ನಾನು ಹೇಗಿರ್ಬೇಕು?
ನಾನು ಇವತ್ತು ಬೆಳಿಗ್ಗೆ ಎದ್ದಾಗ ಸಮಯ ೬ ಗಂಟೆ. ನನ್ನ ಬೆಳಗಿನ ಕೆಲಸಗಳನ್ನು ಮುಗಿಸಿ, ೭.೩೦ ರ ಹೊತ್ತಿಗೆ ಕಾಲೇಜ್ ಗೆ ಹೊರಡಲು ತಯಾರಾದೆ. ಕಾಲೇಜ್ ಶುರುವಾಗಲು ಇನ್ನು ತುಂಬಾ ಸಮಯ ಇತ್ತು. ಯಾವತ್ತೂ ಬೇಗ ಕಾಲೇಜ್ ಗೆ ಹೋಗುವ ಜಾಯಮಾನ ನನ್ನದಲ್ಲವಾದ್ದರಿಂದ ಬೇರೆ ಕೆಲಸ, ಯೋಚನೆ ಇಲ್ಲದೇ ಕನ್ನಡಿ ಮುಂದೆ ನಿಂತೆ. ಕನ್ನಡಿಯಲ್ಲಿ ನನ್ನ ಕಣ್ಣಲ್ಲಿ ನನ್ನನ್ನೇ ನೋಡ್ತಾ ಮೆಚ್ಚಿಕೊಂಡೆ. ಆಗಲೇ ತುಂಬಾ ದಿನದಿಂದ ಮನಸಿನಲ್ಲಿದ್ದ ಯೋಚನೆಯೊಂದು ಥಟ್ಟನೆ ಮೊಳಕೆಯೊಡೆಯಿತು. ಅದೇ ನಾನು ಹೇಗಿದ್ದೇನೆ ಅನ್ನೋದು. ನಾನು ಹೇಗಿರ್ಬೇಕು ಅನ್ನೋದಕ್ಕಿಂತ ಮೊದಲು , ನಾನು ಹೇಗಿದ್ದೇನೆ ಅನ್ನೋದು ಮೊದಲು ನೆನಪಿಸಿಕೊಂಡೆ. ನಾನು ಸ್ವಭಾವತಃ ಮೌನಿಯಲ್ಲದಿದ್ದರೂ ಮಾತು ಸ್ವಲ್ಪ ಕಡಿಮೆ. ಜಾಸ್ತಿ ಕೇಳ್ಬೇಕು, ಕಡಿಮೆ ಮಾತಾಡಬೇಕು ಅನ್ನೋದು ರಕ್ತಗತವಾಗಿ ಬಂದ ಗುಣ. ಒಬ್ಬ ಒಳ್ಲೆಯ ಕೇಳುಗ ಮಾತ್ರ , ಒಬ್ಬ ಒಳ್ಲೆಯ ಮಾತುಗಾರನಾಗಬಲ್ಲನೆಂಬುದು ನನ್ನ ನಂಬಿಕೆ. ಯಾವುದೇ ಸಂಧರ್ಭ ಬಂದರೂ, ಸಮಾಧಾನ ಚಿತ್ತದಿಂದ ಎದುರಿಸುವುದು ಅಭ್ಯಾಸಬಲವಿಲ್ಲದೆಯೇ ಅಭ್ಯಾಸವಾಗಿರುವ ಮನಸ್ಥಿತಿ. ಆದರೆ ಮೂಗಿನ ತುದಿಯಲ್ಲಿಯೇ ಇದ್ದ ಕೋಪ ಮಾತ್ರ ನೀನು ಬದಲಾಗಲೇಬೇಕು ಅಂತ ಹಟಹಿಡಿದಿತ್ತು. ಕೇವಲ ನಮ್ಮ ೧೫ ನಿಮಿಷದ ಕೋಪ, ನಮ್ಮ ಮೂರು ತಾಸುಗಳಷ್ಟು ಆಯುಷ್ಯವನ್ನು ಮೊಟಕುಗೊಳಿಸುವುದೆಂದು ಎಂದು ಎಲ್ಲೋ ಓದಿದ ನೆನಪಾಗಿ , ಕನ್ನಡಿ ಮುಂದೆ ನಿಂತೇ, ಇವತ್ತು ಕೋಪ ಮಾಡಿಕೊಳ್ಲಬಾರದೆಂದು ಪ್ರಮಾಣಿಸುತ್ತಿದ್ದೆ. " ಕಾಲೇಜಿಗೆ ಹೊತ್ತಾಯ್ತು , ಇನ್ನೂ ನಿನ್ನ ಅಲಂಕಾರ ಮುಗಿಲಿಲ್ವೇನೆ" ಅಂತ ಅಮ್ಮನ ಧ್ವನಿ ಶ್ರವಣಗೋಚರವಾಗುತ್ತಿದ್ದಂತೆ, ಕೋಪದಿಂದ ಮುಖ ಊದಿಸಿಕೊಂಡೇ ಮನೆಯಿಂದ ಹೊರಟೆ.
ನಾಲ್ಕಾರು ಹೆಜ್ಜೆ ನಡೆದು ಮುಂದೆ ಹೋಗುತ್ತಿರುವಾಗ ಮನದಲ್ಲಿನ ಸಿಟ್ಟು ಕರಗಿ, ಮೊಳಕೆಯೊಡೆದ ಸಸಿ ಬೆಳೆಯತೊಡಗಿತು. ಎದುರಿಗೆ ಸಿಕ್ಕವರನ್ನೆಲ್ಲಾ, ನಗುವಿನಲ್ಲೇ ಮಾತಾಡಿಸ್ತ್ತಾ, ಮನಸ್ಸಿನಲ್ಲೇ ಅವರ ಸ್ವಭಾವವನ್ನು ಕೂಡಿ , ಕಳೆದು , ಗುಣಿಸಿ, ಭಾಗಿಸಿ ಅವರು ಹೀಗಿದ್ದಾರೆ, ನಾನೂ ಅವರ ಹಾಗೆ ಇದ್ದಿದರೆ ಅಂತ ಯೋಚನೆಯ ಚಿಗುರೊಡೆಯಿತು. ಕಾಲೇಜಿಗೆ ಹೋದ ಮೇಲಂತೂ ಚಿಗುರೊಡೆದ ಯೋಚನಾಲಹರಿ ಹೆಮ್ಮರವಾಗಿ ಬೆಳೆಯತೊಡಗಿತು. ಯಾರನ್ನೇ ಭೇಟಿಯಾದರೂ , ನಾನೂ ಇವರ ಥರಾನೇ ಇದ್ದಿದ್ದರೆ ಚೆನ್ನಾಗಿರ್ತಿತ್ತು. ನಾನ್ಯಾಕೆ ಹೀಗಿದ್ದೀನಿ ಅಂತ ಅನಿಸ್ತಿತ್ತು. ಪಟ-ಪಟ ಅಂತ ಮಾತಾಡುವವರನ್ನು ನೋಡಿ, ಛೇ ನಾನ್ಯಾಕೆ ಹೀಗೆ ಮೌನವಾಗಿದ್ದೀನಿ? ನಾನೂ ಇವರ ಹಾಗೆ ಮಾತಾಡ್ಬೇಕಿತ್ತು ಅನ್ನಿಸಿ ಮಾತು ಕಲಿತೆ. ಮೌನವಾಗಿಯೇ ಇದ್ದು , ತಾವಾಯ್ತು - ತಮ್ಮ ಕೆಲಸವಾಯ್ತು ಎಂದಿರುವವರನ್ನು ನೋಡಿ, ನಾನೂ ಹೀಗೇನೆ ಇದ್ದೆ ತಾನೆ. ಹಾಗೇ ಇದ್ದಿದ್ದರೆ ಚೆನ್ನಾಗಿರ್ತಿತ್ತು ಅಂದುಕೊಂಡೆ. ಹೊಸತಾಗಿ ಬರೆದ ಕವನವನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಲಲೆತ್ನಿಸಿದಾಗ , ವಿವಿಧ ಚಟುವಟಿಕೆಗೆಳಿಗೆ ಸ್ಪಂದಿಸುವವರು, ಕವನ ಬರೆದ ಹಾಳೇನ ಕೈಯಲ್ಲಿ ಹಿಡಿದು ಮೇಲೆ- ಕೆಳಗೆ , ಉಲ್ಟಾ- ಪಲ್ಟಾ ಮಾಡಿ ಇದನ್ನು ಓದುವಷ್ಟು ತಾಳ್ಮೆ ನನಗಿಲ್ಲ ಎಂದು ಮುಖ ಮೂರು ಕಡೆ ಮಾಡಿದಾಗ , ಬೇಜಾರಾಗಿ ನಾನ್ಯಾಕೆ ಹೀಗೆ ಏನೇನೋ ಬರಿತೀನಿ? ಅವರ ಹಾಗೆ ಜೀವನದಲ್ಲಿ ಇದ್ದೂ ಇಲ್ಲದ ಹಾಗೆ ಇರಬಹುದಿತ್ತಲ್ವಾ? ಅನಿಸುತ್ತದೆ. ತುಂಟತನ ಮಾಡ್ತಾ ಎಲ್ಲರನ್ನೂ ಗೋಳಾಡಿಸುವ, ಪ್ರತಿ ಮಾತಿಗೂ ತಮಾಷೆ ಮಾಡಿ ನಗಿಸುವ , ಎಲ್ಲರ ಜೊತೆ ಸ್ನೇಹದಿಂದಿರುವ , ಯಾರ ಜೊತೆಗೂ ಬೆರೆಯದಿರುವ, ಅಪರೂಪಕ್ಕೊಮ್ಮೆಯಾದರೂ ಮಾತಾಡುವ , ಅಪ್ಪಿತಪ್ಪಿಯೂ ನಗದಿರುವ, ಯಾವಾಗ್ಲೂ ಇನ್ನೊಬ್ಬರ ಬಗ್ಗೆನೇ ಹರಟಿಕೊಂಡು ಕಾಲಕಳೆಯುವ, ನಾನು ಮಾತ್ರ ನನಗೆ ಸಂಬಂಧ ಎಂದು ಬೇರೆಯವರನ್ನು ಲೆಕ್ಕಿಸದ, ನನ್ನ ಜೊತೆಯಲ್ಲಿರುವವರೆಲ್ಲಾ ನನ್ನವರೇ ಎಂದು ಎಲ್ಲಕ್ಕೂ ಸ್ಪಂದಿಸುವ ಹೀಗೆ ವಿವಿಧ ರೀತಿಯ ಮನಸ್ಸುಳ್ಲವರನ್ನು ಭೇಟಿಯಾದಾಗ , ನಾನೂ ಅವರಿವರ ಹಾಗೆ ಇರ್ಬೇಕು ಅಂತ ಮನಸ್ಸು ಹರಿದು ಹಂಚಿಹೋಗಿತ್ತು .
ಮನಸ್ಸು ಅಂದ್ಮೇಲೆ ತುಂಟತನ , ತರ್ಲೆ , ತಮಾಷೆ , ಸಮಾಧಾನ , ಕೋಪ, ಖುಷಿ, ಧೈರ್ಯ , ತಾಳ್ಮೆ, ಎಲ್ಲಾನೂ ಮನೋಸಹಜವಾದ ಗುಣಗಳು. ಸಮಯ- ಸಂದರ್ಭಕ್ಕನುಗುಣವಾಗಿ ಎಲ್ಲವೂ ಪ್ರಕಟಿತಗೊಳ್ಲುತ್ತವೆ. ಮಾನವೀಯತೆಯನ್ನು ಮರೆಯದ ಮನಸ್ಸು ಸರ್ವಕಾಲದಲ್ಲಿಯೂ ಸಲ್ಲುವುದಲ್ಲದೇ, ಎಲ್ಲರ ಮನಸ್ಸನೂ ಗೆಲ್ಲುವುದು. ನಾನು ಹಾಗಿರ್ಬೇಕು - ಹೀಗಿರ್ಬೇಕು ಅಂತ ಕಲ್ಪನೆಯಲ್ಲಿ ಕಾಲ ಕಳೆಯುವ ಬದಲು , ನಾನು ನಾನಾಗಿಯೇ ಇದ್ದು ಬೆಳೆಯಬಹುದೆಂಬ ಭಾವನೆ ಮನಸ್ಸಿಗೆ ಸಮಾಧಾನ ನೀಡಿತು. ಬೆಳಿಗ್ಗೇನೆ ಚಿಗುರೊಡೆದು ಬರದಲ್ಲಿಯೂ , ಭರದಿಂದ ಬೆಳೆಯುತ್ತಿದ್ದ ಸಸಿ , ನಾನು ನನ್ನ ಹಾಗೆಯೇ, ನಾನಾಗಿಯೇ ಇರ್ಬೇಕು ಎನ್ನುವ ಹೂವರಳಿಸಿ ಕ್ರುತಾರ್ಥವಾಯಿತು.
Comments
ಉ: ನಾನು ಹೇಗಿರ್ಬೇಕು?::ಮಾಮೂಲಾಗೇ....!!
In reply to ಉ: ನಾನು ಹೇಗಿರ್ಬೇಕು?::ಮಾಮೂಲಾಗೇ....!! by venkatb83
ಉ: ನಾನು ಹೇಗಿರ್ಬೇಕು?::ಮಾಮೂಲಾಗೇ....!!
ಉ: ನಾನು ಹೇಗಿರ್ಬೇಕು?
In reply to ಉ: ನಾನು ಹೇಗಿರ್ಬೇಕು? by makara
ಉ: ನಾನು ಹೇಗಿರ್ಬೇಕು?