ದ್ವೇಷ ಅಳಿಯಲಿ, ಪ್ರೇಮ ಅರಳಲಿ!
ನನ್ನ ಜೀವನದಲ್ಲಿ ನಡೆದ ವಿಶೇಷ ಘಟನೆಗಳನ್ನು ಹಾಗೂ ಅನುಭವಗಳನ್ನು ತಮ್ಮ ಜೊತೆಗೆ ಹಂಚಿಕೊಳ್ಳುತ್ತಲೇ ಬಂದಿದ್ದೇನೆ ಅದು ತಮಗೆ ತಿಳಿಯದ ಸಂಗತಿಯೂ ಏನಲ್ಲ! ಅದೇ ತರಹ ಇವತ್ತು ಒಂದು ಅತೀ ವಿಶೇಷವೆನಿಸುವ ಘಟನೆಯೊಂದು ಜರುಗಿತು ಅದು ಯಾವತ್ತೂ ನನ್ನ ಸ್ಮೃತಿಪಟಲದಿಂದ ಮರೆಯಾಗದ 'ವಿಶೇಷಾತೀವಿಶೇಷ' ಘಟನೆಯಿದು. ಅದನ್ನು ತಮ್ಮೊಂದಿಗೆ ಹಂಚಿಕೊಳ್ಳದೇ ಇದ್ದರೆ ಪ್ರಮಾದವಗುವುದೇನೊ? ಎಂದೆನಿಸಿ ಹಂಚಿಕೊಳ್ಳುತ್ತಿರುವೆ.
ಕುವೆಂಪು ಅವರ 'ವಿಶ್ವಮಾನವ' ಸಂದೇಶವನ್ನು ಅಪಾರವಾಗಿ ಪ್ರೀತಿಸುವ ನಾನು ಯಾವತ್ತೂ ಯಾವುದೇ ಒಂದು ನಿರ್ದಿಷ್ಟ ಧರ್ಮದ ಚೌಕಟ್ಟಿಗೆ ಒಳಗಾಗಿಲ್ಲ! ಧರ್ಮದ ಲೇಬಲ್ ನ್ನು ನನ್ನ ಹಣೆಯ ಮೇಲೆ ಹಚ್ಚಿಕೊಂಡು ತಿರುಗಿದವ ನಾನಲ್ಲ.ಆದರೂ ಜನ್ಮತಳೆದಾಗ ಆಕಸ್ಮಿಕವಾಗಿ ಒಂದು ಧರ್ಮದ ಗುರುತಿಸುವಿಕೆ ಸಮಾಜದಿಂದ ನನ್ನ ಮೇಲಾಯಿತು. ಆ ಮಾತೃ ಧರ್ಮದ ಕುರಿತು ಸಹ ಗೌರವವಿದೆ ಹಾಗೂ ಹೆಮ್ಮೆಯಿದೆ ಸಾವಿರಾರು ಋಷಿಮುನಿಗಳನ್ನು ಹಾಗೂ ಶ್ರೇಷ್ಠಾತೀಶ್ರೇಷ್ಠ ಮಹಾನ್ ವ್ಯಕ್ತಿಗಳನ್ನು ನೀಡಿದ ಧರ್ಮ ಹಿಂದೂ ಧರ್ಮ ಎಂದು ಹೇಳಿದರೆ ತಪ್ಪೇನೂ ಇಲವಲ್ಲ?! ಹೌದು!
ಆದರೆ ಧರ್ಮದ ಹೆಸರಿನಲ್ಲಿನ ಕಂದಾಚಾರ,ಮೋಸ,ಮೂಢನಂಬಿಕೆಗೆ ಯಾವತ್ತೂ ನನ್ನ ವಿರೋಧವಿದೆ. ಬುದ್ಧ ಬಸವ ಮಹಾವೀರರು ವಿರೋಧಿಸಿದ್ದು ಧರ್ಮದಲ್ಲಿನ ಇಂತಹ ನ್ಯೂನತೆಗಳನ್ನೆ.
ಈಗ ನನಗಾದ ಘಟನೆಯ ಕುರಿತು ಹೇಳಬಯಸುತ್ತೇನೆ.
ಯಾವುದೋ ಒಂದು ಕಾರ್ಯದ ನಿಮಿತ್ತ ಕೊರಟಗೆರೆಯ ಹೊಳವನಹಳ್ಳಿಯ ಅಪರಿಚಿತರೊಬ್ಬರ(ಅವರು ಮುಖಾಮುಖಿ ಬೇಟಿಯಾಗುವ ತನಕವಷ್ಟೇ ಅಪರಿಚಿತರು ತದನಂತರ ಪರಿಚತರೇ) ಮನೆಗೆ ಹೋಗಬೇಕಾಗಿ ಬಂತು. ಅವರಿಗೆ ಮಧ್ಯಾಹ್ನ ಕರೆ ಮಾಡಿ ತಿಳಿಸಿ....
ನಾನು ಬರುತ್ತಿರುವೆ ಈಗ ಕೊರಟಗೆರೆಯಲ್ಲಿದ್ದೇನೆ ಎಂದೆ.
ಹೊಳವನಹಳ್ಳಿಗೆ ಬಂದ ತಕ್ಷಣ ಆಟೋನಿಲ್ದಾಣದಲ್ಲಿ ಶಪ್ಪು ಅವರ ಮನೆಗೆ ಕರೆದುಕೊಂಡು ಹೋಗಿ ಎನ್ನಿ ಅವರೇ ನಿಮ್ಮನ್ನು ಕರೆದುಕೊಂಡು ಬಂದು ಬಿಡುತ್ತಾರೆಂದು ಅವರಿಂದ ಪ್ರತಿಕ್ರಿಯೆ ಬಂತು. ಸರಿ ಎಂದು ಕೊರಟಗೆರೆಯಿಂದ ಸುಮಾರು ಎಂಟು ಕಿ.ಮೀ ಇರುವ ಹೊಳವನಹಳ್ಳಿ ತಲುಪಿದ ಮೇಲೆ ಅವರು ಹೇಳಿದಂತೆ ಮಾಡಿದೆ ತದನಂತರದ ಕೆಲವೇ ನಿಮಿಷಗಳಲ್ಲಿ ನಾನು ಅವರ ಮನೆಹತ್ತಿರವಿದ್ದೆ.
ಸಾಮಾಜಿಕ ದೃಷ್ಟಿಯಲ್ಲಿ ಅವರೊಬ್ಬ ಮುಸ್ಲಿಂ ಕುಟುಂಬದವರು .
ನಾನು ಸಾಮಾಜಿಕ ದೃಷ್ಟಿಯಲ್ಲಿ(ವೇಷಭೂಷಣ ಅಥವಾ ಮುಖಚಹರೆ) ಹಿಂದು ಧರ್ಮದವನು.
ಹೋದ ತಕ್ಷಣವೇ ಅತ್ಯಂತ ಆತ್ಮೀಯತೆಯಿಂದ ಮಾತನಾಡಿಸತೊಡಗಿದರು.ಅಲ್ಲಿ ಯಾವುದೇ ಧರ್ಮಬೇಧವಿರಲಿಲ್ಲ ಮಾನವಪ್ರೇಮವಿತ್ತು.
ಅಲ್ಲಿಗೆ ಹೋದ ಕೆಲಸ ಮುಗಿದ ಮೇಲೆ ನಾನು ಹೊರಡಲು ಸಿದ್ಧನಾದೆ ಆದರೆ ಅವರು ಹೊರಡಲು ಬಿಡದೇ ಮಾತಿಗಿಳಿದರು.
ಅವರ ಮಾತಿನಲ್ಲಿ ತಾಯಿಯ ಪ್ರೀತಿ ,
ಕಣ್ಣಿನಲ್ಲಿ ದೈವನೋಟದ ದೃಷ್ಟಿ ನನಗೆ ಗೋಚರವಾದಂತೆ ಭಾಸವಾಗುತ್ತಿತ್ತು.
ನಿಜಕ್ಕೂ ನಾನಿರುವುದು ಎಲ್ಲಿ? ದೇವಸ್ಥಾನದಲ್ಲೋ? ಅಥವಾ ಒಬ್ಬರ ಮನೆಯಲ್ಲೊ? ಎಂಬ ವ್ಯತ್ಯಾಸ ಗುರುತಿಸಲಾರದೆ ಸಂದೇಹ ನನ್ನನ್ನು ಕಾಡತೊಡಗಿತು.
ಆ ಸಂದೇಹವನ್ನು ಅಷ್ಟಕ್ಕೆ ಬಿಟ್ಟು ಅಲ್ಲಿನ ಆ ಸುಂದರ ಮಾತಕತೆಯನ್ನು, ಅವರ ವಾತ್ಸಲ್ಯದ ನೋಟವನ್ನು ಗಮನಿಸತೊಡಗಿದೆ.
ಅವರ ವಾತ್ಸಲ್ಯದ ಮಾತುಗಳನ್ನು ಅತ್ಯಂತ ಪ್ರಾಮಾಣಿಕತೆಯಿಂದ ಆಲಿಸತೊಡಗಿದೆ.ಅದೇನು ಭಾವ ಅದೇನು ನಿಷ್ಕಲ್ಮಷ ಮನಸ್ಸು? ಅಬ್ಬಾ ನಿಜಕ್ಕೂ ಇಂತಹ ಧರ್ಮಾತೀತ ನಡುವಳಿಕೆಯುಳ್ಳವರೂ ಇರುತ್ತಾರಾ? ಎಂದು ಆಶ್ಚರ್ಯಪಡುವಂತಾಯಿತು! ಸ್ವಲ್ಪ ಸಮಯ ಸರಿದ ನಂತರ ನಾನು ಹೊರಡಲು ಸಿದ್ದನಾದಾಗ ಅವರೆಂದರು
ಮನೆಗೆ ಬಂದವರನ್ನು ನಾವು ಹಾಗೆ ಕಳುಹಿಸುವುದಿಲ್ಲ ಊಟ ಮಾಡಿ ಎಂದರು.
ನಾನು ಯಾರೇ ಕರೆದರೂ ತಕ್ಷಣವೇ ಊಟಕ್ಕೆ ಒಪ್ಪಿಕೊಳ್ಳುವುದಿಲ್ಲ ಅದು ನನ್ನ ಸಹಜ ಸ್ವಭಾವ ಹಾಗಾಗಿ ಸಂಕೋಚದಿಂದ ಬೇಡ , ಊಟ ಮಾಡಿಕೊಂಡು ಬಂದಿರುವೆ ಎಂದು ಸುಳ್ಳು ಹೇಳಿದೆನು. ಆದರೆ ನನ್ನ ಮುಖಭಾವವನ್ನೊಮ್ಮೆ ದಿಟ್ಟಿಸಿ ಗಮನಿಸುತ್ತಿದ್ದ ಅವರ ಕಂಗಳು ...
ಯಾಕೆ ನಮ್ಮ ಮನೆಯಲ್ಲಿ ಊಟ ಮಾಡಬಾರದೆಂದು ನಿಮ್ಮ ಧರ್ಮವೇನಾದರೂ ಹೇಳುತ್ತದೆಯಾ? ಎಂದು ಪ್ರಶ್ನಿಸಿದಂತಿದ್ದು.....
ಹಾಗಾಗಿ ಅವರ ಪ್ರೀತಿಯ ಒತ್ತಾಯ ಹೆಚ್ಚಾದಾಗ ಒಪ್ಪಿಕೊಳ್ಳಲೇಬೇಕಾಗಿ ಬಂತು.
ಆಸನವನ್ನು ಸಿದ್ಧಪಡಿಸಿದರು.
ಅವರು ಮಾಡಿದ ಅಡಿಗೆಯನ್ನು ತೆಗೆದುಕೊಂಡು ಬಂದು ನನ್ನ ಹತ್ತಿರವಿತ್ತರು ನಿನಗೆ ಬೇಕಾದಷ್ಟು ಹೊಟ್ಟೆತುಂಬ ಊಟ ಮಾಡು ಎಂದು ಆಜ್ಞೆ ಹೊರಡಿಸಿದರು ವಿಶೇಷವೆಂದರೆ ಅವರು ತಯಾರಿಸಿದ ಅಡುಗೆ 'ಚಿಕನ್' ಆಗಿತ್ತು ...
ಮಾಂಸಾಹಾರ ಸೇವನೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದೆ. ಹಾಗೂ ಈ ಮೊದಲು ಮಾಂಸಾಹಾರವನ್ನು ಸಂಪೂರ್ಣ ಬಿಡಬೇಕೆಂದು ನಿರ್ಧರಿಸಿಯೂ ಬಿಟ್ಟಿದ್ದೆ.ಆದರೆ ಅಲ್ಲಿ ಸಂದಿಗ್ಧ ಪರಿಸ್ಥಿತಿಗೆ ಸಿಲುಕಿಕೊಂಡೆ ನಾನು.
ಈಗ ನಾನು ಮಾಂಸಾಹಾರ ಸೇವಿಸಬೇಕೊ? ಅಥವಾ ಅವರಿಗೆ ನಾನು ಮಾಂಸಾಹಾರ ಸೇವಿಸುವುದಿಲ್ಲವೆಂದು ಹೇಳಿ
ಅವರ ಅತಿಥಿ ಸತ್ಕಾರದ ಮನಸ್ಸಿಗೆ ಬೇಸರ ಮಾಡಬೇಕೊ? ಒಂದೂ ತಿಳಿಯಲಿಲ್ಲ ಆದರೆ ಅವರು ಪ್ರೀತಿಯಿಂದ ಬಡಿಸಿದ ಆ ಆಹಾರವನ್ನು 'ಸಸ್ಯಾಹಾರ, ಮಾಂಸಾಹಾರವೆಂದು' ವಿಭಜಿಸಿ ತಾರ್ಕಿಕವಾಗಿ ಚಿಂತಿಸುವುದಕ್ಕಿಂತ ಅವರ ಪ್ರೀತಿ ಮತ್ತು ವಾತ್ಸಲ್ಯದಿಂದ ಮಾಡುತ್ತಿರುವ ಅತಿಥಿ ಸತ್ಕಾರವನ್ನು ನಾನು ತೆಗೆದುಕೊಳ್ಳುವುದು ಮುಖ್ಯವೆಂದು ಭಾವಿಸಿ ಆಹಾರ ಸೇವಿಸತೊಡಗಿದೆ.
ಯಾವತ್ತೂ ಒಂದು ಮಿತಿಯೊಳಗೆ ನನ್ನ ಊಟವಿರುತ್ತದೆ ತೀರ ಹೆಚ್ಚೂ ಅಲ್ಲದೇ ತೀರ ಕಡಿಮೆಯೂ ಅಲ್ಲದೇ ಒಂದು ಸಮಪ್ರಮಾಣದಲ್ಲಿ ಆಹಾರ ಸೇವಿಸುವುದು ನನ್ನ ದೈನಂದಿನ ಅಭ್ಯಾಸ! ಹಾಗೆಯೇ ಊಟ ಮುಗಿಸಿದೆ.
ಊಟ ಮಾಡುವಾಗ ನಾನು ಸೇವಿಸುತ್ತಿದ್ದಿದು ಕೇವಲ ಆಹಾರವಷ್ಟೇ ಆಗಿರಲಿಲ್ಲ ಅಲ್ಲಿನ ಧರ್ಮಾತೀತ ಪ್ರೀತಿ ವಾತ್ಸಲ್ಯ ಹಾಗೂ ಮಾನವ ಪ್ರೇಮವನ್ನು ನಾನು ಸೇವಿಸುತ್ತಿದ್ದೆ ಅನುಭವಿಸುತ್ತಿದ್ದೆ.
ಪ್ರತಿ ತುತ್ತು ಸಹ ನನಗೆ ಅತ್ಯಂತ ವಿಶೇಷವೆಂದೆನಿಸುತ್ತಿತ್ತು.
ಅನ್ಯಧರ್ಮದವರನ್ನು ಕಂಡಾಗಲೆ ಕಣ್ಣಲ್ಲೆ ದ್ವೇಷ ಕಾರುವ ಸದ್ಯದ ಹೊರಜಗತ್ತಿನ ಪರಿಸ್ಥಿತಿಯಲ್ಲಿ ನಾನು ಅಲ್ಲಿನ ಮನೆಯ ಒಳಗಣ ಪರಿಸ್ಥಿತಿ ಕಂಡು ಮೂಕವಿಸ್ಮಿತನಾಗಿ ಹೋದೆ!
ನಿಜಕ್ಕೂ ಅವರ ಧರ್ಮಾತೀತ ನಡವಳಿಕೆ, ಮಾತೃ ಹೃದಯದ ವಾತ್ಸಲ್ಯ ನನ್ನನ್ನು ಗದ್ಗತಿತನನ್ನಾಗಿ ಮಾಡಿತ್ತು.
ಅಷ್ಟರೊಳಗೆ ಎಲ್ಲಿಂದಲೋ ಪುಟ್ಟ ಮಗುವಿನ ಧ್ವನಿ ಕೇಳಿತು
ನೋಡಿದರೆ ಪಕ್ಕದಲ್ಲಿ ತೊಟ್ಟಿಲಿನಲ್ಲಿ ಹಾಕಿದ್ದ ಒಂದು ತಿಂಗಳ ಕಂದ 'ಶಮೀದ್' ಅಂತ.
ಆತನ ಅಳು ತಾರಕಕ್ಕೇರಿತ್ತು ಅದನ್ನು ಸಮಾಧಾನಪಡಿಸಿಲೆಂದು ಅವನ 'ನಾನಿ' ಬಂದರು.
ನಾನೂ ಸಹ ಅದನ್ನು ಸಮಾಧಾನಪಡಿಸಲು ನನ್ನೆಲ್ಲ ಕಲೆಗಳನ್ನು ಪ್ರಯೋಗಿಸಿದೆ. ಆ ಪುಟ್ಟ ಮಗುವಿನ ಮುಗ್ಧ ಮುಖವನ್ನೊಮ್ಮೆ ನೋಡಿ ಮಗುವಿನ ಹಾಗೆ ನಾನೂ ಅದರ ಜೊತೆ ಆಟವಾಡಿದೆ.
ತದನಂತರ
ಗಡಿಯಾರದ ಘಂಟೆ ಭಾರಿಸಿದಾಲೇ ಗೊತ್ತಾಯಿತು ಸಮಯ ತುಂಬಾ ಆಗಿತ್ತಿತ್ತು ಹೊರಡಬೇಕೆಂದು.
ಹಾಗಾಗಿ ಒಲ್ಲದ ಮನಸ್ಸಿನಿಂದ ಆ ದೈವಮಂದಿರದಿಂದ ಹೊರಡಬೇಕಾಗಿ ಬಂದಿತು.
ಹೊರಡುವಾಗ
ಬರುವೆ ಅಮ್ಮ ಎಂದು ಅವರಿಗೆ ಹೇಳಿ ಮೌನದಲ್ಲೆ ಕರಗಿದಾಗ ಅವರು ಹೌದು ನೀನು ಮತ್ತೆ ಬರಲೇಬೇಕು ಎಂದು ಆಜ್ಞೆ ಇತ್ತು ಕಳುಹಿಸಿಕೊಟ್ಟರು.
ಅವರ ಮಗ ನನ್ನನ್ನು ಬಸ್ ನಿಲ್ದಾಣದವರೆಗೂ ಬಿಟ್ಟು ನನ್ನ ಬಸ್ ಬರುವವರಿಗೂ ಕಾಯ್ದು... ನನ್ನ ಕಳುಹಿಸಿಕೊಟ್ಟು ಹೊರಟುಹೋದ .
ದಯಾಮಯನಾದ ಪರಮಾತ್ಮ (ಅಲ್ಲಾ ಅಥವಾ ನಾಮ ಹಲವು ದೇವನೊಬ್ಬ) ಅವರ ಕುಟುಂಬವನ್ನು ಸುಖಸಂತೋಷದಿಂದ ಇಟ್ಟಿರಲಿ ಎಂದು ಪ್ರಾರ್ಥಿಸುತ್ತಾ ನಾನು ನನ್ನ ಪ್ರಯಾಣವನ್ನು ತುಮಕೂರಿನ ಕಡೆಗೆ ಬೆಳೆಸಿದೆ.
ಇಂತಹ ಸಜ್ಜನರ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿ.
ಇಡೀ ಜಗತ್ತು ಸೋದರತ್ವದ ನೆಲೆಯಲ್ಲಿ ಶಾಂತಿಯ ಸೆಲೆಯಲ್ಲಿ ಬದುಕಲಿ.
ದ್ವೇಷ ಅಳಿಯಲಿ ಪ್ರೇಮ ಅರಳಲಿ ಅಲ್ಲವೇ?!
-ವಿಶ್ವನಾಥ್ ಬಿ.ಎಮ್.