ನಮನ-೦೩: ಸುದ್ದಿಗಾರರೇ ಸುದ್ದಿಯಾದಾಗ!
ಕೆಲದಿನಗಳ ಹಿಂದೆ ಉಡುಪಿಯಲ್ಲಿ ವೈದ್ಯರೊಬ್ಬರು ಪತ್ರಕರ್ತರ ಮೇಲೆ ಹಲ್ಲೆ ನಡೆಸಿದರೆಂದು ವರದಿಯಾಗಿತ್ತು.
ಆ ವೈದ್ಯ, ಡಾ| ಕಿರಣ ಆಚಾರ್ಯ, ಸಚಿವ ಆಚಾರ್ಯರ ಮಗನಾಗಿದ್ದರಿಂದ, ಪ್ರತಿಕೂಲ ಪ್ರಚಾರವೂ ಸಿಕ್ಕಿತ್ತು.
ಮೊದಲೇ, ಎರಡೂ ಕಡೆಯ ವಿವರ ಪಡೆದು ಪ್ರಕಟಿಸುವ ವೃತ್ತಿಪರತೆ ನಮ್ಮ ವರದಿಗಾರರಲ್ಲಿ ಕಡಿಮೆ.
ಈ ವಿಷಯದಲ್ಲಿ, ಸುದ್ದಿಗಾರರೇ ಸುದ್ದಿಯಾಗಿರುವುದರಿಂದ ಅದರ ಮಾತೇ ಇಲ್ಲ.
ಆದ್ದರಿಂದ, ವೈದ್ಯರ ಕಡೆಯವರು http://udupipressvictim.wordpress.com/ ವೆಂಬ ಉರುಳಿ (URL) ನಲ್ಲಿ ವೈದ್ಯರ ಆವೃತ್ತಿಯನ್ನು ಬ್ಲಾಗಿದ್ದಾರೆ.
ಕೆಲವೊಂದು ವಿಚಾರ, ಮೊದಲೇ ಹೇಳಿಬಿಡುತ್ತೇನೆ...
. ಕಿರಣ ಪಿಯುಸಿಯಲ್ಲಿ ನನ್ನ ಸಹಪಾಠಿ. ಒಂದೇ ತರಗತಿಯಲ್ಲಿ ನಮ್ಮಂತಹವರು ೧೦೦ ಜನ. ಅದಕ್ಕಿಂತ ಹೆಚ್ಚಿನ ಪರಿಚಯ ನಮ್ಮಿಬ್ಬರ ನಡುವೆ ಇಲ್ಲ.
. ನನಗೆ ಕೆಲವು ಪತ್ರಕರ್ತರ ಅಹಂಕಾರ ಕಂಡರೆ ಆಗುವುದಿಲ್ಲ. ಇದು ಕೆಲವು ಖ್ಯಾತರನ್ನೂ ಸೇರಿಸಿ ಹೇಳುವ ಮಾತು.
. ಬಿಜೆಪಿ ಕಾರ್ಯಕರ್ತರು ಮೈಗೂಡಿಸಿಕೊಂಡಿರುವಂತಹ ತತ್ವಗಳನ್ನು ನಾನು ಒಪ್ಪುವುದಿಲ್ಲ.
ಪತ್ರಕರ್ತರೊಡನೆ ನನ್ನ ಅನುಭವಗಳ ಬಗ್ಗೆ ನಾನು ಇನ್ನೊಮ್ಮೆ ಬರೆಯುತ್ತೇನೆ.
ಈ ಘಟನೆಯಲ್ಲಿ, ಆಸ್ಪತ್ರೆಯ ಒಳಗೆ ನುಗ್ಗಿ ರೋಗಿಗಳ ಛಾಯಾಚಿತ್ರಗಳನ್ನು ಆಸ್ಪತ್ರೆಯ ಸಿಬ್ಬಂದಿಗಳ ಹಾಗೂ ರೋಗಿಗಳ ಅನುಮತಿಯಿಲ್ಲದೆ ತೆಗೆಯಲಾಗಿದೆ.
ಹಾಗೆ ತೆಗೆಯಬಾರದು, ಪತ್ರಿಕಾ ಸ್ವಾತಂತ್ರ್ಯಕ್ಕೂ ಅದಕ್ಕೂ ಸಂಬಂಧವಿಲ್ಲವೆಂಬುದು ಗೊತ್ತಿರದ ಹುಂಬ ಪತ್ರಕರ್ತರೇ ಉಡುಪಿಯಲ್ಲಿ ತುಂಬಿಕೊಂಡಂತೆ ಕಾಣುತ್ತಿದೆ.
ಪತ್ರಕರ್ತರು ತಮ್ಮ ಪೆನ್ನು, ಕ್ಯಾಮರಾ ಹಿಡಿದು "ಹರಕೆಯ ಗೂಳಿಯಂತೆ" ಎಲ್ಲಾ ಕಡೆಗೆ ನುಗ್ಗಬಾರದು, ಎಂಬ ಬಗ್ಗೆ ಈ ಅಲ್ಪಮತಿಗಳಿಗೆ ಯಾರಾದರೂ ತಿಳಿಸಿ ಹೇಳಿದರೆ ಒಳ್ಳೆಯದು.
ಮೇಲ್ಕಾಣಿಸಿದ ಬ್ಲಾಗ್‍ನಲ್ಲಿ ಉಡುಪಿಯ ಕೆಲವು ಪತ್ರಕರ್ತರ ಬಗ್ಗೆ ಸರ್ವಾಂಗೀಣ ಯುದ್ದ ಹೂಡಲಾಗಿದೆ.
ಅದೀಗ - ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಹೋರಾಟವಾಗಿದೆ,
ಪತ್ರಕರ್ತರು ಮತ್ತು ವೈದ್ಯರ ನಡುವಿನ ಹೋರಾಟವಾಗಿದೆ,
ಕಾಂಗ್ರೆಸ್ ಮಾತ್ರವಲ್ಲ, ಬಿಜೆಪಿ ಪರವಾಗಿರುವ ಪತ್ರಕರ್ತರೂ, ಉಡುಪಿಯಲ್ಲಿ ಇರಬಹುದಲ್ಲವೇ?
ನೆನಪಿಡಿ, ಉಡುಪಿ - ದಕ್ಷಿಣ ಭಾರತದಲ್ಲೇ, ಬಿಜೆಪಿಯ ಭದ್ರ ನೆಲೆಗಳಲ್ಲಿ ಒಂದು.
ಈಗ ಪತ್ರಕರ್ತರನ್ನು ವಿರೋಧಿಸುವವರಲ್ಲಿ ನಿಜವಾದ ಘಾತಕರೂ ಇರಬಹುದಲ್ಲವೆ?
ಕೊನೆಯ ಮಾತು:
ಯಾವ ಬಗೆಯ ವಿದ್ಯಾರ್ಹತೆಗಳೂ ಬೇಕಾಗಿಲ್ಲದ ಕೆಲಸಗಳಲ್ಲಿ ಪತ್ರಕರ್ತರದೂ ಒಂದು.
ಇತೀ,
ಉಉನಾಶೆ - ಜುಲೈ ೧೦, ೨೦೦೬ - ೦೨:೦೫ ಪೂರ್ವಾಹ್ನ