ನವರಾತ್ರಿಯ ಎರಡನೇ ದಿನ

ನವರಾತ್ರಿಯ ಎರಡನೇ ದಿನ

ನೆನ್ನೆ ನವರಾತ್ರಿ ಹಬ್ಬದ ಮೊದಲ ದಿನ ದ ಬಗ್ಗೆ ಬರೆದಿದ್ದೆ. ಇವತ್ತು ಇನ್ನು ದಸರೆಯ ಎರಡನೆಯ ದಿವಸ.ನಮಗೆಲ್ಲ ತಿಳಿದ ಹಾಗೆ ನವರಾತ್ರಿ ಕನ್ನಡಿಗರಿಗೆ ದೊಡ್ಡ ಹಬ್ಬ. ವಿಜಯ ನಗರದ ಅರಸರ ಕಾಲದಲ್ಲಿ ದಸರೆಯ ಸಂಭ್ರಮ ನಡೆಯುತ್ತಿದ್ದದ್ದರ ವಿಷಯವಾಗಿ, ಆ ಕಾಲದಲ್ಲಿ ಬಂದಿದ್ದ ಪರ್ಶಿಯನ್ ಹಾಗೂ ಫ್ರೆಂಚ್ ಯಾತ್ರಿಕರ ಬರಹಗಳಿಂದ ತಿಳಿದುಬರುತ್ತದೆ. ಆ ವೈಭವಕ್ಕೆ, ಈಗಲೂ ಹಂಪೆಯಲ್ಲಿರುವ ಮಹಾನವಮಿ ದಿಬ್ಬವೂ ಸಾಕ್ಷಿಯಾಗಿದೆ. ನಂತರ, ಈ ಸಂಪ್ರದಾಯ ಮೈಸೂರಿನ ಅರಸರಲ್ಲೂ ಮುಂದುವರೆದದ್ದು ಆಶ್ಚರ್ಯವೇನಿಲ್ಲ.

ಮೈಸೂರರಸರು ದಸರೆಯ ಆಚರಣೆಯೊಂದರಲ್ಲೇ ಅಲ್ಲ - ಅವರು ವಿವಿಧ ಕಲಾಪ್ರಕಾರಗಳಿಗೆ ಕೊಡುತ್ತಿದ್ದ ಪ್ರೋತ್ಸಾಹದಲ್ಲೂ ಆ ಕಾಲದ ರಾಜ್ಯಗಳ ಮುಂಚೂಣಿಯಲ್ಲಿದ್ದರು. ೧೮-೧೯ ನೇ ಶತಮಾನಗಳಲ್ಲಿ ಮೈಸೂರು ವೀಣೆಯ ಬೆಡಗೆಂದಾಗುವುದಕ್ಕೂ ಇದೇ ಕಾರಣ. ಹಲವಾರು ವಿದ್ವಾಂಸರು ಹಾಗೇ ಮೈಸೂರರಸರ ಆಶ್ರಯ ಅರಸಿ ಬಂದದ್ದೂ ಉಂಟು. ಹಾಗೆ ಬಂದವರಲ್ಲಿ, ಹರಿಕೇಶನಲ್ಲೂರು ಮುತ್ತಯ್ಯ ಭಾಗವತರು ಪ್ರಮುಖರು.
ಕೃಷ್ಣರಾಜ ಒಡೆಯರ ಆಸ್ಥಾನ ವಿದ್ವಾಂಸರಾಗಿ ಇವರು ಬಂದದ್ದರ ಬಗ್ಗೆ ಒಂದು ಕುತೂಹಲಕಾರಿ ಸಂಗತಿಯೊಂದಿದೆ. ಅದೇನೋ, ಮುತ್ತಯ್ಯ ಭಾಗವತರಿಗೆ ಮಹಾರಾಜರ ಮುಂದೆ ಕಚೇರಿ ಕೊಡುವ ಅವಕಾಶ ಸಿಕ್ಕ ದಿನ ಅವರ ಗಂಟಲಿಗೆ ಏನೋ ತೊಂದರೆಯಾಗಿ, ಕಾರ್ಯಕ್ರಮ ಹೆಚ್ಚು ಕಳೆಕಟ್ಟಲಿಲ್ಲ. ಸಾಧಾರಣವಾಗಿ, ಅರಮನೆಯಲ್ಲಿ ಹಾಡುವ ವಿದ್ವಾಂಸರಿಗೆ, ಅವರಿಗೆ ತಕ್ಕ ಮರ್ಯಾದೆ ಕೊಡಲಾಗುತ್ತಿತ್ತು. ಆ ರೀತಿ ಅವರಿಗೂ ಮರ್ಯಾದೆ ಮಾಡಿ ಕಳಿಸಲಾಯಿತಂತೆ. ಭಾಗವತರಿಗೆ ಸ್ವಲ್ಪ ನಿರಾಸೆಯೇ ಆಯಿತು. ನಂತರ ಕೆಲವು ದಿನಗಳ ನಂತರ, ಅವರು ಚಾಮುಂಡಿ ಬೆಟ್ಟದ ಮೇಲೆ, ದೇವಾಲಯದಲ್ಲಿ ತಮ್ಮ ಪಾಡಿಗೆ ಹಾಡಿಕೊಳ್ಳುತ್ತಿದ್ದಾಗ ಆ ದಿನ ದೇವಿಯ ದರ್ಶನಕ್ಕೆ ಬಂದ ಒಡೆಯರಿಗೆ ಅದು ಕೇಳಿ, ಅವರ ಮೇಲೆ ಬಂದಿದ್ದ ಅಭಿಪ್ರಾಯ ಬದಲಾಯಿತಂತೆ. ನಂತರ ಅವರನ್ನು ತಮ್ಮ ಆಸ್ಥಾನ ವಿದ್ವಾಂಸರನ್ನಾಗಿ ಮಾಡಿಕೊಂಡರಂತೆ. ಇದು ನಡೆದದ್ದು ೧೯೨೭ರಲ್ಲಿ.

ರಾಜರು ತಮ್ಮ ಇಷ್ಟದೇವಿ ಮೈಸೂರಿನ ನಗರ ದೇವತೆ, ಚಾಮುಂಡಿಯ ಮೇಲೆ ೧೦೮ ಕೃತಿಗಳನ್ನು ರಚಿಸಲು ಕೇಳಿದರಂತೆ, ಅಂತೆಯೇ ಮುತ್ತಯ್ಯ ಭಾಗವತರು ೧೦೮ ಕೃತಿಗಳನ್ನು ರಚಿಸಿದರು - ಕನ್ನಡದಲ್ಲಿರುವ ಈ ಕೃತಿಗಳ ಸಾಹಿತ್ಯವನ್ನು ದೇವೋತ್ತಮ ಜೋಯಿಸರೆಂಬುವರು ಬರೆದುಕೊಟ್ಟರಂತೆ.

ಇವತ್ತು ನಾನು ಕೇಳಿಸುವ ರಚನೆ - ಭುವನೇಶ್ವರಿಯ ನೆನೆ ಮಾನಸವೆ; ಮೋಹನ ಕಲ್ಯಾಣಿ ರಾಗ, ಆದಿತಾಳದಲ್ಲಿದೆ. ಈ ರಾಗದಲ್ಲಿ ಸಂಗೀತರಚನೆ ಮಾಡಿದವರಲ್ಲಿ ಮುತ್ತಯ್ಯಭಾಗವತರೇ ಮೊದಲಿಗರು. ಅತಿ ಪ್ರಸಿದ್ಧ ವಾದ ಮೋಹನ, ಹಾಗೂ ಕಲ್ಯಾಣಿ ಈ ಎರಡು ರಾಗಗಳನ್ನು ಮೇಳೈಸುವುದರಿಂದ ಈ ರಾಗ ಉಂಟಾಗಿದೆ. ಕೃತಿಯ ಸಾಹಿತ್ಯ, ಸ್ವಲ್ಪ ಸಂಸ್ಕೃತ ಹೆಚ್ಚಾಗೇ ಇರುವಂತಹ ಕನ್ನಡಭಾಷೆಯಲ್ಲಿದೆ.

ಈಗ ಇದನ್ನು ಎಸ್.ರಾಜಮ್ (ವೀಣಾ ಬಾಲಚಂದರ್ ಅವರ ಅಣ್ಣ) ಅವರ ದ್ವನಿಯಲ್ಲಿ ನೀವು ಸಂಗೀತಪ್ರಿಯ.ಅರ್ಗ್ ನಲ್ಲಿ ಈ ಕೆಳಗಿನ ಕೊಂಡಿಯಲ್ಲಿ ಕೇಳಬಹುದು:

ರಾಜ್ಂ ಅವರ ಧ್ವನಿಯಲ್ಲಿ - ಭುವನೇಶ್ವರಿಯ ನೆನೆ ಮಾನಸವೇ

ಮರೆಯದ ಹಾಡು ಎಂಬ ಕನ್ನಡ ಚಲನಚಿತ್ರದಲ್ಲಿ ಈ ರಚನೆಯನ್ನು ಎಸ್.ಜಾನಕಿ ಅವರು ಸೊಗಸಾಗಿ ಹಾಡಿರುವುದನ್ನೂ ನೀವು ಕೇಳಿರಬಹುದು.

ಅಂದಹಾಗೆ, ತಿರುವನಂತಪುರದ ನವರಾತ್ರಿ ಮಂಡಪಂ ನಲ್ಲಿ, ಇಂದು ಹಾಡುವ ಸ್ವಾತಿ ತಿರುನಾಳ್ ಅವರ ನವರಾತ್ರಿ ಕತಿ, ಕಲ್ಯಾಣಿ ರಾಗದಲ್ಲಿ, ಆದಿತಾಳದಲ್ಲಿರುವ ಪಾಹಿಮಾಂ ಶ್ರೀ ವಾಗೀಶ್ವರೀ ಎಂಬುದು.

ನಾಳೆ, ದಸರೆಯ ಮತ್ತೊಂದು ವಿಶೇಷ ರಚನೆಯೊಂದಿಗೆ ಸಿಗೋಣ.

-ಹಂಸಾನಂದಿ

Rating
No votes yet

Comments