ನಗರ-ಜಿಲ್ಲಾ ಕೇಂದ್ರಗಳಲ್ಲಿ ವ್ಯಾಪಕವಾಗುತ್ತಿರುವ ಕನ್ನಡಸಾಹಿತ್ಯಡಾಟ್‌ಕಾಂ

ನಗರ-ಜಿಲ್ಲಾ ಕೇಂದ್ರಗಳಲ್ಲಿ ವ್ಯಾಪಕವಾಗುತ್ತಿರುವ ಕನ್ನಡಸಾಹಿತ್ಯಡಾಟ್‌ಕಾಂ

 

ಕನ್ನಡಸಾಹಿತ್ಯಡಾಟ್‌ಕಾಂ ಬೆಂಬಲಿಗರ ಬಳಗ ತನ್ನ ಚಟುವಟಿಕೆಗಳನ್ನು ಕರ್ನಾಟಕದ ಜಿಲ್ಲಾಮಟ್ಟದ ವ್ಯಾಪ್ತಿಗೆ ವಿಸ್ತರಿಸಿಕೊಳ್ಳುವ ಸೂಚನೆಯನ್ನು ತೋರಲಾರಂಭಿಸಿದೆ. ಇದಕ್ಕೆ ಉದಾಹರಣೆ ಎನ್ನಬಹುದಾದರೆ, ತುಮಕೂರು ನಗರದ ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ ದಿನಾಂಕ ೦೫-೧೧-೨೦೦೬ ರ ಭಾನುವಾರದಂದು ನೆಡೆದ ಸಭೆ.

ಪ್ರಜಾಪ್ರಗತಿಯ ಕೋಟೆ ನಾಗಭೂಷಣ್, ಆರ್.ಎಸ್.ಅಯ್ಯರ್‌ರವರು ಆಯೋಜಿಸಿದ್ದ ಈ ಸಭೆಯಲ್ಲಿ ಬೆಂಗಳೂರಿನಿಂದ ಶೇಖರಪೂರ್ಣ ಮತ್ತು ನಾನು ಭಾಗವಹಿಸಿದ್ದೆವು.

ಕಂಪ್ಯೂಟರಿನ ಸವಲತ್ತುಗಳು ಪ್ರಜಾಸತ್ತಾತ್ಮಕವಾದ ಆಶಯವನ್ನು ಗಳಿಸಿಕೊಳ್ಳುತ್ತಾ ಹೇಗೆ ಕಾರ್ಯಶೀಲವಾಗಬೇಕು ಎನ್ನುವುದನ್ನು ಶೇಖರಪೂರ್ಣ ತಮ್ಮ ಮಾತುಗಳಲ್ಲಿ ಹಿಡಿದಿಟ್ಟ ಈ ಸಭೆಯ ಅಧ್ಯಕ್ಷತೆಯನ್ನು ಸಿದ್ಧಗಂಗಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಎನ್.ಪಿ.ರವೀಂದ್ರನಾಥ್‌ರವರು ವಹಿಸಿದ್ದರು. ಇದೇ ಸಭೆಯಲ್ಲಿ ಕಂಪ್ಯೂಟರ್ ಪರಿಸರದಲ್ಲಿ ಸ್ಥಳೀಯ ಭಾಷೆಯ ಅಗತ್ಯಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ಜಾರಿಗೊಳಿಸಲು ಸರ್ಕಾರದಿಂದ ಆದೇಶವನ್ನು ಬಯಸಿ ಕನ್ನಡಸಾಹಿತ್ಯಡಾಟ್‌ಕಾಂ ಸಲ್ಲಿಸಲಿರುವ ಮನವಿಯನ್ನು ಶೇಖರಪೂರ್ಣ ಪ್ರಸ್ತಾವನೆಗಿಟ್ಟಾಗ ಸಭೆ ಒಕ್ಕೊರಲಿನ ಬೆಂಬಲವನ್ನು ಸೂಚಿಸಿತು. ಮನವಿಗೆ ಸರ್ಕಾರದಿಂದ ಸಕಾರಾತ್ಮಕವಾದ ಪ್ರತಿಕ್ರಿಯೆ ಬಾರದಿದ್ದಲ್ಲಿ ಕನ್ನಡಸಾಹಿತ್ಯಡಾಟ್‌ಕಾಂ ಆಶ್ರಯದಲ್ಲಿ ನಡೆಯಬಹುದಾದ ಆಂದೋಳನದಲ್ಲಿ ಪಾಲ್ಗೊಳ್ಳುವ ಉತ್ಸಾಹ ಮತ್ತು ಭರವಸೆಯನ್ನು ಇದೇ ಸಭೆ ನೀಡಿತು.

ಮುಂದಿನ ತಿಂಗಳು ತುಮಕೂರಿನಲ್ಲಿ ಕನ್ನಡಸಾಹಿತ್ಯಡಾಟ್‌ಕಾಂ ಬೆಂಬಲಿಗರ ಬಳಗದ ವಿದ್ಯುಕ್ತ ಉದ್ಘಾಟನೆ, ವಿಚಾರ ಸಂಕಿರಣ, ಕನ್ನಡ ತಂತ್ರಾಂಶಗಳ ಪ್ರಾತ್ಯಕ್ಷಿತೆಯ ಒಂದು ದಿನದ ಸಮಗ್ರ ಹಾಗೂ ದೊಡ್ಡ ಮಟ್ಟದ ಕಾರ್ಯಕ್ರಮದ ಆಯೋಜನೆಯನ್ನು ತುಮಕೂರಿನ ಗಣ್ಯರು ವಹಿಸಿಕೊಂಡಿದ್ದಾರೆ ಎಂದು ತಿಳಿಸಲು ಸಂತೋಷವಾಗುತ್ತದೆ.

ಈ ಸಭೆಯ ಕುರಿತಂತೆ ತುಮಕೂರಿನ ಪತ್ರಿಕಾ ಮಾಧ್ಯಮ, ವರದಿಗಳನ್ನು ಪ್ರಕಟಿಸುವ ಮೂಲಕ ಸಾಕಷ್ಟು ಬೆಂಬಲವನ್ನು ವ್ಯಕ್ತಪಡಿಸಿತ್ತು.

ಸಭೆಯಲ್ಲಿ ನೀರಾವರಿ ತಜ್ಞ ಸಂಪಿಗೆ ಜಗನ್ನಾಥ, ಸಿದ್ಧಗಂಗಾ ಕಾಲೇಜಿನ ಕನ್ನದ ವಿಭಾಗದ ಮುಖ್ಯಸ್ಥರಾದ ಎನ್.ಶಿವರುದ್ರಯ್ಯ, 'ತುಮಕೂರು ವಾರ್ತೆ' ಸಂಪಾದಕರೂ, ಹಿರಿಯ ಪತ್ರಕರ್ತರೂ ಆದ ಎಚ್.ಎಸ್.ರಾಮಣ್ಣ, ಗೌಡನಕಟ್ಟೆ ತಿಮ್ಮಯ್ಯ, ವಕೀಲರಾದ ಟಿ.ಎಸ್.ನಿರಂಜನ್ ಮುಂತಾದವರೊಂದಿಗೆ ಸರ್ಕಾರದ ನಾನಾ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

ಸಭೆಯಲ್ಲಿ ಸುಮಾರು ಎರಡು ಗಂಟೆಗಳ ಕಾಲ ಆಸಕ್ತಿಕರ ಪ್ರಶ್ನೋತ್ತರ, ಚರ್ಚೆ, ಸಂವಾದ ನೆಡೆದದ್ದು ಸಭೆಯ ಉತ್ಸಾಹವನ್ನು ತೋರಿಸುತ್ತಿತ್ತು.

ಹಿಂದಿನ ದಿನ:(೦೪-೧೧-೨೦೦೬) ಬೆಂಗಳೂರು ನಗರದ ಪ್ರತಿಷ್ಠಿತ ಸಂಸ್ಥೆಯಾದ ಸ್ಯಾಪ್ ಲ್ಯಾಬ್ಸ್(ಎಸ್ ಎ ಪಿ)ನಲ್ಲಿ ಉದ್ಯೋಗದಲ್ಲಿರುವ ಕನ್ನಡಿಗರು ರಚಿಸಿಕೊಂಡಿರುವ ಗೆಳೆಯರ ಬಳಗ ಸುವರ್ಣ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ರಜ್ಯೋತ್ಸವ ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಬ್ಲೂಟೂತ್ ತಂತ್ರಜ್ಞಾನದ ಕ್ಶೇತ್ರದಲ್ಲಿ ತೊಡಗಿಸಿಕೊಂಡು ಮುನ್ನಡೆಯಲಿರುವ 'ಅಧಮ್ಯ' ಸಂಸ್ಥೆಯ ಸಂಸ್ಥಾಪಕ ಪಾಲುದಾರರಲ್ಲೊಬ್ಬರಾದ ಶರಧಿ ಚಂದ್ರ ಬಾಬುರವರು ಹಾಗು ಶೇಖರಪೂರ್ಣರವರು ಮುಖ್ಯ ಅತಿಥಿಗಳಾಗಿದ್ದರು.

ಸಂಸ್ಥೆಯ ನಿರ್ವಹಣೆಯಲ್ಲಿ ಕನ್ನಡವನ್ನು ವ್ಯಾಪಕವಾಗಿ ಅಳವಡಿಸಿಕೊಂಡಿರುವ ಕ್ರಮಗಳನ್ನು ಶರಧಿ ಚಂದ್ರ ಬಾಬುರವರು ವಿವರಿಸಿದಾಗ ಸಮಾರಂಭದಲ್ಲಿ ನೆರೆದಿದ್ದವರು ಬೆರಗುಗೊಂಡದ್ದಲ್ಲದೆ ಅಪಾರವಾದ ಮೆಚ್ಚುಗೆ ಹಾಗೂ ಶ್ಲಾಘನೆಯನ್ನು ವ್ಯಕ್ತಪಡಿಸಿದರು. ಸ್ಥಳೀಯ ಭಾಷೆಗಳ ಅಗತ್ಯವನ್ನು ವ್ಯಾಖ್ಯಾನಿಸುತ್ತಾ ಹೋದ ಶೇಖರಪೂರ್ಣ, ಸರ್ಕಾರಕ್ಕೆ ಸಲ್ಲಿಸಲಿರುವ ಮನವಿಯ ಬಗೆಗೆ ಈ ಸಭೆಯಲ್ಲಿಯೂ ಪ್ರಸ್ತಾಪಿಸಿದ್ದರು. ತೆರೆದಿಟ್ಟ ಮನವಿಗೆ ಪೂರಕವಾಗಿ ಅಪಾರವಾದ ಬೆಂಬಲ ಕಂಡುಬಂದದ್ದಲ್ಲದೆ ಬೆಂಬಲದ ಸೂಚನೆಯಾಗಿ ಅದೇ ಸಮಾರಂಭದಲ್ಲಿ ಸುಮಾರು ೬೮ ಸಹಿಗಳಾದವು. ಮೊದನೆಯವರಾಗಿ ಶರಧಿ ಚಂದ್ರಬಾಬುರವರು ಸಹಿ ಹಾಕಿದ್ದು ವಿಶೇಷವಾಗಿತ್ತು. ಜೊತೆಗೆ, ಇ-ಕವಿ ಬಳಗದ ಮುಂಚೂಣಿಯಲ್ಲಿರುವ ಸತೀಶ್‌ಗೌಡ ಮತ್ತು ಮಿತ್ರರು ಸಹಿ ಮಾಡಿ ಬೆಂಬಲ ಸೂಚಿಸಿದರು.

ಕನ್ನಡಸಾಹಿತ್ಯಡಾಟ್‌ಕಾಂ ಬೆಂಬಲಿಗರ ಬಳಗದ ಸದಸ್ಯರೂ ಆಗಿರುವ ಅರುಣ್ ಮೈಸೂರು ಹಾಗು ಗೆಳೆಯರ ಬಳಗದ ಉತ್ಸಾಹಿಗಳು ಏರ್ಪಡಿಸಿದ್ದ ಈ ಕಾರ್ಯಕ್ರಮ ಕನ್ನಡ ಸಂಸ್ಕೃತಿಯ ನಾನಾ ಮಜಲುಗಳನ್ನು ಪರಿಚಯಿಸುವಂತಹ ಅಂಶಗಳು ಸೇರಿದ್ದು ನೆರೆದಿದ್ದವರಿಗೆ ಹೊಸ ಹುರುಪನ್ನು ತಂದುಕೊಟ್ಟಿತು.

-ಅರೇಹಳ್ಳಿ ರವಿ
ದಿನಾಂಕ: ೦೬-೧೧-೨೦೦೬

Rating
No votes yet

Comments