ನಾನು ಯಾರು - ತರಾಸು ಅವರ ‘ಹಿಂತಿರುಗಿ ನೋಡಿದಾಗ’

ನಾನು ಯಾರು - ತರಾಸು ಅವರ ‘ಹಿಂತಿರುಗಿ ನೋಡಿದಾಗ’

ಇಂದು ಸಂಪದದಲ್ಲಿ ವಿದಾಯ, ಅದಕ್ಕೆ ವಾದ-ವಿವಾದ-ಪ್ರತಿವಾದಗಳನ್ನು ನೋಡಿ ಬೇಸರ ಬಂದು ತರಾಸು ಅವರ ‘ಹಿಂತಿರುಗಿ ನೋಡಿದಾಗ’ ಓದಲೂ ಶುರು ಮಾಡಿದೆ. ಅಲ್ಲಿಯೂ ಕೂಡ ಇದರ ಛಾಯೆಯನ್ನು ನೋಡಿ ಸಂಪದಿಗರಲ್ಲಿ ಹಂಚಿಕೊಳ್ಳುವ ಎನಿಸಿ ಇದನ್ನು ಬರೆಯುತ್ತಿದ್ದೇನೆ. ಇದು ಯಾರಿಗಾದರೂ ನೋವನ್ನುಂಟು ಮಾಡಿದರೆ ಕ್ಷಮಿಸಿ. ತರಾಸು ರವರು ಬರೆದ ಸಾರಂಶವನ್ನು ನಿಮ್ಮ ಮುಂದಿಡುತ್ತಿದ್ದೇನೆ.

‘ನಾನು ಯಾರು?’

ಇದಕ್ಕೆ ಉತ್ತರ ಕೊಡುವುದು ಸುಲಭ. ನಾನು ಇಂಥವರ ಮಗ, ಇಂತಹವರ ಗಂಡ ಹೀಗೆ........... ಅದು ಸತ್ಯ ಕೂಡಾ. ಆದರೆ ನನಗೆ ನಾನೇ ಉತ್ತರ ಕೊಟ್ಟುಕೊಳ್ಳುವುದಕ್ಕೆ ಇಷ್ಟು ಸಾಕೆ? ನನ್ನನ್ನು ನಾನೇ ಅರ್ಥ ಮಾಡಿಕೊಂಡಂತಾಯಿತೇ? - ಹೀಗೆ ಪ್ರಶ್ನೆಗಳನ್ನು ಕೇಳುತ್ತಾ ತರಾಸು ಹೇಳುತ್ತಾರೆ

‘ಓದು ಒಳ್ಳೆಯ ಮನುಷ್ಯನನ್ನಾಗಿ ಮಾಡುತ್ತದೆ, ಬರವಣಿಗೆ ಅವನನ್ನು ಪರಿಪೂರ್ಣನನ್ನಾಗಿ ಮಾಡುತ್ತದೆ’ ಎಂದು ಫ್ರಾನ್ಸಿಸ್ ಬೇಕನ್ ಹೇಳಿರುವುದು ಎಷ್ಟು ಸತ್ಯ’. ಅದಕ್ಕಾಗಿ ನನಗೋಸ್ಕರವಾಗಿಯೇ ಈ ಲೇಖನ; ಯಾರಿಗಾಗಿಯೂ ಅಲ್ಲ. ನನ್ನ ಬಾಳನ್ನು ನಾನು ಅರ್ಥ ಮಾಡಿಕೊಳ್ಳುವ ಸಲುವಾಗಿ ಈ ಬರಹದ ಉದ್ದೇಶ ಸೀಮಿತ. ಇದು ಕೆಲವರಿಗೆ ತೃಪ್ತಿ ಕೊಡಬಹುದು, ಕೆಲವರಿಗೆ ತೃಪ್ತಿ ಕೊಡದೆ ಹೋಗಬಹು; ಕೆಲವರ ದೃಷ್ಟಿಯಲ್ಲಿ ಅನಗತ್ಯವಾದದ್ದು ಬಂದಿದೆ, ಅಗತ್ಯವಾದದ್ದು ಬಿಟ್ಟು ಹೋಗಿದೆ ಎಂದೆನಿಸಬಹುದು; ಮತ್ತೆ ಕೆಲವರಿಗೆ ಅವರಿಗೆ ಬೇಕಾದ ಯಾವುದೋ ಸತ್ಯವನ್ನು ಮರೆ ಮಾಡುತ್ತಿದ್ದೇನೆ ಎನಿಸಬಹುದು.

ಆದರೆ -

ನನ್ನ ಮಟ್ಟಿಗೆ ಹೇಳುವುದಾದರೆ ಯಾರ ತೃಪ್ತಿ-ಅತೃಪ್ತಿಗಳೂ ನನ್ನ ತೃಪ್ತಿ, ಅತೃಪ್ತಿಗಳಲ್ಲ; ನನ್ನ ಬಗ್ಗೆ ಯಾರ ಅನಿಸಿಕೆಯೂ ನನ್ನ ಬಗ್ಗೆಯೇ ನನ್ನ ಅನಿಸಿಕೆಯಲ್ಲ. ನನ್ನ ಒಂದು ನಿರ್ದಿಷ್ಟ ಅಗತ್ಯ, ಸಮಸ್ಯೆಯ ಪೂರೈಕೆಯ ಸಲುವಾಗಿ ಈ ಬರಹ, ಹಾಗೆ ಬರೆಯುವ ಅಧಿಕಾರ ನನಗೆ ಇದೆ. ಉಳಿದವರಿಗೆ-? ಅವರಿಗೂ ನನ್ನ ಬಗ್ಗೆ ತಮಗೆ ಅನಿಸಿದ್ದನ್ನು ಬರೆಯುವ ಅಧಿಕಾರವಿದೆ. ನನಗೆ ಯಾವ ಅಡ್ಡಿಯೂ ಇಲ್ಲ; ಯಾರಿಗೂ ನಾನು ಅಡ್ಡ ನಿಲ್ಲುವುದಿಲ್ಲ

ಒಂದೊಂದು ಬದುಕು ಶಿವಗಂಗೆಯ ಬೆಟ್ಟವಿದ್ದ ಹಾಗೆ. ಒಂದು ಕಡೆಯಿಂದ ನೋಡಿದವರಿಗೆ ಅದು ವೃಷಭಾಕಾರವಾಗಿ ಕಾಣುತ್ತದೆ. ಮತ್ತೊಂದು ಪಾರ್ಶ್ವದಿಂದ ನೋಡಿದವರಿಗೆ ಸರ್ಪಾಕಾರವಾಗಿ ಕಾಣುತ್ತದೆ. ಯಾರಿಗೆ ಯಾವ ರೂಪ ಕಂಡಿತೋ ಅವರಿಗೆ ಅದೇ ಸತ್ಯ. ಜಗತ್ತೆಲ್ಲವನ್ನು ನಾನು ನನ್ನ ಕಣ್ಣಿನಿಂದಲೇ ನೋಡಿ, ನನ್ನ ಬುದ್ಧಿಯಿಂದಲೇ ಅರ್ಥ ಮಾಡಿಕೊಳ್ಳುತ್ತಿರುವಾಗ ನನ್ನ ಬಗ್ಗೆಯೇ ಇನ್ನೊಬ್ಬರಿಗೆ ಹೀಗೆಯೇ ನೋಡಿ ಎಂದು ಹೇಳುವ ಅಧಿಕಾರ ಎಲ್ಲಿ ಬಂತು? ಹಾಗೆ ಹೇಳಿದರೆ ಉದ್ಧಟತನವಾದೀತು. ‘ಉದ್ಧಟತನ’- ಎಲ್ಲಿಯೇ ಇರಲಿ, ಯಾರಲ್ಲಿಯೇ ಇರಲಿ ಅದನ್ನು ಪ್ರತಿಭಟಿಸಲೇ ಬೇಕು. ಆ ಅಧಿಕಾರ ನನಗೂ ಇದೆ; ನನಗಿದೆ ಎಂದಾಗ ಎಲ್ಲರಿಗೂ ಇದೆ.

ಎಷ್ಟು ನಿಜವಲ್ಲವೇ. ಎಲ್ಲರೂ ಹಾಗೇ ಭಾವಿಸಿದಲ್ಲಿ ನಮ್ಮ ಸಂಪದವು ವಿದಾಯಗಳಿಂದ ಮುಖ್ತವಾಗಿ ಇನ್ನೂ ಸಂಪದ್ಭರಿತಗೊಳ್ಳುವುದೆಂಬುದು ನನ್ನ ಅನಿಸಿಕೆ. ಎಲ್ಲರೂ ಯೋಚಿಸಿ ಸಂಪದಿಗರೇ/ಗಿತ್ತಿಯರೇ!

Rating
No votes yet

Comments