ನವರಾತ್ರಿಯ ಐದನೆಯ ದಿನ

ನವರಾತ್ರಿಯ ಐದನೆಯ ದಿನ

ಇವತ್ತು ನವರಾತ್ರಿಯ ಐದನೆಯ ದಿನ. ಇಂದು ಸಂಜೆ ತಿರುವನಂತಪುರದ ಪದ್ಮನಾಭಸ್ವಾಮಿ ದೇವಾಲಯದ ಪಕ್ಕದಲ್ಲಿರುವ ನವರಾತ್ರಿ ಮಂಡಪದಲ್ಲಿ ಪ್ರಮುಖವಾಗಿ ವಿಸ್ತರಿಸುವುದು ಭೈರವಿ ರಾಗ. ಮತ್ತೆ ಅದರಲ್ಲಿ, ಸ್ವಾತಿ ತಿರುನಾಳ್ ಮಹಾರಾಜರ ಜನನೀ ಮಾಮವ ಮೇಯೆ ಎಂಬ ಕೃತಿಯನ್ನು ಹಾಡಲಾಗುತ್ತೆ. ಈ ರಚನೆಯನ್ನು ನೀವು ಮ್ಯೂಸಿಕ್ ಇಂಡಿಯಾ ತಾಣದಲ್ಲಿ, ಬಾಂಬೇ ಸಹೋದರಿಯರ ಧ್ವನಿಯಲ್ಲಿ, ಇಲ್ಲಿ ಕ್ಲಿಕ್ಕಿಸಿ ಕೇಳಬಹುದು.

ಭೈರವಿ ರಾಗ ಕರ್ನಾಟಕ ಸಂಗೀತಕ್ಕೆ ಸೀಮಿತವಾದ ರಾಗ - ಇದಕ್ಕೆ ಹತ್ತಿರವಾದ ರಾಗ, ಹಿಂದೂಸ್ಗಾನಿ ಸಂಗೀತದಲ್ಲಾಗಲಿ, ಅಥವಾ ಪ್ರಪಂಚದ ಬೇರೆ ಯಾವುದೇ ಸಂಗೀತದಲ್ಲೂ ಇದನ್ನು ಹೋಲುವ ರಾಗವಿಲ್ಲ. ನೀವು ತರಾಸು ಅವರ ಹಂಸಗೀತೆಯನ್ನು ಓದಿದ್ದರೆ, ಅದರ ಮೇಲೆ ಆಧಾರಿತವಾದ ಚಲನಚಿತ್ರವನ್ನು ನೋಡಿದ್ದರೆ, ಅದರಲ್ಲಿ ಬರುವ ಭೈರವಿ ವೆಂಕಟಸುಬ್ಬಯ್ಯನ ಪಾತ್ರ ನಿಮಗೆ ತಿಳಿದೇ ಇರುತ್ತೆ. ಇಲ್ಲಿ ಒಂದು ವಿಷಯವನ್ನು ಹೇಳಿಬಿಡುತ್ತೇನೆ. ಈ ಭೈರವಿ ವೆಂಕಟಸುಬ್ಬಯ್ಯ ತರಾಸು ಅವರ್ ಕಲ್ಪನೆಯ ಪಾತ್ರವೇ ಹೊರತು ಚಾರಿತ್ರಿಕ ವ್ಯಕ್ತಿಯಲ್ಲ.

ಇವತ್ತು ನಾನು ಆಯ್ಕೆ ಮಾಡಿಕೊಂಡು ಹೇಳಲಿರುವ ರಚನೆ ಮುತ್ತುಸ್ಬಾಮಿ ದೀಕ್ಷಿತರದ್ದು. ಸಂಗೀತ ತ್ರಿಮೂರ್ತಿಗಳಲ್ಲಿ ಇವರು ಎಲ್ಲರಿಗಿಂತ ಕಡಿಮೆ ಕಾಲ ಬದುಕಿದ್ದರೂ (ಕ್ರಿ.ಶ.೧೭೭೫-೧೮೩೫) , ಸಂಗೀತ ಸಾಧನೆಯಲ್ಲಿ ಇನ್ನಿಬ್ಬರಿಗೆ ಸಾಟಿಯಾದವರು ಇವರು. ವೈಣಿಕ ಮತ್ತು ಹಾಡುಗಾರರಾಗಿದ್ದ ಇವರಿಗೆ ಹಿಂದೂಸ್ತಾನಿ ಸಂಗೀತದ ಪರಿಚಯವೂ ಇತ್ತು. ಇವರು ದಕ್ಷಿಣಭಾರತದ ಅನೇಕ ಕ್ಷೇತ್ರಗಳನ್ನು ಸಂದರ್ಶಿಸಿ, ಅಲ್ಲಿನ ದೇವ ದೇವತೆಗಳಬಗ್ಗೆ ತಮ್ಮ ರಚನೆಗಳನ್ನು ಹಾಡಿದ್ದಾರೆ. ಇವರು ಸುಮಾರು ನಾನೂರು ರಚನೆಗಳು ನಮಗೆ ದೊರೆತಿವೆ.
ವಿಶೇಷವೆಂದರೆ, ಇವರು ತಾವು ಮದ್ರಾಸ್ ನ ಸೈಂಟ್ ಜಾರ್ಜ್ ಕೋಟೆಯಲ್ಲಿ ಕೇಳಿದ ಇಂಗ್ಲಿಷ್ ಬ್ಯಾಂಡ್ ಗಳ ಹಾಡುಗಳ ಮಟ್ಟಿನಲ್ಲೇ, ಅದಕ್ಕೆ ತಮ್ಮದೇ ಸಾಹಿತ್ಯ ಬರೆದಿರುವುದು. ಈಗಲೂ ಇದನ್ನು ಸಂಗೀತ ಅಭ್ಹ್ಯಾಸದ ಮೊದಲ ದಿನಗಳಲ್ಲಿ ಹೇಳಿಕೊಡುವುದಿದೆ. ಇಂಥ ಸರಳ ರಚನೆಗಳಿಂದ ಹಿಡಿದು ಅತಿ ಕ್ಲಿಷ್ಟವಾದ ರಚನೆಗಳನ್ನೂ ಮಾಡಿರುವುದು ಇವರ ಸಂಗೀತದ ಹರಹನ್ನು ತೋರಿಸುತ್ತೆ.
ಇವತ್ತಿನ ದೇವೀ ಪರವಾದ ಕೃತಿ ಪೂರ್ವಿ ಕಲ್ಯಾಣಿ ರಾಗದಲ್ಲಿರುವ ಮೀನಾಕ್ಷೀ ಮೇಮುದಂ ದೇಹಿ ಎಂಬ ರಚನೆ. ಮುತ್ತುಸ್ವಾಮಿ ದೀಕ್ಷಿತರ ಸಂಪ್ರದಾಯದಲ್ಲಿ ಈ ರಾಗಕ್ಕೆ ಗಮಕಕ್ರಿಯ ಎಂದು ಕರೆಯುತ್ತಾರೆ. ಈ ರಚನೆಯು ಮದುರೆಯ ಮೀನಾಕ್ಷಿ ದೇವಿಯ ಮೇಲೆ ಬರೆದಿರುವುದಾಗಿದೆ.
೧೮೩೫ನೇ ವರ್ಷ, ನರಕ ಚತುರ್ದಶಿಯಂದು ಇವರು ತಮ್ಮ ಅಂತ್ಯ ಕಾಲ ಬಂತೆಂದು ಅರಿತು, ತಮ್ಮ ಶಿಷ್ಯರಿಗೆ, ಈ ಕೃತಿಯನ್ನು ಹಾಡಲು ಹೇಳಿದರಂತೆ. ಅನುಪಲ್ಲವಿಯಲ್ಲಿನ "ಮೀನ ಲೋಚನಿ, ಪಾಶ ಮೋಚನಿ" ಎಂಬ ಸಾಲುಗಳನ್ನು ಮತ್ತೆ ಮತ್ತೆ ಹಾಡುವಂತೆ ಹೇಳಿ, ಅದೇ ಸಮಯದಲ್ಲಿ ಅವರ ದೇಹಾಂತ್ಯವಾಯಿತೆಂದು ಹೇಳಲಾಗುತ್ತೆ.
ಈ ಕೃತಿಯಲ್ಲಿ, ದೇವಿಯನ್ನು ಅವರು ಮೀನಾಕ್ಷಿ ದೇವಿಯನ್ನು ವೀಣಾ ಗಾನ ದಶ ಗಮಕಕ್ರಿಯೇ - ವೀಣೆ, ಮತ್ತು ಹಾಡುಗಾರಿಕೆಯಲ್ಲಿ ಬಳಸುವ ಹತ್ತು ಬಗೆಯ ಗಮಕಗಳನ್ನು ಹೊರಡಿಸುವವಳೇ" ಎಂದು ಸಂಗೀತರೂಪಿಯಾಗಿ ವರ್ಣಿಸಿ, ಅದರಲ್ಲೇ ರಾಗಮುದ್ರೆಯನ್ನೂ ಇಟ್ಟಿದ್ದಾರೆ.
ಈ ಕೃತಿಯನ್ನು ನೀವು ಸಂಗೀತಪ್ರಿಯ.ಆರ್ಗ್ ನಲ್ಲಿ ವಿದುಷಿ ಎಸ್.ಸೌಮ್ಯ ಅವರ ಕಂಠದಲ್ಲಿ, ಇಲ್ಲಿ ಕ್ಲಿಕ್ಕಿಸಿ ಕೇಳಬಹುದು. ಇದನ್ನು ಇಲ್ಲಿ ವಿಸ್ತ್ತಾರವಾದ ರಾಗಾಲಾಪನೆಯೊಂದಿಗೆ ಹಾಡಲಾಗಿದೆ. ಹಾಡು, ಸುಮಾರು ಹದಿನೈದು ನಿಮಿಷಗಳ ಆಲಾಪನೆಯ ನಂತರ ಆರಂಭವಾಗುತ್ತದೆ.
ಹಳೆಯ ಕನ್ನಡ ಚಲನಚಿತ್ರಗಳ ಅಭಿಮಾನಿಗಳು ಅನಕೃ ಅವರ ಸಂಧ್ಯಾರಾಗ ಚಿತ್ರವನ್ನು ಎಂದಿಗೂ ಮರೆಯಲಾರರು. ಅದರಲ್ಲಿ ಬರುವ ನಂಬಿದೆ ನಿನ್ನ ನಾದ ದೇವತೆಯೆ, ಎಂಬಹಾಡು ಕೂಡ ಇದೇ ಪೂರ್ವಿಕಲ್ಯಾಣಿ ರಾಗದಲ್ಲೇ ಸಂಯೋಜಿತವಾಗಿದೆ. ಈ ಹಾಡನ್ನು ನೀವು
ಇಲ್ಲಿ ಕ್ಲಿಕ್ಕಿಸಿ ನೋಡಬಹುದು.
ದಸರೆಯಲ್ಲಿ ಹಾಡಲು, ನಾದದೇವತೆಯನ್ನು ಹೊಗಳುವ ಈ ಹಾಡೂ ಕೂಡ ಎಷ್ಟು ಸೊಗಸು ಅಲ್ಲವೆ?

-ಹಂಸಾನಂದಿ

Rating
No votes yet