ನಿನ್ನ ಭಾವನೆಯೇ ನಿನಗೆ ಗುರು

ನಿನ್ನ ಭಾವನೆಯೇ ನಿನಗೆ ಗುರು


ಚಿತ್ರ ಕೃಪೆ: ಶ್ರೀ ರಮಣ ವೆಬ್ ಸೈಟ್

ನಿನ್ನೆ ಸತ್ಸಂಗದಲ್ಲಿ ನಮ್ಮ ಗುರುಗಳಿಗೆ ನನ್ನ ಮಿತ್ರ ನೊಬ್ಬ ಒಂದು ಉತ್ತಮ ಪ್ರಶ್ನೆ ಕೇಳಿದ. ಅವನು ಕೇಳಿದ ಪ್ರಶ್ನೆ ,ಅದಕ್ಕೆ ನಮ್ಮ ಗುರುಗಳ ಉತ್ತರವನ್ನು ಯಥಾವತ್ತಾಗಿ ತಿಳಿಸುವ ಪ್ರಯತ್ನ ಮಾಡುವೆ.

ಪ್ರಶ್ನೆ: ನಮಗೇನೋ ಒಬ್ಬ ಸದ್ ಗುರುವಿನ ಸಾಮಿಪ್ಯ ದೊರೆತಿದೆ, ಆದರೆ ಪ್ರಪಂಚದಲ್ಲಿ ಕೋಟಿ ಕೋಟಿ ಜನರಿಗೆ ಯಾವ ಗುರುವಿನ ಮಾರ್ಗದರ್ಶನ ಸಿಕ್ಕುವುದಿಲ್ಲ, ಅವರ ಗತಿ ಏನು?

ಪ್ರಶ್ನೆ ಕೇಳುವಾಗ " ಅವರ ಗತಿಏನು ಅಂತಾ ಕೇಳಿದನೋ ಅಥವಾ ಆ ಅರ್ಥ ಬರುವಂತೆ ಬೇರೆ ಪದ ಉಪಯೀಗಿಸಿದನೋ ,ಒಟ್ಟಿನಲ್ಲಿ ಈ ಅರ್ಥದಲ್ಲಿ ಪ್ರಶ್ನೆ ಕೇಳಿದ.

ಗುರುಗಳ ಉತ್ತರ:

ಮೊದಲು ನಿನ್ನ ಬಗ್ಗೆ ಯೋಚಿಸೋಣ.ಆಮೇಲೆ ಉಳಿದದ್ದು. ನಿನಗೆ ಒಬ್ಬ ಸದ್ಗುರು ಸಿಕ್ಕಿದ್ದಾನೆಂದು ಹೇಗೆ ಹೇಳುವೆ? ಅದು ನಿನ್ನ ಭಾವನೆ. ನೀನು ಯಾವ ಭಾವನೆಯಲ್ಲಿ  ಯಾರನ್ನು ನೋಡುತ್ತೀಯೋ ಅದರಂತೆ ಅವನು ನಿನಗೆ ಗೋಚರಿಸುತ್ತಾನೆ.ನೀನು ಗುರು ಎಂದುಭಾವಿಸಿದರೆ ಅವನು ನಿನಗೆ ಗುರು, ಅವನು ಕಳ್ಳನೆಂದು ನೀನುಭಾವಿಸಿದರೆ ಕಳ್ಳನಾಗಿ, ಒಟ್ಟಿನಲ್ಲಿ ಅದೆಲ್ಲಾ ನಿನ್ನಭಾವನೆ. 

ಆದ್ದರಿಂದ ಒಬ್ಬನನ್ನು ಗುರು ಎಂದು ಒಪ್ಪುವ ಮುಂಚೆ ನೂರೆಂಟು ಭಾರಿ ಅಳೆದು-ಸುರಿದು ನೋಡು, ಚಿನ್ನವನ್ನು ಒರೆಗೆ ಹಚ್ಚುವಂತೆ ಒರೆಗೆ ಹಚ್ಚಿ ನೋಡು, ನಿನಗೆ ಸಮಾಧಾನವಾದರೆ ಗುರು ಎಂದು ನಂಬು,  ನಿನಗೆ ಪೂರ್ಣ ನಂಬಿಕೆ ಬರದೆ ಒಪ್ಪಬೇಡ, ಆದರೆ ನಂಬಿದಮೇಲೆ ಸಂದೇಹಿಸಬೇಡ. ನೀನು ನಂಬಿದ ಗುರುವನ್ನು ಸಂದೇಹಿಸಲುಶುರುಮಾಡಿದರೆ ಮಹ ಪಾಪಕ್ಕೆ ಬಲಿಯಾಗುತ್ತೀಯ. ಯಾವನನ್ನೂ ಗುರುವೆಂದು ಒಪ್ಪದವನು ಏನು ಮಾಡಿದರೂ ನಡೆಯುತ್ತೆ, ಆದರೆ ಒಮ್ಮೆ ಗುರುವೆಂದು ಮನಸಾ ಒಪ್ಪಿ ನಿನ್ನಲ್ಲಿ ಸಂದೇಹ ಶುರುವಾದರೆ ನೀನು ಗುರುವಿನ ಅವಕೃಪೆಗೆ ಬಲಿಯಾಗುತ್ತೀಯ. ಆದ್ದರಿಂದ ನಿನಗೆ ಪೂರ್ಣ ಒಪ್ಪಿಗೆ ಯಾದಮೇಲೆ ನಂಬಿದ ಗುರುವಿಗೆ ಆತ್ಮಪೂರಕವಾಗಿ ಶರಣಾಗು, ನೀನು ನಂಬಿದ ಗುರು ನಿನ್ನನ್ನು ಕೈ ಹಿಡಿದು ಮುನ್ನಡೆಸುತ್ತಾನೆ. ನೀನುಭಗವಂತನೆಡೆಗೆ ಒಂದು ಹೆಜ್ಜೆ ಇಡಲು ಪ್ರಯತ್ನಿಸಿದರೆ, ಅವನು ನಿನ್ನನ್ನು ಹತ್ತು ಹೆಜ್ಜೆ ಮುನ್ನಡೆಸುತ್ತಾನೆ,ಆದರೆ ಅವನಲ್ಲಿ ಪೂರ್ಣಶರಣಾದಾಗ ಮಾತ್ರ ಅದು ಸಾಧ್ಯ.

-------------------------------------------------------

 ಈ ಬಗ್ಗೆ ನನ್ನ ಅನಿಸಿಕೆ:

ನಿಜ, ಯಾವ ಭಾವನೆಯಿಂದ ನಾವು ನೋಡುತ್ತೇವೆಯೋ ಹಾಗೆ ಗೋಚರವಾಗುತ್ತದೆ. ಅದು ವಸ್ತು ವಾಗಿರಬಹುದು,ವಿಷಯವಾಗಿರಬಹುದು, ಅಥವಾ ವ್ಯಕ್ತಿ ಯಾಗಿರಬಹುದು.ಯದ್ಭಾವಂ ತದ್ಭವತಿ. ಅನೇಕ ವೇಳೆ ಹಾಗೆ ನನಗೆ ಅನ್ನಿಸಿದುಂಟು.  ಒಬ್ಬ ವ್ಯಕ್ತಿಯ ಬಗ್ಗೆ ಅವ ಕೆಟ್ಟವನೆಂದು ಅನೇಕರು ಹೇಳಿದ್ದರೂ ಸಹ ನಮಗೆ ಅವನು ಒಳ್ಳೆಯವನಾಗಿಯೇ ಕಾಣಬಹುದು.ಅದೇ ರೀತಿ ಒಳ್ಳೆಯದು-ಕೆಟ್ಟದೆಂಬುದೂ ಕೂಡ ಸಾರ್ವತ್ರಿಕ ಸತ್ಯವಲ್ಲ.ಅವನ ದೃಷ್ಟಿಯಲ್ಲಿ ಅವನಿಗೆ ಅದು ಒಳ್ಳೆಯದು ಅಥವ ಕೆಟ್ಟದಾಗಿ ಕಾಣಿಸುತ್ತದೆ, ಆದರೆ ಎಲ್ಲರಿಗೂ ಅದು ಹಾಗೆ ಕಾಣಬೇಕಿಲ್ಲ. ಆದ್ದರಿಂದ ಯಾರು ಏನೇ ಹೇಳಿದರೂ ನಮ್ಮಆತ್ಮ ಸಾಕ್ಷಿಗನುಗುಣವಾಗಿ ನಾವು ವರ್ತಿಸುವುದು ವಿವೇಕಯುತ ನಡೆ ಯಾಗಬಲ್ಲದು.ಇದನ್ನು ನಮ್ಮ ನಮ್ಮ ವಿವೇಚನೆ ಎಂದೂ ಹೇಳಬಹುದು.

 

 

 

Rating
No votes yet

Comments