರೆದುಕೊಂಡು ಪ್ರತಿ ದಿನಕ್ಕೆ ಸಾಧಾರಣ ನೂರು ಪುಟದ ಒಂದು ಪುಸ್ತಕ ಸುಮಾರು ೧೦ ರೂ ಖರ್ಚಿನಲ್ಲೇ ಇಳಿಸಿಕೊಂಡು ಓದುವದು ಸಾಧ್ಯವಾಗಿದೆ.

ಈಗಾಗಲೇ ಮೂರು ದಿನದಲ್ಲಿ ಮೂರು ಪುಸ್ತಕ ಓದಿರುವೆ .
ಒಂದು ನಾ.ಕಸ್ತೂರಿ ಅವರ ಗಾಳಿಗೋಪುರ ( ಇದಕ್ಕೆ ಬೇಂದ್ರೆಯವರ ಮುಚ್ಚುಮರೆಯಿಲ್ಲದ ಮುನ್ನುಡಿ ಇದೆ) ,
ಇನ್ನೊಂದು ಅರವಿಂದರ ಬಗ್ಗೆ ... ಅವರ ತಪಸ್ಸಿನ್ನೂ ನಡೆದಿರುವಾಗಲೇ ... ಶಂ. ಬಾ. ಜೋಶಿಯವರ ಪುಸ್ತಕ ( ಮೊದಲ ಪುಟಗಳಲ್ಲಿ , ಮನಸ್ಸು , ಬ್ರಿಟಿಷರ ಮಾನಸಿಕ ದಾಸ್ಯ ಒಪ್ಪಿಕೊಂಡ ಭಾರತೀಯರ ಬಗ್ಗೆ , ಅವರು ಬರೆದಿರುವದು ಗಮನಿಸತಕ್ಕ ವಿಷಯ- ಈ ಪುಸ್ತಕಕ್ಕೆ ಆಲೂರು ವೆಂಕಟರಾಯರ ಮುನ್ನುಡಿ ಇದೆ).
ಮತ್ತೊಂದು - ಬಂಗಾಲಿಯ ಶರತ್ ಚಂದ್ರರ ಒಂದು ಸಾಮಾಜಿಕ ಕಾದಂಬರಿಯ ಅನುವಾದ - ಆರಕ್ಷಣೀಯ. ಒಂದು ಗೋಳಿನ ಕತೆ

ಇವತ್ತು ಬೆಂಗಳೂರಿನ IISC ಯ http://www.new.dli.ernet.in ತಾಣದಲ್ಲಿ ಕೆಲವು ನ್ಯಾಷನಲ್ ಬುಕ್ ಟ್ರಸ್ಟಿನ ಪುಸ್ತಕಗಳು ಸಿಕ್ಕಿವೆ . ಕೆಲವನ್ನು ಡೌನ್ಲೋಡ್ ಮಾಡಿಟ್ಕೊಂಡಿದೀನಿ . ಇನ್ನಷ್ಟನ್ನು ನೋಡ್ಕೊಂಡಿಟ್ಟಿದೀನಿ .

ಪುಸ್ತಕಗಳೇನೋ ಬಹಳ ಇವೆ .
ಸಮಯ ಕಡಿಮೆ ಇದೆ !
ಆದರೂ ದಿನಕ್ಕೊಂದು ಪುಸ್ತಕ ಅದಾರೋ - ತೇಜಸ್ವಿ ಇರಬೇಕು - ಓದಿಯೇ ಮಲಗುತ್ತಿದ್ದರಂತೆ . ನೋಡೋಣ .. ನಾನೂ ಪ್ರಯತ್ನ ಮಾಡಿ ನೋಡ್ತೀನಿ . ನಿಮ್ಮಗಳ ಬೆಂಬಲ ಇರಲಿ . ಏನಾದರೂ ವಿಶೇಷ ಕಂಡರೆ ಖಂಡಿತಾ ಹೇಳ್ತೀನಿ. ಓದ್ತಾ ಇರಿ .....

Rating
No votes yet